ಚೈತ್ರದ ತೇರನ್ನೇರಿ ಬಂದ ಯುಗಾದಿ…
ಲೆಖನ: ಬನ್ನೂರು ಕೆ. ರಾಜು, ಸಾಹಿತಿ-ಪತ್ರಕರ್ತ
ಈ ಜೀವನ ಬೇವು ಬೆಲ್ಲ
ಬತಗೆ ನೋವೇ ಇಲ್ಲ
ಬಾ ಧೀರರಿಗೇ ಈ ಕಾಲ
ನಿನಗೆಂತು ಜಯ ನಿನಗಿಲ್ಲ ಭಯ ….
ಎಷ್ಟೊಂದು ಮಹತ್ವದ ಚೆಂದದ ಸಾಲುಗಳಿವು. ಎಷ್ಟೊಂದು ಅರ್ಥ ಪೂರ್ಣ ಮಾತುಗಳಿವು. ಚಿತ್ರಗೀತೆಯೊಂದು ಇಡೀ ಬದುಕನ್ನು ಕಟ್ಟಿ ದರ್ಶಿಸುವ, ಸ್ಪರ್ಶಿಸುವ ಪರಿ ಅದ್ಭುತವೇ ಸರಿ! ಯುಗಾದಿಯ ಹಿನ್ನೆಲೆಯಲ್ಲಿ ಇವು ಇನ್ನಷ್ಟು ಮಹತ್ವ ಪಡೆದು ಕೊಳ್ಳುತ್ತವೆ. ಬೇವು ದುಃಖವನ್ನು ಸೂಚಿಸಿದರೆ, ಬೆಲ್ಲ ಸುಖವನ್ನು ಸೂಚಿಸುತ್ತದೆ. ಜೀವನವು ಸಿಹಿ- ಕಹಿಗಳ ಮಿಶ್ರಣ. ಕಷ್ಟ- ಸುಖಗಳ ಸಮ್ಮಿಶ್ರಣ. ಬದುಕಿಗೆ ಬೇವೂ ಬೇಕು, ಬೆಲ್ಲವೂ ಬೇಕು. ಒಂದು ಬೇಕು ಒಂದು ಬೇಡ ಅಂದ್ರೆ ಹೇಗೆ ? ಎಲ್ಲದರ ಸಂಗಮವೇ ಪರಿಪೂರ್ಣ ಜೀವನ. ಯುಗಾದಿ ಹಬ್ಬದಂದು ಸಾಂಕೇತಿಕವಾಗಿ ಪ್ರಸಾದ ರೂಪವಾಗಿ ಬೇವು- ಬೆಲ್ಲವನ್ನು ತಿನ್ನುವಾಗ ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಚ್ಚ ವಿನಾಶಾಯ ನಿಂಬಕಂ ದಳ ಭಕ್ಷಣಮ್. ಬೇವಿನ ಚಿಗುರನ್ನು ತಿನ್ನುವುದು ಸಣ್ಣ ಸಂಗತಿಯಲ್ಲ. ಅದರಿಂದ ಆರೋಗ್ಯ- ಆಯುಷ್ಯ ವೃದ್ಧಿಸುತ್ತದೆ. ಅಷ್ಟು ಮಾತ್ರವಲ್ಲ ಶರೀರ ವಜ್ರದಂತೆ ಬಲಗೊಳ್ಳುತ್ತದೆ. ಸಮಸ್ತ ಸಂಪತ್ತನ್ನೂ ತರುತ್ತದಲ್ಲದೆ ಎಲ್ಲ ಅನಿಷ್ಟಗಳನ್ನೂ ನಿವಾರಿಸುತ್ತದೆ.
ಯುಗಯುಗಗಳಲ್ಲಿ ಸಾಗಿ ಬರುತ್ತಿರುವ ಈ ಕತ್ತಲು- ಬೆಳಕುಗಳ ಚಕ್ರ ಬೇವು-ಬೆಲ್ಲ, ಕಷ್ಟ- ಸುಖಗಳ ಏರಿಳಿತಗಳು ನಮ್ಮ ಕಣ್ಣುಗಳಿಗೆ ಅಷ್ಟು ಸುಲಭವಾಗಿ ಕಾಣುವಂಥದ್ದಲ್ಲ. ಆದರೆ ಈ ಪಾಠವನ್ನು ಪ್ರಕೃತಿ ನಮಗೆ ಬಹಳ ಸುಲಭವಾಗಿ ಕಲಿಸಬಲ್ಲದು, ಕಾಣಿಸಬಲ್ಲದು. ಇಂದು ಎಲೆ, ಹೂವು, ಕಾಯಿಗಳಿಂದ ಹಸಿರಿನೊಡನೆ ನಳನಳಿಸುತ್ತಿರುವ ಮರ ಕಾಲಕ್ರಮೇಣ ತನ್ನ ಸೊಬಗನ್ನು ಕಳೆದುಕೊಳ್ಳುತ್ತದೆ. ಬೆತ್ತಲಾಗಿ ನಿಲ್ಲುತ್ತದೆ. ಆದರೆ ಅದು ಪುನಃ ತನ್ನ ವೈಭವವನ್ನು ಪಡೆದುಕೊಳ್ಳುತ್ತದೆ. ದಕ್ಕಿಸಿಕೊಳ್ಳುತ್ತದೆ. ಹಸಿರು ಚಿಗುರೊಡೆದು ಎಲೆಗಳು ಮೂಡಿ ಕಾಯಿ, ಹಣ್ಣುಗಳಿಂದ ತುಂಬಿಕೊಳ್ಳುತ್ತದೆ. ನಮ್ಮ ಜೀವನವೂ ಹೀಗೆಯೇ ಸುಖ ದುಃಖಗಳ ಚಕ್ರದಲ್ಲಿ ಬಂಧಿಯಾಗಿರುತ್ತದೆ. ಆದ್ದರಿಂದ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಎಂದಿಗೂ ಯಾವಾಗಲೂ ಧೈರ್ಯವಾಗಿ ಹೆಜ್ಜೆ ಇಡುವುದರಲ್ಲಿಯೇ ಜೀವನದ ಸಾರ್ಥಕತೆ ಅಡಗಿದೆ, ಇದೇ ಯುಗಾದಿಯ ವಿವೇಕ ಹಾಗೂ ವಿಶಿಷ್ಟತೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ವರಕವಿ ಬೇಂದ್ರೆ ಅವರ ಈ ಹೊನ್ನುಡಿಗಳಂತೆ ಯುಗಾದಿ ಮತ್ತೆ ಬಂದಿದೆ. ಪ್ರತಿವರ್ಷ ಬರುತ್ತಲೇ ಇರುತ್ತದೆ. ಯುಗಾದಿ ಎಂದರೆ ಹಾಗೇನೆ. ಹಣ್ಣೆಲೆ ಉದುರಿ ಚಿಗುರೆಲೆ ನಳನಳಿಸುವ ಸಂಭ್ರಮ. ಭೂ ಮಾತೆ ಹಸಿರು ಮುಕ್ಕಳಿಸುವ ಮಧುರ ಕ್ಷಣ. ಮಧು ಚೆಲ್ಲುವ ಹೂಗಳ ಮೇಲೆ ಝೇಂಕರಿಸುವ ಜೇನ್ದುಂಬಿಗಳ ಸಡಗರ. ನೆತ್ತಿಯ ಮೇಲೆ ಸುಡುವ ಸೂರ್ಯನಿದ್ದರೂ, ತಂಪೆರೆವ ತಂಗಾಳಿಯ ನವೋಸ. ಮುಂಬರುವ ಎಲ್ಲ ಹಬ್ಬಗಳಿಗೂ ಮುನ್ನುಡಿ ಬರೆವ ಕಾಲ. ಕಷ್ಟ-ಸುಖಗಳೆರಡನ್ನೂ ಸಮನಾಗಿ ಸ್ವೀಕರಿಸುವುದರ ಸಂಕೇತವಾಗಿ ಬೇವು-ಬೆಲ್ಲವನ್ನು ಮೆಲ್ಲುವ ದಿನ. ವರುಷಕ್ಕೊಂದು ಹೊಸ ಜನ್ಮ ಪಡೆವ ಪ್ರಕೃತಿ ದೇವಿಗೆ ನಮಿಸುವ ದಿನ. ಇದೆಲ್ಲಕ್ಕೂ ಒಂದೇ ಹೆಸರು ಅದೇ ಯುಗಾದಿ ಅರ್ಥಾತ್ ಉಗಾದಿ. ನಮ್ಮ ಎಲ್ಲ ಧಾರ್ಮಿಕ ಆಚರಣೆ ಹಬ್ಬ-ಹರಿದಿನಗಳಿಗೆ ಪ್ರೇರಣೆಯನ್ನು ನಿಸರ್ಗದಲ್ಲಿ ಕಾಣಬಹುದು. ಹಾಗೆಯೇ ಯುಗಾದಿ ಹಬ್ಬದ ಪ್ರೇರಣೆಗೆ ಮೂಲ ನಿಸರ್ಗವೇ ಆಗಿದೆ.
ವರ್ಷದ ಮೊದಲ ದಿನವನ್ನು ಹೊಸ ವರ್ಷದ ಹಬ್ಬವಾಗಿ ಆಚರಿಸಿ ಸಂಭ್ರಮ ಪಡುವ ಸಂಪ್ರದಾಯ ಜಗತ್ತಿನೆಡೆ ಬಹು ಹಿಂದಿನಿಂದಲೂ ಉಂಟು. ಜನವರಿ ತಿಂಗಳ ಮೊದಲ ದಿನವನ್ನು ವರ್ಷಾರಂಭವೆಂದು ರೋಮನ್ನರು, ಆಂಗ್ಲರು ಸೇರಿದಂತೆ ಪಾಶ್ಚಿಮಾತ್ಯರೆಲ್ಲರೂ ಆಚರಿಸುತ್ತಾರೆ. ಯುಗಾದಿ ಎನ್ನುವುದು ಯುಗದ ಆದಿ. ಯುಗವೆಂದರೆ ಸೃಷ್ಟಿಯ ಕಾಲಮಾನ ಅರ್ಥಾತ್ ಹೊಸ ವರ್ಷ. ಆದಿ ಎಂದರೆ ಆರಂಭ ಅಥವಾ ವರ್ಷದ ಪ್ರಾರಂಭದ ದಿನ. ಅಂದರೆ ಹೊಸ ವರ್ಷದ ಪ್ರಾರಂಭದ ದಿನವೇ ಯುಗಾದಿ. ಹಲವು ಪರಂಪರೆಗಳ ಆಗಮದ ಕಾಲವಾಗಿ ಯುಗಾದಿ ಭಾರತೀಯರಲ್ಲಿ ರೂಢಿಗೆ ಬಂದಿದೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ಆರಂಭದ ದಿನ ಕಾರ್ತಿಕ ಶುದ್ಧ ಪಾಡ್ಯವನ್ನು ಯುಗಾದಿ ಹಬ್ಬವಾಗಿ ಆಚರಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ರೀತಿಯ ಲೆಕ್ಕಾಚಾರಗಳುಂಟು. ಅವುಗಳೆಂದರೆ ೧. ಬಾರ್ಹಸ್ಪತ್ಯಮಾನ, ೨.ಚಾಂದ್ರಮಾನ, ೩. ಸೌರಮಾನ. ಉತ್ತರ ಭಾರತದವರು ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸುತ್ತಾರೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯುಗಾದಿ ಅತ್ಯಂತ ವಿಜಂಭಣೆ ಹಬ್ಬವಾಗಿದೆ. ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡೂ ರೀತಿಯಲ್ಲಿ ಆಚರಿಸುವ ಪದ್ಧತಿಯಿದೆ. ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೌರಮಾನ ಯುಗಾದಿ. ಹೆಸರುಗಳೇ ಹೇಳುವಂತೆ ಮೆದಲನೆಯದು ಚಂದ್ರನನ್ನೂ ಎರಡನೆಯದು ಸೂರ್ಯನನ್ನೂ ಅವಲಂಬಿಸಿವೆ. ಚಂದ್ರನ ಚಲನೆಯನ್ನು ಅನುಸರಿಸಿ ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು. ತಿಂಗಳು ಹೆಸರು ಬಂದಿರುವುದೂ ಚಂದ್ರನಿಂದಲೇ. ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿರ್ಧಿಷ್ಟ ಸಮಯದಲ್ಲಿ ಬರುವುದಿಲ್ಲ. ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದೆ ಇರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಪ್ರತಿ ವರ್ಷ ಏ.೧೪ ರಂದು ಸೌರಮಾನ ಯುಗಾದಿ ಬರುತ್ತದೆ.
ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿ ಆಚರಿಸುವ ಪದ್ಧತಿ ಇದೆ. ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿ ರೂಢಿಯಲ್ಲಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಢ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಂಧ್ರದವರು ಉಗಾದಿ ಎನ್ನುತ್ತಾರೆ. ಮಹಾರಾಷ್ಟ್ರೀಯರು ಕೂಡ ಯುಗಾದಿ ಎಂದೇ ಹೇಳುತ್ತಾರೆ. ಸೌರಮಾನ ಯುಗಾದಿ ಆಚರಿಸುವ ಕೇರಳದವರು ಯುಗಾದಿಯನ್ನು ‘ವರ್ಷ ಪುರಪ್ಪು’ ಎಂದು ಆಚರಿಸಿದರೆ, ಕೆಲವರು ಶ್ರೀ ಕೃಷ್ಣನ ಪೂಜೆ ಮಾಡುತ್ತಾ ‘ವೊಲ್ಲವರ್ಷ’ ಎಂದೂ ಆಚರಿಸುತ್ತಾರೆ.
ಯುಗಾದಿಗೆ ಗುಡಿಪಾಡ್ಯ, ಪಾಡ್ಯದ ಗುಡಿ ಎಂಬ ಹೆಸರುಗಳೂ ಉಂಟು. ಗುಡಿ ಎಂದರೆ ಬಾವುಟ ಎಂದರ್ಥ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹಾಗೂ ನಮ್ಮಲ್ಲೂ ಹಲವು ಕಡೆ ಮನೆ ಮನೆಯ ಮುಂದೆ ‘ಪಾಡ್ಯದ ಗುಡಿ’ ಕಟ್ಟುತ್ತಾರೆ. ಪಾಡ್ಯದ ಗುಡಿ ಎಂದರೆ ಉದ್ದವಾದ ಕೋಲೊಂದರ ತುದಿಗೆ ಹೊಸಬಟ್ಟೆಯನ್ನು ಕಟ್ಟಿ ಅದರ ಮೇಲೆ ಹಿತ್ತಾಳೆ ಪಾತ್ರೆಯೊಂದನ್ನು ಬೋರಲು ಹಾಕಿರುತ್ತಾರೆ. ಯುಗಾದಿ ದಿನ ಅದಕ್ಕೆ ಪೂಜೆ ಮಾಡಿ ಪ್ರತಿಯೊಂದು ಮನೆ ಮುಂದೆ ಅದನ್ನು ಮೇಲಕ್ಕೆ ಏರಿಸುತ್ತಾರೆ. ಇದನ್ನು ‘ಧ್ವಜ’ ಎಂದೂ ಕರೆಯುತ್ತಾರೆ. ಇದೇ ಯುಗಾದಿಯ ಧ್ವಜರೋಹಣ. ಮಹಾಭಾರತದಲ್ಲೂ ಇದರ ಬಗ್ಗೆ ಉಖವಿದೆ.
ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭ ಮುಹೂರ್ತ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶ್ರೇಷ್ಠಾವಾದದ್ದು.ಅವುಗಳೆಂದರೆ ಯುಗಾದಿ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿಪಾಡ್ಯಮಿಯ ಅರ್ಧ ದಿವಸ. ಈ ಮೂರೂವರೆ ಶುಭ ಘಳಿಗೆಯಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭದ ಶುಭ ದಿನವಾಗಿದೆ. ಈ ದಿವಸ ಏನೇ ಕೆಲಸ ಕಾರ್ಯಗಳನ್ನು ಕೈಗೊಂಡರೂ, ಯಾವುದೇ ಉದ್ದಿಮೆಗಳಲ್ಲಿ ಯೋಜನೆಗಳನ್ನು ಆರಂಭಿಸಿದರೂ ಯಶಸ್ಸು ಕಟ್ಟಿಟ್ಟಬುತ್ತಿ ಎಂಬ ನಂಬಿಕೆ ಇದೆ. ಯುಗಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದಿವೆ ಎಂದು ಶಾಸ್ತ್ರ ಪುರಾಣಗಳೂ ಹೇಳುತ್ತವೆ. ಹಾಗಾಗಿ ಈಗಲೂ ಸಹ ಯುಗಾದಿಯಂದು ಹೊಸ ಕಾರ್ಯ ಚಟುವಟಿಕೆಗಳಿಗೆ, ಹೊಸ ಪದಾರ್ಥಗಳ ಖರೀದಿಗೆ, ಅವರವರ ಶಕ್ತ್ಯಾನುಸಾರ ಸಣ್ಣ ವ್ಯವಹಾರದಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರಗಳಿಗೆ ನಮ್ಮಲ್ಲಿ ನಾಂದಿ ಹಾಕಲಾಗುತ್ತದೆ. ಅಷ್ಟರಮಟ್ಟಿಗೆ ಯುಗಾದಿ ಜನರಲ್ಲಿ ನವ ಚೈತನ್ಯವನ್ನು ತುಂಬುತ್ತದೆ.
ಯುಗಾದಿ ಹಬ್ಬವು ಹಲವು ಪರಂಪರೆಗಳ ಹಬ್ಬಗಳ ಪ್ರಾರಂಭಕ್ಕೆ ಮುನ್ನುಡಿ ಬರೆವ ದಿನವೂ ಹೌದು. ಬ್ರಹ್ಮದೇವನು ಈ ಜಗತ್ತನ್ನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಬ್ರಹ್ಮದೇವ ಸೃಷ್ಟಿಯನ್ನು ಆರಂಭಿಸಿದ ದಿನವೇ ಯುಗಾದಿಯಾಗಿದೆ. ಅಂದೇ ಅವನು ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಹೇಮಾದ್ರಿ ಪಂಡಿತನ ‘ಚತುರ್ವರ್ಗ ಚಿಂತಾಮಣಿ’ ಎಂಬ ಪುರಾಣ ಗ್ರಂಥದಲ್ಲಿ ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು ಈ ಯುಗಾದಿಯಂದೆ. ಶಾಲಿವಾಹನ ಶಕೆ ಆರಂಭವಾದದ್ದು ಸಹ ಈ ಯುಗಾದಿ ದಿವಸವೆ. ಶಾಲಿವಾಹನ ಆ ದಿನ ಪಟ್ಟಾಭಿಶಕ್ತನಾದನೆಂದೂ, ಆದ್ದರಿಂದಾಗಿ ಈ ಚರಿತ್ರೆ ಕಾಲ ‘ಶಾಲಿವಾಹನ’ ಶಕ ಆಯಿತೆಂದೂ ಹೇಳಲಾಗುತ್ತದೆ. ಕ್ರಿಸ್ತ ವರ್ಷ ಆರಂಭವಾದ ಎಪ್ಪತ್ತೆಂಟು ವರ್ಷಗಳ ನಂತರ ಶಾಲಿವಾಹನ ಶಕೆ ಆರಂಭವಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಶಕೆ ಬಳಕೆಯಲ್ಲಿದೆ. ಭಾರತೀಯ ಪಂಚಾಂಗಗಳು ಈ ಶಕೆಯನ್ನು ಪ್ರಸ್ತಾಪಿಸುತ್ತವೆ. ಯುಗಾದಿ ಹಬ್ಬವು ಜೈನರಿಗೂ ಮಹತ್ವದ ಪವಿತ್ರದಿನವಾಗಿದೆ. ಏಕೆಂದರೆ ಮಲ್ಲಿನಾಥನೆಂಬ ೧೪ನೇ ತೀರ್ಥಂಕರ ಹುಟ್ಟದ್ದು ಯುಗಾದಿಯಂದೇ. ಹಾಗೆಯೇ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿಯೂ ದಿಗ್ವಿಜಯ ಸಾಧಿಸಿದ ದಿನವಿದು.
ವೇದಗಳ ಕಾಲದಿಂದಲೂ ಯುಗಾದಿಯ ಹಿರಿಮೆ ಗರಿಮೆಗಳು ಅನುರಣಿಸಿಕೊಂಡು ಬಂದಿವೆ. ಅಥರ್ವಣವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲೂ ಯುಗಾದಿಯನ್ನು ಅಭೂತಪೂರ್ವವಾಗಿ ವರ್ಣಿಸಲಾಗಿದೆ. ಬ್ರಹ್ಮಾಂಡ ಮತ್ತು ಮಹಾಭಾರತಗಳಲ್ಲೂ ಯುಗಾದಿ ಪ್ರಸ್ತಾಪಗೊಂಡಿದೆ.
ಯುಗಾದಿಯಂದು ಸೂರ್ಯೋದಯಕ್ಕೂ ಮುನ್ನ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆ, ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ. ಯುಗಾದಿಯಲ್ಲಿ ಬೇವು-ಬೆಲ್ಲಕ್ಕೆ ತುಸು ಹೆಚ್ಚಿನ ಮಹತ್ವ ಉಂಟು. ಹೋಳಿಗೆ ಸೇರಿದಂತೆ ಹಬ್ಬದ ಸಿಹಿ ಅಡುಗೆ ಎಷ್ಟೇ ಇದ್ದರೂ ಸಹ ಬೇವು-ಬೆಲ್ಲ ಸೇವಿಸಿದಾಗಲೇ ಯುಗಾದಿ ಸಾರ್ಥಕವಾಗುವುದೆಂಬ ಭಾವ ಎಲ್ಲರದು. ಕಷ್ಟ-ಸುಖಗಳೆರಡರ ಸಂಕೇತವೇ ಬೇವು-ಬೆಲ್ಲ. ಜೀವನದಲ್ಲಿ ಎರಡನ್ನೂ ಸಮನಾಗಿ ಸ್ವೀಕರಿಸಿ ಬದಿಕಿನ ಬಂಡಿ ನೂಕಬೇಕೆಂಬುದು ಯುಗಾದಿಯ ಆಶಯವಾಗಿದೆ. ಜೀವನವೆ ಬೇವು-ಬೆಲ್ಲ. ಎರಡೂ ಸವಿದವನೇ ಕವಿಮಲ್ಲ ಎಂದು ಯುಗದ ಕವಿ ಕುವೆಂಪು ಅವರು ಯುಗಾದಿ ಮತ್ತು ಬೇವು-ಬೆಲ್ಲದ ಮಹತ್ವವನ್ನು ಸಾರಿzರೆ.
ಸಾಮಾನ್ಯವಾಗಿ ಯುಗಾದಿಯಂದು ಜ್ಯೋತಿಷಿಗಳಿಂದ ಹೊಸ ವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲಾಫಲಗಳನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾಗಿ ಯುಗಾದಿ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಬಹಳ ಬೇಡಿಕೆಗಳಿರುತ್ತವೆ. ಅಷ್ಟೇ ಅಲ್ಲ, ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಅಂದು ಡಿಮ್ಯಾಂಡ್ ಇದ್ದೇ ಇರುತ್ತದೆ. ಅಂತೆಯೇ ಯುಗಾದಿಯಂದು ಜೂಜು ಆಡುವುದು ಬಹಳಷ್ಟು ಕಡೆ ರೂಢಿಯಲ್ಲಿದೆ. ಎಂದೂ ಜೂಜನ್ನೇ ಆಡದವರು ಕೂಡ ಅಂದು ಜೂಜಡಿ ತಮ್ಮ ಅದಷ್ಟವನ್ನು ಪರೀಕ್ಷಿಸಿ ಕೊಳ್ಳುತ್ತಾರೆ. ಕೆಲವು ಕಡೆಯಂತೂ ಮನೆಯವರೆಲ್ಲ, ಊರಿನವರೆಲ್ಲ ಒಂದು ಕಡೆ ಸೇರಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಂಗತರಾದ ಪಂಡಿತರನ್ನು ಆಹ್ವಾನಿಸಿ ಅವರಿಗೆ ಪಾದಪೂಜೆ ಮಾಡಿ ಸನ್ಮಾನಿಸಿ ಪವಿತ್ರ ಸ್ಥಳ ಗಳಲ್ಲಿ, ಭಕ್ತಿಯ ತಾಣಗಳಲ್ಲಿ, ದೇವಾಲಯಗಳಲ್ಲಿ ಸಂವತ್ಸರ ಕಾಲದಲ್ಲಿ ನಡೆಯುವ ಫಲಿತಾಂಶಗಳನ್ನು ಮೊದಲೇ ತಿಳಿದುಕೊಳ್ಳುತ್ತಾರೆ. ಇದನ್ನು ‘ಪಂಚಾಂಗ ಶ್ರವಣ’ ಎನ್ನಲಾಗುತ್ತದೆ. ಈ ಪಂಚಾಂಗ ಶ್ರವಣದಲ್ಲಿನ ಅಂಗಗಳಿಂದ ಅಂದರೆ ತಿಥಿಯಿಂದ ಸಂಪತ್ತು, ವಾರದಿಂದ ಆಯಸ್ಸು, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ದೂರ, ಕರಣದಿಂದ ಗಂಗಾಸ್ನಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆಂದು ಹೇಳುತ್ತಾರೆ.
ಯುಗಾದಿಯ ಮಾರನೆ ದಿನ ‘ವರ್ಷ ತೊಡಕು’ ಆಚರಿಸಲಾಗುತ್ತದೆ. ಇದರ ವಿಶೇಷವೆಂದರೆ ತಮ್ಮನ್ನು ತಾವು ಸತ್ಕಾರ್ಯಗಳಿಗೆ ಅರ್ಪಿಸಿಕೊಳ್ಳುವ ದಿನವಿದು. ಅಷ್ಟೇ ಅಲ್ಲ ಇಡೀ ವರ್ಷದ ತೊಡಕುಗಳನ್ನೆ ನಿವಾರಿಸಿಕೊಳ್ಳಲು ದೇವರಲ್ಲಿ ಮೆರೆಯಿಡುವ ದಿನವಿದು. ಹಾಗಾಗಿ ಯುಗಾದಿ ದಿನದಷ್ಟೇ ಈ ದಿನಕ್ಕೂ ಬಹಳ ಮಹತ್ವವಿದೆ. ಅಂದು ವಿವಿಧ ಬಗೆಯ ಕ್ರೀಡೆ, ಸಾಂಸ್ಕತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳು ಜರುಗುತ್ತವೆ. ಅಂದು ಯಾರೇ ಆಗಲಿ ಏನೇನು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅದನ್ನು ವರ್ಷಾಂತ್ಯದವರೆಗೂ ಮಾಡುತ್ತಾರೆಂಬ ನಂಬಿಕೆ ಬಹಳ ಜನರಲ್ಲಿದೆ. ಹಾಗೆಯೇ ಅಂದು ಯಾರಿಗೆ ಏನೇನು ಲಭಿಸುತ್ತದೋ ಅದು ವರ್ಷಪೂರ್ತಿ ಲಭಿಸುತ್ತದೆಂಬ ನಂಬಿಕೆ ಪ್ರಚಲಿತದಲ್ಲಿದೆ. ಹೊಸ ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸುವ ಸಂಪ್ರದಾಯವೂ ಯುಗಾದಿಯಲ್ಲಿದೆ. ಎಷ್ಟೋ ಕಡೆ ಯುಗಾದಿಯನ್ನು ಅಳಿಯಂದಿರ ಹಬ್ಬವೆನ್ನುವುದೂ ಉಂಟು. ಅಷ್ಟೇ ಅಲ್ಲದೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಆದರಿಸುವುದೂ ಯುಗಾದಿಯ ವೈಶಿಷ್ಟ್ಯಗಳಂದು. ಒಟ್ಟಿನಲ್ಲಿ ಹೊಸ ಸೃಷ್ಟಿಗೆ, ಹೊಸ ದೃಷ್ಟಿಗೆ ಶ್ರೀಕಾರ ಬರೆಯುವ ಯುಗಾದಿಯಿಂದ ಎಲ್ಲರೂ ನಿರೀಕ್ಷಿಸುವುದು ಸಂತಸ-ಸಂಭ್ರಮವನ್ನಷ್ಟೇ. ಅದು ಎಲ್ಲರಿಗೂ ಸಿಗಲಿ ಅಷ್ಟೆ. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಯುಗಾದಿ ಕುರಿತು ಹೇಳುವ ಬಗೆಯಿದು;
ಮಾವು ನಾವು, ಬೇವು ನಾವು,
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು……
ಕವಿ ಕೆ ಎಸ್ ನ ಅವರ ಮಾತುಗಳು ಎಷ್ಟೊಂದು ಅರ್ಥಪೂರ್ಣವಲ್ಲವೇ?