ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಬಳ್ಳಾರಿ ಗಣಿಧಣಿಗಳೂ ನಾಚುವ ಸ್ಟೈಲ್‌ನಲ್ಲಿ ಪ್ರತಿನಿತ್ಯ ಸಾವಿರಾರು ಟ್ರ್ಯಾಕ್ಟರ್‌ನಲ್ಲಿ ಕೆರೆಯ ಮಣ್ಣು ಲೂಠಿ…

Share Below Link

ವಿಶೇಷ ವರದಿ: ರಾಕೇಶ್ ಡಿಸೋಜ ಮೊ: 9482482182
ಶಿವಮೊಗ್ಗ : ಭದ್ರಾವತಿ ತಾಲೂಕಿನ ಮಪುರ ಗ್ರಾಮದ ಶ್ರೀ ಗುಡ್ಡದ ಮಶ್ವರ ದೇವಸ್ಥಾನ ಭಕ್ತಿ, ಪ್ರಕೃತಿ ಮತ್ತು ಗ್ರಾಮೀಣ ಬದುಕಿನ ಸಮತೋಲನದ ಪ್ರತೀಕವಾಗಿರುವ ಸುಂದರ ತಾಣ. ಈ ದೇವಾಲಯದ ಪ್ರವೇಶದ್ವಾರದ ಸಮೀಪದಲ್ಲಿರುವ ವಿಶಾಲ ವಾದ ಕೆರೆ ಗ್ರಾಮದ ಜನರ ಜೀವನಾಡಿ ಯಾಗಿದ್ದು, ಈ ಕೆರೆ ಕೇವಲ ನೀರಿನ ಕೊಳವಲ್ಲ. ಬದಲಿಗೆ ಮಳೆ ನೀರನ್ನು ಸಂಗ್ರಹಿಸಿ ಭೂಗರ್ಭ ಜಲಮಟ್ಟ ಹೆಚ್ಚಿಸುವುದು, ಸುತ್ತಮುತ್ತಲಿನ ಹೊಲಗಳಿಗೆ ತೇವ ಒದಗಿಸುವುದು, ಪಶುಪಕ್ಷಿಗಳಿಗೆ ಆಶ್ರಯ ನೀಡುವ ಮೂಲಕ ಈ ಕೆರೆ ಗ್ರಾಮೀಣ ಜನತೆಯ ಬದುಕಿಗೆ ಆಸರೆಯಾಗಿದೆ.
ಆದರೆ ಈಗ ಅಲ್ಲಿ ದಿನವಿಡೀ ಗಣಿಗಾರಿಕೆಗೆ ಬಳಸುವ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಲಾರಿಗಳ ಆರ್ಭಟವೇ ಕೇಳಿಬರುತ್ತಿದೆ. ಘಂಟೆಯ ನಾದ ಕೇಳುವ ಜಾಗದಲ್ಲಿ ಜೆಸಿಬಿಯಿಂದ ಭೂಮಿಯ ಎದೆ ಬಗೆಯುವ ಕರ್ಕಷ ಶಬ್ದ. ಪವಿತ್ರ ತಾಣದ ಪಕ್ಕದ ಪ್ರಕೃತಿಯ ಮೇಲೆ ರಾಜರೋಷವಾಗಿ ನಡೆಯುತ್ತಿರುವ ಮಣ್ಣಿನ ಮೇಲಿನ ಅತ್ಯಾಚಾರ ಗ್ರಾಮಸ್ಥರ ಮತ್ತು ಪ್ರಕೃತಿ ಪ್ರೇಮಿಗಳ ಮನಸ್ಸನ್ನು ಕದಡುತ್ತಿದೆ. ಸುಂದವಾದ ಈ ಕೆರೆ ಮಣ್ಣು ಲೂಠಿಕೋರರ ಪಾಲಿಗೆ ಚಿನ್ನದ ಗಣಿಯಾಗಿ ಪರಿವರ್ತನೆಗೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ.
ದಾರಿಹೋಕರ ಮೊದಲ ನೋಟಕ್ಕೆ ಇದು ಅಭಿವೃದ್ಧಿ ಕೆಲಸದಂತೆ ಕಾಣಬಹುದು. ಆದರೆ ವಾಸ್ತವ ಚಿತ್ರ ಮಾತ್ರ ಅತ್ಯಂತ ಭೀಕರ. ದಿನದ ಹೊತ್ತಿನಲ್ಲಿ ೮ರಿಂದ ೧೦ ಜೆಸಿಬಿ ಯಂತ್ರಗಳು ಕೆರೆಗೆ ಇಳಿದು ಫಲವತ್ತಾದ ಮೇಲ್ಮಣ್ಣನ್ನು ಅಗೆದು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಲಾಗುತ್ತಿದೆ. ಈ ಮಣ್ಣು ಕೆಲ ಪ್ರಭಾವಿಗಳ ಅಡಿಕೆ ತೋಟಗಳು ಮತ್ತು ಲೇಔಟ್‌ಗಳಿಗೆ ತಲುಪುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಸುತ್ತಿದೆ. ಪ್ರಕೃತಿ ಸಾವಿರಾರು ವರ್ಷಗಳಲ್ಲಿ ರಚಿಸಿದ ಫಲವತ್ತಾದ ಪದರ ಕೆಲವೇ ದಿನಗಳಲ್ಲಿ ಲೂಠಿ ಯಾಗುತ್ತಿರುವುದು ವಿಪರ್ಯಾಸದ ಸಂಗತಿ.
ಒಮ್ಮೆ ಮಳೆ ಬಂದರೆ ಕೆರೆ ತುಂಬುತ್ತಿತ್ತು. ಅಲ್ಲಿ ಮಕ್ಕಳು ಈಜುತ್ತಿದ್ದರು. ದನ ಕರುಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿದ್ದವು. ರೈತರು ನೆಮ್ಮದಿಯಿಂದ ಬಿತ್ತನೆ ಮಾಡುತ್ತಿದ್ದರು. ಬಾವಿಗಳಲ್ಲಿ ನೀರು ತುಂಬುತ್ತಿತ್ತು. ಇಂದು ಕೆರೆಯ ಹೊಟ್ಟೆಯನ್ನೇ ಬಗೆಯಲಾಗಿದೆ. ಮಧ್ಯಭಾಗ ಮತ್ತು ತೀರಗಳಲ್ಲಿ ಅಪಾಯಕರ ಗುಂಡಿಗಳನ್ನು ನಿರ್ಮಿಸಲಾಗಿದ್ದು ಮುಂಬರುವ ದಿನಗಳಲ್ಲಿ ಜನ- ಜಾನುವಾರು ಗಳಿಗೆ ಇದು ಮರಣ ಕೂಪವಾಗುವ ಭೀತಿ ತಳ್ಳಿಹಾಕುವಂತಿಲ್ಲ. ಅಲ್ಲೀಗ ಬರೀ ಧೂಳು ಮಾತ್ರ ಉಳಿದಿದೆ. ಜೀವ ಕೊಟ್ಟ ಮಣ್ಣು ಮಂಗಮಾಯವಾಗಿದೆ.
ಇದಕ್ಕಿಂತ ಕಳವಳಕಾರಿ ಸಂಗತಿ ಎಂದರೆ ಈ ಅಕ್ರಮ ಚಟುವಟಿಕೆ ಹಾಡಹಗಲೇ ನಡೆಯುತ್ತಿದೆ. ಟ್ರ್ಯಾಕ್ಟರ್‌ಗಳು, ಯಂತ್ರಗಳು, ಲಾರಿಗಳು ನಿರ್ಬಂಧವೇ ಇಲ್ಲದಂತೆ ಸಂಚರಿಸು ತ್ತಿವೆ. ಆದರೂ ಸಂಬಂಧಿಸಿದ ಇಲಾಖೆಗಳ ಪ್ರತಿಕ್ರಿಯೆ ಕಾಣುತ್ತಿಲ್ಲ ಎಂಬುದು ಸ್ಥಳೀಯರ ನೋವು. ಕರೆ ಮಾಡಿದರೂ ಸ್ಪಂದನೆ ಇಲ್ಲ, ಉಡಾಫೆಯ ಉತ್ತರ ನೀಡುವ ಕೆಲ ಅಧಿಕಾರಿ ಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮನೋಭಾವನೆ ತೋರುತ್ತಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿವೆ.
ಇಲ್ಲಿ ಇಷ್ಟೊಂದು ರಾಜಾರೋಷವಾಗಿ ಮನಬಂದಂತೆ ಕೆರೆಯ ಮಣ್ಣನ್ನು ಸಾಗಿಸಲಾಗುತ್ತಿದೆ ಎಂದರೆ ಈ ಕೆರೆಯ ಮಣ್ಣು ಗಣಿಗಾರಿಕೆಗೆ ಅನುಮತಿ ಇದೆಯೇ? ಇದ್ದರೆ ಎಷ್ಟು ಪ್ರಮಾಣಕ್ಕೆ ಅನುಮತಿ ನೀಡಲಾಗಿದೆ? ಪರಿಸರ ಪರಿಶೀಲನೆ ನಡೆದಿದೆಯೇ? ಕೆರೆಯ ಮಣ್ಣು ತೆಗೆಯಲು ಜೆಸಿಬಿ ಯಂತ್ರಗಳ ಬಳಕೆಗೆ ಅವಕಾಶವಿದೆಯೇ? ಮೇಲ್ವಿಚಾರಣೆಗೆ ನೇಮಕಗೊಂಡ ಅಧಿಕಾರಿಗಳು ಯಾರು? ಎಂಬ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿದ್ದು, ಇವುಗಳಿಗೆ ಭೂವಿಜ್ಞಾನ ಅಧಿಕಾರಿಗಳು ಉತ್ತರಿಸಬೇಕಿದೆ.
ಕಂದಾಯ, ಭೂವಿeನ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸೇರಿದಂತೆ ಪರಿಸರ ಪರ ಹೋರಾಟಗಾರರು ನೈಸರ್ಗಿಕ ಸಂಪತ್ತಿನ ಕಾವಲುಗಾರರೆಂದು ಕರೆಯಲ್ಪಡುವ ವ್ಯವಸ್ಥೆಯ ನಿರ್ಲಕ್ಷ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.
ಇಲ್ಲಿನ ಗುಡ್ಡದ ಮಲ್ಲೇಶ್ವರ ದೇವಸ್ಥಾನಕ್ಕೆ ನಿತ್ಯ ಸಹಸ್ರಾರು ಸಂಖ್ಯೆಯ ಭಕ್ತರು, ಗ್ರಾಮಸ್ಥರು ಬರುತ್ತಾರೆ. ದೇವಸ್ಥಾನ ಎಂದರೆ ಭಕ್ತಿ, ಪಾವಿತ್ರತೆ, ನಂಬಿಕೆಯ ಸ್ಥಳ. ಆದರೆ ಅದೇ ಪವಿತ್ರ ಸ್ಥಳದ ಪ್ರವೇಶದ್ವಾರದ ಕೆರೆಯ ಮಣ್ಣು ಲೂಠಿ ಮಾಡುತ್ತಿರುವುದು ಸಮಾಜದ ನೈತಿಕ ಸ್ಥಿತಿಗತಿಗಳನ್ನೇ ಪ್ರಶ್ನಿಸುವಂತಿದೆ. ದೇವರ ಮುಂದೆ ಕೈಜೋಡಿಸುವ ಸಮಾಜ, ಕಣ್ಣೆದುರೇ ನಡೆಯುವ ಅಕ್ರಮದ ಮುಂದೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ.
ದೇವರು ಸೃಷ್ಟಿಸಿದ ಪ್ರಕೃತಿಯೇ ಹಾಳಾಗುತ್ತಿದ್ದರೆ ನಾವು ಮಾಡುವ ಆ ಪ್ರಾರ್ಥನೆಗೆ ಅರ್ಥ ಏನು? ಪವಿತ್ರ ತಾಣದ ಪಕ್ಕದ ಭೂಮಿಯನ್ನೇ ತುಂಡರಿಸುವ ದೃಶ್ಯ, ನಂಬಿಕೆಯ ಮೇಲೆ ವ್ಯಂಗ್ಯ ಮಾಡಿದಂತಿದೆ.
ದೇವರ ಹೆಸರಿನಲ್ಲಿ ಜಾತ್ರೆಗಳಿಗೆ ನಿಯಮ ಕಡ್ಡಾಯವಾದರೆ, ಪ್ರಕೃತಿ ರಕ್ಷಣೆಗೆ ಅದಕ್ಕಿಂತ ಕಠಿಣ ನಿಯಮ ಅಗತ್ಯವಲ್ಲವೇ? ಇಂದು ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ. ಈಗ ನಿರ್ಲಕ್ಷ್ಯ ತೋರಿದರೆ ನಾಳೆ ಬತ್ತಿದ ನೆಲವೇ ಗತಿಯಾಗುತ್ತದೆ. ಮಣ್ಣಿನೊಂದಿಗೆ ಮಣ್ಣಾಗುತ್ತಿರುವ ಪ್ರಕೃತಿಯ ಭವಿಷ್ಯ ಕಣ್ಣ ಮುಂದೆಯೇ ಇದೆ. ಇಂದು ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಲೂಠಿ ಮಾಡಲಾಗುತ್ತಿದೆ. ಇದರ ಪರಿಣಾಮ ನಾಳೆ ಬಾವಿಗಳಲ್ಲಿ ನೀರು ಕಡಿಮೆ ಯಾಗುತ್ತದೆ. ರೈತ ಸಾಲದಲ್ಲಿ ಮುಳುಗುತ್ತಾನೆ, ಕೊನೆಗೆ ಗ್ರಾಮ ಬತ್ತುತ್ತದೆ. ರೈತರ ಜೀವಕ್ಕೇ ಕೊಳ್ಳಿ ಬೀಳಲಿದೆ. ಅಂತಿಮವಾಗಿ ನಮಗೆ ಉಳಿಯುವುದು ಬತ್ತಿದ ಕೆರೆ, ಬಿರುಕು ಬಿಟ್ಟ ನೆಲ ಮತ್ತು ಲೂಠಿ ಮಾಡುವಾಗ ಯಾವುದೇ ರೀತಿಯ ಪ್ರತಿರೋಧ ತೋರದೆ ನಾವು ಕೈಕಟ್ಟಿ ಕುಳಿತು ತಪ್ಪು ಮಾಡಿದ್ವಿ ಎಂದು ಪಶ್ಚಾತ್ತಾಪ ಮುಂದೊಂದು ದಿನ ನಮ್ಮನ್ನು ಕಾಡುತ್ತದೆ.
ಕಾನೂನು ತಡವಾಗಿ ಬರಬಹುದು. ಕ್ರಮ ತಡವಾಗಿ ಆಗಬಹುದು. ಆದರೆ ಪ್ರಕೃತಿ ಮಾತ್ರ ತಡ ಮಾಡುವುದಿಲ್ಲ. ಕೆರೆಯನ್ನು ದುರ್ಬಲಗೊಳಿಸಿದರೆ ಅದು ಬರ ರೂಪದಲ್ಲಿ ಉತ್ತರ ಕೊಡುತ್ತದೆ. ಮಣ್ಣನ್ನು ಕಳವು ಮಾಡಿದರೆ ಬತ್ತಿದ ಹೊಲಗಳ ಮೂಲಕ ಪ್ರತಿಕ್ರಿಯಿಸುತ್ತದೆ. ಹೋರಾಟಗಾರರೆಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ, ಸಮಾಜಸೇವಕರೂ, ಜಗೃತ ನಾಗರಿಕರಿಗೆ ಇದು ಫೋಸ್ ಕೊಡುವ ಸಮಯವಲ್ಲ. ಎಚ್ಚರಗೊಳ್ಳುವ ಕ್ಷಣ. ದೇವರ ನೆರಳಲ್ಲಿ ನಡೆಯುತ್ತಿರುವ ಪ್ರಕೃತಿಯ ಲೂಠಿಯನ್ನು ತಡೆಯುವ ಹೊಣೆ ಈಗ ಪ್ರತಿಯೊಬ್ಬರ ಮೇಲಿದೆ.

Leave a Reply

Your email address will not be published. Required fields are marked *