ಜಿಲ್ಲಾ ಸುದ್ದಿತಾಜಾ ಸುದ್ದಿ

ಇದು ನನ್ನ ಕೊನೆಯ ಪಕ್ಷ; ಇನ್ನೆಂದೂ ಪಕ್ಷಾಂತರ ಮಾಡಲಾರೆ: ಆಯ್ನೂರ್

Share Below Link

ಶಿವಮೊಗ್ಗ: ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಪ್ರಖರ ವಾಗ್ಮಿ, ಕಾರ್ಮಿಕ ಹೋರಾಟಗಾರ ಆಯನೂರು ಮಂಜುನಾಥ್ ಅವರು ಜೆಡಿಎಸ್ ತೊರೆದು ನಾಳೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಸಿಡಿದೆದ್ದು, ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಪಕ್ಷದ ಟಿಕೆಟ್ ಪಡೆದು ವಿಧಾನ ಸಭೆಗೆ ಸ್ಪರ್ಧಿಸಿ ಹೀನಾಯ ಸೋಲುಕಂಡಿದ್ದ ಆಯ್ನೂರ್ ಅವರು ನಾಳೆ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ಕಳೆದ ಒಂದು ತಿಂಗಳಿನಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬ ಸುದ್ದಿ ಹರಡಿದ್ದು, ಇದಕ್ಕೆ ಪೂರ್ಣ ವಿರಾಮ ನೀಡಿ ನಿರೀಕ್ಷೆ ಯಂತೆ ನಾಳೆ ಕಾಂಗ್ರೆಸ್ ಸೇರ್ಪಡೆ ಯಾಗುತ್ತಿದ್ದೇನೆ. ನನ್ನೊಂದಿಗೆ ನನ್ನ ಗೆಳೆಯರೂ, ಅಭಿಮಾನಿಗಳು ಪಕ್ಷ ಸೇರುತ್ತಿದ್ದಾರೆ ಎಂದರು.


ಬಹುತೇಕ ಇದೇ ನನ್ನ ಕೊನೆಯ ಪಕ್ಷ, ಮತ್ತೆ ಪಕ್ಷ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಆಯ್ನೂರ್, ಮುಂಬರುವ ಸ್ಥಳಿಯ ಸಂಸ್ಥೆ, ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.
ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಹಾಗೂ ಜಿಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸಿ, ಪಕ್ಷ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಅವಕಾಶವಿತ್ತು. ಕಾರಣಾಂತರ ಗಳಿಂದ ಆಗಿರಲಿಲ್ಲ. ಈಗ ಅವಕಾಶ ಸಿಕ್ಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ ಜೆಡಿಎಸ್‌ನಿಂದ ಅವಕಾಶ ಸಿಕ್ಕಿದ್ದ ರಿಂದ ಸ್ಪರ್ಧೆ ಮಾಡಿದ್ದೆ ಎಂದರು.
ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರ್ಪಡೆಗೆ ಒಳ್ಳೆಯ ಅವಕಾಶವಿದೆ ಹಾಗೂ ಸಹಕಾರ ದೊರೆಯುತ್ತದೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದು, ಯಾವುದೇ ಷರತ್ತು ಇಲ್ಲದೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದ ಅವರು, ವಿಧಾನ ಪರಿಷತ್‌ನ ಪದವೀಧರರ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣೆ ಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದರು.
ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗಲು ಕೆಲವರು ವಿರೋಧ ಮಾಡುವುದು ಸಹಜ. ಆದರೆ ಶೇ.೯೯ರಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಆದರೆ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಅವರು ಮಾತ್ರ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಳ್ಳುವುದಕ್ಕೆ ವಿರೋಧಿಸಿದ್ದಾರೆ. ಅವರು ನನ್ನ ಚಿಕ್ಕ ಗೆಳೆಯ. ಕಳೆದ ಚುನಾವಣೆ ಸೋಲಿನಿಂದ ವಿಚಲಿತ ರಾಗಿ ಆವರು ಹೀಗೆ ಮಾತನಾಡುತ್ತಿ ದ್ದಾರೆ. ಅವರಿಗೆ ಮುಂದೆ ಉತ್ತಮ ಭವಿಷ್ಯವಿದೆ. ಅವರೊಂದಿಗೆ ಸೇರಿಕೊಂಡೇ ನಾನು ಕೆಲಸ ಮಾಡುತ್ತೇನೆ. ನಾನು ಕಾಂಗ್ರೆಸ್ ಸೇರುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
ನನ್ನೊಂದಿಗೆ ಜೆಡಿಎಸ್‌ಗೆ ಬಂದ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು, ಕಾಂಗ್ರೆಸ್‌ನಿಂದ ೨೦೧೮ರ ಚುನಾವಣೆಯಲ್ಲಿ ಸ್ಪರ್ಧಿಸಿ ೫೯ ಸಾವಿರಕ್ಕೂ ಹೆಚ್ಚು ಮತ ಪಡೆದು ಸೋಲು ಅನುಭವಿಸಿದ್ದರು. ಆದರೆ ಪಕ್ಷದ ಕೆಲವರ ವರ್ತನೆಯಿಂದಾಗಿ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದರು. ಈಗ ಅವರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂಬರುವ ದಿನಗಳಲ್ಲಿ ಸೇರಲೂಬಹುದು ಎಂದರು.
ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಪರಂಧಾಮ ರೆಡ್ಡಿ, ಮಹೇಂದ್ರನಾಥ್, ಶಿ.ಜು. ಪಾಶಾ, ಲೋಕೇಶ್, ಐಡಿಯಲ್ ಗೋಪಿ, ಆಯನೂರು ಸಂತೋಷ್, ಎಸ್.ಪಿ. ಪಾಟೀಲ್, ರಿಯಾಜ್ ಅಹ್ಮದ್, ಶಫಿವುಲ್ಲಾ, ಹಿರಣ್ಣಯ್ಯ, ಲಕ್ಷ್ಮಣಪ್ಪ ಇದ್ದರು.