ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮುತ್ತಲ ಗ್ರಾಮದಲ್ಲಿ ಮರಳಿಗೆ ಮುತ್ತಿಕ್ಕುತ್ತಿರುವ ಖದೀಮರು…

Share Below Link

ವಿಶೇಷ ತನಿಖಾ ವರದಿ: ರಾಕೇಶ್ ಡಿಸೋಜ – 9482482182
ಹೊಸನಗರ : ತಾಲೂಕಿನ ಮುತ್ತಲ ಗ್ರಾಮ ಇಂದು ಮರಳು ಮಾಫಿಯಾದ ಕಾಳಗಣಿಯಾಗಿದ್ದು, ಇಲ್ಲಿ ಹಗಲು-ರಾತ್ರಿ ಎನ್ನದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಆಡಳಿತ ವ್ಯವಸ್ಥೆಗೆ ಸವಾಲಾಗಿ ನಿಂತಿದೆ. ಈ ವರ್ಷ ಸುರಿದ ಅಧಿಕ ಮಳೆಯಿಂದ ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮರಳು ಸಂಗ್ರಹವಾಗಿದ್ದು, ಪ್ರಕೃತಿಯ ಈ ಪ್ರಕ್ರಿಯೆಯನ್ನೇ ಬಂಡವಾಳ ಮಾಡಿ ಕೊಂಡ ಮರಳು ಮಾಫಿಯಾ ಖದೀಮರು ಇದೀಗ ದಿನದ ೨೪ ಗಂಟೆಯೂ ಪ್ರಕೃತಿಯ ಒಡಲನ್ನೇ ಕಿತ್ತುಕೊಳ್ಳುವ ನೀಚ ಕೃತ್ಯಕ್ಕೆ ಇಳಿದಿzರೆ.
ರಾತ್ರಿ ಸಮಯದಲ್ಲಿ ಹೆಚ್ಚು ಕ್ರಿಯಾಶೀಲರಾಗುವ ಈ ತಂಡ, ನದಿತೀರದಿಂದ ತೆಗೆಯಲಾದ ಮರಳನ್ನು ಸಮೀಪದ ಜಮೀನುಗಳಲ್ಲಿ ತಾತ್ಕಾಲಿಕವಾಗಿ ಸಂಗ್ರಹಿಸಿ ಅಲ್ಲಿಂದ ಟಿಪ್ಪರ್ ಲಾರಿಗಳ ಮೂಲಕ ನೇರವಾಗಿ ಗ್ರಾಹಕರಿಗೆ ಸಾಗಿಸುತ್ತಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ನಡೆಯುತ್ತಿರುವ ಈ ದಂಧೆ ರಹಸ್ಯ ವೇನಲ್ಲ, ಬಹಿರಂಗ ಲೂಟಿಯಾಗಿದೆ. ಆದರೂ, ನೋಡಬೇಕಾದ ಕಣ್ಣುಗಳು ಕಣ್ಮುಚ್ಚಿವೆ; ಕೇಳಬೇಕಾದ ಕಿವಿಗಳು ಕಿವುಡಾಗಿರುವುದು ಅಚ್ಚರಿಯ ಸಂಗತಿಯಾಗಿದೆ.


ನದಿ ತೀರದಲ್ಲಿ ಜೆಸಿಬಿ ಯಂತ್ರಗಳು ಗರ್ಜಿಸುತ್ತಿದ್ದು, ಇದು ಯಾವುದೇ ಅಭಿವೃದ್ಧಿ ಕಾರ್ಯವಲ್ಲ ಬದಲಿಗೆ ಕಾನೂನಿನ ಶವಯಾತ್ರೆಯಾಗಿದೆ. ಹೊರ ರಾಜ್ಯಗಳಿಂದ ಕರೆಸಲಾದ ಕಾರ್ಮಿಕರನ್ನು ಬಳಸಿ, ನದಿಯ ಒಡಲನ್ನು ಹಗಲು ರಾತ್ರಿ ಬಗೆದು ಮರಳು ತೆಗೆಯಲಾಗುತ್ತಿದೆ. ದಿನಕ್ಕೆ ೩೦ರಿಂದ ೩೫ ಟಿಪ್ಪರ್ ಲೋಡ್ ಗಳಷ್ಟು ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವುದು ಕೇವಲ ಗ್ರಾಮಸ್ಥರ ಆರೋಪವಲ್ಲ ಬದಲಿಗೆ ಇದೊಂದು ನಗ್ನ ಸತ್ಯ.
ಟಿಪ್ಪರ್ ಲಾರಿಗಳ ಓಡಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ, ರಾತ್ರಿ ನಿದ್ರೆ ಮಾಡುವುದೇ ಜನರಿಗೆ ಕಷ್ಟವಾಗಿದೆ. ಆದರೆ, ದಂಧೆಕೋರರಿಗೆ ಮತ್ತು ಬೆಂಬಲಕ್ಕೆ ನಿಂತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇದೊಂದು ಸುವರ್ಣ ರಾತ್ರಿ ವ್ಯವಹಾರವಾಗಿ ಪರಿಣಮಿಸಿದೆ.
ಇಷ್ಟೊಂದು ವ್ಯಾಪಕ ದಂಧೆ ಯಾರ ರಕ್ಷಣೆಯಿಲ್ಲದೆ ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ. ಗ್ರಾಮಸ್ಥರ ಪ್ರಕಾರ, ಈ ಅಕ್ರಮಕ್ಕೆ ಪೊಲೀಸ್, ಅರಣ್ಯ, ಕಂದಾಯ ಹಾಗೂ ಭೂ ವಿeನ ಇಲಾಖೆಯ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳ ಪರೋಕ್ಷ ಸಹಕಾರವಿದ್ದು, ದಿನದ ಲೆಕ್ಕದಲ್ಲಿ ಮಾಮೂಲಿ ಮಸೂಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.


ಇಲ್ಲಿನ ಅಕ್ರಮ ಮರಳು ಗಣಿಗಾರಿಕೆ ಕುರಿತು ಶಿವಮೊಗ್ಗದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರಯತ್ನಿಸಿದರೆ ಈ ಮಹಾನುಭಾವ ಕರೆಯನ್ನು ಸ್ವೀಕರಿಸು ವುದೇ ಇಲ್ಲ, ಒಂದು ವೇಳೆ ಸ್ವೀಕರಿಸಿ ದರೂ ಓಕೆ, ಅದನ್ನು ನಾನು ನೋಡಿ ಕೊಳ್ಳುತ್ತೇನೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಉಡಾಫೆ ಉತ್ತರ ನೀಡುತ್ತಾ ರಂತೆ. ಹಾಗೆಯೇ, ಅಣತಿ ದೂರದ ಇರುವ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಗಳು ಕೇಳಿಬರುತ್ತಿವೆ. ಇದರ ಮಧ್ಯೆಯೇ ಡಿ.೧೮ರ ನಿನ್ನೆ ರಾತ್ರಿಯಿಂದ ಅಕ್ರಮ ಮರಳು ಗಣಿಗಾರಿಕೆ ಮತ್ತಷ್ಟು ವೇಗ ಪಡೆದುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಕೇವಲ ಕಾನೂನು ಉಲ್ಲಂಘನೆ ಅಲ್ಲ; ಇದು ಪರಿಸರ ಅಪರಾಧ. ನದಿ ತೀರ ಕುಸಿತ, ಕೃಷಿ ಭೂಮಿಗೆ ಹಾನಿ, ಜಲಮೂಲಗಳ ನಾಶ ಈ ಎಲ್ಲವೂ ಮುಂದಿನ ದಿನಗಳಲ್ಲಿ ಭೀಕರ ಪರಿಣಾಮ ತರುತ್ತವೆ. ನದಿ ಇಂದು ಮನವಾಗಿರಬಹುದು, ಆದರೆ ನಾಳೆ ಅದು ಪ್ರಳಯವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ನಡೆಯುತ್ತಿರುವ ಮರಳು ದಂಧೆ ಒಂದು ಸ್ಥಳೀಯ ಸಮಸ್ಯೆಯಲ್ಲ; ಇದು ಆಡಳಿತದ ನೈತಿಕತೆ ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ನಿನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು ಅಕ್ರಮದಲ್ಲಿ ಭಾಗಿಯೋಗೋ ಪೊಲೀಸರನ್ನು ಕೆಲಸದಿಂದಲೇ ವಜಾ ಮಾಡುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಜಿಡಳಿತ, ಗಣಿ ಇಲಾಖೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವವೆಯೇ ಅಥವಾ ಮರಳು ಮಾಫಿಯಾ ಮುಂದೆ ಕಾನೂನು ಶರಣಾಗುತ್ತಿದೆಯೇ ಕಾದುನೋಡಬೇಕಿದೆ.


ಅಕ್ರಮ ತಡೆಗೆ ಯಾವ ಇಲಾಖೆಗಳೂ ಸಪೋರ್ಟ್ ಮಾಡಲ್ವಂತೆ!?
ಸಾರ್ವಜನಿಕರ ಮತ್ತು ಪತ್ರಿಕೆಯ ಕರೆ ಸ್ವೀಕರಿಸದ ಗಣಿ ಮತ್ತು ಭೂವಿಜ್ಞಾ ಇಲಾಖೆಗೆ ಭೇಟಿ ನೀಡಿ ಅಲ್ಲಿನ ಹಿರಿಯ ಭೂವಿಜ್ಞಾನಿ ಅವರನ್ನು ಪತ್ರಿಕೆ ಮಾತನಾಡಿಸಿದಾಗ, ಅವರು ಹೇಳುವ ಪ್ರಕಾರ ಅವರಿಗೆ ಸಿಬ್ಬಂದಿ ಕೊರತೆ ಇದೆಯಂತೆ. ಅವರೂ ಸೇರಿದಂತೆ ಕೇವಲ ಇಬ್ಬರೇ ಅಧಿಕಾರಿಗಳಿದ್ದಾರಂತೆ. ಈ ಕಾರಣದಿಂದ ಅವರಿಗೆ ಕೆಲಸ ಒತ್ತಡ ಹೆಚ್ಚಾಗಿದೆಯಂತೆ. ಸಿಬ್ಬಂದಿ ಕೊರತೆಯ ನಡುವೆಯೂ ಅಲ್ಲಿರುವ ಮಹಿಳಾ ಅಧಿಕಾರಿಯೋರ್ವರು ಖಡಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪಾಪ ಇಲಾಖೆಯ ಮುಸ್ಥಸ್ತರಿಗೆ ಮಾತ್ರ ಬೇರಾವ ಇಲಾಖೆಗಳು ಸರಿಯಾಗಿ ಸಪೋರ್ಟ್ ಮಾಡುತ್ತಿಲ್ಲವಂತೆ. ಇವರು ಸಾರ್ವಜನಿಕರ ಮಾಹಿತಿ ಆಧರಿಸಿ ರೈಡ್ ಮಾಡಲು ಸ್ಥಳಕ್ಕೆ ಭೇಟಿ ನೀಡಲು ಹೊರಟ ತಕ್ಷಣ ಬೇರೆ ಇಲಾಖೆ ಅಧಿಕಾರಿ- ಸಿಬ್ಬಂದಿಗಳು ಅಕ್ರಮ ದಂದೆಕೋರರಿಗೆ ಮಾಹಿತಿ ರವಾನಿಸುತ್ತಾರಂತೆ! ಟಾಸ್ಕ್ ಪೋರ್ಸ್‌ಗೆ ಸಂಬಂಧಿಸಿದ ಇನ್ನುಳಿದ ಇಲಾಖೆಗಳೇ ಇದಕ್ಕೆ ಉತ್ತರಿಸಬೇಕಿದೆ. ಈ ಅಧಿಕಾರಿಗೆ ಶಿವಮೊಗ್ಗ ನಗರದ ಅವರ ಕಛೇರಿಯಿಂದ ಹೊಸನಗರ ತುಂಬಾ ದೂರ ಆಗುತ್ತಂತೆ. ಒಂದು ಕಂಪ್ಲೆಂಟ್ ಅಟೆಂಡ್ ಮಾಡಲು ಕನಿಷ್ಠ ೪೦ ದಿನ ಬೇಕಂತೆ. ಪಾಪ ಅವರಿಗೆ ಟೈಮೇ ಸಾಲಲ್ವಂತೆ. ಆದರೆ ಸಾರ್ವಜನಿಕರ ಹಿತದೃಷ್ಠಿಯಿಂದ ಅವರು ತಮ್ಮ ಕಛೇರಿಯಲ್ಲಿ ದಿನದ ೨೪ ಗಂಟೆಯೂ ತಮ್ಮ ಕುರ್ಚಿಯ ಮುಂದೆ ಕೆಲ ಮರಳು ಧಣಿಗಳನ್ನು ಒಟ್ಟಾಕಿಕೊಂಡು ಸಮಾಲೋಚನಾ ಸಭೆಗಳನ್ನು ನಿರಂತರವಾಗಿ ಮಾಡುತ್ತಾ ಅದೇನೋ ಗುಡ್ಡೆ ಹಾಕುತ್ತಿದ್ದಾರೆ.