ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಮನವನ್ನು ತಣಿಸುವ ಸುಶ್ರಾವ್ಯವಾದ ಸಂಗೀತ ವಾದಕ ವೀಣಾ ವಾದಕ…

Share Below Link

ವೀಣೆ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ತಂತಿ ವಾದ್ಯಗಳಲ್ಲಿ ಒಂದು. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ ಸರಸ್ವತಿ ವೀಣೆ ಎಂದು ಹೆಸರು. ಇದರಲ್ಲಿ ನಾಲ್ಕು ಮುಖ್ಯ ತಂತಿಗಳು ಮತ್ತು ಮೂರು ಸಹಾಯಕ ತಂತಿಗಳು ಇದ್ದು, ತಂತಿಗಳು ಹಿತ್ತಾಳೆಯವು. ನುಡಿಸಲು ಕಷ್ಟವಾದ ವಾದ್ಯವೆಂದು ಹೆಸರಾದ ವೀಣೆಯನ್ನು ಕಲಿಯಲು ಅನೇಕ ವರ್ಷಗಳೇ ಬೇಕಾಗುತ್ತವೆ.
ಕರ್ನಾಟಕ ಸಂಗೀತ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ.


ಕರ್ನಾಟಕ ಸಂಗೀತ ಹೆಚ್ಚು- ಕಡಿಮೆ ಸಂಪೂರ್ಣವಾಗಿ ಭಕ್ತಿ ಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ- ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯ ಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು.
ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ (ಲಯಕ್ಕೆ ಸಂಬಂಧಪಟ್ಟದ್ದು). ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತದೊಂದಿಗೆ ಪ್ರಾಚೀನ ಹಿಂದೂ ಧರ್ಮದ ಅಧ್ಯಾತ್ಮಿಕ ಸಂಗೀತವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು. ೧೨ನೇ ಮತ್ತು ೧೩ನೇ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಉತ್ತರ ಭಾರತದಲ್ಲಿ ಭಾರತೀಯ ಸಂಗೀತ ಅರಾಬಿಕ್ ಸಂಗೀತದ ಪ್ರಭಾವಕ್ಕೆ ಒಳಗಾಗಿ ಹಿಂದುಸ್ತಾನಿ ಸಂಗೀತ ಪದ್ಧತಿಗೆ ದಾರಿ ಮಾಡಿಕೊಟ್ಟಿತು.
ಕರ್ನಾಟಕ ಸಂಗೀತ ಎಂಬ ಪದದ ಉತ್ಪತ್ತಿಯ ಬಗ್ಗೆ ವಿವಿಧ ಊಹೆಗಳಿವೆ. ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿರಬಹುದು. ಇತರ ಉತ್ಪತ್ತಿಗಳೂ ಸಹ ಪ್ರತಿಪಾದಿಸಲ್ಪಟ್ಟಿವೆ. ಕರ್ಣೇ ಅಟತಿ ಇತಿ ಕರ್ಣಾಟಕಮ್ ಇವುಗಳಲ್ಲಿ ಒಂದು – ಕಿವಿಗೆ ಇಂಪಾಗಿ ಕೇಳುವ ಸಂಗೀತ ಎಂದರ್ಥ.
ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ಪುರಂದರದಾಸರು ಕರ್ನಾಟಕದವರು ಹಾಗೂ ದಾಸ ಪದ್ಧತಿಯಲ್ಲಿ ಪ್ರಮುಖರು, ಮುಖ್ಯವಾಗಿ ಪುರಂದರ ದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿ ಮಾರ್ಗವನ್ನು ಬೋಧಿಸಿದವರು.
ಪುರಂದರ ದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರ ದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು.
ಅವರ ಮಗ ಮಧ್ವಪತಿದಾಸರು ಉಳಿದ ೨೫೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.


ಶ್ರುತಿಗಾಗಿ ತಂಬೂರಿ ಉಪಯೋಗವಾಗುತ್ತದೆ. ಪ್ರಧಾನ ವಾದ್ಯ ಅಥವಾ ಪಕ್ಕವಾದ್ಯಗಳಿಗೆ ಸಾಮಾನ್ಯವಾಗಿ ಉಪಯೋಗಗೊಳ್ಳುವ ವಾದ್ಯಗಳು ವೀಣೆ, ವಯೋಲಿನ್ (ಪಿಟೀಲು). ಕೆಲವೊಮ್ಮೆ ಕೊಳಲು ಉಪಯೋಗಗೊಳ್ಳುತ್ತದೆ. ತಾಳಕ್ಕಾಗಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಪ್ರಮುಖವಾದವು ಮದಂಗ ಮತ್ತು ಘಟ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೊಲಿನ್, ವಿಚಿತ್ರವೀಣೆ, ಸ್ಯಾಕ್ಸೋಫೋನ್ ಮೊದಲಾದ ವಾದ್ಯಗಳು ಜನಪ್ರಿಯಗೊಳಿಸಲ್ಪಟ್ಟಿವೆ.
ಕರ್ನಾಟಕ ಸಂಗೀತದಲ್ಲಿ ಹಾಡುಗಾರಿಕೆಯ ಪ್ರಾಧಾನ್ಯ ಹೆಚ್ಚು. ವಾದ್ಯಗಳು ಸಹ ಹಾಡುಗಾರಿಕೆಯನ್ನೇ ಅನುಕರಿಸುತ್ತವೆ. ಇತ್ತೀಚೆಗೆ ಶುದ್ಧ ವಾದ್ಯ ಸಂಗೀತವೂ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ.
ಕೊಸರು : ಹಿಂದೆ ವೀಣೆಯ ದಂಡಿಯನ್ನು ( ಉದ್ದನೆಯ, ನುಡಿಸುವ ಮೆಟ್ಟಿಲುಗಳಿರುವ ಭಾಗ)ವನ್ನು ಬಿದಿರಿನಿಂದ ಮಾಡುವ ರೂಢಿಯಿತ್ತು. ಈಗ ಕರ್ನಾಟಕ ಸಂಗೀತವನ್ನು ನುಡಿಸುವ ಸರಸ್ವತೀ ವೀಣೆಯ ದಂಡಿಯನ್ನು ಸಾಧಾರಣವಾಗಿ ಹಲಸಿನ ಮರದಲ್ಲಿ ಮಾಡಿದ್ದರೂ, ಹಿಂದೂಸ್ತಾನಿ ಸಂಗೀತವನ್ನು ನುಡಿಸುವ ರುದ್ರವೀಣೆಯಲ್ಲಿ ಬಿದುರಿನಿಂದ ಮಾಡಿದ ದಂಡಿಯೇ ಇನ್ನೂ ರೂಢಿಯಲ್ಲಿದೆ.
ಕೊನೆಯ ಕೊಸರು: ಇದೇ ರೀತಿ, ಅನುರಣನವನ್ನು ಉಂಟುಮಾಡುವ ಬುರುಡೆಗೆ ಹಿಂದಿನಿಂದ ಸೋರೆಯ ಬುರುಡೆಯನ್ನು ಬಳಸುವ ಪದ್ಧತಿ ಬಂದಿದೆ. ಸರಸ್ವತೀ ವೀಣೆಯಲ್ಲಿ ಹಲಸಿನ ಮರದ ಬುರುಡೆಯಿರುವುದೂ ಕಾಣಬರುತ್ತದೆ.
ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ: ರುದ್ರ ವೀಣೆ, ವಿಚಿತ್ರ ವೀಣೆ, ಚಿತ್ರ ವೀಣೆ, ಮಹಾನಾಟಕ ವೀಣೆ.
ಕೆಲ ಪ್ರಸಿದ್ಧ ವೀಣೆ ವಾದಕರು: ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಎಸ್. ಬಾಲಚಂದರ್, ಮೈಸೂರು ದೊರೆಸ್ವಾಮಿ ಅಯ್ಯಗಾರ್, ಚಿಟ್ಟಿ ಬಾಬು.
ಕರ್ನಾಟಕ ಸಂಗೀತದಲ್ಲಿ ಒಂದಾದ ಸುಶ್ರಾವ್ಯವಾದ ವೀಣಾವಾದನೆಯನ್ನು ಆಲಿಸಿದರೆ ಕಿವಿಗೆ ಇಂಪನ್ನು ನೀಡಿ, ಮನಸಿನ ಭಾರ ಕಡಿಮೆಮಾಡುತ್ತದೆ. ಸಂಗೀತಕ್ಕೆ ಪ್ರತಿಯೊಂದು ಪ್ರಾಣಿ, ಪಕ್ಷಿಗಳು, ಗಿಡ, ಮರಗಳು ಕೂಡಾ ತಲೆದೂಗುತ್ತವೆ. ಇಂತಹ ನಮ್ಮ ಸಂಗೀತ ಪಾಶ್ಚತ್ಯ ಸಂಗೀತದಿಂದ ಮರೆ ಮಾಚುತ್ತಿರುವುದು ಬೇಸರದ ಸಂಗತಿ. ಇಂದಿನ ಯುವಜನತೆ ನಮ್ಮ ಸಂಗೀತಕ್ಕೆ ಒತ್ತುಕೊಟ್ಟರೆ ಮುಂದೆ ಬೆಳೆಯಲು ಸಾಧ್ಯ. ಇಲ್ಲದೇ ಹೋದರೆ ಈ ಸಂಗೀತ ವಾದಕಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿ ಉಳಿದು ಬಿಡಬಹುದು. ಹಾಗಾಗದಿರಲಿ ಎಂದು ಆಶಿಸೋಣ.
ಮುರುಳೀಧರ್.ಹೆಚ್.ಸಿ, ಪತ್ರಕರ್ತರು, ಶಿವಮೊಗ್ಗ.

Leave a Reply

Your email address will not be published. Required fields are marked *