ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಂವಿಧಾನದ ಮನ ಶಕ್ತಿ ಮತ್ತು ಪತ್ರಿಕೋದ್ಯಮದ ಸಾರ್ವಜನಿಕ ಹೊಣೆ…

Share Below Link

ಸಿ. ಎನ್. ಮಶ್
ಜನವರಿ ೨೯ ಭಾರತೀಯ ಪತ್ರಿಕೋದ್ಯಮ ದಿನ. ಇದು ಕೇವಲ ಒಂದು ವೃತ್ತಿಪರ ಆಚರಣೆ ಅಲ್ಲ. ಇದು ಸತ್ಯವನ್ನು ಮುದ್ರಿಸುವ ಧೈರ್ಯ, ಅಧಿಕಾರವನ್ನು ಪ್ರಶ್ನಿಸುವ ಹೊಣೆ ಮತ್ತು ಸಾರ್ವಜನಿಕ ಜಾಗೃತಿಯನ್ನು ಜೀವಂತವಾಗಿಟ್ಟ ಪರಂಪರೆಯನ್ನು ಸ್ಮರಿಸುವ ದಿನವಾಗಿದೆ. ೧೭೮೦ರಲ್ಲಿ ಭಾರತದಲ್ಲಿ ಮೊದಲ ಪತ್ರಿಕೆ ಪ್ರಕಟವಾದ ಕ್ಷಣದಿಂದಲೇ ಪತ್ರಿಕೋದ್ಯ ಮವು ಸಮಾಜದ ಕನ್ನಡಿ ಯಾಗಿ ಮಾತ್ರವಲ್ಲ, ಅದರ ಅಂತರಾತ್ಮ ವಾಗಿಯೂ ಕಾರ್ಯನಿರ್ವಹಿಸುತ್ತ ಬಂದಿದೆ.
ಭಾರತದ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳನ್ನು ಸ್ಪಷ್ಟವಾಗಿ ಗುರುತಿ ಸಿದೆ. ಆದರೆ ಪ್ರಜಾಪ್ರಭುತ್ವದ ನಿಜವಾದ ಕಾರ್ಯನಿರ್ವಹಣೆ ಈ ಮೂರರಿಂದ ಮಾತ್ರ ಪೂರ್ಣವಾಗುವುದಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ರೂಪಿ ಸುವ, ಅಧಿಕಾರದ ಮೇಲೆ ನಿಗಾವಹಿಸುವ ಮತ್ತು ಜನರ ಧ್ವನಿಯನ್ನು ಹೊರತರುವ ಪತ್ರಿಕೋದ್ಯಮವನ್ನು ಜಾಗತಿಕವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಗುರುತಿಸಲಾಗಿದೆ. ಈ ನಾಲ್ಕನೇ ಅಂಗಕ್ಕೆ ಸಂವಿಧಾನದಲ್ಲಿ ಪ್ರತ್ಯೇಕ ಅಧ್ಯಾಯವಿಲ್ಲ. ಆದರೂ ಅದರ ಆತ್ಮ ಸಂವಿಧಾನದ ಮೂಲ ಮಲ್ಯಗಳಲ್ಲಿ ಆಳವಾಗಿ ನೆಲೆಗೊಂಡಿದೆ.


ಭಾರತೀಯ ಸಂವಿಧಾನದ ಅನುಚ್ಛೇದ ೧೯(೧)(ಎ) ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಭರವಸೆ ನೀಡುತ್ತದೆ. ಪತ್ರಿಕೋದ್ಯಮಕ್ಕೆ ಇರುವ ಸ್ವಾತಂತ್ರ್ಯ ಇದೇ ವಿಧಿಯೊಳಗೆ ಅಂತರ್ನಿಹಿತವಾಗಿದೆ. ಸಂವಿಧಾನ ರಚಯಿತೃಗಳು ಪತ್ರಿಕಾ ಸ್ವಾತಂತ್ರ್ಯ ಎಂಬ ಪ್ರತ್ಯೇಕ ಪದವನ್ನು ಬಳಸದೆ ಇದ್ದರೂ, ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಪತ್ರಿಕೆಗಳ ಸ್ವಾತಂತ್ರ್ಯವನ್ನು ಸೇರಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪತ್ರಿಕೋದ್ಯಮವು ಸಂವಿಧಾನದ ಹೊರಗಿನ ಸಂಸ್ಥೆಯಲ್ಲ ಅದು ಸಂವಿಧಾನದ ಆತ್ಮ ದಿಂದಲೇ ಶಕ್ತಿ ಪಡೆಯುವ ವ್ಯವಸ್ಥೆಯಾಗಿದೆ.
ಭಾರತದಲ್ಲಿ ಮುದ್ರಿತ ಪತ್ರಿಕೋದ್ಯ ಮದ ಇತಿಹಾಸ ೧೭೮೦ರ ಜನವರಿ ೨೯ ರಂದು ಆರಂಭವಾಯಿತು. ಐರಿಷ್ ಮೂಲದ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರು ಕೊಲ್ಕತ್ತಾದಲ್ಲಿ ಆರಂಭಿಸಿದ ಹಿಕ್ಕೀಸ್ ಬೆಂಗಾಲ್ ಗೆಜೆಟ್ ದೇಶದ ಮೊದಲ ಪತ್ರಿಕೆಯಾಗಿದ್ದು, ಅದು ಬ್ರಿಟಿಷ್ ಆಡಳಿತದ ಅನ್ಯಾಯಗಳನ್ನು ಧೈರ್ಯವಾಗಿ ಪ್ರಶ್ನಿಸಿತು. ಅಲ್ಲಿಂದ ಭಾರತೀಯ ಪತ್ರಿಕೋದ್ಯಮ ಹಂತ ಹಂತವಾಗಿ ಬೆಳೆದು ಸ್ವಾತಂತ್ರ್ಯ ಹೋರಾಟದ ಪ್ರಮುಖ ಶಕ್ತಿಯಾಯಿತು.
ಕನ್ನಡ ಭಾಷೆಯಲ್ಲಿನ ಪತ್ರಿಕೋದ್ಯಮಕ್ಕೆ ಬಂದರೆ, ೧೮೪೩ರಲ್ಲಿ ಬಾಸೆಲ್ ಮಿಷನ್ ಮೂಲಕ ಪ್ರಕಟವಾದ ಮಂಗಳೂರು ಸಮಾಚಾರ ಕನ್ನಡದ ಮೊದಲ ಮುದ್ರಿತ ಪತ್ರಿಕೆಯಾಗಿದ್ದು, ಅದು ಸಮಾಜ ಜಾಗೃತಿ ಮತ್ತು ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿತು.
ನಂತರ ೧೮೮೮ರಲ್ಲಿ ಆರಂಭವಾದ ಸಂಯುಕ್ತ ಕರ್ನಾಟಕ, ೧೯೪೮ರಲ್ಲಿ ಹುಟ್ಟಿದ ಪ್ರಜಾವಾಣಿ ಮತ್ತು ೧೯೭೦ರ ದಶಕದಲ್ಲಿ ಆರಂಭವಾದ ಕನ್ನಡಪ್ರಭ ಮುಂತಾದ ಪತ್ರಿಕೆಗಳು ಕರ್ನಾಟಕದ ಸಾಮಾಜಿಕ, ಸಾಂಕ್ಕೃತಿಕ ಮತ್ತು ರಾಜಕೀಯ ಚೇತನೆ ಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಪತ್ರಿಕೆಗಳ ಹಿಂದೆ ನಿಂತ ಸಂಪಾದಕರು, ಪ್ರಕಾಶಕರು ಮತ್ತು ಪತ್ರಕರ್ತರು ಪತ್ರಿಕೋದ್ಯಮವನ್ನು ವೃತ್ತಿಯಾಗಲ್ಲ, ಸಾರ್ವಜನಿಕ ಸೇವೆಯಾಗಿ ಕಂಡವರು ಎಂಬುದೇ ಈ ಪರಂಪರೆಯ ಬಲ ಎನ್ನಬಹುದು.
ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಪತ್ರಿಕೆಗಳು ಕೇವಲ ಸುದ್ದಿ ನೀಡುವ ಸಾಧನಗಳಾಗಿರಲಿಲ್ಲ. ಅವು ಪ್ರಶ್ನೆ ಕೇಳಿದವು, ಅನ್ಯಾಯವನ್ನು ಬಯಲಿಗೆ ತಂದವು ಮತ್ತು ಜನಸಾಮಾನ್ಯರಿಗೆ ಸ್ವಾತಂತ್ರ್ಯದ ಅರ್ಥವನ್ನು ತಿಳಿಸಿವೆ. ಸತ್ಯ, ಅಹಿಂಸೆ, ಸ್ವಾಭಿಮಾನ ಎಂಬ ಮಲ್ಯಗಳು ಘೋಷಣೆಗಳಾಗಿ ಉಳಿಯದೆ ಜನಮನದಲ್ಲಿ ಬೇರುಬಿಟ್ಟದ್ದು ಪತ್ರಿಕೆಗಳ ಮೂಲಕವೇ. ಆ ಕಾಲದಲ್ಲಿ ಪತ್ರಿಕೋ ದ್ಯಮ ಲಾಭದ ವ್ಯವಹಾರವಾಗಿರಲಿಲ್ಲ ಅದು ತ್ಯಾಗ, ಅಪಾಯ, ಜೈಲು, ದಂಡ ಮತ್ತು ನಿಷೇಧಗಳ ನಡುವೆಯೂ ಸತ್ಯವನ್ನು ಬಿಡದ ಹಠವಾಗಿತ್ತು.
ನ್ಯಾಯಾಲಯಗಳು ಪತ್ರಿಕೋದ್ಯಮ ವನ್ನು ಕೇವಲ ಒಂದು ವೃತ್ತಿಯೆಂದು ನೋಡಿಲ್ಲ. ಸಾರ್ವಜನಿಕ ಅಭಿಪ್ರಾಯ ವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವೆಂದು ಪರಿಗಣಿಸಿವೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಅನೇಕ ತೀರ್ಪುಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಜೀವಾಳ ಎಂದು ಸ್ಪಷ್ಟಪಡಿಸಿವೆ. ಸಾರ್ವಜನಿಕ ಚರ್ಚೆ, ಸರ್ಕಾರದ ಹೊಣೆಗಾರಿಕೆ ಮತ್ತು ನ್ಯಾಯಾಂಗದ ಪಾರದರ್ಶಕತೆ ಈ ಎಲ್ಲಕ್ಕೂ ಪತ್ರಿಕೋದ್ಯಮ ಅವಿಭಾಜ್ಯ ಎಂಬುದನ್ನು ನ್ಯಾಯಾಲಯಗಳು ಗುರುತಿಸಿವೆ.
ಪತ್ರಿಕಾ ಸ್ವಾತಂತ್ರ್ಯ ಅಸೀಮವಲ್ಲ ಎಂಬುದನ್ನೂ ಸಂವಿಧಾನವೇ ಹೇಳುತ್ತದೆ. ಅನುಚ್ಛೇದ ೧೯(೨) ಯುಕ್ತಿಯುಕ್ತ ನಿರ್ಬಂಧಗಳನ್ನು ಅನುಮತಿಸುತ್ತದೆ. ಸಾರ್ವಜನಿಕ ಶಾಂತಿ, ರಾಷ್ಟ್ರ ಭದ್ರತೆ, ನೈತಿಕತೆ ಇತ್ಯಾದಿ ಕಾರಣಗಳಿಂದ ಮಿತಿಗಳು ಇರಬಹುದು. ಆದರೆ ಆ ಮಿತಿಗಳು ಸ್ವಾತಂತ್ರ್ಯವನ್ನು ನಾಶಪಡಿಸುವಂತಿರ ಬಾರದು. ಇಲ್ಲಿಯೇ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ನಡುವಿನ ಸಮತೋಲನದ ಪ್ರಶ್ನೆ ಉದ್ಭವಿಸುತ್ತದೆ. ಈ ಸಮತೋಲನವನ್ನು ಕಾಯ್ದುಕೊಳ್ಳುವುದೇ ಪತ್ರಿಕೋದ್ಯಮದ ನಿಜವಾದ ಶಕ್ತಿ.
ಒಂದು ಸುದ್ದಿ ಪ್ರಕಟಿಸುವ ಮುನ್ನ ಸಂಪಾದಕ ಅನುಭವಿಸುವ ಒತ್ತಡ ಸಾಮಾನ್ಯವಲ್ಲ. ಒಂದು ಶೀರ್ಷಿಕೆ ಸಮಾಜ ವನ್ನು ಎತ್ತಬಹುದು ಅಥವಾ ಗಾಯ ಗೊಳಿಸಬಹುದು. ಆ ನಿರ್ಧಾರ ಕ್ಷಣದಲ್ಲಿ ಇರುವ ಹೊಣೆಗಾರಿಕೆ ನ್ಯಾಯಾಧೀಶರ ತೀರ್ಪಿನ ಹೊಣೆಗಾರಿಕೆಯಷ್ಟೇ ಗಂಭೀರ. ಈ ಮನ ಹೊಣೆಗಾರಿಕೆಯನ್ನು ಪ್ರತಿದಿನ ಹೊತ್ತುಕೊಂಡು ಕೆಲಸ ಮಾಡುವವರೇ ಪತ್ರಿಕೋದ್ಯಮದ ನಿಜವಾದ ಶಕ್ತಿ.
ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿ ಕ್ಷಣಗಳಲ್ಲಿ ಹರಡುತ್ತದೆ. ಆದರೆ ವೇಗದ ಜೊತೆಗೆ ಸತ್ಯ, ಪರಿಶೀಲನೆ ಮತ್ತು ಸಮತೋಲನ ಕಾಪಾಡುವುದು ದೊಡ್ಡ ಸವಾಲು. ಈ ಅರ್ಥದಲ್ಲಿ ಮುದ್ರಿತ ಪತ್ರಿಕೆಗಳು ಇನ್ನೂ ಮಾನದಂಡವಾಗಿವೆ. ಪರಿಶೀಲಿತ ಮಾಹಿತಿ, ಸಂಯಮಿತ ಭಾಷೆ ಮತ್ತು ಜವಾಬ್ದಾರಿಯುತ ಶೀರ್ಷಿಕೆಗಳು ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಉಳಿಸುತ್ತವೆ.
ಪತ್ರಿಕೋದ್ಯಮದ ಶಕ್ತಿ ಪತ್ರಕರ್ತರಲ್ಲಿ ಮಾತ್ರವಲ್ಲ. ಓದುಗರ ವಿಮರ್ಶಾತ್ಮಕ ದೃಷ್ಟಿ, ನಿಖರ ಮಾಹಿತಿಗೆ ನೀಡುವ ಮಲ್ಯ ಮತ್ತು ಅತಿರೇಕಕ್ಕೆ ವಿರೋಧವೂ ಸಮಾನವಾಗಿ ಮುಖ್ಯ. ಪತ್ರಿಕೆ ಓದುವುದು ಒಂದು ಅಭ್ಯಾಸವಲ್ಲ. ಅದು ಜಗೃತ ನಾಗರಿಕತ್ವದ ಅಭಿವ್ಯಕ್ತಿ. ಪ್ರಜಪ್ರಭುತ್ವದ ಮೂರು ಅಂಗಗಳು ಕಾನೂನಿನಲ್ಲಿ ನಿಂತಿವೆ. ನಾಲ್ಕನೇ ಅಂಗ ಜನರ ಜಾಗೃತಿಯಲ್ಲಿ ನಿಂತಿದೆ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ; ನ್ಯಾಯಾಲಯಗಳು ಅದಕ್ಕೆ ಅರ್ಥ ತುಂಬಿವೆ. ಪತ್ರಿಕೋದ್ಯಮ ಅದನ್ನು ಪ್ರತಿದಿನ ಜೀವಂತವಾಗಿಟ್ಟಿದೆ.
ನಾವು ಸತ್ಯವನ್ನು ಓದಲು, ಅರ್ಥ ಮಾಡಿಕೊಳ್ಳಲು ಮತ್ತು ರಕ್ಷಿಸಲು ಸಿದ್ಧರಾಗಿದ್ದೇವೆಯೇ ಎಂಬುದಕ್ಕೆ ನಮ್ಮಿಂದ ಬರುವ ಉತ್ತರವೇ ನಮ್ಮ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ.