ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಎಸಿ ಕೋರ್ಟ್‌ನಲ್ಲಿ ನ್ಯಾಯ ಕೇಳಲು ಬಂದವರು ಸರದಿಗಾಗಿ ನೆಲದ ಮೇಲೆ ಕುಳಿತುಕೊಳ್ಳುವ ದುಸ್ಥಿತಿ…

Share Below Link

ವಿಶೇಷ ವರದಿ: ರಾಕೇಶ್ ಡಿಸೋಜ
ಶಿವಮೊಗ್ಗ, ಫೆ.೧೨: ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಭೂಪಟದಲ್ಲಿ ತನ್ನ ಗುರುತು ಗಟ್ಟಿಗೊಳಿ ಸುತ್ತಿರುವ ಜಿಲ್ಲೆಯಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪರಿಶ್ರಮ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್ ಸಿಟಿ ಪರಿಕಲ್ಪನೆ ಇವೆಲ್ಲವೂ ನಗರದ ಪ್ರಗತಿಗೆ ಸಾಕ್ಷಿ ಎನ್ನಲಾಗುತ್ತಿದೆ.
ಅಂತೆಯೇ ಶಿವಮೊಗ್ಗ ಜಿಯ ರಾಜಕೀಯ ಶಕ್ತಿಕೇಂದ್ರದಂತಿರುವ ಶಿವಮೊಗ್ಗ ನಗರ ಅಭಿವೃದ್ಧಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ ಎಂಬ ಹೆಮ್ಮೆ ಮಾತುಗಳು ಕೇಳಿಬರುತ್ತಿವೆ.
ಆದರೆ ಈ ಹೊಳಪಿನ ನಡುವೆ ಕಣ್ಣಿಗೆ ಬೀಳದ ಒಂದು ಕತ್ತಲೆ ಇದೆ. ಅದೇನೆಂದರೆ ಅಧಿಕಾರ ಶಕ್ತಿ ಕೇಂದ್ರಗಳಲ್ಲಿ ಮಾನವೀಯತೆ ಕಾಣೆಯಾಗಿರುವುದು. ಭವ್ಯವಾದ ಕಟ್ಟಡವಿದೆ, ಆದರೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕನಿಷ್ಠ ಆಸನವಿಲ್ಲ. ನಗರದ ಹೃದಯಭಾಗ ದಲ್ಲಿರುವ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಕಛೇರಿಗಳು ಬೃಹತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳಿಗೆ ಗಾಳಿ, ಬೆಳಕು, ಸುಸಜ್ಜಿತ ಕೊಠಡಿಗಳು, ಆರಾಮದಾಯಕ ಆಸನಗಳು ಎಲ್ಲವೂ ವ್ಯವಸ್ಥೆಯಾಗಿದೆ.


ಆದರೆ ಸಾರ್ವಜನಿಕರ ಪಾಲಿಗೆ ಇವೆಲ್ಲವೂ ಮರೀಚಿಕೆಯಂತಿದೆ. ನಿತ್ಯವೂ ನೂರಾರು ಮಂದಿ ಈ ಕಛೇರಿಗಳಿಗೆ ಬರುತ್ತಾರೆ. ಕೋರ್ಟ್ ವಿಚಾರಣೆಗೆ ಹಾಜರಾಗುವವರು, ಜಾತಿ, ಆದಾಯ, ಭೂ ದಾಖಲೆಗಳಿಗಾಗಿ ಓಡಾಡುವವರು, ವೃದ್ಧರು, ಮಹಿಳೆಯರು, ಗರ್ಭಿಣಿಯರು ಸೇರಿದಂತೆ ಅನೇಕರು ಕೋರ್ಟ್ ಕೊಠಡಿ ಹೊರಗೆ ತಮ್ಮ ಸರದಿಗಾಗಿ ಕಾಯುವಾಗ ಕುಳಿತುಕೊಳ್ಳಲು ಕನಿಷ್ಠ ಒಂದು ಬೆಂಚು ಸಹ ಇಲ್ಲ ಎಂಬುದು ಕಹಿ ಸತ್ಯ.
ಸರದಿ ಬರುವವರೆಗೆ ಜನರು ಗೋಡೆಗೆ ಒರಗಿ ನಿಲ್ಲಬೇಕು, ನೆಲದ ಮೇಲೆ ಕುಳಿತು ಕೊಳ್ಳಬೇಕು. ಗಂಟೆಗಟ್ಟಲೆ ಕಾಯಬೇಕಾಗುವ ಪರಿಸ್ಥಿತಿಯಲ್ಲಿ ವೃದ್ಧರು ಹಾಗೂ ಗರ್ಭಿಣಿಯರು ಎದುರಿಸುವ ಸಂಕಷ್ಟ ಹೇಳತೀರದು. ಇದು ಕೇವಲ ಸೌಲಭ್ಯ ಕೊರತೆಯಲ್ಲ ಬದಲಿಗೆ ಮಾನವೀಯತೆ ಮತ್ತು ನಾಗರಿಕರ ಗೌರವದ ಮೇಲಿನ ದೌರ್ಜನ್ಯವಾಗಿದೆ. ಒಂದು ಬೆಂಚು ಹಾಕಲು ಯಾವುದಾದರೂ ಯೋಜನೆ ಬೇಕೇ. ನ್ಯಾಯಕ್ಕಾಗಿ ಬಂದ ಜನರು ಮೊದಲು ಅವಮಾನ ಅನುಭವಿಸಬೇಕೇ ಎಂಬ ಪ್ರಶ್ನೆಗಳು ಕಾಡತೊಡಗಿದೆ.
ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಸೌಕರ್ಯ ಹೇಗೆ ಮುಖ್ಯವೋ, ಜನರ ಗೌರವವೂ ಅಷ್ಟೇ ಮುಖ್ಯ ಎಂಬು ದನ್ನು ಮನಗಾಣಬೇಕಿದೆ. ಕೋಟ್ಯಾಂತರ ರೂ. ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡಗಳಲ್ಲಿ ಒಂದು ಚಿಕ್ಕ ಬೆಂಚಿನ ವ್ಯವಸ್ಥೆ ಮಾಡುವುದು ಅಸಾಧ್ಯವೇ ಎಂಬುದನ್ನು ಇಲ್ಲಿನ ಅಧಿಕಾರಿ ವರ್ಗ ತಿಳಿಸಬೇಕಿದೆ.

Leave a Reply

Your email address will not be published. Required fields are marked *