ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಅಗತ್ಯ..
ಶಿವಮೊಗ್ಗ : ಶಾಂತಲಾ ಸ್ಟೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್, ಮಾಚೇನಹಳ್ಳಿ, ಸಂಸ್ಥೆಯ ಯೂನಿಟ್-೨ ರಲ್ಲಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಭಾಗವಾಗಿ ೨೦೨೩-೨೦೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೭೦ ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಾಸ್ಕಾರ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ಪ್ರೊ| ಟಿ. ಎಸ್. ಹೂವಯ್ಯ ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಯೋಚನೆಗಳೊಂದಿಗೆ ಹೇಗೆ ತಮ್ಮ ಜೀವನವನ್ನು ರೂಪಿಸಿ ಕೊಳ್ಳ ಬೇಕು, ಪೋಷಕರು ತಮ್ಮ ಆಸೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು ಅವರು ತಮ್ಮ ಇಚ್ಚೆಯಂತೆ ವಿಷಯ ಮತ್ತು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ವಿದ್ಯಾರ್ಥಿಗಳಿಗೆ ಓದುವ ಛಲವಿರಬೇಕು ಹಾಗೂ ಓದಿನ ಜೊತೆಗೆ ತಮಗಿಷ್ಟವಾದ ಉತ್ತಮ ಹವ್ಯಾಸವೊಂದನ್ನು ಹೊಂದಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತಮವೆಂದು ತಿಳಿಸಿದರು.
ವಿದ್ಯಾರ್ಥಿಗಳು ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂಬ ಬಗ್ಗೆ ವಿವರಿಸಿದ ಹೂವಯ್ಯಗೌಡ ಅವರು, ನಿಷ್ಠೆ, ಪ್ರಾಮಾಣಿಕತೆ ಮತ್ತು ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಎಸ್ ರುದ್ರೇಗೌಡ, ಶಾಂತಲಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಿ.ಎಸ್. ಚಂದ್ರಶೇಖರ್, ವಿನಯ್ ಡಿ.ಸಿ. ಮತ್ತು ಸಿಬ್ಬಂದಿಗಳು, ಸಂಸ್ಥೆಯ ಉದ್ಯೋಗಿಗಳು ಹಾಗೂ ಪುರಸ್ಕೃತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು ೯ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿ/ನಿಗೆ ಅಭಿನಂದನಾ ಪತ್ರ ಹಾಗೂ ತಲಾ ರೂ. ೨೦,೦೦೦ ರೂ.ಗಳ ಚೆಕ್ ವಿತರಿಸುವ ಮೂಲಕ ವಿದ್ಯಾರ್ಥಿ ಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನು ನೀಡಲಾಯಿತು. ವಿದ್ಯಾರ್ಥಿಗಳು ಅವರ ಅನಿಸಿಕೆಗಳನ್ನು ಹಂಚಿ ಕೊಂಡರು. ಹಾಗೂ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಮಕ್ಕಳ ಶ್ರಮ ಹಾಗೂ ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
ಮಷಿನ್ ಶಾಪ್ ವಿಭಾಗದ ಚೇತನ್ ಕೆ.ಎಸ್. ಸ್ವಾಗತಿಸಿದರು. ಹೆಚ್.ಆರ್. ಆಫೀಸರ್ ವಿ.ಡಿ. ನಾಗರಾಜ್, ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಂಸ್ಥಾಪಕರ ಬಗ್ಗೆ ಹಾಗೂ ಇಂದಿನ ಪ್ರತಿಭಾ ಪುರಸ್ಕಾರದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿ.ಚೇತನ್ ವಂದಿಸಿದರು. ಹೆಚ್.ಆರ್. ಮ್ಯಾನೇಜರ್ ಹೆಚ್. ಬಿ. ನಂಜುಂಡೇಶ್ವರ ಇವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.