ಔದಂಬರ ಅಥವಾ ಅತ್ತಿಮರದ ಪೌರಾಣಿಕ ಹಿನ್ನೆಲೆ…
ಮೂಲತೋ ಬ್ರಹ್ಮ ರೂಪಾಯ |
ಮಧ್ಯತೋ ವಿಷ್ಣು ರೂಪಿಣಿ |
ಅಗ್ರತೋ ಶಿವರೂಪಾಯ ವಕ್ಷ ರಾಜಯತೇ ನಮಃ ||
ಔದಂಬರ ವೃಕ್ಷ ಅಂದರೆ ಅತ್ತಿಮರ. ಇದರಲ್ಲಿ ಪುಟ್ಟ ಪುಟ್ಟ ನಸುಗೆಂಪು ಬಣ್ಣದ ಸಣ್ಣ ನಿಂಬೆ ಹಣ್ಣಿನ ಗಾತ್ರದಂಥ ಹಣ್ಣುಗಳು ಗೊಂಚಲು ಗೊಂಚಲುಗಳಾಗಿ ಮರದ ತುಂಬಾ ಆಗುತ್ತದೆ. ಬಹಳ ಮೃದುವಾದ ಹಣ್ಣು, ಕೈಯಲ್ಲಿ ಮುರಿಯಬಹುದು. ಹಣ್ಣಿನೊಳಗೆ ತಿರುಳು ನಾಗಸಂಪಿಗೆ ಹೂವಿನ ಕುಸುಮಗಳಂತೆ ಇರುತ್ತದೆ. ಇದರ ತುಂಬಾ ಹುಳುಗಳು ಇರುತ್ತವೆ. ಕುಸುಮಗಳನ್ನೆಲ್ಲ ಬಿಡಿಸಿ ತಿಂದರೆ ರುಚಿಯಾದ ಹಣ್ಣು ಹೌದು. ಆರೋಗ್ಯಕ್ಕೂ ಒಳ್ಳೆಯದು. ಇದು ಪೂಜ್ಯನೀಯವಾದ ಮರ.
ವೇದಗಳ ಕಾಲದಿಂದಲೂ ಬಳಕೆಯಲ್ಲಿರುವ ಅತ್ಯದ್ಭುತವಾದ ಮರ ಔದಂಬರ ವೃಕ್ಷ. ಧಾರ್ಮಿಕ ಯಜ್ಞ – ಯಾಗಾದಿಗಳಲ್ಲಿ ಇದರ ಬಹೋಪಯೋಗಿ ಬಳಕೆ ಮಾಡುತ್ತಾರೆ. ಇದು ಕಾಮಧೇನು, ಕಲ್ಪವೃಕ್ಷ ಎಂದು ತಿಳಿಸಲಾಗಿದೆ. ಗುರುಪಾದವನ್ನು ತನ್ನೊಳಗೆ ಇಟ್ಟುಕೊಂಡಿರುವ ವೃಕ್ಷವಾಗಿದೆ. ಇದು ಶ್ರೀ ದತ್ತಾತ್ರೇಯರ ವಾಸ ಸ್ಥಾನವಾಗಿದೆ.
ಮಾರ್ಗಶಿರ ಮಾಸದ ಹುಣ್ಣಿಮೆಯ ದಿನ ದತ್ತ ಜಯಂತಿ ಯನ್ನು ಆಚರಿಸುತ್ತಾರೆ. ಸೃಷ್ಟಿಕರ್ತ ಬ್ರಹ್ಮ ಪಾಲನೆ ಮಾಡುವ ವಿಷ್ಣು, ಲಯವನ್ನು ಮಾಡುವ ಶಿವ, ತ್ರಿಮೂರ್ತಿಗಳ ಸ್ವರೂಪವೇ ಶ್ರೀ ದತ್ತಾತ್ರೇಯ ಗುರುಗಳು. ಹೀಗೆ ಬ್ರಹ್ಮ ವಿಷ್ಣು ಮಹೇಶ್ವರರ ನೆಲೆಯಾಗಿದೆ.
ಈ ಔದುಂಬರ ಮರಕ್ಕೆ ಪೌರಾಣಿಕ ಹಿನ್ನೆಲೆ ಇದೆ. ದಿತಿ- ಕಶ್ಯಪರ ಮಗ, ಹಿರಣ್ಯ ಕಶ್ಯಪು ಮತ್ತು ಕಯಾದುವಿನ ಮಗ ಪ್ರಹ್ಲಾದನ ಕಥೆ ಎಲ್ಲರಿಗೂ ಗೊತ್ತಿದೆ. ಪ್ರಹ್ಲಾದನನ್ನು ರಕ್ಷಿಸಲು ಭಗವಂತನು ಅರ್ಧ ಮಾನವ ಅರ್ಧ ಸಿಂಹ ಶರೀರ ಪಡೆದು ಕಂಬ ಸೀಳಿ ನರಸಿಂಹನಾಗಿ ಅವತರಿಸಿ ಹಿರಣ್ಯ ಕಶ್ಯಪುವನ್ನು ಸಂಹರಿಸಲು ಯಾವುದೇ ಆಯುಧಗಳ ಸಹಾಯವಿಲ್ಲದೆ ತನ್ನ ನಖಗಳಿಂದ ಅವನ ಹೊಟ್ಟೆಯನ್ನು ಬಗೆದು ಸಂಹಾರ ಮಾಡುತ್ತಾನೆ. ಸಂಹಾರ ಮಾಡುವಾಗ ಹಿರಣ್ಯ ಕಶ್ಯಪುವಿನ ಹೊಟ್ಟೆಯೊಳಗೆ ಕಾಲ ಕೂಟ ಎಂಬ ಭಯಂಕರ ವಿಷವಿದ್ದು, ಆ ವಿಷ ಭಗವಂತನ ಉಗುರುಗಳ ಒಳಗೆ ಸೇರಿಕೊಂಡು ಭಗವಂತನಿಗೆ ತುಂಬಾ ಉರಿಯಾಗುತ್ತದೆ. ಏನು ಮಾಡಿದರೂ ಭಗವಂತನ ಉರಿ ಕಡಿಮೆ ಆಗುವುದಿಲ್ಲ. ಇದನ್ನು ನೋಡಿದ ಮಹಾಲಕ್ಷ್ಮಿಗೆ ತಡೆದುಕೊಳ್ಳಲಾಗಲಿಲ್ಲ. ಆಕೆ ಅತ್ತಿ ಮರದ ಹಣ್ಣುಗಳನ್ನು ಭಗವಂತನ ಉಗುರುಗಳಿಗೆ ಲೇಪಿಸುತ್ತಾಳೆ ಮತ್ತು ಹಣ್ಣುಗಳನ್ನು ತಿನ್ನಲು ಕೊಡುತ್ತಾಳೆ. ಇದರಿಂದ ಸ್ವಲ್ಪ ಹೊತ್ತಿಗೆ ಭಗವಂತನ ಉರಿ ತಾಪ ಕಡಿಮೆಯಾಗಿ ಸಮಾಧಾನವಾಗುತ್ತದೆ.
ಇದರಿಂದ ಸಂತುಷ್ಟನಾದ ಭಗವಂತನು, ತನ್ನ ಉಗುರಿನ ನೋವನ್ನು ಕಡಿಮೆ ಮಾಡಿದ ಔದಂಬರ ವೃಕ್ಷವನ್ನು ಆಶೀರ್ವದಿಸಿ ವರಗಳನ್ನು ಕೊಡುತ್ತಾನೆ.
ಸ್ವರ್ಗ ಲೋಕದಲ್ಲಿನ ವೃಕ್ಷಗಳಂತೆ ಔದುಂಬರ ವಕ್ಷವು ಸದಾಕಾಲ ಫಲಭರಿತವಾಗಿರಲಿ ಹಾಗೂ ಈ ವೃಕ್ಷವನ್ನು ಯಾರು ಭಕ್ತಿಯಿಂದ ಆರಾಧಿಸಿ, ಪೂಜಿಸುತ್ತಾರೋ ಅವರ ಇಷ್ಟಾರ್ಥಗಳೆಲ್ಲ ನೆರವೇರಲಿ. ಅವರ ಮನೆಯಲ್ಲಿ ಶಾಂತಿ-ಸುಖ-ಸಮೃದ್ಧಿ ನೆಲೆಸಲಿ ಹಾಗೂ ಈ ಔದಂಬರ ವೃಕ್ಷವನ್ನು ದರ್ಶನ ಮಾಡಿದವರ ಸಕಲ ಪಾಪಗಳು ಕಳೆಯಲಿ. ಈ ಮರದಲ್ಲಿ ದತ್ತಾತ್ರೇಯ ಗುರುಗಳ ಪವಿತ್ರ ವಾಸಸ್ಥಾನವಾಗಿದ್ದು, ಅವರ ತತ್ವಗಳು ಎಡೆ ಪ್ರಸಾರವಾಗಿ ಅದರ ಪ್ರಯೋಜನಗಳು ಭಕ್ತರು ಪಡೆಯಲಿ.
ಇಂತಹ ಸನ್ನಿಧಿಯಲ್ಲಿ ಭಕ್ತರು ಸ್ನಾನಾದಿಗಳನ್ನು ಮುಗಿಸಿ ಔದುಂಬರ ವೃಕ್ಷದ ನೆರಳಲ್ಲಿ ಕುಳಿತು, ಭಕ್ತಿಯಿಂದ ಗುರು ಚರಿತ್ರೆ, ಗುರು ಭಜನೆಗಳನ್ನು ಮಾಡಿದರೆ ಅವರು ಅಂದುಕೊಂಡ ಕೆಲಸಗಳು ಸರಾಗವಾಗಿ ಆಗಲಿ. ಬ್ರಹ್ಮ- ವಿಷ್ಣು- ಮಹೇಶ್ವರ ತ್ರಿಮೂರ್ತಿಗಳು ಮತ್ತು ಸಕಲ ದೇವಾನುದೇವತೆಗಳ ಸಹಿತ ಈ ಮರದಲ್ಲಿ ನೆಲೆಸುವೆ ಎಂದು ಹಲವಾರು ವರಗಳನ್ನು ಔದುಂಬರ ವಕ್ಷಕ್ಕೆ ಭಗವಂತನು ಕೊಟ್ಟನು.
ಈ ರೀತಿ ಭಗವಂತನಿಗಾದ ವಿಷದ ಉರಿಯನ್ನು ಕಡಿಮೆ ಮಾಡಿದ ಔದಂಬರ ವೃಕ್ಷ ದತ್ತಾತ್ರೇಯರ ವಾಸಸ್ಥಾನ ಆಗಿದ್ದು, ಧ್ಯಾನ, ಜಪ, ಹೋಮ-ಹವನಗಳನ್ನು ಮಾಡಿದಷ್ಟು ಗುರು ಕೃಪೆ ಭಕ್ತರಿಗೆ ದೊರೆಯಲಿ. ಇದು ಭೂಲೋಕದ ಕಲ್ಪವೃಕ್ಷವಾಗಲಿ. ದತ್ತಾತ್ರೇಯ ಸ್ತೋತ್ರ ಪಠಣ ಮಾಡುವ ಮಕ್ಕಳಿಗೆ ವಿದ್ಯೆ- eನ ದತ್ತಾತ್ರೇಯ ಸಾನಿಧ್ಯದಲ್ಲಿ ಮಾಡುವ ಹೋಮ-ಹವನಗಳ ಭಸ್ಮದಿಂದ ಮಕ್ಕಳಲ್ಲಿ ಬರುವ ಬಾಲಗ್ರಹ ಪೀಡೆಗಳು ನಿವಾರಣೆಯಾಗಲಿ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಪೂಜನೆಯ ಮರವಾಗಿರುವ ಔದುಂಬರ ವೃಕ್ಷ ಪವಿತ್ರವಾಗಿದ್ದು, ಭಗವಂತನ ಹಾಲಾಹಲವನ್ನೇ ಶಮನ ಮಾಡಿದ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ರಾಮ ಬಾಣದಂತಿರುವ, ಈ ಮರದ ಎಲೆ, ಬೇರು, ತೊಗಟೆ, ಹಣ್ಣು ಎಲ್ಲವೂ ಔಷಧಿಯುಕ್ತವಾಗಿದೆ. ಮನೆಯ ಅಂಗಳದಲ್ಲಿ ಔದಂಬರ ವಕ್ಷ ಇದ್ದರೆ ಅಲ್ಲಿ ದತ್ತಾತ್ರೇಯರ ಸಾನಿಧ್ಯವೇ ಇದ್ದಂತಾಗುತ್ತದೆ.
ಇದು ದೊಡ್ಡ ಗಾತ್ರದ ಮರವಾಗಿ ಬೆಳೆಯುತ್ತದೆ. ಹೂವಾಗುವುದು ಕಡಿಮೆ. ಹಣ್ಣಿನೊಳಗೆ ಸಣ್ಣ ಸಣ್ಣ ಬೀಜಗಳು ಇರುತ್ತವೆ. ಇದರಲ್ಲಿ ಹಸಿರು ಕಾಯಿಗಳು ಮರದ ತುಂಬಾ ಬಿಡುತ್ತದೆ. ನಂತರ ಕಂದು ಬಣ್ಣಕ್ಕೆ ತಿರುಗಿ ನಸುಗೆಂಪು ಬಣ್ಣದ ಹಣ್ಣಾಗುತ್ತದೆ. ಇದನ್ನು ಪಶು, ಪಕ್ಷಿ, ಪ್ರಾಣಿಗಳು ತಿಂದು ಆರೋಗ್ಯವಂತವಾಗಿರುತ್ತವೆ. ಅಳಿಲುಗಳಂತೂ ಈ ಮರದಲ್ಲಿಯೇ ಓಡಾಡುತ್ತವೆ.
ಹಸುಗಳು ಮರದ ಹತ್ತಿರವೇ ಮೇಯುತ್ತಾ, ಹಣ್ಣುಗಳನ್ನು ತಿಂದು ಅಲ್ಲಿಯೇ ಮಲಗಿ ವಿಶ್ರಾಂತಿ ಪಡೆಯುತ್ತವೆ. ತ್ರಿಮೂರ್ತಿಗಳ ವಾಸಸ್ಥಾನವಿರುವ ಈ ವೃಕ್ಷವನ್ನು ಶ್ರದ್ಧಾ ಭಕ್ತಿಯಿಂದ, ಆರಾಧಿಸಿ, ನಿಯಮದಂತೆ ೭ ದಿನ, ೨೧ ದಿನ, ೪೮ ದಿನ ಹೀಗೆ ಸಂಕಲ್ಪ ಮಾಡಿಕೊಂಡು ವ್ರತ, ಧ್ಯಾನ, ಪೂಜೆ, ಜಪಗಳನ್ನು ಮಾಡಿ ಮರಕ್ಕೆ ಇಂತಿಷ್ಟು ಅಂತ ಪ್ರದಕ್ಷಿಣೆ ನಮಸ್ಕಾರ ಮಾಡಿದರೆ, ಅಂದುಕೊಂಡ ಕಾರ್ಯಗಳೆಲ್ಲ ನೆರವೇರುತ್ತದೆ ಎಂಬ ನಂಬಿಕೆ ಜನಗಳಲ್ಲಿ ಸ್ಥಿರವಾಗಿದೆ.
ದತ್ತ ದೇವರ ಕ್ಷೇತ್ರಗಳಿಗೆ ಹೋಗಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ, ಸೇವೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ದತ್ತಾತ್ರೇಯರು ನೆಲೆಸಿರುವ ಈ ಮರವನ್ನು ದತ್ತ ವೃಕ್ಷ ಎಂದು ಕರೆಯುತ್ತಾರೆ. ಗುರು ಬಲವಿಲ್ಲದವರು ಈ ಮರವನ್ನು ಪೂಜಿಸುವುದರಿಂದ ಗುರು ಬಲ ಕೂಡಿ ಬರುತ್ತದೆ. ಮಕ್ಕಳ (ಮುಂಜಿ) ಉಪನಯನವನ್ನು ಗುರು ಸಾನಿಧ್ಯದಲ್ಲಿ ಮಾಡುವುದರಿಂದ ಗುರುಕಪೆ ದೊರೆಯುತ್ತದೆ.
ಮುರುಳೀಧರ್ ಹೆಚ್ ಸಿ,
ಕ್ಷೇತ್ರ ದರ್ಶನ ಅಂಕಣಕಾರರು ಹಾಗೂ ಪತ್ರಕರ್ತರು, ಶಿವಮೊಗ್ಗ.