ಸಂತ್ರಸ್ಥರ ನಿರೀಕ್ಷೆ ಹುಸಿಗೊಳಿಸಿದ ಸತ್ಯಶೋಧಕರು…
ಬಿಜೆಪಿ ನಾಯಕರು ಕೇವಲ ಓಟ್‌ಬ್ಯಾಂಕ್‌ಗಾಗಿ ಸತ್ಯಶೋಧನಾ ಸಮಿತಿ ಹೆಸರಿನಲ್ಲಿ ಇಂದು ರಾಗಿಗುಡ್ಡಕ್ಕೆ ಭೇಟಿ ಕೊಟ್ಟಿರುವ ಅನುಮಾನ ಸ್ಥಳೀಯರಲ್ಲಿ ಮನೆ ಮಾಡಿದೆ.
ಹಿಂದೂಗಳ ರಕ್ಷಕರು ಎಂದು ಬೀಗುವ ಬಿಜೆಪಿಗರು ಹಾನಿಗೊಳಗಾದ ಕೆಲ ಹಿಂದೂ ಧರ್ಮಿಯರ ಮನೆಗಳಿಗೆ ಭೇಟಿ ನೀಡದರೂ, ಅನ್ಯಕೋಮಿನ ಗಲಭೆಕೋರರಿಂದ ಯಾವ ರೀತಿಯ ರಕ್ಷಣೆ ಮತ್ತು ಈಗಾಗಲೇ ಹಾನಿಯುಂಟಾದ ಮನೆಗಳಿಗೆ ಪರಿಹಾರ ಕುರಿತು ತುಟಿಕ್ ಪಿಟಿಕ್ ಎನ್ನದಿರವುದು ಅಚ್ಚರಿಯನ್ನುಂಟುಮಾಡಿದ್ದು, ಈದ್ ಮೆರವಣಿಗೆಯ ವೇಳೆ ಕೆಲ ಮನೆಗೆ ನುಗ್ಗಿ ದಾಂಧಲೆ ಮಾಡಲಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದ ಮನೆಯ ಮಾಲೀಕರಿಗೆ ಸತ್ಯಶೋಧನ ಸಮಿತಿಯ ನಡೆ ಧೋರಣೆ ನಿರಾಸೆ ಮೂಡಿಸಿದೆ.
ಈ ಹಿಂದೆ ಹರ್ಷ ಎಂಬ ಯುವಕನ ಕೊಲೆಯಾದಾಗ ಆತನ ಕುಟುಂಬಕ್ಕೆ ಹಣದ ಹೊಳೆಯೇ ಹರಿದು ಬಂದಿತ್ತು. ಸ್ಥಳೀಯ ನಾಯಕರೂ ಸೇರಿದಂತೆ ರಾಜ್ಯ ಮಟ್ಟದ ನಾಯಕರೂ ಕೂಡ ನಾ ಮುಂದು ತಾ ಮುಂದು ಎಂದು ಆರ್ಥಿಕ ನೆರವು ನೀಡಲು ಹರ್ಷನ ಮನೆ ಬಾಗಿಲಿಗೆ ಓಡೋಡಿ ಬಂದಿದ್ದರು. ಆದರೆ ರಾಗಿಗುಡ್ಡದ ಹಿಂದೂ ಮನೆಗಳಿಗೆ ಮತ್ತು ಗಾಯಾಳುಗಳಿಗೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ರಾಜ್ಯ ನಾಯಕರು ವೈಯಕ್ತಿಕವಾಗಿ ಅಥವಾ ಪಕ್ಷದ ವತಿಯಿಂದ ಆರ್ಥಿಕವಾಗಿ ಸ್ಪಂದಿಸದಿರುವುದು ಅಚ್ಚರಿಯನ್ನುಂಟುಮಾಡಿದೆ.
ಬಿಎಸ್‌ವೈ ಗೈರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿ ಇಂದು ನಗರಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತು ಹಾನಿಗೊಳಗಾದ ಮನೆಗಳಲ್ಲಿ ಶಾಂತಿನಗರದಲ್ಲಿ ವೀಕ್ಷಿಸಿ ನಂತರ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿತು. ಆದರೆ ಮಾಜಿ ಮುಖ್ಯಮಂತ್ರಿ ಹಾಗೂ ರಾಜಾ ಹುಲಿ ಖ್ಯಾತಿಯ ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎಸ್. ಯಡಿಯೂಪ್ಪ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಗೈರು ಎದ್ದು ಕಾಣುತ್ತಿತ್ತು.
ಕಾಲೆಳೆದ ಕಾಂಗ್ರೆಸ್: ಬಿಜೆಪಿ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ನಡೆದ ಕೋಮು ಗಲಭೆಗಳಿಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರುಗಳು ಇದು ಕೇವಲ ಕ್ರಿಯೆಗೆ ಪ್ರತಿಕ್ರಿಯೆ… ಆಕ್ಷನ್‌ಗೆ ರಿಯ್ಯಾಕ್ಷನ್.. ಎಂದು ಸಿನಿಮೀಯ ರೀತಿಯಲ್ಲಿ ಡೈಲಾಗ್‌ಗಳನ್ನು ಹೊಡೆಯುತ್ತಿದ್ದರು. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಗರಿಗೆ ಈಗ ಕೆಲಸವಿಲ್ಲದ ಕಾರಣ ರಾಜ್ಯದಲ್ಲಿ ಯಾವುದೇ ರೀತಿಯ ಗಲಾಟೆಗಳಾದರೂ ಅದಕ್ಕೆ ಕೋಮು ಬಣ್ಣ ಬಳಿಯಲು ಹವಣಿಸುತ್ತಿದ್ದಾರೆ. ರಾಗಿಗುಡ್ಡದಲ್ಲಿ ನಡೆದ ಗಲಭೆ ಕುರಿತು ಜಿಲ್ಲಾ ಪೊಲೀಸ್ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು, ಈಗಾಗಲೇ ಸದರಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಪುಂಡರ ಹೆಡೆಮುರಿಕಟ್ಟಿ ಆಗಿದೆ. ಆದರೆ ಸತ್ಯಶೋಧನೆ ನೆಪದಲ್ಲಿ ನಗರಕ್ಕೆ ಬಂದ ಬಿಜೆಪಿಗರು ಸಾಂತ್ವನದ ನಾಟಕವಾಡಿ, ಪಿಕ್‌ನಿಕ್‌ಗೆ ಬಂದ ಹಾಗೆ ಬಂದು ಹೋದರು ಎಂದು ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.