ಕವನಜಿಲ್ಲಾ ಸುದ್ದಿತಾಜಾ ಸುದ್ದಿ

ಮೋಡಗಳು ಕರಗಿ…

Share Below Link

ಮಳೆ ಸುರಿದು.
ಭುವಿ ತೋಯ್ದು..
ಎಲ್ಲೂ ನೀರ ಹೊಳೆ.
ಇಳೆಗೆ ಇಬ್ಬನಿ ತಬ್ಬಿದೆ.
ಹೊಳೆ ತುಂಬಿ ನೀರ ಜಲರಾಶಿ.


ಹರಿಯುವ ನದಿ ಝರಿ
ತೊರೆಗಳು ನುಡಿಸಿವೆ
ನಾದಲೀಲೆ..
ಗರಿಬಿಚ್ಚಿ ನರ್ತಿಸಿವೆ
ನವಿಲುಗಳ ಸಾಲು.
ಧರಿತ್ರಿ ಹಸಿರಾಗಿರುವಳು.


ಋತುಮಾನ ಕಾಲಚಕ್ರ
ಓಡುತ್ತಿವೆ… ಪ್ರಕೃತಿ ಯ
ಸುಂದರವಾಗಿಸಲು..
ಪೈರುಪಚ್ಚೆ ತೆನೆಗಳು ಬಳುಕಿ
ವೈಯಾರದಿ ತೂಗಿವೆ.
ಹಸಿರ ಸಿರಿಗೆ ಮಳೆಯ ಸಿಂಚನ.


ಪ್ರಕೃತಿ ಸೌಂಧರ್ಯ
ಲಹರಿಯಲ್ಲಿ ತೇಲುತ್ತಿದೆ
ಮಳೆ ನಿಂತ ಮೇಲೆ
ತೊಟ್ಟಿಕ್ಕುವ ಹನಿಗಳು
ನುಡಿಸಿವೆ ನಾದಸ್ವರ.
ಶೃಂಗಾರದಿ ಭೂರಮೆ
ಕಂಗೊಳಿಸಿದೆ.


ಅನಿತಸೂರ್ಯ
ಶಿಕ್ಷಕಿ, ಶಿವಮೊಗ್ಗ