ಐತಿಹಾಸಿಕ ಶ್ರೀಹರಿಹರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ…
ನಮ್ಮ ರಾಜ್ಯದ ಮಧ್ಯಭಾಗದಲ್ಲಿರುವ ದಕ್ಷಿಣಕಾಶಿ, ದೇವಸ್ಥಾನಗಳ ಊರು ಎಂದೇ ಹೆಸರಾದ ನಗರ ಹರಿಹರ. ತುಂಗಾಭದ್ರಾ ನದಿಯತೀರದಲ್ಲಿ ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನವಿರುವುದರಿಂದ ಈ ನಗರಕ್ಕೆ ಹರಿಹರ ಎಂಬೆಸರು ಬಂದಿದೆ.
ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಿದೆ. ಧರಣಿಮಂಡಲ ಮಧ್ಯದೊಳಗೆ ಎಂಬ ಪುಣ್ಯಕೋಟಿಯ ಜನಪದ ಕಥನ ಕಾವ್ಯದಲ್ಲಿ ಹರಿಹರ ನಗರವು ರಾಜ್ಯದ ಮಧ್ಯಭಾಗದಲ್ಲಿದೆ ಎಂದು ಹೇಳಲಾಗಿದೆ.
ಜತ್ರೆಗಳು ನಮ್ಮ ಜನಪದರು ನಮಗೆ ಕೊಟ್ಟಿರುವ ಅಮೂಲ್ಯವಾz ಧಾರ್ಮಿಕ ಹಾಗೂ ಜನಪದ ಸಂಸ್ಕೃತಿಯಾಗಿದೆ. ನಮ್ಮ ರಾಜ್ಯದಲ್ಲಿ ಜಾತ್ರೆಗಳು ಎಂದು ಪ್ರಾರಂಭವಾದವೆಂದು ಹೇಳಲಾಗದು. ಬ್ರಹ್ಮಶಿವನ ಸಮಯ ಪ್ರe, ದುರ್ಗಸಿಂಹನ ಪಂಚತಂತ್ರ, ಹೇಮಾದ್ರಿಯ ಚತುರ್ವರ್ಗಚಿಂತಾಮಣಿಯಲ್ಲಿ ಜತ್ರೆಯ ವಿವರಣೆಯನ್ನು ಕಾಣಬಹುದು.
ಜತ್ರೆ, ಉತ್ಸವಗಳು ಈ ನೆಲದ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯ ಹೆಗ್ಗುರುತುಗಳು. ಉತ್ತರ ಕರ್ನಾಟಕದ ಪ್ರಮುಖ ಆಚರಣೆಗಳಲ್ಲಿ ಜತ್ರೆಯೂ ಒಂದು. ಈವರೆಗೆ ಕರ್ನಾಟಕದಲ್ಲಿ ೧೪೭೦ ಜತ್ರೆಗಳಿವೆ ಎಂದು ಗುರುತಿಸಲಾಗಿದೆ.
ಹರಿಹರದ ಸ್ಥಳ ಪುರಾಣದ ಪ್ರಕಾರ ಗುಹಾರಣ್ಯಕ್ಷೇತ್ರಂ ಎಂಬ ಊರಿದ್ದು, ಬಹಳಷ್ಟು ತೊಂದರೆ ಕೊಡುತ್ತಿರುವ ಗುಹಾಸುರನೆಂಬ ರಾಕ್ಷಸನ ಸಂಹಾರಕ್ಕಾಗಿ ಹರಿ-ಹರ ಜೊತೆಗೂಡಿ ಹರಿಹರನ ಅವತಾರ ತಾಳಿದರೆಂಬ ಪ್ರತೀತಿ. ಆ ಹಿನ್ನೆಲೆಯಲ್ಲಿ ಈ ನಗರಕ್ಕೆ ಹರಿಹರ ಎಂಬೆಸರು ಬಂದಿತು. ಶಿವ ಮತ್ತು ವಿಷ್ಣುವಿನ ದೇಹದ ಅರ್ಧ ಭಾಗದಿಂದ ರಚನೆಯಾಗಿರುವ ಏಳು ಅಡಿ ಎತ್ತರವಿರುವ ಹರಿಹರೇಶ್ವರ ಮೂರ್ತಿ ಆಕರ್ಷಕವಾಗಿದೆ.
ಕಣ್ಮರೆಯಾಗುತ್ತಿರುವ ಜನಪದ ಪರಂಪರೆ ಇಂತಹ ಉತ್ಸವಗಳ ಮೂಲಕ ಇನ್ನೂ ಜೀವಂತಿಕೆ ಉಳಿಸಿಕೊಂಡಿವೆ. ಸರ್ವಧರ್ಮಿಯರೂ ಸೌಹಾರ್ದತೆ, ಶ್ರದ್ಧಾ ಭಕ್ತಿಯೊಂದಿಗೆ ಪಾಲ್ಗೊಳ್ಳಲು ಸಾಧ್ಯವಾಗಿದೆ.
ತಂತ್ರeನ ಬೆಳೆದಂತೆ ಹಳ್ಳಿಗಾಡಿನಲ್ಲಿ ನಡೆಯುವ ಜತ್ರೆಗಳು ಕಳೆಗುಂದುತ್ತಿರುವ ಸಂದರ್ಭದಲ್ಲಿ, ನಗರೀಕರಣದ ಪ್ರಭಾವ ಗ್ರಾಮೀಣ ಸಂಸ್ಕೃತಿಯ ಮೇಲಾಗುತ್ತಿದ್ದರೂ ಪ್ರತಿ ವರ್ಷ ಜತ್ರೆಗಳು ಅದ್ದೂರಿಯನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಪ್ರತಿವರ್ಷ ಮಾಘ ಮಾಸದ ಭಾರತ ಹುಣ್ಣಿಮೆಯ ದಿನ ಬೆಳಗಿನ ಮೇಷ ಲಘ್ನದ ಶುಭ ಮುಹೂರ್ತದಲ್ಲಿ ಹರಿಹರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಜರುಗುತ್ತಾ ಬಂದಿದೆ. ಈ ವರ್ಷ ಫೆ.೧೯ರಿಂದ ೨೪ರವರೆಗೆ ಜತ್ರೆಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ನಿತ್ಯವೂ ಗಣಪತಿ ಪೂಜೆ, ರುದ್ರಾಭಿಷೇಕ, ಜಪ-ಹೋಮ, ಹವನ, ನವಗ್ರಹ ಪೂಜಧಾರ್ಮಿಕ ವಿಧಿವಿಧಾನಗಳು ಅಲ್ಲಿನ ಗುರುಗಳ, ಅರ್ಚಕರ ನೇತೃತ್ವದಲ್ಲಿ ಜರುಗುತ್ತವೆ.
ರಥೋತ್ಸವಕ್ಕೂ ಮುನ್ನ ೫ದಿನ ವಿವಿಧ ಉತ್ಸವಗಳು ಜರುಗಲಿದ್ದು, ಫೆ.೧೯ರಂದು ವೃಷಭೋತ್ಸವ, ಫೆ. ೨೦ರಂದು ಹನುಮೋತ್ಸವ, ೨೧ರಂದು ಗರುಡೋತ್ಸವ, ೨೨ರಂದು ಅಶ್ವೋತ್ಸವ ಹಾಗೂ ಸ್ವಾಮಿಯಕಲ್ಯಾಣೋತ್ಸವ, ೨೩ರಂದು ಗಜೋತ್ಸವ ಜರುಗುತ್ತವೆ. ಫೆ.೨೪ರಂದು ಬೆಳಿಗ್ಗೆ ೧೧.೩೦ರ ಶುಭ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ಶೈವ ಹಾಗೂ ವೈಷ್ಣವ ಸಂಪ್ರದಾಯದಂತೆ ಜರುಗುವುದು. ರಥೋತ್ಸವಕ್ಕೂ ಮೊದಲು ಸ್ವಾಮಿಯ ಪಾಲಕಿ ಉತ್ಸವ ಜರುಗುವುದು. ಫೆ.೨೫ರಂದು ಅವಭತ ಸ್ನಾನಗಳೊಂದಿಗೆ ಪೂರ್ಣಗೊಳ್ಳುತ್ತವೆ.
ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ನಗರದ ಯುವಕರು, ವಿವಿಧ ಸಂಘ-ಸಂಸ್ಥೆಗಳು ಮಜ್ಜಿಗೆ, ಪಾನಕ, ಪಾಯಸ ಹಾಗೂ ಅನ್ನ ಸಂತರ್ಪಣೆಯ ಸೇವೆಯನ್ನು ಬೆಳೆಸಿಕೊಂಡು ಬಂದಿರುವುದು ಸಂಸ್ಕೃತಿಗೊಂದು ಕನ್ನಡಿ ಹಿಡಿದಂತಿದೆ. ದೇವಸ್ಥಾನ ರಸ್ತೆಯ ಎರಡು ಬದಿಗಳಲ್ಲಿ ಮಹಿಳೆಯರು, ಮಕ್ಕಳು ಅತ್ಯಂತ ಸಂಭ್ರಮದಿಂದ ಜತ್ರೆಯ ವ್ಯಾಪಾರದಲ್ಲಿ ತೊಡಗಿರುತ್ತಾರೆ. ತವರಿಗೆ ಬಂದ ಮಹಿಳೆಯರು ಹೊಸ ಉಡುಪನ್ನು ಧರಿಸಿ ದೇವಸ್ಥಾನದ ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಹಣ್ಣು- ಕಾಯಿ ಅರ್ಪಿಸಿ ತಮ್ಮ ಭಕ್ತಿಯನ್ನು ಮೆರೆಯುವರು.
ದೇವಸ್ಥಾನಗಳ ಊರು ಹರಿಹರ:
ಹರಿಹರೇಶ್ವರ ದೇವಸ್ಥಾನ, ಉದ್ಭವ ಗಣಪತಿ, ಕಾಲಭೈರವೇಶ್ವರ, ಮಹಿಷಾಸುರ ಮರ್ದಿನಿ (ಲಕ್ಷ್ಮಿಗುಡಿ), ಶ್ರೀ ರಾಘವೇಂದ್ರಸ್ವಾಮಿ ಮಠ, ೧೦೮ ಲಿಂಗೇಶ್ವರ ಸ್ವಾಮಿ, ವಿಠ್ಠಲ ಮಂದಿರ, ಸದ್ಗುರು ನಾರಾಯಣ ಆಶ್ರಮ, ರೇಣುಕ ಮಂದಿರ, ಜೋಡಿ ಬಸವೇಶ್ವರ ದೇವಸ್ಥಾನ, ಕನ್ನಿಕಾಪರಮೇಶ್ವರಿ, ಬನಶಂಕರಿ ದೇವಸ್ಥಾನ, ಮನೇಶ್ವರ ದೇವಸ್ಥಾನ, ರಾಜನಹಳ್ಳಿ ಆಂಜನೇಯಸ್ವಾಮಿ, ಪೇಟೆ ಆಂಜನೇಯಸ್ವಾಮಿ, ಶ್ರೀರಾಮ ಮಂದಿರ, ಗುತ್ತೂರು ಗಣೇಶ ದೇವಸ್ಥಾನ, ಕಸಬಾ- ಮಹಜೇನಹಳ್ಳಿ ಗ್ರಾಮದೇವತೆ, ಐರಣಿಮಠ, ಫಕ್ಕೀರಸ್ವಾಮಿ ಮಠ, ಕೊಮಾರಹಳ್ಳಿ ಹೆಳವನಕಟ್ಟೆ ರಂಗನಾಥ ಸ್ವಾಮಿ, ನದಿ ತೀರದಲ್ಲಿರುವ ಸಂಗಮೇಶ್ವರ ದೇವಸ್ಥಾನ, ಓಂಕಾರ ಮಠ, ದತ್ತಾತ್ರೇಯ ದೇವಸ್ಥಾನ ಹೀಗೆ ಹರಿಹರ ನಗರವು ದೇವಸ್ಥಾನಗಳ ಊರು ಎಂಬ ಹೆಸರು ಪಡೆದಿದೆ.
ಹರಿಹರೇಶ್ವರ ಸ್ವಾಮಿಯ ಜತ್ರೆ ಶತಮಾನದ ಅಂಚಿನಲ್ಲಿರುವುದು ಹೆಮ್ಮೆಯ ವಿಷಯ ಒಂದೆಡೆಯಾದರೆ, ಹರಿಹರೇಶ್ವರ ದೇವಸ್ಥಾನದ ಸುತ್ತ ಸ್ವಚ್ಛತೆ, ಶೌಚಾಲಯಗಳ ಕೊರತೆ, ಬಂದ ಭಕ್ತರು ತಂಗಲು ಸಾಕಷ್ಟು ಕೊಠಡಿಗಳ ಕೊರತೆ ಎದ್ದು ಕಾಣುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಒಟ್ಟು ೫೪ ಶಾಸನಗಳಿವೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಆವರಣದಲ್ಲಿರುವ ೨೦ಕ್ಕಿಂತಲೂ ಹೆಚ್ಚು ಶಾಸನಗಳನ್ನು ಪ್ರವಾಸೋದ್ಯಮ ಇಲಾಖೆಯವರು ಮೇಲ್ಛಾವಣೆಯಿಂದ ಸಂರಕ್ಷಿಸಿzರೆ. ಮುಂದಿನ ಪೀಳಿಗೆಗೆ ಹರಿಹರದೇವಸ್ಥಾನಗಳ ಊರು ಎಂದು ಉಳಿಯಬೇಕಾದರೆ ಮುಜರಾಯಿ ಇಲಾಖೆ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನು ಹೆಚ್ಚಿನ ಗಮನ ಹರಿಸಬೇಕಿದೆ. ಈ ಐತಿಹಾಸಿಕ ಮಂದಿರಗಳನ್ನು, ಪರಂಪರೆಯ ಸ್ಮಾರಕಗಳನ್ನು, ಶಾಸನಗಳನ್ನು ಸಂರಕ್ಷಿಸುವ ಕರ್ತವ್ಯ ಎಲ್ಲರ ಮೇಲಿದೆ. ಇದೊಂದು ಮೆಚ್ಚುಗೆಯ ಪ್ರವಾಸಿ ತಾಣವಾಗಲು ಬೇಕಾದ ಮೂಲ ಸೌಕರ್ಯಗಳನ್ನು ಇಲಾಖೆ ಒದಗಿಸಬೇಕಿದೆ. ಅಂದಾಗ ಮಾತ್ರ ಐತಿಹಾಸಿಕ ಪರಂಪರೆಗೆ ಒತ್ತುಕೊಟ್ಟಂತಾಗುವುದು.
ದೇವಸ್ಥಾನಗಳ ನಗರವಾದ ಹರಿಹರದ ಆರಾಧ್ಯದೈವ ಶ್ರೀ ಹರಿಹರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ನಾವೆ ತನು-ಮನ-ಧನದಿಂದ ಭಾಗಿಯಾಗಿ ಸ್ವಾಮಿಯ ಕಪೆಗೆ ಪಾತ್ರರಾಗೋಣ.