ಬೆಂಗಳೂರು ಬ್ಲಾಸ್ಟ್‌ಗೆ ಟೆರರ್ ಮಾಸ್ಟರ್ ಪ್ಲಾನ್!
ಬೆಂಗಳೂರು: ಐವರು ಶಂಕಿತ ಉಗ್ರರು ಎರಡು ದಿನದೊಳಗೆ ದೊಡ್ಡ ಮಟ್ಟದ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ವಿಚಾರವೊಂದು ಬೆಂಗಳೂರಿಗರ ನಿದ್ದೆಗೆಡಿಸಿದೆ.
ಮುಂದಿನ ೨ ದಿನದೊಳಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಈ ಉಗ್ರರು ಸಿದ್ಧತೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದಿನ ತಡವಾಗಿದ್ದರೂ ಬೆಂಗಳೂರಿನಲ್ಲಿ ಬಿಗ್ ಬ್ಲಾಸ್ಟ್ ನಡೆಯೋದನ್ನ ಯಾರೂ ತಡೆಯಲಾಗುತ್ತಿರಲಿಲ್ಲ ಎಂಬ ಶಾಕಿಂಗ್ ಮಾಹಿತಿ ಬಯಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿದ ಪೊಲೀಸ್ ಕಮಿಷನರ್ ಬಿ. ದಯಾನಂದ್, ಕೆಲವೊಂದು ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ಮಾಡುತ್ತಿದ್ದ ಸಮಾಜ ಘಾತುಕ ಶಕ್ತಿಗಳನ್ನ ಮಟ್ಟ ಹಾಕಿದ್ದಾರೆ. ೭ ಕಂಟ್ರಿಮೇಡ್ ಪಿಸ್ತೂಲ್, ೪೫ ಜೀವಂತ ಗುಂಡುಗಳು, ಎರಡು ವಾಕಿಟಾಕಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ೫ ಶಂಕಿತ ಉಗ್ರರನ್ನು ಬಂಧಿಸಿದ್ದು, ಬಂಧಿತರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಈ ಐವರೂ ೨೦೧೭ರ ಕೊಲೆ ಪ್ರಕರಣದಲ್ಲಿ ಆರೋಪಿ ಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ೨೦೦೮ರ ಸರಣಿ ಬಾಂಬ್ ಉಗ್ರ ಟಿ.ನಜೀರ್ ಜೊತೆ ಹಾಗೂ ಮತ್ತೊಬ್ಬ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರನ ಜೊತೆ ಸಂಪರ್ಕ ಹೊಂದಿದ್ದರು. ಐವರು ಶಂಕಿತರು ಈ ಇಬ್ಬರು ಉಗ್ರರ ಸಂಪರ್ಕಕ್ಕೆ ಸಿಕ್ಕಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿದ್ದರು. ವಿದೇಶದಲ್ಲಿರುವ ಉಗ್ರ ಬ್ಲಾಸ್ಟ್‌ಗೆ ಬೇಕಾದ ವಸ್ತುಗಳ ಪೂರೈಕೆ ಮಾಡುತ್ತಿದ್ದ. ದೇಶ ವಿರೋಧಿ ಶಕ್ತಿಗಳು ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಂಕಿತರ ಮೇಲೆ ಯುಎಪಿಎ ಆಕ್ಟ್ ಜಾರಿ ಮಾಡಲಾಗಿದೆ. ಉಗ್ರ ನಜೀರ್ ಎಲ್‌ಇಟಿ ಸಂಘಟನೆಗೆ ಸೇರಿದ ಉಗ್ರನಾಗಿದ್ದು, ಈತನ ಜೊತೆ ಪರಪ್ಪನ ಅಗ್ರಹಾರ ಜೈಲಿನಿಂದ ಸಂಪರ್ಕ ಬೆಳೆದಿತ್ತು ಎಂದು ವಿವರಿಸಿದರು.
ಮೊದಲ ಬಾರಿ ಜೈಲಿಗೆ ಹೋದಾಗ ೧೮ ತಿಂಗಳು ಜೈಲಲ್ಲಿ ಇದ್ದರು. ೨೦೨೦ರಲ್ಲಿ ಜೈಲಿಗೆ ಹೋದಾಗ ೮ ತಿಂಗಳು ಜೈಲಿಗೆ ಹೋಗಿದ್ದರು. ಈ ವೇಳೆ ಉಗ್ರ ಟಿ ನಜೀರ್ ಸಂಪರ್ಕ ಹೊಂದಿದ್ದಾರೆ. ಶಂಕಿತ ಉಗ್ರರಿಗೆ ಹೊರಗಡೆಯಿಂದ ಫಂಡಿಂಗ್ ಆಗಿದೆ. ಲಷ್ಕರ್ ಎ ತೊಯ್ಬಾದ ನಜೀರ್‌ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗುವುದು ಎಂದರು.
ಆರ್. ಟಿ. ನಗರ ಕೇಸಲ್ಲಿ ಎ೧ ಆರೋಪಿಯಾಗಿದ್ದ ಶಂಕಿತ ಉಗ್ರ ಜುನೈದ್ ಅಹಮದ್, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಜುನೈದ್ ಅಹಮದ್ ಹಾಗೂ ಟಿ ನಾಜಿರ್‌ನ ಅಣತಿಯಂತೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಲಾಗುತ್ತಿತ್ತು. ಸದ್ಯ ಶಂಕಿತರಿಂದ ೧೨ ಮೊಬೈಲ್ ಜಪ್ತಿ ಮಾಡಲಾಗಿದ್ದು, ಇವರು ಮೆಕ್ಯಾನಿಕ್, ಡ್ರೈವರ್ ರೀತಿಯ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಟಾರ್ಗೆಟ್ ಬೆಂಗಳೂರು:
ಶಂಕಿತ ಉಗ್ರರು ಬೆಂಗಳೂರು ನಗರವನ್ನೇ ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸ್ಥಳೀಯ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಸಂಪರ್ಕ ಹೊಂದಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಏನು ಅನ್ನೋದರ ಬಗ್ಗೆಯೂ ತರಬೇತಿ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್‌ಗೆ ಪ್ಲಾನ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು ಸರಣಿ ಬಾಂಬ್ ಸ್ಪೋಟದ ರುವಾರಿಯೇ ಶಂಕಿತ ಉಗ್ರರಿಗೆ ಪ್ರೇರಣೆ
ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಜೈಲಿನಲ್ಲಿರುವ ಸರಣಿ ಬಾಂಬ್ ಸ್ಪೋಟದ ರುವಾರಿ ಟಿ. ನಜೀರ್ ಎಂಬಾತನೇ ಪ್ರೇರಣೆ ನೀಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿ. ನಜೀರ್ ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಈ ಐದು ಮಂದಿಗೆ ಪ್ರೇರಣೆ ನೀಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ನಜೀರ್ ಹಾಗೂ ಈ ಆರು ಮಂದಿ ಮಧ್ಯೆ ಪರಿಚಯವಾಗಿ ಅವರೆಲ್ಲರಿಗೂ ಭಯೋತ್ಪಾದಕ ಹಾಗೂ ಧರ್ಮದ ಬಗ್ಗೆ ಬೋಧನೆ ಮಾಡಿರುವುದು ಗೊತ್ತಾಗಿದೆ. ಜೈಲಿನಲ್ಲಿ ೧೮ ತಿಂಗಳು ಇದ್ದು ಹೊರ ಬಂದ ನಂತರ ಆರೋಪಿಗಳು ನಜೀರ್ ಹೇಳಿದಂತೆ ಆಗಾಗ್ಗೆ ಸರಣಿ ಸಭೆಗಳನ್ನು ನಡೆಸಿ ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಬೆಂಗಳೂರು: ಬೊಮ್ಮಾಯಿ ಆತಂಕ
ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಬೆಂಗಳೂರಿನ ಕ್ರೈಮ್ ಹೆಚ್ಚಾಗುತ್ತಿದೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾಧ ನಿಯಂತ್ರಣ ಕೈ ತಪ್ಪಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದರು.
ಬಹಳಷ್ಟು ಕೇಸ್‌ಗಳು ಪೊಲೀಸ್ ಸ್ಟೇಶನಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಕೆಲಸ. ಈ ಸರ್ಕಾರ ಬಂದಮೇಲೆ ಮಧ್ಯವರ್ತಿಗಳು ಕೈ ಹಾಕಿ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಬೆಂಗಳೂರಿನಲ್ಲಿ ಕ್ಲಬ್ ಚಟುವಟಿಕೆಗಳು ಹೆಚ್ಚಾಗಿದೆ, ಹಫ್ತಾ ವಸೂಲಿ ತೀವ್ರವಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲೇ ನೆಲೆಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸ ಆಗುತ್ತಿದೆ. ಅಂತರರಾಷ್ಟ್ರೀಯ ಐಎಸ್‌ಐ ಇವರ ಸಂಪರ್ಕದಲ್ಲಿದ್ದಾರೆ. ಇದಕ್ಕೆಲ್ಲಾ ಅಂತರ ರಾಷ್ಟ್ರೀಯ ಕುಮ್ಮಕ್ಕು ಇದೆ. ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಉಗ್ರರ ವಿರುದ್ಧದ ಕೇಸ್‌ಗಳನ್ನು ಕೂಡಲೇ ತನಿಖೆಗೆ ಎನ್‌ಐಎಗೆ ಕೊಡಬೇಕು. ಬೆಂಗಳೂರಿನಲ್ಲಿ ಸ್ಫೋಟ ಮಾಡುವ ಹುನ್ನಾರ ಇದೆ. ಇದನ್ನ ಸರ್ಕಾರ ಗಂಭೀರವಾಗಿ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಲದಿಂದ ಹೊರಬರುತ್ತಿರುವ ದುಷ್ಟರನ್ನು ನೋಡಿದರೆ ಸರ್ಕಾರದ ಪ್ರೇರಣೆ ಇದ್ದಂತಿದಿ: ಆರಗ ಆಕ್ರೋಶ
ಕಳೆದ ೨ ತಿಂಗಳಲ್ಲಿ ಬಿಲದಲ್ಲಿ ಇದ್ದ ಇಂತ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿದೆ ಅಂತ ಕಾಣುತ್ತೆ. ಇಡೀ ರಾಜ್ಯದಲ್ಲಿ ಬಿಲದಲ್ಲಿ ಇದ್ದವರು ಹೊರಗೆ ಬರುತ್ತಿದ್ದಾರೆ. ಇದನ್ನ ಬಿಗಿ ಮಾಡುವಂತಹ ಕೆಲಸ ಮಾಡಬೇಕಾಗಿದೆ. ನಮ್ಮ ಸರ್ಕಾರದಲ್ಲೂ ಇಂತ ಘಟನೆಗಳು ನಡೆದಿದ್ದವು. ನಾವು ಇವನ್ನು ಅಷ್ಟು ಸುಲಭವಾಗಿ ಬಿಡಲಿಲ್ಲ. ಮಂಗಳೂರು ಬಾಂಬ್ ಬ್ಲಾಸ್ಟ್‌ನಲ್ಲಿ ಸಿಕ್ಕ ವ್ಯಕ್ತಿಯನ್ನು ಬಂಧಿಸಿ ಅವನಿಗೆ ಚಿಕಿತ್ಸೆ ಕೊಡಿಸಿ ಹೊರಗೆ ಎಷ್ಟು ಲಿಂಕ್ ಇತ್ತು ಅನ್ನೋದು ಎನ್‌ಐಎಗೆ ಗೊತ್ತಾಗಿದೆ. ಹೀಗಾಗಿ ಇದನ್ನು ಎಫ್‌ಐಆರ್ ಹಾಕಿ ಬಿಡೋದಲ್ಲ, ಮೂಲವನ್ನ ಕೆದಕಬೇಕು. ಸೆಂಟ್ರಲ್ ಏಜನ್ಸಿಗಳಿಗೆ ತನಿಖೆಗೆ ಕೊಡಬೇಕು ಎಂದು ಮಾಜಿ ಗೃಹ ಸಚಿವ ಆರಗ ಜನೇಂದ್ರ ಆಗ್ರಹಿಸಿದರು.
ಐಘೆಈಐಅ ಒಕ್ಕೂಟದ ಸಭೆಯೇ ಉಗ್ರರ ಟಾರ್ಗೆಟ್…
ಬೆಂಗಳೂರು: ರಾಜಧಾನಿಯಲ್ಲಿ ಅರೆಸ್ಟ್ ಆಗಿರುವ ಐವರು ಶಂಕಿತ ಉಗ್ರರು ಇಂಡಿಯಾ ಒಕ್ಕೂಟದ ಸಭೆಯನ್ನು ಟಾರ್ಗೆಟ್ ಮಾಡಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ವಿರೋಧ ಪಕ್ಷದ ನಾಯಕರ ಸಭೆಯ ವೇಳೆ ಭಾರೀ ಭದ್ರತೆಯ ಕಾರಣದಿಂದ ಈ ಸಂಚು ವಿಫಲವಾಗಿದೆ. ಇದರಿಂದಾಗಿ ಸಭೆ ಸೇರಿದ್ದ ನಾಯಕರು ಸೇಫ್ ಆಗಿದ್ದಾರೆ. ಶಂಕಿತರ ವಿಚಾರಣೆಯ ವೇಳೆ ಈ ಸ್ಪೋಟಕ ಮಾಹಿತಿಗಳು ಹೊರ ಬಿದ್ದಿವೆ ಎಂದು ವರದಿಯಾಗಿದೆ.
ಸಭೆ ಟಾರ್ಗೆಟ್ ತಪ್ಪಿದ್ದರಿಂದ ಇನ್ನೆರಡು ದಿನಗಳಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಪೊಲೀಸರು ಒಂದು ದಿನ ತಡ ಮಾಡಿದ್ದರೂ ಸಹ ಭಾರೀ ಅನಾಹುತಕ್ಕೆ ಬೆಂಗಳೂರು ಸಾಕ್ಷಿಯಾಗುತ್ತಿತ್ತು. ಈ ಬಗ್ಗೆ ಗುಪ್ತಚರ ಇಲಾಖೆ ಹಾಗೂ ಗೃಹ ಸಚಿವರಿಂದ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ರವಾನೆಯಾ ಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಕುರಿತು ಸರ್ಕಾರದ ಗಮನ ಅಗತ್ಯ:
ಭಯೋತ್ಪಾದಕರನ್ನು ಹಿಡಿದಿದ್ದಾರೆ. ನಮ್ಮ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಮೈ ಮರೆಯದೆ ಕೆಲಸ ಮಾಡಿದ್ದಾರೆ. ಉಗ್ರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.