ಕಸಾಪದಿಂದ ರಾಜ್ಯಮಟ್ಟದ ದಸರಾ ಕವಿಗೋಷ್ಟಿ: ಕಥೆ -ಕಾವ್ಯ ಸಂಭ್ರಮ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಜ್ಯ ಮಟ್ಟದ ದಸರಾ ಕವಿಗೋಷ್ಟಿ, ಕಥೆ ಹಾಗೂ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅ.೬ ರ ಭಾನುವಾರ ಸಂಜೆ ೪:೩೦ ಕ್ಕೆ ಶ್ರೀ ಆದಿಚುಂಚನಗಿರಿ ಮಠದ ಆಶ್ರಯದಲ್ಲಿ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಏರ್ಪಡಿಸಿರುವ ಶರನ್ನವರಾತ್ರಿ ಉತ್ಸವದಲ್ಲಿ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ಏರ್ಪಡಿಸಿದ್ದು, ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶ್ರೀ ಸಾಯಿನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯದಲ್ಲಿ ಲೇಖಕಿ ವೀಣಾ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಗಣೇಶ್ ಮೂರ್ತಿ ನಾಗರಕೊಡಿಗೆ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಆಶಯ ಮಾತುಗಳನ್ನಾಡಲಿದ್ದಾರೆ.
ಅ.೧೦ ರ ಗುರುವಾರ ಸಂಜೆ ೬ ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ದಸರಾ ಕಥಾ, ಕಾವ್ಯ ಸಂಭ್ರಮ ಏರ್ಪಡಿಸಲಾಗಿದೆ. ಕಥೆಗಾರರು ಹಾಗೂ ಶಿಕ್ಷಕರಾದ ಸದಾಶಿವ ಸೊರಟೂರು ಉದ್ಘಾಟಿಸಲಿದ್ದು, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯಕೆ. ಪಿ. ಶ್ರೀಪಾಲ್ ಅವರನ್ನು ಅಭಿನಂದಿಸಲಾಗುತ್ತದೆ. ರೈತ ನಾಯಕರಾದ ಕೆ. ಟಿ. ಗಂಗಾಧರ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಕಥೆಗಾರರಾದ ಶಾರದಾ ಉಳುವಿ, ವೀಣಾ ಕಾರಂತ, ಡಾ. ಜಿ.ಆರ್. ಲವ, ಸಿ. ಎಂ. ನೃಪತುಂಗ, ಡಾ. ಕೆ.ಜಿ. ವೆಂಕಟೇಶ್, ನಳಿನಿ ಬಾಲಸುಬ್ರಹ್ಮಣ್ಯ ಇನ್ನಿತರರು ಕಥೆ ಹೇಳಲಿದ್ದಾರೆ. ಕವಿಗಳಾದ ಪ್ರೊ. ಸತ್ಯನಾರಾಯಣ, ರಚಿತ ಚೇತನ್, ನಿಸಾರ್ ಖಾನ್, ಕೆಂಚಾಯಿಕೊಪ್ಪ, ನಳಿನಿ ಸುಬ್ರಹ್ಮಣ್ಯ, ಗಾಯಿತ್ರಿ ರಮೇಶ್, ವಿಜಯಲಕ್ಷ್ಮಿ ಪಂಡಿತ್, ಶಿವಮೂರ್ತಿ ಕೆ. ಪಿ. ಕುಂಸಿ, ಭಾರತಿ ಕವನ ವಾಚಿಸಲಿದ್ದಾರೆ.
ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಅವರು ಕೋರಿದರು. ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಡಿ.ಗಣೇಶ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ, ಭೈರಾಪುರ ಶಿವಪ್ಪಮೇಷ್ಟ್ರು ಇನ್ನಿತರರಿದ್ದರು.
