ಜಿಲ್ಲೆಯ ರೈಲ್ವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ…
ಶಿವಮೊಗ್ಗ : ಜಿಲ್ಲೆಯ ರೈಲ್ವೆ ಕಾಮಗಾರಿಗಳ ವೇಗ ಹೆಚ್ಚಿಸಲು ಹಾಗೂ ಶಿವಮೊಗ್ಗದ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಇಕ್ಕೆಡೆಗಳಲ್ಲಿ ಸರ್ವಿಸ್ ರಸ್ತೆಯನ್ನು ಇನ್ನೊಂದು ವಾರದಲ್ಲಿ ನಿರ್ಮಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿ ಗಳಿಗೆ ಖಡಕ್ ಸೂಚನೆ ನೀಡಿದರು.
ಡಿಸಿ ಕಛೇರಿಯಲ್ಲಿ ಇಂದು ನಡೆದ ಜಿಲ್ಲೆಯ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಎದುರಿನ ಅಕ್ಕಮಹಾದೇವಿ ವೃತ್ತವನ್ನು ೨ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ವೃತ್ತದ ಅಭಿವೃದ್ಧಿಗೆ ರೈಲ್ವೆ ಇಲಾಖೆ ಮೀಸಲಿಟ್ಟಿರುವ ೨ ಕೋಟಿ ರೂಗಳನ್ನು ಪಾಲಿಕೆಗೆ ಹಸ್ತಾಂತರಿಸಿ, ಪಾಲಿಕೆಯಿಂದ ವೃತ್ತದ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.
ಯಾವುದೇ ನೆಪ ಹೇಳದೆ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಬೇಕು. ಚುನಾವಣೆ ಹೆಸರಿನಲ್ಲಿ ಈಗಾಗಲೇ ಅನೇಕ ಕೆಲಸಗಳು ವಿಳಂಬವಾಗಿವೆ ಎಂದ ಅವರು, ಭದ್ರಾವತಿ ಕಡದಕಟ್ಟೆಯ ರೈಲ್ವೆ ಮೇಲ್‌ಸೇತುವೆ ಕಾಮಗಾರಿ ಭಾರೀ ವಿಳಂಬವಾಗಿದೆ, ಪ್ರತಿದಿನ ಈ ಮಾರ್ಗದಲ್ಲಿ ಸಾವಿರಾರು ಜನರು ಓಡಾಡುತ್ತಾರೆ, ಇದರಿಂದ ಎಲ್ಲರಿಗೂ ತೊಂದರೆ ಆಗಿದೆ. ಆದ್ದರಿಂದ ಜುಲೈ ಅಂತ್ಯದೊಳಗೆ ಈ ಕಾಮಗಾರಿ ಪೂರ್ಣವಾಗಬೇಕು, ಇಲ್ಲವಾದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಸವಳಂಗ ರಸ್ತೆ ಹಾಗೂ ಕಾಶಿಪುರದ ರೈಲ್ವೆ ಮೇಲ್ ಸೇತುವೆಗಳ ಜಾಯಿಂಟ್ ಗಳ ಮದ್ಯೆ ಜಾಗ ಇರುವುದರಿಂದ ವಾಹನ ಚಾಲನೆಗೆ ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ಈಗಾಗಲೇ ಸರ್ವೇ ಆಗಿರುವ ಶಿವಮೊಗ್ಗ- ರಾಣೆಬೆನ್ನೂರು ನೂತನ ರೈಲು ಮಾರ್ಗದ ಪೈಕಿ ಮೊದಲ ಹಂತದಲ್ಲಿ ಶಿವಮೊಗ್ಗ- ಶಿಕಾರಿಪುರ ರೈಲು ಮಾರ್ಗದ ಕಾಮಗಾರಿ ಆರಂಭಕ್ಕೆ ಇರುವ ಅಡೆತಡೆಗಳನ್ನು ತಕ್ಷಣ ನಿವಾರಿಸಿ ಹಾಗೂ ಶಿಕಾರಿಪುರ – ರಾಣೆಬೆನ್ನೂರು ಮಾರ್ಗದ ೨ನೇ ಹಂತ ದಲ್ಲಿ ಭೂಸ್ವಾದೀನಕ್ಕೆ ಇರುವ ತೊಂದರೆಗಳನ್ನು ನಿವಾರಿಸಿದಲ್ಲಿ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ೨ನೇ ಹಂತದ ಕಾಮಗಾರಿಗೆ ಹಣ ಮಂಜೂರು ಮಾಡಿಸುವುದಾಗಿ ಸಂಸದರು ಹೇಳಿದರು.
೧ನೇ ಹಂತದ ಕಾಮಗಾರಿ ಬೇಗ ಆರಂಭ ಆಗಬೇಕಿರುವುದರಿಂದ ಈಗಾಗಲೇ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯದಂತೆ ನೋಡಿಕೊಳ್ಳಬೇಕು, ಇಲ್ಲವಾದಲ್ಲಿ ಬೆಳೆ ತೆಗೆಯುವ ವರೆಗೂ ಕಾಯಬೇಕಾಗು ತ್ತದೆ ಎಂದು ಸಲಹೆ ನೀಡಿದರು.
ರಾಣೆ ಬೆನ್ನೂರು ಬಳಿ ಈ ರೈಲು ಮಾರ್ಗದಲ್ಲಿ ೮ ಮನೆಗಳು ೧ ಶಾಲೆ ಬರುವುದರಿಂದ ಕೆಲವರು ಮಾರ್ಗ ಬದಲಾವಣೆ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ಈಗಾಗಲೇ ನಿಗಧಿಯಾಗಿರುವ ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು.
ಸರ್ವಿಸ್ ಸ್ಟೇಷನ್: ಕೋಟೆ ಗಂಗೂರಿನ ನೂತನ ರೈಲ್ವೆ ಸರ್ವಿಸ್ ಸ್ಟೇಷನ್ ಕೆಲಸ ನಡೆಯುತ್ತಿದೆ, ೨೦೨೫ರ ಮೇನಲ್ಲಿ ಈ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ ಎಂದು ರೈಲ್ವೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಂದೇ ಭಾರತ್ ರೈಲಿಗೆ ಅನುಕೂಲ ವಾಗುವಂತೆ ಯೋಜನೆ ಸಿದ್ದಪಡಿಸಲು ಸೂಚಿಸಿದ ಸಂಸದರು, ಬೀರೂರು- ಶಿವಮೊಗ್ಗ ರೈಲ್ವೆ ಡಬ್ಲಿಂಗ್ ಕಾಮ ಗಾರಿ ಶೀಘ್ರ ಕೈಗೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ರೈಲ್ವೆ ಮುಖ್ಯ ಎಂಜಿನಿಯರ್ ಪ್ರದೀಪ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮತ್ತಿತರರಿದ್ದರು.