ನೈರುತ್ಯ ಪದವೀಧರ ಕ್ಷೇತ್ರ: ಆಯ್ನೂರ್‌ಗೆ ಬೆಂಬಲ ಘೋಷಿಸಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ
ಶಿವಮೊಗ್ಗ: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯು ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಬೆಂಬಲ ನೀಡಲಿದೆ ಎಂದು ಸಮಿತಿಯ ರಾಜಧ್ಯಕ್ಷ ಅರುಣ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಆಯನೂರು ಮಂಜುನಾಥ್ ಅವರಿಗೆ ನಮ್ಮ ಸಮಿತಿ ಬೆಂಬಲ ನೀಡಲು ಹಲವು ಕಾರಣಗಳಿವೆ. ಪ್ರಮುಖವಾಗಿ ಆಯನೂರು ಅವರು ಕೊರೋನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರನ್ನು ಗುರುತಿಸಿ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ನಮ್ಮ ಪರವಾಗಿ ಸದನದ ಬಾವಿಗಿಳಿದು ಹೋರಾಟ ಮಾಡಿದ್ದಾರೆ. ೫ ತಿಂಗಳ ಗೌರವಧನ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರು ಕೊರೋನಾದ ಸಂದರ್ಭದಲ್ಲಿ ತುಂಬಾ ಸಂಕಷ್ಟಕ್ಕೀಡಾಗಿದ್ದರು. ತರಕಾರಿ ಮಾರಾಟ ಸೇರಿದಂತೆ ವಿವಿಧ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸ ಬೇಕಾಗಿತ್ತು. ಸಂಬಳವೂ ಸರಿಯಾಗಿ ಬರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಆಯನೂರು ಮಂಜುನಾಥ್ ಸುಮಾರು ಎರಡು ವರ್ಷಗಳ ಕಾಲ ನಿರಂತರವಾಗಿ ಗೌರವಧನವನ್ನು ಬಿಡುಗಡೆ ಮಾಡುವಂತೆ ಮಾಡಿದ್ದ ಲ್ಲದೇ, ನಮ್ಮ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಜೊತೆಗಿದ್ದಾರೆ. ಅವರ ಋಣ ನಮ್ಮ ಮೇಲಿದೆ. ಹಾಗಾಗಿ ಆಯನೂರು ಮಂಜುನಾಥ್ ಅವರನ್ನು ನಾವು ಈ ಬಾರಿ ಬೆಂಬಲಿಸುತ್ತೇವೆ ಎಂದರು.
ಇದಲ್ಲದೇ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಹೋರಾಟ ಮಾಡಿದ್ದಾರೆ. ಆಡಳಿತ ಪಕ್ಷ ವಿರುದ್ಧವೇ ಪರಿಷತ್ ನಲ್ಲಿ ಧ್ವನಿ ಎತ್ತಿದ್ದಾರೆ. ಸುಮಾರು ೧೩ ಸಭೆಗಳನ್ನು ಮಾಡುವ ಮೂಲಕ ಅತಿಥಿ ಉಪನ್ಯಾಸಕರಿಗೆ ವೇತನವನ್ನು ಹೆಚ್ಚಿಸಿದ್ದಾರೆ. ಅದು ಈಗ ಸುಮಾರು ೩೨ ಸಾವಿರ ರೂ. ವೇತನವನ್ನು ನಾವೀಗ ಪಡೆಯುತ್ತಿದ್ದೇವೆ. ಇದಕ್ಕೆ ಆಯನೂರು ಮಂಜುನಾಥ್ ಕಾರಣ ಎಂದರು.
ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದೆ. ಆದರೆ ಧ್ವನಿ ಎತ್ತಬೇಕಷ್ಟೇ. ಈಗಾಗಲೇ ರಾಜ್ಯ ಸರ್ಕಾರ ಹೆರಿಗೆ ರಜ ನೀಡಿದೆ. ವೇತನ ಜಸ್ತಿ ಮಾಡಿದೆ. ಹಾಗಾಗಿ ಸರ್ಕಾರದಿಂದ ಸ್ಪಂದನೆ ಇದೆ. ಇದು ಮತ್ತಷ್ಟು ವೇಗ ಪಡೆಯಲು ಆಯನೂರು ಮಂಜುನಾಥ್ ಅವರು ಖಂಡಿತ ಶ್ರಮಿಸುತ್ತಾರೆ. ಈ ನಂಬಿಕೆ ಯಿಂದ ನಾವು ಅವರನ್ನು ಈ ಬಾರಿ ಬೆಂಬಲಿಸುತ್ತೇವೆ ಎಂದರು.
ಜೆಓಸಿ ವಿಲೀನ ವಂಚಿತ ನೌಕರರ ಸಂಘದ ರಾಜಧ್ಯಕ್ಷ ಕೃಷ್ಣ, ಪ್ರಮುಖರಾದ ಕಲ್ಲೇಶಪ್ಪ, ಸುರಯ್ಯಾ, ನಗೀನಾ ಉಪಸ್ಥಿತರಿದ್ದರು.