ಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆಯಾಗದ ಹೊರತು ಪಾಲಿಕೆ ವಶಕ್ಕೆ ಪಡೆಯಬಾರದು: ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹ

Share Below Link

ಶಿವಮೊಗ್ಗ: ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಹಾಗೂ ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ತನ್ನ ನಿರ್ವಹಣೆಗೆ ಪಡೆಯಬಾರದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಬಲವಾಗಿ ಆಗ್ರಹಿಸಿದೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ವಿ. ವಸಂತ ಕುಮಾರ್, ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಗಾಗಿ ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಯಾವ ಕಾಮಗಾರಿಗಳೂ ಕೂಡ ಇದುವರೆಗೂ ಪೂರ್ಣವಾಗಿಲ್ಲ ಮತ್ತು ಕಳಪೆಯಾಗಿವೆ. ಆದರೆ ಪಾಲಿಕೆ ಅದರ ನಿರ್ವಹಣೆಯನ್ನು ತಾನೇ ವಹಿಸಿ ಕೊಳ್ಳುವಂತೆ ಹೇಳುತ್ತಿದೆ. ನಿಯಮದ ಪ್ರಕಾರ ಸ್ಮಾರ್ಟ್ ಸಿಟಿಯೇ ತನ್ನ ಗುತ್ತಿಗೆದಾರರ ಮೂಲಕ ಮುಂದಿನ ಐದು ವರ್ಷಗಳವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಈಗ ಈ ನಿರ್ವಹಣೆಯ ನಿಯಮವನ್ನೇ ತೆಗೆದುಹಾಕಲಾಗಿದೆ. ಇತ್ತ ಪಾಲಿಕೆ ಆಯುಕ್ತರು ಅವಸರದಲ್ಲಿ ಎಲ್ಲಾ ಕಾಮಗಾರಿಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಂಡು ಜನರ ತೆರಿಗೆ ಹಣದಲ್ಲಿ ನಿರ್ವಹಣೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.


ವಿವಿಧ ಪ್ಯಾಕೇಜ್ ಅಡಿ ಕಾಮಗಾರಿಗಳು ನಡೆದಿವೆ. ರಸ್ತೆ, ಚರಂಡಿ, ಫುಟ್‌ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್ವೆನ್ಸಿ, ಸರ್ಕಲ್ ಆಭಿವೃದ್ಧಿ ಶೌಚಾಲಯ ಅಲ್ಲದೆ, ಮೆಸ್ಕಾಂ ಜೊತೆಗೂಡಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ಕೂಡ ನಡೆಸಲಾಗಿದೆ. ಈ ಎಲ್ಲಾ ಕಾಮಗಾರಿ ಗಳು ಸಂಪೂರ್ಣ ಲೋಪದಿಂದ ಕೂಡಿವೆ. ಹಿಂದಿನ ಶಾಸಕರಿಗೆ ಹಲವು ಬಾರಿಈ ಬಗ್ಗೆ ದೂರು ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸುಮಾರು ೬೦ ದೂರುಗಳನ್ನು ನಾವೇ ಅಧಿಕೃತವಾಗಿ ನೀಡಿದ್ದೇವೆ. ಇಷ್ಟಾದರೂ ಲೋಪದೋಷ ಸರಿಪಡಿಸದೆ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಖಂಡನಿಯ ಎಂದರು.
ಈ ಹಿಂದೆಯೇ ನಾವು ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ವಠಾರೆ ಹಠಾವೋ ಸ್ಮಾರ್ಟ್ ಸಿಟಿ ಬಚಾವೋ ಎಂದು ಹೋರಾಟ ನಡೆಸಿದ್ದೆವು. ಆದರೆ ಅವರು ಈಗ ವರ್ಗಾವಣೆ ಗೊಂಡಿದ್ದಾರೆ. ಅವರ ಅವಧಿಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ವಾಗಿದೆ. ಈ ಎಲ್ಲಾ ಅವ್ಯವಹಾರಗಳ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಒಕ್ಕೂಟವು ಕಾಮಗಾರಿಗಳ ಲೋಪದೋಷ ಆಲಿಸಲು ಮತ್ತು ದೂರು ಸ್ವೀಕರಿಸಲು ಸಾರ್ವಜನಿಕ ಸಭೆ ಕರೆಯಲು ಒತ್ತಾಯಿಸಿದ್ದೆವು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಅಂಕಿ ಅಂಶ ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದೇವೆ. ತನಿಖೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಸೆ.೧೨ರಂದು ಮಧ್ಯಾಹ್ನ ೨.೩೦ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಕಾಮಗಾರಿಗಳ ಲೋಪದೋಷ ಆಲಿಸಲು ಮತ್ತು ದೂರು ಸ್ವೀಕರಿಸಲು ಸಾರ್ವಜನಿಕ ಸಭೆ ಏರ್ಪಡಿಸುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಬಡಾವಣೆಗಳಲ್ಲಿ ಕಾಮಗಾರಿಗಳಲ್ಲಿ ಕಂಡುಬಂದಿರುವ ಲೋಪದೋಷ ಗಳನ್ನು ಬರವಣಿಗೆ ಅಥವಾ ಫೋಟೋಗಳ ಮೂಲಕ ಸಭೆಗೆ ತರುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ಚನ್ನವೀರಪ್ಪ ಗಾಮನಕಟ್ಟೆ, ರಂಗಪ್ಪ, ಜನಾರ್ಧನ ಪೈ, ವಿನೋದ ಪೈ,. ಸೀತಾರಾಮ್, ಕೆ.ಜೆ. ಮಿತ್ರ, ಎಸ್. ರಾಜು, ಮಲ್ಲಪ್ಪ ಕೆ.ಎಂ., ಸೇರಿದಂತೆ ಹಲವರಿದ್ದರು.