ಆಧುನಿಕ ಭಾರತ ನಿರ್ಮಾಣದ ಅಪ್ರತಿಮ ಅಭಿಯಂತರ ಸರ್. ಎಂ.ವಿ.
ಎಂ. ಪಿ. ಎಂ. ಕೊಟ್ರಯ್ಯ, ಹೂವಿನಹಡಗಲಿ.
ಆಧುನಿಕ ಭಾರತದ ನಿರ್ಮಾಣದ ಕನಸು ಕಂಡಿದ್ದ ಸರ್.ಎಂ. ವಿ ರವರು ಜಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸಿ ಭಾರತ ದೇಶದ ಶ್ರೇಷ್ಠತೆ ಮೆರದು ನನಸಾಗಿಸಿದ ತಂತ್ರಜ್ನ ಇವರು. ಇಂದು ಕೇವಲ ಕನ್ನಡಿಗರಿಗಷ್ಠೇ ಅಲ್ಲ, ಭಾರತೀಯರು ಮರೆಯದ ದಿನ. ನಮ್ಮ ದೇಶ ಪವಿತ್ರ ಭೂಮಿ. ಇಲ್ಲಿ ಮಹಾ ಮಹಿಮಾ ಪುರುಷರು, ಋಷಿ ಮುನಿಗಳು,ದೇಶ ಭಕ್ತ ಮಹಾನ್ ನಾಯಕರು ಜನಿಸಿದ ನಾಡು ನಮ್ಮದು. ಇಂಥವರಿಂದಲೇ ಭಾರತದ ಕೀರ್ತಿ ಇತಿಹಾಸದ ಪುಟ ಸೇರಿದೆ. ಅಂತವರ ಸಾಲಿನಲ್ಲಿ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರೂ ಒಬ್ಬರು. ಸೆಪ್ಟಂಬರ್ ೧೫ -೧೮೬೦ ರಂದು ಚಿಕ್ಕ ಬಳ್ಳಾಪುರದ ಮುದ್ದೇನ ಹಳ್ಳಿಯಲ್ಲಿ ಶ್ರೀ ಮತಿ ವೆಂಕಟಮ್ಮ ಹಾಗೂ ಶ್ರೀನಿವಾಸ ಶಾಸ್ತ್ರಿಯವರ ಮಗನಾಗಿ ಜನಿಸಿದರು. ಅಂತೆಯೇ ಇಂತಹ ಮೇಧಾವಿ,ತಂತ್ರಜ್ನ,ವಾಸ್ತು ಶಿಲ್ಪಿ,ಅಭಿಯಂತರ ವಿಶ್ವೇಶ್ವರಯ್ಯನವರ ಸ್ಮರಣಾರ್ಥ ಇಂಜಿನಿಯರ್ಸ್ ದಿನ ವನ್ನಾಗಿ ಆಚರಿಸುತ್ತ ಬರಲಾಗುತ್ತಿದೆ.
ಇವರ ವಿದ್ಯಾಭ್ಯಾಸದ ಬಗ್ಗೆ ಸಂಕ್ಷಿಪ್ತವಾಗಿ ನೋಡುವುದಾದರೆ, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು ಬೆಂಗಳೂರಿನಲ್ಲಿ ಪ್ರೌಢ ಶಿಕ್ಷಣ , ಮದ್ರಾಸ್‌ನಲ್ಲಿ ಪದವಿ ಶಿಕ್ಷಣ ಪಡೆದ ಇವರು ಪುಣೆಯ ಕಾಲೇಜ್ ಆಫ್ ಇಂಜಿನಿಯರ್ಸ್‌ನಲ್ಲಿ ಸಿವಿಲ್ ಇಂಜಿನಿಯರ್ ಪದವಿ ಪಡೆದರು. ಇವರ ಅಧ್ಯಯನ ಹಾಗೂ ಸಾಧನೆ ಮನಗಂಡ ಬಾಂಬೆ ಸರ್ಕಾರ ಇವರಿಗೆ ಸಹಾಯಕ ಇಂಜಿನಿಯರ್ ಎಂದು ನೇಮಕಮಾಡಿದರು.ಈ ಮೂಲಕ ಇವರು ವೃತ್ತಿ ಜೀವನಕ್ಕೆ ಕಾಲಿಟ್ಟರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ,ದಕ್ಷ ಪ್ರಾಮಾಣಿಕ ನಿಷ್ಠೆಯ ಅಧಿಕಾರಿಯಾದ ಇವರು ,ಸರ್ಕಾರಿ ಕೆಲಸ ದೇವರ ಕೆಲಸವೆಂದು ನಂಬಿದ ಇವರು ಬಸವಣ್ಣನವರಂತೆ ಕಾಯಕದಲ್ಲಿ ಕೈಲಾಸ ಕಂಡವರು. ಶಿಸ್ತು ಇವರ ಜನ್ಮದಿಂದ ಬಂದ ಬಳುವಳಿಯೆಂದರೆ ತಪ್ಪಾಗಲಿಕ್ಕಿಲ್ಲ. ಶುಭ್ರ ಉಡುಪು ಕೋಟು ಟೈ ತಲೆಯ ಮೇಲೊಂದು ಮೈಸೂರು ಪೇಟ ಇವರಿಗೆ ಅಚ್ಚು ಮೆಚ್ಚು. ಸರ್ಕಾರಿ ಸೇವೆಯಲ್ಲಿ ಸ್ವಾರ್ಥ ಹಾಗೂ ಸ್ವಜನ ಪಕ್ಷಪಾತಕ್ಕೆ ಎಂದೂ ಮಣೆ ಹಾಕಿದವರಲ್ಲ. ಅಧಿಕಾರದ ದುರುಪಯೋಗ ಇವರ ಜೀವನದಲ್ಲಿ ನಿಷಿದ್ಧ. ಯಾವುದೇ ಸರ್ಕಾರಿ ವಸ್ತು ವಾಹನ ಬರೆಯುವ ಪೆನ್ನು ಸಹ ಸ್ವಂತಕ್ಕಾಗಿ ಉಪಯೋಗಿಸುತ್ತಿದ್ದಿಲ್ಲ ಎಂಬುದು ಅವರ ಪ್ರಾಮಾಣಿಕತೆಗೆ ಸಾಕ್ಷಿ. ಇಂದಿನ ಅಧಿಕಾರಿಗಳು ಇದನ್ನು ಅಳವಡಿಸಿಕೊಂಡು ಅನುಸರಿಸ ಬೇಕಿದೆ. ಇವರ ಈ ಪ್ರಾಮಾಣಿಕತೆ ದಕ್ಷತೆಯ ಪ್ರತೀಕ ಮೈಸೂರು ಪ್ರಾಂತ್ಯದ ದೀವಾನರಾಗಿ ಸೇವೆ ಸಲ್ಲಿಸುವಂತಾಯಿತು. ಇವರ ಆಡಳಿದ ಅವಧಿಯಲ್ಲಿ ಮಾಡಿದ ಜನೋಪಯೋಗಿ ಕಾರ್ಯಗಳು ಹಲವು, ಅವುಗಳಲ್ಲಿ ಕೆಲವನ್ನು ವಿವರಿಸುವೆ. ರಾಜ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ,ಕನ್ನಡ ಭಾಷಾ ಪ್ರೀತಿ ವ್ಯಾಮೋಹದ ಪ್ರತೀಕವಾಗಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಶೈಕ್ಷಣಿಕ ಪ್ರಗತಿಯ ದ್ಯೋತಕವಾಗಿ ಮೈಸೂರು ವಿಶ್ವವಿದ್ಯಾನಿಲಯ ,ಪ್ರಾಥಮಿಕ ಹಾಗೂ ಶಾಲೆಗಳ ಆರಂಭದ ಮೂಲಕ ಜನ ದೀಪ ಬೆಳಗಿಸಿದ ಕೀರ್ತಿ ಇವರಿಗೆ ಸಲ್ಲಲಿದೆ. ಮಹಿಳಾ ಶಿಕ್ಷಣಕ್ಕೆ ಆದ್ಯತೆ ಇಲ್ಲದ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲದೆ ಎಲ್ಲರನ್ನೂ ಸಾಕ್ಷರರನ್ನಾಗಿಸಬೇಕೆಂಬ ಭಾವದಿಂದ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿ ಜರಿಗೆ ತಂದವರಲ್ಲಿ ಪ್ರಥಮಿಗರು.
ಮುಂದುವರುದು ವೃತ್ತಿ ಶಿಕ್ಷಣ ದ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ವಿಶ್ವ ವಿದ್ಯಾಲಯ ಸ್ಥಾಪನೆ. ದೇಶದಲ್ಲಿ ವಿಜನ ತಂತ್ರಜನದಲ್ಲಿ ಪ್ರಗತಿ ಸಾಧಿಸುವ ಸದುದ್ದೇಶದಿಂದ ಅನೇಕ ವಿದೇಶಗಳ ಅದರಲ್ಲೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ಅಧ್ಯನ ಮಾಡಿ, ನಮ್ಮಲ್ಲಿ
ಆಡಳಿತಾತ್ಮಕವಾಗಿ ಎಷ್ಠೇ ಅಡೆ ತಡೆಗಳು ಬಂದರೂ ಲೆಕ್ಕಿಸದೆ ಹಿಂದುಸ್ಥಾನ್ ಏರ್ ಕ್ರಾಪ್ಟ್ ಸ್ಥಾಪನೆಗೆ ಕಾರಣರಿವರು. ಅಷ್ಟಕ್ಕೆ ಸುಮ್ಮನಾಗದೆ ಟಾಟಾ ಇನ್ಸ್ಟಿಟ್ಯೂಟ್ ಅವರ ಸಹಕಾರದೊಂದಿಗೆ ಏರೋನಾಟಿಕ್ ಶಿಕ್ಷಣ ಆರಂಭಿಸಿದರು. ಇದರ ಫಲವೇ ಕೇಂದ್ರದಲ್ಲಿ ವಾಯು ಪಡೆ ಕಾರ್ಯಾಚರಣೆಗೆ ಕಾರಣ . ಇಷ್ಠಕ್ಕೆ ಸುಮ್ಮನಾಗದ ಇವರು ಭಾರತ ದೇಶವನ್ನು ತಂತ್ರಜನದಲ್ಲಿ ವಿಶ್ವ ಮಟ್ಟಕ್ಕೆ ಕರೆದೊಯ್ಯುವ ಬಯಕೆ ಯಿಂದ ದೇಶದಲ್ಲಿ ಮಾಹಿತಿ ತಂತ್ರಜನ, ಉಪಗ್ರಹ ಸಂಪರ್ಕ ಜಲಕ್ಕೆ ಕೈ ಹಾಕಿ ಯಶಸ್ವಿಯಾದರು.
ನಾಡಿಗೆ, ದೇಶಕ್ಕೆ ಹಾಗೂ ವಿಶ್ವಕ್ಕೆ ಇವರ ಕೊಡುಗೆ ಅಪಾರ. ಜೋಗದ ವಿದ್ಯುತ್ ಯೋಜನೆ ,ಮೈಸೂರು ಸಕ್ಜರೆ ಕಾರ್ಖಾನೆ ಸ್ಥಾಪನೆ, ಮುದ್ರಣ ಯಂತ್ರ ಹಾಗೂ ಸೇವೆಗೆ ಚಾಲನೆ , ಸಾರ್ವ ಜನಿಕ ಗ್ರಂಥಾಲಯ ಸ್ಥಾಪನೆ , ಭಧ್ರಾವತಿ ಕಾರ್ಖಾನೆ, ವೃತ್ತಿ ಪರ ತರಬೇತಿಯ ಶಿಕ್ಷಣ ಸಂಸ್ಥೆಗಳು. ರೈತರ ಅಭಿವೃದ್ಧಿಗಾಗಿ ಕೃಷಿ ಸಂಶೋಧನಾ ಕೇಂದ್ರ ಇವು ಇವರ ಕೊಡುಗೆಗಳಾಗಿವೆ. ಇವರ ನಿರ್ಮಾಣದ ಅನೇಕ ಆಣೆಕಟ್ಟುಗಳು ಯಾವುದೇ ಅಪಾಯವಿಲ್ಲದೆ ಇಂದಿಗೂ ನಿರಂತರವಾಗಿ ರೈತರ ಬಾಳಿಗೆ ಬೆಳಕಾಗುವೆ. ಅಪ್ಪಟದೇಶ ಪ್ರೇಮಿ, ದೇಶ ಭಕ್ತನೆನ್ನುವುದಕ್ಕೆ ಯಮನ್ ರಾಷ್ಟ್ರದ ಈಡನ್ ನಗರದಲ್ಲಿ ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ ಆಣೆಕಟ್ಟಿನ ಬೃಹತ್ ವಾಸ್ತು ಶಿಲ್ಪ ಜಗತ್ತನ್ನೇ ಬೆರಗಾಗಿಸಿದೆ. ಇಡೀ ಆಣೆಕಟ್ಟು ಕೇಂದ್ರ ಸ್ಥಾನದಲ್ಲಿ ಮೇಡ್ ಇನ್ ಇಂಡಿಯಾ ಎಂಬಾಕ್ಷರ ಮಾದರಿಯ ಕಲ್ಲು ಹೊಂದಿದ್ದು ಅದನ್ನು ತೆಗೆದು ಹಾಕುವ ಸಾಹಸ ಯಾರೂ ಮಾಡುವಂತಿಲ್ಲ. ಇದು ನಿಜಕ್ಕು ಅದ್ಭುತವೇ ಸರಿ. ಇವರ ಕಾರ್ಯ ಇಂದಿಗೂ ಭಾರತ ದೇಶದ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಇವರು ಎಂದೆಂದಿಗೂ ಸ್ಮರಣಾರ್ಹರು. ಅಂತೆಯೇ ಅವರ ಸ್ಮರಣೆ ಎಂಬಂತೆ ರಾಜ್ಯ ಹಾಗೂ ದೇಶದ ಹಲವೆಡೆ ವೃತ್ತಿಪರ ಶಿಕ್ಷಣ ಸಂಸ್ಥೆಗಳು. ವಿಶ್ವ ವಿದ್ಯಾಲಯಗಳು , ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿ ಮ್ಯೂಜಿಯಂ , ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗಳು , ಬ್ಯಾಂಕುಗಳು ,ವಿದ್ಯಾರ್ಥಿ ನಿಲಯಗಳು , ಉದ್ಯಾನ ವನಗಳು , ಮೆಟ್ರೋ ಸ್ಟೇಷನ್ ಹೆಸರಿಸುವ ಮೂಲಕ ಗೌರವ ಸಮರ್ಪಣೆ ಮಾಡಿರುವುದು ಸಂತೋಷದ ಸಂಗತಿ.
ಇವರು ಕೇವಲ ಒಬ್ಬ ಅಭಿಯಂತರರಾಗದೆ, ಶ್ರೇಷ್ಠ ವಿಜನಿ ತಂತ್ರಜನಿ ,ದಕ್ಷ ಪ್ರಾಮಾಣಿಕ ಆಡಳಿತ ಕಾರ , ಕಾಯಕ ಯೋಗಿ , ಶಿಸ್ತಿನ ಸಿಪಾಯಿ , ಮಹಾನ್ ದಾರ್ಶನಿಕ ಅಷ್ಠೇ ಅಲ್ಕ ಒಬ್ಬ ಸಾಹಿತಿಯೂ ಹೌದು. ಇವರು ಬರೆದ ದಿ ಕನ್ಟ್ರಕ್ಷನ್ ಇಂಡಿಯಾ , ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ ಹಾಗೂ ಪ್ಲಾನಿಂಗ್ ಇವರ ಕೊಡುಗೆಗಳು. ಯುವ ಜನಾಂಗಕ್ಕೆ ಇವರು ನೀಡಿದ ಸಂದೇಶವೆಂದರೆ ಕೆಲಸ ಯಾವುದಾದರೇನು. ಅದು ಕೀಳೆನ ಬೇಡ..ನಿನ್ನ ಕೆಲಸ ರಸ್ತೆಯಲ್ಲಿ ಕಸ ಗೂಡಿಸುವುದಾದರೆ ಚಿಂತೆ ಬೇಡ ನಿನ್ನ ಕಾಯಕದಿಂದ ಅತ್ಯಂತ ಸ್ವಚ್ಛ ರಸ್ತೆಯನ್ನಾಗಿ ಮಾಡು. ಅದೃಷ್ಠ ಎನ್ನುವುದು ದೇವರ ಕೈಯಲ್ಲಿದೆ.,ಆದರೆ ಆ ವಿಧಿ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯ ಬಾರದು ಎಂದು ಎಚ್ಚರಿಸಿರುವರು. ಸರ್ಕಾರ ಇವರಿಗೆ ನೀಡುವ ವೇತನವನ್ನು ತಮ್ಮ ಜೀವನಕ್ಕಾಗಿ ಬಳಸದೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೃತ್ತಿಪರ ಸಂಸ್ಥೆಗಳ ಸ್ಥಾಪನೆಗೆ ಬಳಸುವ ಮೂಲಕ ಹೃದಯ ಶ್ರೀಮಂತರೆನಿಸಿದರು.
ಇವರು ಯಾವುದೇ ಗೌರವ ,ಸನ್ಮಾನ ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲಿ. ಆದರೆ ೧೯೦೪ ಗೌರವ ಸದಸ್ಯತ್ವ, ಲಂಡನ್ ಇನ್ಸ್ಟಿಟ್ಯೂಶನ್ ಅಫ್ ಸಿವಿಲ್ ಇಂಜಿನಿಯರ್ಸ್ ೫೦ ವರ್ಷಗಳವರೆಗೆ, ೧೯೦೬ ಕೈಸರ್ ಇ ಹಿಂದ್, ೧೯೧೧ ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್‌ನಲ್ಲಿ, ೧೯೧೫ ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್) ೧೯೨೧ ಡಿ. ಎಸ್ ಸಿ ಕಲ್ಕತಾ ಯೂನಿವರ್ಸಿಟಿ, ೧೯೩೧ ಎಲ್ ಎಲ್ ಡಿ ಬಾಂಬೆ ಯೂನಿವರ್ಸಿಟಿ, ೧೯೩೭ ಡಿ. ಲಿಟ್. ಬನಾರಸ್ ಯೂನಿವರ್ಸಿಟಿ, ೧೯೪೩ ಅಜೀವ ಸದಸ್ಯತ್ವ ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ ಭಾರತ, ೧೯೪೪ ಡಿ. ಎಸ್ ಸಿ. ಅಲಹಾಬಾದ್ ಯೂನಿವರ್ಸಿಟಿ, ೧೯೪೮ ಡಾಕ್ಟರೇಟ್ ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ, ೧೯೫೩ ಡಿ. ಲಿಟ್. ಆಂದ್ರ ಯೂನಿವರ್ಸಿಟಿ, ೧೯೫೫ ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ), ೧೯೫೮ ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್, ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ, ೧೯೫೯ ಫೆಲೋಶಿಪ್ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ಬೆಂಗಳೂರು ಇವರನ್ನೇ ಅರಸಿಕೊಂಡು ಬಂದಿರುವುದು ಇವರ ದಕ್ಷ ಹಾಗೂ ಪ್ರಾಮಾಣಿಕ ಸೇವೆಗೆ ಸಂದ ಗೌರವ.
ಇಂಥ ಮೇಧಾವಿ ನೂತನ ಅವಿಷ್ಕಾರದ ಕನಸುಗಾರ ಅಪ್ರತಿಮ ಅಭಿಯಂತರರು ಶತಾಯುಷಿಗಳು. ಇವರ ೧೦೦ನೇ ವರ್ಷದ ಆಚರಣೆಗೆ ಅಂದಿನ ದೇಶದ ಪ್ರಧಾನಿ ಜವಾಹರ್ಲಾಲ್ ನೆಹರು ಅವರು ಬಂದಿದ್ದರೆಂಬುದು ವಿಶೇಷ. ಎಪ್ರಿಲ್ ೧೪- ೧೯೬೨ರಲ್ಲಿ ೧೦೨ನೆಯ ವಯಸ್ಸಿನಲ್ಲಿ ಮರಣ ಹೊಂದಿದರು.
ಇವರಿಗೆ ಹೋಲಿಕೆ ಸಾಟಿ ಮತ್ತೊಬ್ಬರಿಲ್ಲ .ಆದರೆ ಇಂದೇನಾಗಿದೆ? ಭ್ರ್ರಷ್ಠಾಚಾರ, ಲಂಚ ,ಸ್ವಜನ ಪಕ್ಷಪಾತ , ಸ್ವಾರ್ಥತೆಯೆ ಮನೋಸ್ಥಿತಿಯಲ್ಲಿ ದೇಶದ ಪ್ರಗತಿ , ವೈಜನಿಕ ಚಿಂತನೆಯನ್ನ ಮರೆತು ಹಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದು ವಿಷಾಧನೀಯ. ಇಂದಿನ ರಾಜಕೀಯ ಹಾಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ , ಸಾಧನೆ ಶೂನ್ಯತೆಯಲ್ಲೂ ಸಾಧಸಿದ್ದೇವೆ ಎಂದು ಬಿಂಬಿಸುವ ಇಂದಿನ ಜನರು ಇವರ ಜೀವನ ಹಾಗೂ ಬದುಕನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಬದುಕ ಬೇಕು ಬೇಕಿದೆ. ಇಂತಹ ಅನರ್ಘ್ಯ ರತ್ನ ಪಡೆದ ನಾವೇ ಧನ್ಯರು .ಕೇವಲ ಸಂಬಳ ಹಾಗೂ ಸರ್ಟಿಫಿಕೇಟ್ಗಾಗಿ ಶಿಕ್ಷಣ ಎಂಬುದನ್ನು ಮರೆತು ಇಂದಿನ ಅಭಿಯಂತರರು ಸೇವಾಭಾವದಿಂದ ಮುನ್ನಡೆಯ ಬೇಕು. ಅದರಿಂದ ಜೀವನ ಸಾರ್ಥಕ ಮಾಡಿಕೊಳ್ಳ ಬೇಕು.