ಮಳೆಯ ಸಿಂಚನದ ನಡುವೆ ವೈಭವದಿಂದ ಕಂಗೊಳಿಸಿದ ಶಿವಮೊಗ್ಗ ದಸರಾ ಜಂಬೂಸವಾರಿ…
ಶಿವಮೊಗ್ಗ : ಅರಮನೆ ನಗರಿ ಮೈಸೂರಿನ ಪ್ರತಿಬಿಂಬದಂತೆ ತೋರುವ ಶಿವಮೊಗ್ಗ ದಸರಾದ ಜಂಬೂಸವಾರಿಗೆ ನಿನ್ನೆ ಮಧ್ಯಾಹ್ನ ೩ಗಂಟೆ ಸುಮಾರಿಗೆ ಕೋಟೆ ಶ್ರೀ ಆಂಜನೇಯ ದೇವಸ್ಥಾನದ ಎದುರಿನ ಕಮಾನು ಪಕ್ಕದ ಅಟ್ಟಣಿಗೆಯ ಮೇಲೆ ನಿಂತು ಅಂಬಾರಿ ಮೇಲಿದ್ದ ಚಾಮುಂಡೇಶ್ವರಿ ದೇವಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹೂವು ಅರ್ಪಿಸಿ ಜಿಲ್ಲೆಯ ಜನತೆಯ ಪರವಾಗಿ ಗೌರವ ಸಮರ್ಪಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಚನ್ನಪಬಸಪ್ಪ ಮತ್ತು ಇನ್ನಿತರ ಗಣ್ಯರು ಸಾಥ್ ನೀಡಿದರು.
ನಾಡಹಬ್ಬದ ಶೋಭೆ, ಸಂಸ್ಕೃತಿ, ಸಾಂಪ್ರದಾಯಿಕ ಸೊಬಗು ಹಾಗೂ ಜನಜಾತ್ರೆಯ ಉಸ ಎಲ್ಲವನ್ನೂ ಒಟ್ಟುಗೂಡಿಸಿಕೊಂಡು ಶಿವಮೊಗ್ಗ ದಸರಾ ಜಂಬೂಸವಾರಿ ಮಳೆಯ ಸಿಂಚನದಲ್ಲಿಯೇ ಅದ್ದೂರಿಯಾಗಿ ಜರುಗಿತು.

ಈ ಬಾರಿ ಮಳೆಯ ಸಿಂಚನದ ನಡುವೆಯೇ ದಸರಾ ಸಮಾರೋಪವು ಯಾವುದೇ ಅಡೆತಡೆಗಳಿಲ್ಲದೆ ಜರುಗಿತು. ನಾಡಹಬ್ಬದ ಈ ಸಂಭ್ರಮದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆ ಗಳಿಂದ ಹರಿದು ಬಂದಿದ್ದ ಜನಸಾಗರ, ಸಂಸ್ಕೃತಿ – ಸಾಂಪ್ರದಾಯಗಳ ಸಂಭ್ರಮಕ್ಕೆ ಸಾಕ್ಷಿಯಾದದ್ದು ಶಿವಮೊಗ್ಗ ದಸರಾ ವೈಭವವನ್ನು ಹೊಸ ಎತ್ತರಕ್ಕೆ ಏರಿಸಿದಂತಾಯಿತು.
ರಾಜಗೌರವದ ಸಂಕೇತವಾದ ಅಂಬಾರಿ ಹೊತ್ತು ಸಾಗಿದ ಸಾಗರ್ ಆನೆ ತನ್ನ ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆಯಿತು. ಸಾಗರ್ಗೆ ಸಾಥ್ ನೀಡಿದ ಬಹದ್ದೂರ್ ಮತ್ತು ಬಾಲಣ್ಣ ಆನೆಗಳು ಮೆರವಣಿಗೆಯ ಗಂಭೀರತೆಗೆ ಮತ್ತಷ್ಟು ಮೆರಗು ತಂದವು. ಪಾರಂಪರಿಕ ವಾದ್ಯಮೇಳದೊಂದಿಗೆ ಆನೆಗಳ ಹೆಜ್ಜೆಹಾಕಿದ ಕ್ಷಣ ನೆರೆದಿದ್ದ ಸಾರ್ವಜನಿಕ ರಲ್ಲಿ ಉತ್ಸಾಹ ಇಮ್ಮಡಿಗೊಳಿಸಿತು.
ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಹುಲಿ ಕುಣಿತದ ಗಮ್ಮತ್ತು ಈ ಬಾರಿ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿ ಹೊರ ಹೊಮ್ಮಿತು. ಕಲಾವಿದರ ಚುರುಕು ಹೆಜ್ಜೆಗಳು, ಮೇಳ- ತಾಳದ ಘೋಷಗಳು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿದವು. ಡೊಳ್ಳು, ನಾದಸ್ವರ, ಚಂಡೆ, ಝಂಜೆಯ ಸದ್ದು ನಗರ ಬೀದಿಗಳನ್ನು ಮೊಳಗಿಸಿತು. ಬಣ್ಣ ಬಣ್ಣದ ಹುಲಿ ವೇಷ ತೊಟ್ಟು ಕುಣಿದ ಕಲಾವಿದರು ಮಕ್ಕಳಿಂದ ವೃದ್ಧರ ತನಕ ಎಲ್ಲರೂ ಮನರಂಜನೆ ಮಾಡಿದರು. ಹರ್ಷೋದ್ಗಾರದ ಚಪ್ಪಾಳೆಗಳು, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳ ನೃತ್ಯ, ಗಾಯನ, ಜನಪದ ಪ್ರದರ್ಶನಗಳನ್ನು ನೀಡಿದವು. ಕರ್ನಾಟಕದ ವೈವಿಧ್ಯಮಯ ಪರಂಪರೆ, ಜಾನಪದ, ಸಾಂಸ್ಕೃತಿಕ ಸೊಬಗು ಮೆರವಣಿಗೆಯ ಮೂಲಕ ಅಭಿವ್ಯಕ್ತವಾಯಿತು. ಸಾಲು ಸಾಲಾಗಿ ಸಾಗಿದ ವಿವಿಧೆಡೆಗಳಿಂದ ಬಂದಿದ್ದ ಅಲಂಕೃತ ದೇವರು-ದೇವತೆಗಳ ಪ್ರತಿರೂಪಗಳು ಕಣ್ಮನ ಸೆಳೆದವು. ವೇಷಭೂಷಣ ಹಾಗೂ ಪುರಾಣ ಪ್ರಸಿದ್ಧ ಕಥೆಗಳ ನಾಟಕೀಯ ಪ್ರದರ್ಶನಗಳು ಭಕ್ತಿಭಾವ ಮೂಡಿಸಿದವು.

ಜಂಬೂಸವಾರಿಯ ಕೊನೆಯ ಹಂತದಲ್ಲಿ ನಡೆದ ರಾವಣ ದಹನ ಕಾರ್ಯಕ್ರಮವು ಜನಮನ ಸೆಳೆದಿತು. ರಾವಣನ ಬೃಹತ್ ಗೊಂಬೆಗೆ ಬೆಂಕಿಹಚ್ಚಿ ಸುಟ್ಟಾಗ ಪಟಾಕಿಗಳ ಸಿಡಿತ ಆಕಾಶವನ್ನೇ ಪ್ರಕಾಶಮಾನಗೊಳಿಸಿತು. ವಿಜಯದಶಮಿಯ ಸಾರ್ಥಕತೆಯನ್ನು ಸಾರಿದ ಈ ಕ್ಷಣಕ್ಕೆ ಜನಸಾಗರ ಹರ್ಷೋದ್ಗಾರಗಳಿಂದ ಸಾಕ್ಷಿಯಾದರು.
ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಲು ಪೊಲೀಸ್ ಇಲಾಖೆ ಶಿಸ್ತಿನ ಸಂಚಾರ ವ್ಯವಸ್ಥೆ ಒದಗಿಸಿತು. ಜನಸಾಗರವನ್ನು ನಿಯಂತ್ರಿಸಿ, ಅಪಘಾತ ತಪ್ಪಿಸಲು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ ಪೊಲೀಸರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ನಾಡಹಬ್ಬ ದಸರಾ ಮಹೋತ್ಸವವನ್ನು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಪಾಲಿಕೆಯ ಈ ಶಿಸ್ತಿನ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಯಿತು.
ಮೆರವಣಿಗೆಯಲ್ಲಿ ಬಹುತೇಕ ಗಣ್ಯರು, ರಾಜಕಾರಣಿಗಳು ತಮ್ಮ ಕುಟುಂಬ ಸಮೇತರಾಗಿ ಹಾಜರಾಗಿ ಎಂದಿನಂತೆ ತಮ್ಮ ಶೋಕಿ ಪ್ರದರ್ಶಿಸಿದರು. ಬನ್ನಿ ಮಂಟಪ ಏರಲು ನೂಕುನುಗ್ಗಲು ಮಾಡಿದರು. ಈ ಕಾರಣದಿಂದಾಗಿ ಬಹುತೇಕ ಪತ್ರಕರ್ತರು ಬನ್ನಿಮಂಟಪದ ಒಳ ಆವರಣ ಪ್ರವೇಶಿಸಲು ಸಾಧ್ಯವಾಗದೆ ಹೊರಗುಳಿಯಬೇಕಾಯಿತು. ಜನಪ್ರತಿನಿಧಿಗಳ ಈ ವರ್ತನೆಗೆ ಬೇಸತ್ತ ಪೊಲೀಸರು, ಒಂದು ಹಂತದಲ್ಲಿ ತಮ್ಮ ತಾಳ್ಮೆ ಕಳೆದುಕೊಂಡರು. ನಂತರ ಪುನಃ ಎಲ್ಲವೂ ಸರಾಗವಾಗಿ ನೆರವೇರಿತು. ಸ್ಥಳದಲ್ಲಿ ನೆರೆದಿದ್ದ ರಾಜಕೀಯ ನಾಯಕರು ಸಾರ್ವಜನಿಕರ ಗಮನ ಸೆಳೆಯಲು ನಾನಾ ರೀತಿಯ ಶೋಕಿ ಮಾಡುತ್ತಾ, ಸಾರ್ವಜನಿಕರ ಮುಂದೆ ಕೈಬೀಸುತ್ತಾ ನಗೆಪಾಟಲಿಗೀಡಾದರು.
ಇದಕ್ಕೆ ಸಮಾನಾಂತರವಾಗಿ ಮಕ್ಕಳು – ಯುವ ಸಮೂಹದ ಜೊಷ್, ನೃತ್ಯ, ಸಂಭ್ರಮ, ಹರ್ಷೋದ್ಗಾರ ದಸರಾ ಹಬ್ಬಕ್ಕೆ ವಿಭಿನ್ನ ಚೈತನ್ಯ ತುಂಬಿತು.

ಮಳೆಯ ಚಿಮುಕಾಟವಿದ್ದರೂ ಜನಸಾಗರದ ಉತ್ಸಾಹ ಕ್ಷೀಣವಾಗಲಿಲ್ಲ. ಮಳೆಯ ತೇವದಲ್ಲಿಯೇ ಜನರು ರಸ್ತೆ ತಟದಲ್ಲಿ ಸಾಲು ಸಾಲಾಗಿ ನಿಂತು ಜಂಬೂಸವಾರಿಯನ್ನು ಕಣ್ತುಂಬಿ ಕೊಂಡರು. ಹಬ್ಬದ ಖುಷಿಯ ತೇವ, ಸಂಸ್ಕೃತಿ-ಸಾಂಪ್ರದಾಯದ ವೈಭವ, ಜನಸಾಗರದ ಹರ್ಷೋದ್ಗಾರ ಇವೆಲ್ಲವೂ ಒಟ್ಟಾರೆಯಾಗಿ ದಸರಾ ಮಹೋತ್ಸವಕ್ಕೆ ಭರ್ಜರಿ ಮೆರಗು ನೀಡಿತು.
ಸಂಪೂರ್ಣ ನಗರವೇ ದಸರಾ ಸಂಭ್ರಮದಿಂದ ಮಿನುಗಿ, ಬೆಳಕಿನಿಂದ ಕಂಗೊಳಿಸುತ್ತಿzಗ, ಜಂಬೂ ಸವಾರಿಯ ಅಂತಿಮ ಘಟ್ಟದಲ್ಲಿ ಎಲ್ಲರ ಮುಖದಲ್ಲಿ ತೃಪ್ತಿ ಮತ್ತು ಹಬ್ಬದ ನೆನಪುಗಳ ಮುದ ಚೆಲ್ಲಿಬಿಟ್ಟಿತು. ಇಂತಹ ಮಳೆಯ ಸಿಂಚನದ ಮಧ್ಯೆಯೂ ನಡೆದ ಈ ವರ್ಷದ ಶಿವಮೊಗ್ಗ ದಸರಾ ಜಂಬೂಸವಾರಿ, ಜನರ ಹೃದಯದಲ್ಲಿ ನೆನಪಿನ ಹಬ್ಬವಾಗಿ ಉಳಿಯುವಂತಾಗಿದೆ.
