ಶಿವಮೊಗ್ಗ ದಸರಾ: ರಾಜೇಶ್ ಕೃಷ್ಣನ್-ಡಾ| ಶಮಿತಾ ಗಾಯನ…
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ. ೩ರಿಂದ ೧೨ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ನಿಮಿತ್ತ ನಗರದ ಫ್ರೀಡಂ ಪಾರ್ಕ್ನಲ್ಲಿ (ಅಲ್ಲಮಪ್ರಭು ಮೈದಾನ) ಅ.೪ರ ಬೆಳಿಗ್ಗೆ ೯.೩೦ಕ್ಕೆ ಅಂಬೇಡ್ಕರ್ ಭವನದಲ್ಲಿ ಜರುಗುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟಿ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಭೀಮ ಚಿತ್ರದ ಖ್ಯಾತ ನಟಿ ಪ್ರಿಯಾ ಶರಮರ್ಶಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು. ಅ. ೯ರ ಬುಧವಾರ ಸಂಜೆ ೫ ಗಂಟೆಗೆ ಕನ್ನಡ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಡಾ| ಶಮಿತ ಮಲ್ನಾಡ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿರುತ್ತಾರೆ.
ಅ. ೯ರಂದು ಬೆಳಿಗ್ಗೆ ೧೦.೩೦ಕ್ಕೆ ಆಹಾರ ದಸರಾ ನಿಮಿತ್ತ ನಗರದ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಎರಡು ನಿಮಿಷದಲ್ಲಿ ಇಡ್ಲಿಸಾಂಬಾರ್ ತಿನ್ನುವ ಸ್ಪರ್ಧೆ ಮತ್ತು ಹಣ್ಣು ತಿನ್ನುವ ಸ್ಪರ್ಧೆ ಜರುಗಲಿದ್ದು, ಮಹಿಳೆಯರು ಮತ್ತು ಪುರುಷರಿಗೆ ಅವಕಾಶವಿದೆ.ಅ. ೧೦ರಂದು ಗುರುವಾರ ಬೆಳಿಗ್ಗೆ ೧೦.೩೦ಕ್ಕೆ ವೀರಶೈವ ಕಲ್ಯಾಣ ಮಂದಿರ ಪಕ್ಕದ ನಿಜಲಿಂಗಪ್ಪ ಸಭಾಭವನನದಲ್ಲಿ ಅಡಿಗೆ ಮಾಡುವ ಸ್ಪರ್ಧೆ ಜರುಗಲಿದೆ. ಅಮ್ಮ-ಮಗ ಹೆಸರುಕಾಳು ಉಪಯೋಗಿಸಿ ಖಾದ್ಯ ತಯಾರಿಸಬೇಕು.
ಅ.೮ರಿಂದ ೧೨ರವರೆಗೆ ಪ್ರತಿದಿನ ಸಂಜೆ ೬ ಗಂಟೆಗೆ ವಿನೋಬನಗರದ ಫ್ರೀಡಂ ಪಾರ್ಕ್ನಲ್ಲಿ ಆಹಾರಮೇಳ ಜರುಗಲಿದೆ. ೨೫ ಸ್ಟಾಲ್ಗಳಲ್ಲಿ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳದಲ್ಲಿ ಸಾರ್ವಜನಿಕರು ಪಾಲ್ಗೊಂಡು ರುಚಿ ಸವಿಯಬಹುದು.
ಅ.೧೦ರ ಗುರುವಾರ ಸಂಜೆ ೫.೩೦ಕ್ಕೆ ಫ್ರೀಡಂ ಪಾರ್ಕ್ನಲ್ಲಿ ನಾಟ್ಯ ವೈವಿಧ್ಯ-ಸಂಗೀತ ಸಂಭ್ರಮ ಕಾರ್ಯಕ್ರಮವಿದ್ದು, ಖ್ಯಾತ ಚಿತ್ರನಟಿ ಮಾಲಾಶ್ರೀ ಉದ್ಘಾಟನೆ ನೆರವೇರಿಸಲಿದ್ದಾರೆ.
ಅ.೧೧ರಂದು ಶುಕ್ರವಾರ ಸಂಜೆ ೫.೩೦ಕ್ಕೆ ವಿನೋಬನಗರ ಫ್ರೀಡಂ ಪಾರ್ಕ್ನಲ್ಲಿ ಸಂಗೀತ-ಜಾನಪದ ವೈಭವ ಕಾರ್ಯಕ್ರಮವಿದ್ದು, ಖ್ಯಾತ ಚಿತ್ರನಟಿ ಭವ್ಯ ಉದ್ಘಾಟಿಸಲಿದ್ದಾರೆ. ಚಲನಚಿತ್ರ ಹಿನ್ನಲೆಗಾಯಕಿ ಶ್ರೀಮತಿ ಮಂಗಳಾರವಿ, ಕನ್ನಡ ಕೋಗಿಲೆ ಖ್ಯಾತಿಯ ಸುರಕ್ಷಾದಾಸ್, ಪಾರ್ಥ ಚಿರಂತನ್, ಮಲೆನಾಡು ಕೋಗಿಲೆ ವಿಜೇತ ಗಾಯಕ ಪೃಥ್ವಿಗೌಡರಿಂದ ಗಾಯನ ಹಾಗೂ ಬೆಂಗಳೂರಿನ ನಾಗರಾಜಮೂರ್ತಿ ತಂಡದಿಂದ ಜಾನಪದ ವೈಭವ ಜರುಗಲಿದೆ. ಶಿವಮೊಗ್ಗ ವಿನಯ್ ಅವರು ನಿರೂಪಣೆ ಮಾಡಲಿದ್ದಾರೆ.