ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬ್ಯಾಂಕ್‌ಗಳ ಸುರಕ್ಷತೆ – ಭದ್ರತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಎಸ್‌ಪಿ ಮಿಥುನ್ ಸೂಚನೆ

Share Below Link

ಶಿವಮೊಗ್ಗ : ಇಂದು ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆ ಜರುಗಿತು. ಬ್ಯಾಂಕ್‌ನ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡಿ, ಬ್ಯಾಂಕಿನ ಗ್ರಾಹಕರು ತಮ್ಮ ಜೀವಮಾನದ ಗಳಿಕೆಯನ್ನು ಬ್ಯಾಂಕ್‌ಗಳ ಮೇಲೆ ವಿಶ್ವಾಸದಿಂದ ಇಟ್ಟಿರುತ್ತಾರೆ. ಅನೇಕ ಬ್ಯಾಂಕ್‌ಗಳು ವಿವಿಧ ರೀತಿಯ ಸೇವೆಗಳನ್ನು ನೀಡುತ್ತದೆ. ಆದರೆ ಇತ್ತೀಚಿಗೆ ನ್ಯಾಮತಿ ತಾಲ್ಲೂಕಿನ ಬ್ಯಾಂಕ್‌ವೊಂದರಲ್ಲಿ ಹಲವಾರು ಕೋಟಿ ರೂ.ಗಳ ಚಿನ್ನಾಭರಣವನ್ನು ಲಾಕರ್ ಹೊಡೆದು ಕಳ್ಳರು ಲೂಟಿ ಮಾಡಿದ್ದರು. ಇದು ಗ್ರಾಹಕರಿಗೆ ಸಹಜವಾಗಿ ಆತಂಕ ತರುತ್ತದೆ. ಬ್ಯಾಂಕ್‌ಗಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಆರ್‌ಬಿಐ ಅನೇಕ ಗೈಡ್‌ಲೈನ್ಸ್ ನೀಡಿದೆ. ಜಿಲ್ಲಾ ಪೋಲೀಸ್ ಕೂಡ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವನ್ನು ಪಾಲಿಸಬೇಕೆಂದರು.


ಇತ್ತೀಚೆಗೆ ಹಲವು ಕಡೆ ಎಟಿಎಂಗಳಲ್ಲಿ ಕಳ್ಳತನ, ಆನ್‌ಲೈನ್ ವಂಚನೆ ಅನೇಕ ರೀತಿಯ ಬ್ಯಾಂಕ್ ವಂಚನೆಗಳು ನಡೆದಿದ್ದು, ಮತ್ತು ಕೆಲವೆಡೆ ವಿಫಲ ಪ್ರಯತ್ನ ಆಗಿದ್ದು ಕೂಡ ನಮ್ಮೆಲ್ಲರ ಗಮನಕ್ಕೆ ಬಂದಿದೆ. ಅನೇಕ ಕಡೆ ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಸುರಕ್ಷತೆ, ಸಿಬ್ಬಂದಿಗಳ ನಿರ್ಲಕ್ಷ್ಯತನ ಮತ್ತು ನಿಯಮಾವಳಿ ಪ್ರಕಾರ ಮುನ್ನೆಚ್ಚರಿಕೆ ವಹಿಸದೇ ಇರುವುದು, ಈ ಘಟನೆಗಳಿಗೆ ಕಾರಣವಾಗಿದೆ. ಸುರಕ್ಷತೆಗಾಗಿ ಇರುವ ಹಳೆ ಪದ್ದತಿ ಗಳನ್ನು ಬದಲಾಯಿಸಿ ಅತ್ಯಾಧುನಿಕ ತಂತ್ರಜನ ಉಪಯೋಗಿಸಿ ಎಂದರು.
ಎಟಿಎಂಗಳಿಗೆ ಭದ್ರತೆ ಒದಗಿಸಿ, ಎಟಿಎಂ ಹಾಗೂ ಬ್ಯಾಂಕಿನ ಶಾಖೆಗಳ ಮುಂಭಾಗ, ಹಿಂಭಾಗ ಹಾಗೂ ೩೬೦ ಡಿಗ್ರಿ ಸುತ್ತಲೂ ಉತ್ತಮ ದರ್ಜೆಯ ಕತ್ತಲಲ್ಲೂ ಕಾರ್ಯಾಚರಿಸುವ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅದರ ಡಿವಿಆರ್ ಬಾಕ್ಸ್‌ಗಳನ್ನು ಕಣ್ಣಿಗೆ ಕಾಣದಂತೆ ಇಡಿ, ಅನುಮಾನ ಬಾರದ ಜಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ. ಸಾಲು ಸಾಲು ರಜೆಗಳಿ ದ್ದಾಗ ಸೂಕ್ತ ಬಂದೋಬಸ್ತ್ ಒದಗಿಸಿ, ಬ್ಯಾಂಕಿನ ಪ್ರಮುಖ ಜವಾಬ್ದಾರಿ ಯುತ ಅಧಿಕಾರಿಗಳ ಮೊಬೈಲ್ ನಂ.ನ್ನು ಸ್ಥಳೀಯರಿಗೆ, ಗ್ರಾಹಕರಿಗೆ ಹಾಗೂ ಪಕ್ಕದ ಪೊಲೀಸ್ ಠಾಣೆಗೆ ನೀಡುವಂತೆ ಸಲಹೆ ನೀಡಿದರು.
ಈ ಹಿಂದೆ ಕೆಲವು ಶಾಖೆಗಳಿಗೆ ಸಂದರ್ಶಿಸಿದಾಗ ಅನೇಕ ಲೋಪದೋಷಗಳ ಪಟ್ಟಿ ಮಾಡಿ ಸರಿಪಡಿಸುವಂತೆ ತಿಳಿಸಿದ್ದೆವು. ಅದು ಯಾವುದು ಕಾರ್ಯಗತವಾಗಿಲ್ಲ, ಕುಂಟು ನೆಪ ಹೇಳುತ್ತಾರೆ. ಬ್ಯಾಂಕ್‌ನಿಂದ ನಮಗೆ ಯಾವುದೇ ಫಂಡ್ ಬರುವುದಿಲ್ಲ ಎನ್ನುತ್ತಾರೆ. ಆದರೆ ಇನ್ನೂ ಮೇಲೆ ಈ ರೀತಿಯ ದರೋಡೆ, ಲೂಟಿ, ಕಳ್ಳತನ ಮೊದಲಾದ ಘಟನೆ ನಡೆದಾಗ ನಿಯಮಾವಳಿಗಳ ಪ್ರಕಾರ ಭದ್ರತಾ ಲೋಪ ಕಂಡುಬಂದಲ್ಲಿ ಬ್ಯಾಂಕಿನ ಪ್ರಮುಖ ಅಧಿಕಾರಿಗಳು ಕೂಡ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಗುಪ್ತದಳದ ಡಿವೈಎಸ್‌ಪಿ ಕೃಷ್ಣಮೂರ್ತಿ, ಅನೇಕ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಎ.ಜೆ.ಕಾರಿಯಪ್ಪ, ಅನಿಲ್‌ಕುಮಾರ್ ಭೂಮರೆಡ್ಡಿ, ಡಿ.ವೈ.ಎಸ್.ಪಿ. ಅಂಜನಪ್ಪ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.