ಸಂತ ಆಂತೊನಿ : ಕಳೆದುಹೋದ ವಸ್ತುಗಳ ರಕ್ಷಕ ದೇವಮಾನವ…
ಅ.ರಾಕೇಶ್ ಡಿಸೋಜ
೯೪೪೮೩೪೩೨೧೧
ಸಂತ ಅಂತೊನಿ ಅವರು ಕ್ರೈಸ್ತ ಧರ್ಮದಲ್ಲಿ ಅತ್ಯಂತ ಪೂಜನೀಯ ಸ್ಥಾನ ಹೊಂದಿರುವ ಸಂತರಬ್ಬರಾಗಿದ್ದಾರೆ. ಪೂಜ್ಯರು ೧೨ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿದರು. ಬಾಲ್ಯದಿಂದಲೇ ತಮ್ಮ ಜೀವನವನ್ನು ದೈವ ಸೇವೆಗೆ ಸಮರ್ಪಿಸಿದರು.
ಇಟಲಿಯ ಪಾಡುವಾ ಎಂಬ ಊರಲ್ಲಿ ಅವರು ತಮ್ಮ ಶ್ರೇಷ್ಠ ಉಪದೇಶ ಹಾಗೂ ಅದ್ಭುತಗಳ ಮೂಲಕ ಜನಮನ ಗೆದ್ದರು.
ಸಂತರ ಜೀವನಚರಿತ್ರೆ: ಸಂತ ಅಂತೊನಿ ಅವರು ೧೧೯೫ರಲ್ಲಿ ಪೋರ್ಚುಗಲ್‌ನ ಲಿಸ್ಬನ್ ನಗರದಲ್ಲಿ ಜನಿಸಿದರು. ಅವರ ಹುಟ್ಟಿನ ಹೆಸರು ಫೆರ್ನಾಂಡೋ ಮಾರ್ಟಿನ್ಸ್. ಪೂಜ್ಯರು ಕ್ರೈಸ್ತ ಧಾರ್ಮಿಕ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದರು. ಪೂಜ್ಯರು ಚಿಕ್ಕಂದಿನಿಂದಲೇ ಕ್ರೈಸ್ತ ಧರ್ಮದ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಅವರು ಆಗಸ್ಟೀನ್ ಸನ್ಯಾಸ ಆಶ್ರಮದಲ್ಲಿ ವಿದ್ಯಾರ್ಥಿಯಾಗಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು.
ಯುವಕನಾಗಿzಗಲೇ ಅವರು ಫ್ರಾನ್ಸಿಸ್ಕನ್ ಧರ್ಮಸಭೆಗೆ ಸೇರಿದರು. ನಂತರ ಅವರು ತಮ್ಮ ಹೆಸರನ್ನು ಫೆರ್ನಾಂಡೋದಿಂದ ಅಂತೊನಿ ಎಂದು ಬದಲಾಯಿಸಿಕೊಂಡರು. ಇದು ಸಂತ ಆಂತೊನಿ ಅವರ ಬದ್ಧತೆಯ ಹಾಗೂ ನವೀಕರಣದ ಸಂಕೇತವಾಗಿತ್ತು. ಅವರು ಅತ್ಯಂತ eನವಂತರು, ವಚನಶಕ್ತಿಯುಳ್ಳವರು ಮತ್ತು ನಿರಂತರ ಧರ್ಮೋಪದೇಶದಲ್ಲಿ ತೊಡಗಿದ್ದವರಾಗಿದ್ದರು.
ಪೂಜ್ಯ ಸಂತ ಅಂತೋನಿಯವರು ೧೨೩೧ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಪಡುವಾ ಪಟ್ಟಣದಲ್ಲಿ ಅಸ್ತಂಗತರಾದರು. ನಂತರ ೧೨೩೨ರಲ್ಲಿ ಪೋಪ್ ಗ್ರೆಗರಿ ಐಗಿ ಅವರು ಅಂತೋನಿ ಅವರನ್ನು ಧರ್ಮ ಸಂತರನ್ನಾಗಿ ಘೋಷಿಸಿದರು. ನಂತರದಲ್ಲಿ ಜೂನ್ ೧೩ರಂದು ವಿಶ್ವದಾದ್ಯಾಂತ ಕ್ರೈಸ್ತರು ಸಂತ ಆಂತೊನಿ ಅವರ ದಿನವನ್ನಾಗಿ ಆಚರಿಸುತ್ತಾರೆ.
ಮರಣ ನಂತರದ ಅದ್ಭುತ:
ಪೂಜ್ಯ ಸಂತ ಅಂತೋನಿಯವರು ೧೨೩೧ರಲ್ಲಿ ಪಡುವಾ ಪಟ್ಟಣದಲ್ಲಿ ಅಸ್ತಂಗತರಾಗಿದ್ದರು, ೧೨೬೩ರಲ್ಲಿ ಅವರ ಶವವನ್ನು ಮರುಪ್ರತಿಷ್ಠೆ ಮಾಡುವಾಗ ಅವರ ಜಸ್ಜಿ ಸಡಿಲಿಸಿಬಿಟ್ಟಿದ್ದ ವೇಳೆ ಅವರ ನಾಲಿಗೆ ಸಂಪೂರ್ಣವಾಗಿ ಸಮರ್ಪಣಾ ಸ್ಥಿತಿಯಲ್ಲಿ ಉಳಿದಿತ್ತು. ಇದು ದೇವದತ್ತ ವ್ಯಕ್ತಿಯ ಚಿಹ್ನೆಯೆಂದು ಧಾರ್ಮಿಕರು ನಂಬಿದರು.
ಅಪರೂಪದ ಪ್ರಸಂಗಗಳು: ಪೂಜ್ಯ ಸಂತರು ತಮ್ಮ ಭಕ್ತರಿಗೆ ಪ್ರೀತಿ ಮತ್ತು ಅಭಿಮಾನದಿಂದ ಉಪದೇಶ ಮಾಡುತ್ತಿದ್ದರು. ಅವರು ಓರ್ವ ಪ್ರಖ್ಯಾತ ಧರ್ಮೋಪದೇಶಕರಾಗಿದ್ದರು. ವಿಶ್ವದ ವಿವಿಧೆಡೆಗಳಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಅವರ ಉಪದೇಶ ಕೇಳಲು ಬರುತ್ತಿದ್ದರು. ಅವರು ಬೃಹತ್ ಸಮಾರಂಭಗಳಲ್ಲಿ ಸಹ ಧರ್ಮದ ಪ್ರಭಾವಶಾಲಿ ಉಪದೇಶ ನೀಡುತ್ತಿದ್ದರು
ಮತ್ಸ್ಯಗಳಿಗೆ ಮಾಡಿದ ಧರ್ಮೋಪದೇಶ: ಪೂಜ್ಯ ಸಂತ ಅಂತೋನಿಯವರು ರಿಮಿನಿ ಎಂಬ ಊರಿನಲ್ಲಿ ಧರ್ಮೋಪದೇಶ ಮಾಡುತ್ತಿzಗ ಜನರು ಅದನ್ನು ಕೇಳಲು ತಾತ್ಸಾರ ಮಾಡಿ ನಿರಾಕರಿಸಿದರು. ಆಗ ಸಂತ ಆಂತೊನಿ ಅವರು ನದಿಯ ದಡಕ್ಕೆ ಹೋಗಿ ಸ್ವಲ್ಪ ಸಮಯ ಶಾಂತಚಿತ್ತರಾಗಿ ನಿಂತು ತ್ರಯೇಕ ದೇವರನ್ನು ಸ್ಮರಿಸುತ್ತಾ ಮತ್ಸ್ಯಗಳಿಗೆ ಧರ್ಮದ ಕುರಿತು ಪ್ರವಚನ ನೀಡಲಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಆಶ್ಚರ್ಯಕರವಾಗಿ ನದಿಯಲ್ಲಿದ್ದ ಸಾವಿರಾರು ಮತ್ಸ್ಯಗಳು ನೀರಿನ ಮೇಲಕ್ಕೆ ಬಂದು ಕೇಳುತ್ತಿರುವಂತೆ ತೋರುವ ದೃಶ್ಯ ಕಂಡುಬಂದಿತು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾದರಲ್ಲದೇ, ಸಂತರ ಮಾತು ಕೇಳದೇ ಅವಮಾನಿಸಿದ್ದಕ್ಕೆ ತಮ್ಮ ತಪ್ಪನ್ನು ಒಪ್ಪಿಕೊಂಡು ದುಃಖಪಟ್ಟು ಪಶ್ಚಾತ್ತಾಪ ಪಟ್ಟುಕೊಂಡರು. ನಂತರ ತಮ್ಮ ತಪ್ಪನ್ನು ಅರಿತು ಧರ್ಮವನ್ನು ಸ್ವೀಕರಿಸಿದರು.
ಕಳೆದುಹೋದ ಗ್ರಂಥದ ಕತೆ: ಒಮ್ಮೆ ಸಂತ ಅಂತೋನಿಯವರ ಶಿಷ್ಯರೊಬ್ಬರು ಪೂಜ್ಯರ ಪವಿತ್ರ ಗ್ರಂಥವನ್ನು ಎತ್ತಿಕೊಂಡು ಹೋಗಿ ಕಳೆದುಕೊಂಡಿದ್ದ. ಅದನ್ನರಿತ ಸಂತ ಅಂತೋನಿಯವರು ಪ್ರಾರ್ಥನೆ ಮಾಡಿದ ನಂತರ, ಆತನು ಪಶ್ಚಾತ್ತಾಪದಿಂದ ಗ್ರಂಥವನ್ನು ಮರಳಿ ತಂದನು. ಈ ಘಟನೆಯ ನಂತರ ಸಂತರ ಕುರಿತು ಕಳೆದುಹೋದ ವಸ್ತುಗಳ ರಕ್ಷಕ ಎಂಬ ಖ್ಯಾತಿ ಮೂಡಿತು ಮತ್ತು ಅದು ವಿಶ್ವದಾದ್ಯಂತ ಪ್ರಚಾರವಾಗಿ ಇಂದಿಗೂ ಕೂಡ ಸಂತ ಅಂತೋನಿಯವರ ಭಕ್ತರು ಕಳೆದುಕೊಂಡ ವಸ್ತುಗಳಿಗಾಗಿ ಅವರಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ ಪಡೆದುಕೊಳ್ಳುತ್ತಿದ್ದಾರೆ ಎಂಬ ನಂಬಿಕೆಯಿದ.
ಅದ್ಭುತಗಳು ಮತ್ತು ಪ್ರಸಿದ್ಧತೆ: ಸಂತ ಅಂತೊನಿ ಅವರು ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು ಸಹಾಯ ಮಾಡುವ ದೇವಮಾನವನಾಗಿ ಪ್ರಸಿದ್ಧರಾಗಿzರೆ. ಯಾರಾದರೂ ಮಲ್ಯವಾದ ವಸ್ತು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ಅವರು ಸಂತ ಆಂತೊನಿಯವರ ಬಳಿ ಪ್ರಾರ್ಥನೆ ಮಾಡುತ್ತಾರೆ. ಸಂತ ಅಂತೊನಿ ಅವರ ಆಧ್ಯಾತ್ಮಿಕ ಶಕ್ತಿಗೆ ವಿಶ್ವದಾದ್ಯಂತ ಕೋಟ್ಯಾಂತರ ಸಂಖ್ಯೆಯ ಭಕ್ತ ಸಮೂಹ ನಂಬಿಕೆ ಇಟ್ಟಿzರೆ. ವಿಶೇಷವಾಗಿ ಕಳೆದುಹೋದ ವಸ್ತುಗಳು ಅಥವಾ ವ್ಯಕ್ತಿಗಳನ್ನು ಹುಡುಕಲು ಅವರ ಸಹಾಯ ಕೇಳಿ ಪ್ರಾರ್ಥಿಸಲಾಗುತ್ತದೆ. ಅವರ ಪ್ರಾರ್ಥನೆ ಈ ರೀತಿ ಇದೆ;
ಭಕ್ತರ ಪಾಲಕರಾದ ಸಂತ ಅಂತೋನಿಯವರೇ, ದಯವಿಟ್ಟು ಬನ್ನಿ; ನನ್ನ ಈ ವಸ್ತು ಕಳೆದುಹೋಗಿದೆ ಮತ್ತು ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ದಯವಿಟ್ಟು ಅದನ್ನು ನನಗೆ ದಯಪಾಲಿಸಿ… ಎಂದು ಸಂತ ಅಂತೋನಿಯವರ ಭಕ್ತರು ಪೂಜ್ಯರಲ್ಲಿ ಅತ್ಯಂತ ವಿನಯಪೂರ್ವಕವಾಗಿ ಬೇಡಿ ಪ್ರಾರ್ಥಿಸುತ್ತಾರೆ ಮತ್ತು ಅದನ್ನು ಮರಳಿ ಪಡೆಯುತ್ತಾರೆ ಎಂಬ ದೃಢವಾದ ನಂಬಿಕೆ ಸಂತರ ಭಕ್ತರಲ್ಲಿದೆ.
ಪೂಜ್ಯರ ಸ್ಮರಣಾ ದಿನ: ವಿಶ್ವದೆಲ್ಲೆಡೆ ಪ್ರತಿ ಮಂಗಳವಾರದಂದು ಸಂತ ಅಂತೋನಿ ಅವರ ಭಕ್ತರು ಪೂಜ್ಯರಿಗೆ ಚರ್ಚ್ ಮತ್ತು ಮನೆಗಳಲ್ಲಿ ವಿಶೇಷ ಪ್ರಾಥನೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಜೂನ್ ೧೩ನ್ನು ಸಂತ ಅಂತೊನಿಯವರ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ಕ್ರೈಸ್ತ ಸಮುದಾಯ, ವಿಶೇಷವಾಗಿ ಗೋವಾ, ಕರ್ನಾಟಕ, ಕೊಚ್ಚಿ ಮತ್ತು ತಮಿಳುನಾಡು ಪ್ರದೇಶದಲ್ಲಿ ಆ ದಿನ ಸಂತ ಅಂತೋನಿಯವರ ಭಕ್ತರು ಶ್ರಾದ್ಧಾ ಭಕ್ತಿಯಿಂದ ಆಚರಣೆ ನಡೆಸುತ್ತಾರೆ.
ಸಂತ ಆಂತೊನಿ ಅವರು ಪವಿತ್ರತೆ, ಬುದ್ಧಿವಂತಿಕೆ ಮತ್ತು ಭಕ್ತಿಯ ಸಂಕೇತವಾಗಿzರೆ. ಅವರು ಪವಿತ್ರ ಗ್ರಂಥಗಳ ಸಾಧಕರಾಗಿದ್ದಾರೆ. ಭಕ್ತಿಗೆ ಮಾರ್ಗದರ್ಶಕ ಮತ್ತು ಕಳೆದುಹೋದವರ ನಿರ್ಗಮನದ ಬೆಳಕು. ಅವರ ಜೀವನ ಕಥೆಗಳು ಶ್ರದ್ಧೆಯ, ಪ್ರಾರ್ಥನೆಯ ಮತ್ತು ಆಶಾಕಿರಣದ ಸಾಕ್ಷ್ಯವಾಗಿದೆ.
ವಿಶೇಷವಾಗಿ ಕರ್ನಾಟದ ದಕ್ಷಿಣ ಕನ್ನಡ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಂತ ಅಂತೋನಿಯವರ ಚರ್ಚ್‌ಗಳಲ್ಲಿ ಜೂ.೧೩ರಂದು ಸಂತ ಅಂತೋನಿಯವರ ಹಬ್ಬವನ್ನು ಅತ್ಯಂತ ಆಡಂಬರ ಹಾಗೂ ಶದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಅಂದು ಸಂತರ ಅನುಯಾಯಿಗಳು ವಿವಿಧೆಗೆಳಿಂದ ಸಂತ ಅಂತೋನಿಯವರ ದೇವಾಲಯಗಳಿಗೆ ಆಗಮಿಸಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಸಂತರ ಕೃಪೆಗೆ ಪಾತ್ರರಾಗುತ್ತಾರೆ.
