ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಗೆ ವಜ್ರ ಮಹೋತ್ಸವದ ಸಂಭ್ರಮ…
ಶಿವಮೊಗ್ಗ : ಸೆಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ೬೦ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ಏಕೈಕ ಬಾಲಕರ ಶಾಲೆ ಯಾಗಿದ್ದ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯು ನಗರದ ಹೃದಯ ಭಾಗದ ಲ್ಲಿರುವ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ೧೯೬೫ರಲ್ಲಿ ಚಿಕ್ಕಿದಾಗಿ ಪ್ರಾರಂಭ ಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. ೧೯೯೦ರಲ್ಲಿ ಬೆಳ್ಳಿ ಮಹೋತ್ಸವವನ್ನು ಆಚರಿಸಿ ಕೊಂಡಿತ್ತು. ಈಗ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ ವೇದಿಕೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಧ್ಯದಲ್ಲಯೇ ಬಿಡುಗಡೆ ಮಾಡಲಾಗುವುದು ಎಂದರು.
ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಆಶಾಕಿರಣವಾಗಿದ್ದು, ಈ ಶಾಲೆಯು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಕ್ರೀಡೆ, ಪತ್ರಿಕೋಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನೇಕ ವಿದ್ಯಾರ್ಥಿಗಳನ್ನು ಕೊಡುಯಾಗಿ ನೀಡಿದೆ ಎಂದರು.
ನಗರದ ಬಿ.ಹೆಚ್. ರಸ್ತೆಯಲ್ಲಿ ರುವ ಸೇಕ್ರೆಡ್ ಹಾರ್ಟ್ ಚರ್ಚ್ ಮುಂಭಾಗದಲ್ಲಿ ೧೯೬೫ರಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಆರಂಭವಾದ ಈ ಶಾಲೆ, ೧೯೬೭ರಲ್ಲಿ ಅಂದಿನ ಕ್ರೈಸ್ತ ಜಗದ್ಗುರುಗಳಾದ ಪೋಪ್ ೬ನೇ ಪೌಲ್ ಅವರು ಭಾರತಕ್ಕೆ ಭೇಟಿ ನೀಡಿದ ಸವಿನೆನಪಿಗಾಗಿ ನೂತನ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲಾಯಿತು. ೧೯೯೦ರಲ್ಲಿ ಶಾಲೆಯ ಬೆಳ್ಳಿ ಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ನೀಡಿದ ಧನ ಸಹಾಯದಿಂದ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ನೆಲ ಅಂತಸ್ತನ್ನು ನಿರ್ಮಿಸಲಾಯಿತು ಎಂದರು.
೨೦೧೦ರಲ್ಲಿ ಶಿಥಿಲಗೊಂಡಿದ್ದ ಹಳೆಯ ಕಟ್ಟವನ್ನು ತೆರವುಗೊಳಿಸಿ ಹಿರಿಯ ವಿದ್ಯಾರ್ಥಿಗಳ ಸಹಕಾರ ದೊಂದಿಗೆ ಎರಡು ಅಂತಸ್ಥಿನ ಸುಸಜ್ಜಿತ ವಾದ ನೂತನ ಕಟ್ಟಡ ನಿರ್ಮಿಸಿದ್ದು, ೨೦೧೫ರಲ್ಲಿ ಶಾಲೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಶಾಲೆಯ ಮೇಲ್ಭಾಗದಲ್ಲಿ ಒಂದು ಸಭಾಂಗಣ ನಿರ್ಮಿಸಲಾಯಿತು ಎಂದು ವಿವರಿಸಿದರು.
ಸವಿಸವಿ ನೆನಪು ಸಾವಿರ ನೆನಪು ಎಂದು ಹೇಳುವ ಮೂಲಕ ತಮ್ಮ ಮಾತನ್ನಾರಂಭಿಸಿದ ಮತ್ತೋರ್ವ ಹಿರಿಯ ವಿದ್ಯಾರ್ಥಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಡಾ| ಧನಂಜಯ ಸರ್ಜಿ ಅವರು, ಈ ಶಾಲೆ ಯಲ್ಲಿ ತಮ್ಮ ಬಾಲ್ಯದ ಸವಿನೆನಪು ಗಳನ್ನು ಹಂಚಿಕೊಂಡರಲ್ಲದೇ, ವೈದ್ಯರಿಲ್ಲ ಎಂದರೆ ಆರೋಗ್ಯವಿಲ್ಲ. ಇಂಜಿನಿಯರ್ ಇಲ್ಲ ಎಂದರೆ ಟೆಕ್ನಾಲಜಿ ಇಲ್ಲ, ಪೊಲೀಸರಿಲ್ಲ ಎಂದರೆ ರಕ್ಷಣೆ ಇಲ್ಲ ಹಾಗೂ ಶಿಕ್ಷಕರಿಲ್ಲ ಎಂದರೆ ವಿದ್ಯೆ ಸಿಗಲು ಸಾಧ್ಯವಿಲ್ಲ ಎಂದರು.
ಊಟ ಹಾಳಾದರೆ ಒಂದು ದಿನ ವ್ಯರ್ಥವಾದಂತೆ, ಬೆಳೆ ಹಾಳಾದರೆ ಒಂದು ವರ್ಷ ಹಾಳಾದಂತೆ ಅದೇರೀತಿ ವಿದ್ಯೆ ಇಲ್ಲದಿದ್ದರೆ ಜೀವನವೇ ನಶಿಸಿದಂತೆ ಎಂದರಲ್ಲದೇ, ಇಂದು ತಾವು ಉನ್ನತ ಸ್ಥಾನದಲ್ಲಿರಲು ಆರಂಭದಲ್ಲಿ ಸೇಕ್ರೆಡ್ ಹಾರ್ಟ್ ಶಾಲೆ ತಮಗೆ ನೀಡಿದ ವಿದ್ಯೆ ಮತ್ತು ಶಿಸ್ತು ಹಾಗೂ ಸಂಸ್ಕೃತಿಯೇ ಮುಖ್ಯ ಕಾರಣ ಎಂದರು.
ಮತ್ತೋರ್ವ ಹಿರಿಯ ವಿದ್ಯಾರ್ಥಿ ಹೆಚ್.ಸಿ. ಯೋಗೀಶ್ ಅವರು ಮಾತನಾಡಿ, ವಿದ್ಯೆ ಕಲಿಸಿದ ಶಾಲೆ ಯನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವಿಂದು ಗೌರವಯುತ ಸ್ಥಾನದಲ್ಲಿರಲು ನಾವು ಕಲಿತ ಶಾಲೆ ಮತ್ತು ನಮ್ಮ ತಂದೆ ತಾಯಿಗಳೇ ಕಾರಣ ಎಂದರು.
ಈ ವರ್ಷ ನಮ್ಮ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯು ವಜ್ರ ಮಹೋತ್ಸವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಶಾಲೆಯ ಮೂಲ ಸೌಕರ್ಯಗಳನ್ನು ಉನ್ನತ ದರ್ಜೆಗೆ ಏರಿಸುವ ಸಲುವಾಗಿ ಮಕ್ಕಳಿಗೆ ತಂತ್ರಜ್ಞಾನಾಧಾರಿತ ಶಿಕ್ಷಣ ನೀಡಲು ಸ್ಮಾರ್ಟ್ ಕ್ಲಾಸ್, ಬಿಸಿಯೂಟದ ವಿಶಾಲವಾದ ಕೊಠಡಿ ನಿರ್ಮಾಣ ಸೇರಿದಂತೆ ಇನ್ನಿತರ ಯೋಜನೆಗಳನ್ನು ರೂಪಿಸಿದ್ದು, ಸೇಕ್ರೆಡ್ ಹಾರ್ಟ್ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಧನ ಸಹಾಯದ ನೆರವು ನೀಡುವಂತೆ ಕೋರಿದರು.
ಡಿ. ೨೦ರ ಶನಿವಾರ ಮತ್ತು ೨೧ರ ಭಾನುವಾರ ವಜ್ರ ಮಹೋತ್ಸವ ಕಾರ್ಯಕ್ರಮ ಆಚರಿಸಲು ನಿರ್ಧರಿಸ ಲಾಗಿದೆ. ಡಿ.೨೦ರಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವಿದ್ದು, ಅಂದು ಬೆಳಿಗ್ಗೆ ಶಾಲಾ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ, ಸಂಜೆ ಮನೋರಂಜನೆ ಮತ್ತು ಔತಣ ಕೂಟ ಹಮ್ಮಿಕೊಳ್ಳಲಾಗಿದೆ. ಡಿ.೨೧ರ ಭಾನುವಾರ ಸಂಜೆ ಶಾಲಾ ಆವರಣ ದಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಈ ವಜ್ರ ಮಹೋತ್ಸವ ಕಾರ್ಯಕ್ರಮ ಸಮಾಪ್ತಿಗೊಳಿಸ ಲಾಗುವುದು ಎಂದು ವಿವರಿಸಿದರು.
ಸೇಕ್ರೆಡ್ ಹಾರ್ಟ್ ಚರ್ಚ್ನ ಪ್ರಧಾನ ಗುರುಗಳಾದ ರೆ| ಫಾ| ಸ್ಟ್ಯಾನಿ ಡಿಸೋಜ ಅವರು ಮಾತನಾಡಿ, ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯು ತನ್ನ ವಜ್ರ ಮಹೋತ್ಸವ ಆಚರಿಸುತ್ತಿರುವುದ ಒಂದು ವಿಶೇಷ ಮೈಲಿಗಲ್ಲಾಗಿದೆ. ಶಿಸ್ತು, ಶ್ರಮ ಮತ್ತು ಶ್ರದ್ಧೆ ಮೈಗೂಡಿಸಿಕೊಂಡಲ್ಲಿ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ವಜ್ರ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ವಿದ್ಯೆ ಕಲಿತ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ರೆ| ಫಾ| ಕ್ಲಿಫರ್ಡ್ ರೋಷನ್ ಪಿಂಟೋ ಅವರು ಮಾತನಾಡಿ, ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಾದ ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಅವರು ಪ್ಯಾರಾ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಅದೇ ರೀತಿ ಡಾ| ದಯಾನಂದ, ಮಂಜುನಾಥ್ ನಾಯಕ್ ಇವರು ಐಎಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗಣೇಶ್ ನಾಯರ್ ಅವರು ಇಸ್ರೋ ವಿಜ್ಞಾನಿ ಯಾಗಿದ್ದಾರೆ. ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಅವರು ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿದ್ದು, ಶಿವಮೊಗ್ಗ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ| ಧನಂಜಯ ಸರ್ಜಿ ಅವರು ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ನಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ರೆ| ಫಾ| ಫ್ರಾನ್ಸಿಸ್ ನರೋನ್ಹ, ಹಿರಿಯ ವಿದ್ಯಾರ್ಥಿಗಳಾದ ಬಳ್ಳೇಕೆರೆ ಸಂತೋಷ್, ಅಲ್ಪೋನ್ಸ್ ರಾಕೇಶ್ ಡಿಸೋಜ, ಹರ್ಷ, ವಿನ್ಸೆಂಟ್ ರೋಡ್ರಿಗಸ್, ಕಿರಣ್ ಫರ್ನಾಂಡಿಸ್, ಮರಿಯಪ್ಪ, ಚಿರಂಜೀವಿ ಬಾಬು, ಶಾಲಾ ಮುಖ್ಯಶಿಕ್ಷಕ ಶಿಕ್ಷಕ ಹ್ಯೂಬರ್ಟ್ ಮಿರಾಂಡಾ, ಶಿಕ್ಷಕರಾದ ಕಿರಣ್, ಪ್ಯಾಟ್ರಿಕ್, ಮಥಾಯಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
