ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಯಾಜಕ ದೀಕ್ಷೆ ಸ್ವೀಕರಿಸಿದ ರೆ|ಫಾ| ನಿಶಾಂತ್…
ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿರುವ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನ ದೇವಾಲಯ ದಲ್ಲಿ ಏ.೩೦ರ ನಿನ್ನೆ ಬೆಳಗ್ಗೆ ೧೦ ಗಂಟೆಗೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಿಶಾಂತ್ ಆಂಟೋನಿ ಡಿಕಾಸ್ಟ ಅವರು ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ಹಾಗೂ ಶಿಕ್ಷಕಿ ಶ್ರೀಮತಿ ಅನಿತಾ ಮತ್ತು ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿವೃತ್ತ ನೌಕರರಾದ ಶ್ರೀ ಮಾರ್ಕ್ ಡಿಕಾಸ್ಟ್ ಇವರ ಸುಪುತ್ರರಾದ ನಿಶಾಂತ್ ಆಂಟೋನಿ ಡಿಕಾಸ್ಟ ಇವರಿಗೆ ಶಿವಮೊಗ್ಗ -ದಾವಣಗೆರೆ ಹಾಗೂ ಚಿತ್ರದುರ್ಗ ಜಿಗಳನ್ನು ಒಳಗೊಂಡ ಶಿವಮೊಗ್ಗ ಧರ್ಮ ಕ್ಷೇತ್ರದ ಬಿಷಪ್ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೂ ಅವರು ಧರ್ಮ ಕ್ಷೇತ್ರದ ಶ್ರೇಷ್ಠ ಗುರುಗ ಳಾದ ರೆ.ಫಾ. ಸ್ಟ್ಯಾನಿ ಡಿಸೋಜ ಮತ್ತು ಪ್ರಧಾನ ದೇವಾಲಯದಲ್ಲಿ ಉಪಸ್ಥಿತರಿದ್ದ ಧರ್ಮ ಕ್ಷೇತ್ರದ ನೂರಾರು ಹಿರಿಯ ಗುರುಗಳ ಸಮ್ಮುಖದಲ್ಲಿ ಯಾಜಕದೀಕ್ಷೆ ನೀಡಿ ಆಶೀರ್ವದಿಸಿದರು.
ದೇವಾಲಯದಲ್ಲಿ ಯಾಜಕದೀಕ್ಷೆಯ ಪೂಜ ವಿಧಿ ವಿಧಾನಗಳ ನಂತರ ಚರ್ಚ್ ಆವರಣದಲ್ಲಿರುವ ಸ್ನೇಹ ಸದನ ದಲ್ಲಿ ನೂತನ ಧರ್ಮ ಗುರುಗಳಾಗಿ ದೀಕ್ಷೆ ಸ್ವೀಕರಿಸಿದ ರೆ.ಫಾ. ನಿಶಾಂತ್ ಅಂತೋಣಿ ಡಿಕಾಸ್ಟ ಇವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕ್ರೈಸ್ತ ಭಕ್ತರು ಹಾಗೂ ಅಭಿಮಾನಿ ಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ನೂತನ ಧರ್ಮಗುರುಗಳಾದ ರೆ.ಫಾ. ನಿಶಾಂತ್ ಅಂತೋಣಿ ಡಿಕಾಸ್ಟ ಇವರಿಗೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಾರ್ವಜನಿಕ ಗೌರವ ಸ್ವೀಕರಿಸಿ ಮಾತನಾಡಿದ ಪೂಜ್ಯ ಗುರುಗಳು, ತಾವು ಧರ್ಮಾಧ್ಯಕ್ಷರ ಹಾಗೂ ಹಿರಿಯ ಗುರುಗಳ ಮಾರ್ಗದರ್ಶನದಂತೆ ಕ್ರೈಸ್ತ ಧರ್ಮಸಭೆಗೆ ವಿಧೆಯತೆಯಿಂದ ನಡೆದುಕೊಳ್ಳುವ ಜೊತೆಗೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ತಮಗೆ ಗುರು ಮಠದಲ್ಲಿ ಹೆಚ್ಚಿನ ಶಿಕ್ಷಣ ನೀಡಿದ ಗುರುಗಳು, ಉತ್ತಮ ಸಂಸ್ಕಾರ ನೀಡಿದ ತಮ್ಮ ಪೂಜ್ಯ ಪೋಷಕರು ಹಾಗೂ ಸನ್ಯಾಸ ಸ್ವೀಕರಿಸಲು ಪ್ರೇರಣೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರಾಜ್ಯದ ವಿವಿಧೆಡೆಗಳಿಂದ ಧರ್ಮ ಗುರುಗಳು, ಕನ್ಯಾಸ್ತ್ರೀಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
