ತಾಜಾ ಸುದ್ದಿ

ಧರ್ಮಗಳು ದಾರಿ ಬೇರೆ; ಗುರಿ ಒಂದೇ: ಮಾನವೀಯತೆ…

Share Below Link

ವಿಶೇಷ ಲೇಖನ : ಸಿ.ಎಂ. ಮಶ್, ವಕೀಲರು, ಶಿವಮೊಗ್ಗ
ಜನವರಿ ತಿಂಗಳ ಮೂರನೇ ಭಾನುವಾರ ಆಚರಿಸಲ್ಪಡುವ ವಿಶ್ವ ಧರ್ಮ ದಿನ ಕೇವಲ ಒಂದು ಆಚರಣೆ ಅಲ್ಲ. ಅದು ಮನುಷ್ಯನು ಮನುಷ್ಯ ನಾಗಿಯೇ ಉಳಿಯಬೇಕೆಂಬ ಜಾಗತಿಕ ಮನವಿ. ೨೦೨೬ರ ಜನವರಿ ೧೮ರಂದು ಈ ದಿನ ಬಂದಾಗ, ಧರ್ಮಗಳ ನಡುವಿನ ಭೇದಗಳಿಗಿಂತ ಅವು ಸಾರುವ ಮೂಲ ಮಲ್ಯಗಳ ಕಡೆ ಗಮನ ಹರಿಸುವ ಅಗತ್ಯ ಮತ್ತಷ್ಟು ತೀವ್ರವಾಗುತ್ತದೆ.
ಪ್ರಪಂಚದಲ್ಲಿ ಅನೇಕ ಧರ್ಮ ಗಳಿವೆ. ಹೆಸರು, ವಿಧಾನ, ಸಂಪ್ರದಾಯಗಳಲ್ಲಿ ಭಿನ್ನತೆ ಇರಬಹುದು. ಆದರೆ ಮಾನವೀಯತೆ, ಕರುಣೆ, ಸತ್ಯ, ಶಾಂತಿ ಎಂಬ ಮಲ್ಯ ಗಳಲ್ಲಿ ಎಲ್ಲವೂ ಒಂದೇ ನೆಲೆಯಲ್ಲಿ ನಿಂತಿವೆ. ಈ ಅರಿವನ್ನೇ ವಿಶ್ವ ಧರ್ಮ ದಿನ ಸ್ಮರಿಸುತ್ತದೆ. ಧರ್ಮಗಳ ನಡುವಿನ ಸಂವಾದ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮನೋಭಾವ ಈ ದಿನದ ಮೂಲ ಉದ್ದೇಶ.
ಈ ಚಿಂತನೆಯ ಇತಿಹಾಸವನ್ನು ನೆನಪಿಸಿಕೊಂಡಾಗ, ೧೮೯೩ರ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಅನಿವಾರ್ಯವಾಗಿ ನೆನಪಿಗೆ ಬರುತ್ತದೆ. ಆ ವೇದಿಕೆಯಲ್ಲಿ ಭಾರತದಿಂದ ಭಾಗವಹಿಸಿದ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ವಿಶ್ವದ ಗಮನ ಸೆಳೆದರು. ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ ಎಂದು ಅವರು ಮಾತು ಆರಂಭಿಸಿದ ಕ್ಷಣದಿಂದಲೇ ಸಭಾಂಗಣ ಮನವಾಯಿತು. ಆ ಒಂದು ವಾಕ್ಯದಲ್ಲಿ ಉಪನಿಷತ್ತುಗಳ ಸಾರ, ಸನಾತನ ಧರ್ಮದ ವಿಶಾಲತೆ, ವಿಶ್ವಬಂಧುತ್ವದ ತತ್ತ್ವ ಎಲ್ಲವೂ ಸೇರಿಕೊಂಡಿತ್ತು.
ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಂಸತ್ತು ಸಮ್ಮೇಳನದಲ್ಲಿ ವಿವೇಕಾನಂದರು ಹೇಳಿದ ಮಾತುಗಳು ಪಶ್ಚಿಮ ಜಗತ್ತಿಗೆ ಹೊಸ ದರ್ಶನವನ್ನು ಪರಿಚಯಿಸಿತು. ಧರ್ಮ ಎಂದರೆ ದ್ವೇಷವಲ್ಲ, ಧರ್ಮ ಎಂದರೆ ಮಾನವೀಯತೆಯ ಶಿಸ್ತು ಎಂಬ ಸಂದೇಶ ಅಲ್ಲಿ ಗಟ್ಟಿಯಾಗಿ ಕೇಳಿಬಂತು. ಎ ಧರ್ಮಗಳೂ ಸತ್ಯದ ವಿಭಿನ್ನ ದಾರಿಗಳು ಎಂಬ ಅವರ ವಿಚಾರಧಾರೆ, ಧರ್ಮಗಳನ್ನು ಪೈಪೋಟಿಯಲ್ಲಿಟ್ಟು ನೋಡುವ ಮನೋಭಾವಕ್ಕೆ ಸವಾಲು ಹಾಕಿತು. ಅದಕ್ಕೇ ಆ ಮಾತುಗಳು ಅಂದಿಗೂ ಇಷ್ಟವಾದವು, ಇಂದಿಗೂ ಪ್ರಸ್ತುತವಾಗಿವೆ.
ನಮ್ಮ ಸನಾತನ ಪರಂಪರೆ ಸಾವಿರಾರು ವರ್ಷಗಳ ಹಿಂದೆಯೇ ಈ ಚಿಂತನೆಗೆ ರೂಪ ನೀಡಿದೆ. ವಸುದೈವ ಕುಟುಂಬಕಂ ಎಂಬ ಘೋಷಣೆ ಭೂಮಿಯನ್ನು ಒಂದು ಕುಟುಂಬ ವೆಂದು ನೋಡುತ್ತದೆ. ಉಪನಿಷತ್ತುಗಳಲ್ಲಿರುವ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ವಾಕ್ಯ, ಸತ್ಯ ಒಂದೇ ಆದರೆ ಅದನ್ನು ನೋಡುವ ದೃಷ್ಟಿಕೋಣಗಳು ಬೇರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ದರ್ಶನವೇ ಹಿಂದೂ ಸಂಸ್ಕೃತಿಯ ಆತ್ಮ.
ಇತರ ಧರ್ಮಗಳನ್ನು ತಿಳಿದು ಕೊಳ್ಳುವುದರಿಂದ ನಮ್ಮ ಧರ್ಮ ಕುಗ್ಗುವುದಿಲ್ಲ. ಬದಲಾಗಿ, ನಮ್ಮದೇ ಪರಂಪರೆಯ ಮಲ್ಯಗಳು ಇನ್ನಷ್ಟು ಸ್ಪಷ್ಟವಾಗುತ್ತವೆ. ಅeನದಿಂದ ಹುಟ್ಟುವ ಭಯ ಕಡಿಮೆಯಾಗುತ್ತದೆ. ತಿಳುವಳಿಕೆಯಿಂದ ಗೌರವ ಬೆಳೆಯುತ್ತದೆ. ಗೌರವದಿಂದ ಶಾಂತಿ ನೆಲೆಸುತ್ತದೆ. ಈ ಸರಳ ಸತ್ಯವನ್ನೇ ವಿಶ್ವ ಧರ್ಮ ದಿನ ನಮಗೆ ನೆನಪಿಸುತ್ತದೆ.
ಇಂದು ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚುತ್ತಿರುವ ಕಾಲದಲ್ಲಿ, ವಿವೇಕಾನಂದರ ವಿಚಾರಧಾರೆ ಮತ್ತೊಮ್ಮೆ ದಾರಿ ತೋರಿಸುತ್ತದೆ. ಅವರು ಧರ್ಮವನ್ನು ಗೋಡೆಗಳಂತೆ ಕಟ್ಟಲಿಲ್ಲ, ಸೇತುವೆ ಗಳಂತೆ ನಿರ್ಮಿಸಿದರು. ಅದಕ್ಕೇ ಅವರು ಭಾರತಕ್ಕೆ ಮಾತ್ರ ಸೀಮಿತರಾಗಲಿಲ್ಲ; ಜಗತ್ತಿನ ಆತ್ಮಸಾಕ್ಷಿಯ ಭಾಗವಾದರು.
ವಿಶ್ವ ಧರ್ಮ ದಿನ ನಮಗೆ ಕೇಳುವ ಪ್ರಶ್ನೆ ಒಂದೇ. ನಾವು ನಮ್ಮ ಧರ್ಮದ ಸಾರವನ್ನು ಎಷ್ಟು ಅರ್ಥ ಮಾಡಿ ಕೊಂಡಿದ್ದೇವೆ. ಧರ್ಮವನ್ನು ಮನುಷ್ಯನನ್ನು ಒಗ್ಗೂಡಿಸುವ ಶಕ್ತಿಯಾಗಿ ಬಳಸುತ್ತಿದ್ದೇವೆಯೇ, ಅಥವಾ ವಿಭಜಿಸುವ ಆಯುಧ ವನ್ನಾಗಿಸುತ್ತಿದ್ದೇವೆಯೇ ಎಂಬ ಆತ್ಮಪರಿಶೀಲನೆ ಈ ದಿನದ ನಿಜವಾದ ಅರ್ಥ.
ವಕೀಲನಾಗಿ ಪ್ರತಿದಿನ ಕಾನೂನಿನ ಪಠ್ಯ, ವಿಧಿಗಳು, ನ್ಯಾಯದ ತೂಕತಾಳನೆಗಳ ನಡುವೆ ನಿಲ್ಲುವಾಗ, ಧರ್ಮವನ್ನು ನಾನು ನಂಬಿಕೆಯ ಅಂಧತೆಯಾಗಿ ನೋಡಲಾರೆ. ನನ್ನ ದೃಷ್ಟಿಯಲ್ಲಿ ಧರ್ಮವೆಂದರೆ ಮಾನವೀಯ ವಿವೇಚನೆಯ ಮೂಲ. ಕಾನೂನು ನ್ಯಾಯವನ್ನು ನಿರ್ಧರಿಸುತ್ತದೆ, ಧರ್ಮ ನ್ಯಾಯದ ಆತ್ಮವನ್ನು ರೂಪಿಸುತ್ತದೆ. ಕಾನೂನು ಹೊರಗಿನಿಂದ ಶಿಸ್ತು ಕಲಿಸುತ್ತದೆ, ಧರ್ಮ ಒಳಗಿನಿಂದ ಸಂಯಮ ಬೆಳೆಸುತ್ತದೆ. ಈ ಎರಡೂ ಬೇರ್ಪಟ್ಟಿಲ್ಲ. ವಸುದೈವ ಕುಟುಂಬಕಂ ಎಂಬ ಧಾರ್ಮಿಕ ಚಿಂತನೆಯೇ ಸಂವಿಧಾನದ ಸಮಾನತೆ, ಸಹಬಾಳ್ವೆ, ಸಹಿಷ್ಣುತೆಯ ತತ್ತ್ವಗಳಿಗೆ ಮನವಾದ ಬೆಂಬಲ. ಆದ್ದರಿಂದ ಕಾನೂನು ಮತ್ತು ಧರ್ಮ ನನ್ನಲ್ಲಿ ಸಂಘರ್ಷಿಸುವುದಿಲ್ಲ; ಅವು ಪರಸ್ಪರವನ್ನು ತಿದ್ದಿಕೊಂಡು, ಸಮತೋಲನಕ್ಕೆ ತರುತ್ತವೆ. ವಕೀಲನ ವಿವೇಚನೆ ಧರ್ಮದಿಂದ ಮಾನವೀಯತೆಯನ್ನು ಕಲಿಯುತ್ತದೆ; ಧರ್ಮ ಕಾನೂನಿನಿಂದ ಹೊಣೆಗಾರಿಕೆ ಯನ್ನು ಕಲಿಯುತ್ತದೆ.
ವಿಶ್ವ ಧರ್ಮ ದಿನ ನಮ್ಮನ್ನು ಯಾವುದೋ ಒಂದು ಧರ್ಮದ ಕಡೆಗೆ ಕರೆದು ಕೊಂಡೊಯ್ಯುವುದಿಲ್ಲ. ಅದು ನಮ್ಮೊಳಗಿನ ಮಾನವೀಯತೆಯ ಕಡೆಗೆ ಕರೆದೊಯ್ಯುತ್ತದೆ. ಚಿಕಾಗೋದಲ್ಲಿ ವಿವೇಕಾನಂದರು ನಿಂತಿದ್ದದ್ದು ಕೇವಲ ಸನ್ಯಾಸಿಯಾಗಿ ಅಲ್ಲ, ವಿಶ್ವಮನಸ್ಸಿನ ಪ್ರತಿನಿಧಿಯಾಗಿ. ಇಂದು ಆ ಪರಂಪರೆಯನ್ನು ಮುಂದುವರಿಸ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಧರ್ಮವನ್ನು ವಿಭಜನೆಯ ಧ್ವಜವನ್ನಾಗಿಸದೆ, ವಿವೇಚನೆಯ ಬೆಳಕಾಗಿಸಿದಾಗ ಮಾತ್ರ ಸಮಾಜಕ್ಕೆ ನ್ಯಾಯ ಸಿಗುತ್ತದೆ, ಶಾಂತಿ ನೆಲೆಸುತ್ತದೆ. ಕಾನೂನು ನ್ಯಾಯವನ್ನು ಕಾಯುತ್ತದೆ. ಧರ್ಮ ಮಾನವತೆಯನ್ನು ಉಳಿಸುತ್ತದೆ. ಈ ಎರಡೂ ಕೈಹಿಡಿದು ನಡೆದಾಗಲೇ, ಜಗತ್ತು ಕುಟುಂಬವಾಗುತ್ತದೆ. ಧರ್ಮಗಳ ದಾರಿ ಬೇರೆ ಇರಬಹುದು. ಆದರೆ ಗುರಿ ಒಂದೇ. ಆ ಗುರಿಯ ಹೆಸರು ಮಾನವೀಯತೆ.