ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಕಾರ್ಮೆಲ್ ಮಾತೆಯ ಮಹೋತ್ಸವಕ್ಕೆ ಮಳೆಯ ಸಿಂಚನ: ಭಕ್ತಿಯಲ್ಲಿ ಮಿಂದೆದ್ದ ಭಕ್ತಸಾಗರ ….

Share Below Link

(ವಿಶೇಷ ವರದಿ: ರಾಕೇಶ್ ಡಿಸೋಜ – ಮೊ:9448343211)
ಶಿವಮೊಗ್ಗ (ಹೊಸನಾವಿಕ): ನಗರದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಜು.೧೬ರಂದು ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಶ್ರದ್ಧಾಭಕ್ತಿ, ವೈಭವದಿಂದ ಹಾಗೂ ಆತ್ಮೀಯತೆ ಯಿಂದ ಆಚರಿಸಲಾಯಿತು.
ಶಿವಮೊಗ್ಗದ ಪವಿತ್ರ ನೆಲವು ಮತ್ತೊಮ್ಮೆ ಭಕ್ತಿಭಾವದ ಸ್ಪಂದನಗಳಿಂದ ಪುಳಕಿತವಾಯಿತು. ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಆಚರಿಸಲಾದ ಕಾರ್ಮೆಲ್ ಮಾತೆಯ ಮಹೋತ್ಸವ ಈ ಬಾರಿ ಭಕ್ತಿಯೊಂದಿಗೆ ಮಳೆಯ ಆಶೀರ್ವಾದವನ್ನೂ ತಂದುಕೊಟ್ಟ ಒಂದು ಮರೆಮಾಡಲಾಗದ ಆಧ್ಯಾತ್ಮಿಕ ಅನುಭವವಾಯಿತು. ಮಾತೆಯ ಮಹೋತ್ಸವ ನಿಮಿತ್ತ ಕಳೆದ ೧೧ ದಿನಗಳಿಂದ ಚರ್ಚ್ ಆವರಣ ಶೋಭೆಯೊಂದಿಗೆ ಕಂಗೊಳಿಸುತ್ತಿತ್ತು.


ವರ್ಷದಿಂದ ನಿರೀಕ್ಷೆ ಮಾಡುವ ಈ ಧಾರ್ಮಿಕ ಉತ್ಸವ, ಈ ಬಾರಿ ನೂತನ ಭಕ್ತಿಯ ಜ್ವಾಲೆ ಹೊತ್ತಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಬಂದು ದೇವತಾಯಿಯ ಆಶೀರ್ವಾದ ಪಡೆದು ಪುನೀತರಾದರು.
ಈ ಮಹೋತ್ಸವದ ಭಾಗವಾಗಿ ದೇವಮಾತೆಯ ಧ್ವಜಾರೋಹಣ, ನವದಿನ ಪ್ರಾರ್ಥನೆಗಳು, ಪ್ರತಿದಿನವೂ ವಿಶೇಷ ಧ್ಯಾನ ಉಪದೇಶಗಳು ಹಾಗೂ ಭಕ್ತಿಗೀತೆಗಳಿಂದ ಭಕ್ತರನ್ನು ಆಧ್ಯಾತ್ಮಿಕ ವಾಗಿ ಶಕ್ತಿಪೂರ್ಣಗೊಳಿಸಲಾಯಿತು.
ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿದಿನವೂ ವಿಭಿನ್ನ ಆಧ್ಯಾತ್ಮಿಕ ವಿಷಯ, ವಿಶ್ವಾಸ, ಶುದ್ಧತೆ, ಸಹಾನುಭೂತಿ, ಪ್ರಾರ್ಥನೆ ಇತ್ಯಾದಿಗಳ ಕುರಿತು ವಿವಿಧ ಧರ್ಮಕೇಂದ್ರದ ಪೂಜ್ಯ ಗುರುಗಳು ಪ್ರಬೋಧನೆ ನೀಡಿದ್ದು ಕಾರ್ಮೆಲ್ ಮಾತೆಯ ಭಕ್ತರನ್ನು ಭರವಸೆಯೆಡೆಗೆ ಕೊಂಡೊಯಿತು.
ಜು.೧೬ರಂದು ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯ ಸಾನಿಧ್ಯವನ್ನು ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಡುಮಿಂಗ್ ಡಯಾಸ್ ಅವರು ವಹಿಸಿದ್ದರು. ಇವರೊಂದಿಗೆ ವಿವಿಧ ಧರ್ಮಕೇಂದ್ರಗಳ ನೂರಾರು ಸಂಖ್ಯೆಯ ಗುರುಗಳು ಈ ಪವಿತ್ರ ಪೂಜಾವಿಧಿಗಳಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಕಾರ್ಮೆಲ್ ದೇವಮಾತೆಯ ರಾಜಬೀದಿ ಉತ್ಸವ: ದೇವಮಾತೆಯ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಕಾರ್ಮೆಲ್ ಮಾತೆಯ ಪ್ರತಿಮೆ ಮೆರವಣಿಗೆ. ಫಲಫುಷ್ಪಗಳಿಂದ ಸುಂದರವಾಗಿ ಅಲಂಕರಿಸಿದ ದೇವತಾಯಿಯ ಪ್ರತಿಮೆಯ ರಾಜಬೀದಿ ಉತ್ಸವ ನಡೆಸಲಾಯಿತು.
ಕಾರ್ಮೆಲ್ ಮಾತೆಯ ಮಹೋತ್ಸವವು ಹರ್ಷದಿಂದ ಮೈಮರೆತಿತ್ತು. ಭಕ್ತರು ಮಾತೆಯ ಸ್ಮರಣೆಯಲ್ಲಿ ಲೀನರಾಗಿದ್ದರು. ಆಗಲೇ ಆಗಸದಿಂದ ಮಳೆಯ ಸಿಂಚನ ಶುರುವಾಯಿತು. ತಾಯಿ ಮಾತೆಯ ಬಾಗಿಲಿಗೆ ಅರ್ಪಿಸುವ ಹೂವಿಗೆ ಸ್ವತಃ ಆಕಾಶವೇ ತನ್ನ ಜಲಾಂಜಲಿಯನ್ನು ಅರ್ಪಿಸಿದಂತಾಯಿತು.


ದಿನದ ಮುzದ ಮುಸ್ಸಂಜೆ. ಕಾರ್ಮೆಲ್ ಮಾತೆಯ ಅಲಂಕೃತ ಥೇರು ಹೊರಟ ಸಂದರ್ಭದಲ್ಲಿ ಮಳೆಯ ಹನಿಗಳು ನಸುನಗೆ ಬೀರುತ್ತ ಬಂದವು. ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ತಮ್ಮ ಕೈಚಾಚಿ ಆ ಮಳೆ ಹನಿಗಳನ್ನು ಮಾತೆಯ ಆಶೀರ್ವಾದವಾಗಿ ಸ್ವೀಕರಿಸಿದರು.
ಮಳೆ ಮತ್ತು ಭಕ್ತಿಯ ಸಂಯೋಜನೆಯು ಉತ್ಸವದ ವಾತಾವರಣವನ್ನೇ ಬದಲಾಯಿಸಿತು. ಗೀತೆಗಳಲ್ಲಿ ಪ್ರೀತಿ, ಪ್ರಾರ್ಥನೆಯಲ್ಲಿ ಶುದ್ಧತೆ, ಮೆರವಣಿಗೆಯಲ್ಲಿ ನಗು, ಆದರೆ ಎಲ್ಲದರ ಮೇಲೂ ಮಳೆಯ ನವಿಲುಹನಿಗಳಂತೆ ಹಾರಾಡಿದ ಮಾತೆಯ ಸ್ಪರ್ಶ. ಮಳೆಬಿದ್ದರೂ ಯಾರೂ ಕದಲಲಿಲ್ಲ; ಬದಲಾಗಿ ಬಿದ್ದ ಹನಿಗಳನ್ನು ಕೈಯಲ್ಲಿ ಸೆರೆಹಿಡಿದು, ಎದೆಗೆ ಹಚ್ಚಿದರೆಂಥ ಭಾವನೆ! ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಭಕ್ತಿಯ ಭಾವದಿಂದ ಮಳೆಯೊಳಗೇ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
ಬೆಳಿಗ್ಗೆಯಿಂದಲೂ ಕೊಂಚ ಬಿಡುವು ನೀಡಿದ್ದ ವರುಣದೇವ, ಸಂಜೆ ದೇವಮಾತೆಯ ಮೆರವಣಿಗೆ ಹೊರಡುತ್ತಿದ್ದಂತೆ ಶಾಂತಚಿತ್ತದಿಂದ ಮೆಲ್ಲನೆ ಹನಿಗಳನ್ನು ಚಿಮುಕಿಸತೊಡಗಿದ. ಈ ಮಹೋತ್ಸವದ ಸಂದರ್ಭದಲ್ಲಿ ಮಳೆ ಬರುವುದು ಮಾತೆಯ ಅನುಗ್ರಹ ಎಂಬ ನಂಬಿಕೆಗೆ ಮತ್ತೊಂದು ದೃಢತೆ.


ಮಳೆ ಬಂದು ಹೋಗದೆ, ತಂಪಾಗಿಸಿ, ಮನಸ್ಸುಗಳಿಗೆ ನವಚೈತನ್ಯ ನೀಡಿದ ರೀತಿ, ಭಕ್ತರ ಹೃದಯದಲ್ಲಿ ಮಾತೆಯು ಉಳಿದಿರೋ ಮಾಯಾಮಾಧುರಿಯ ಸ್ಫೂರ್ತಿಯ ಅನುಭವವಾಯಿತು. ಪಾದ್ರಿಗಳು- ಕನ್ಯಾಸ್ತ್ರೀಯರು ಮಳೆಯ ನಡುವೆ ಭಕ್ತಿಯ ಗೀತೆಗಳನ್ನು ಹಾಡುತ್ತಿದ್ದರೆ, ಭಕ್ತರ ನೋಟಗಳಲ್ಲಿ ದೈವಿಕ ಉತ್ಸಾಹವಿತ್ತು. ಮಾತೆಯು ತನ್ನ ಮಕ್ಕಳ ಮೇಲೆ ಮಳೆಯ ಹನಿಗಳ ರೂಪದಲ್ಲಿ ಪ್ರೀತಿಯ ಮುತ್ತುಗಳನ್ನು ಸುರಿದ್ಧಾಳೆ ಎಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತು.
ಆ ಮಳೆ ಸಿಡಿಲಿಲ್ಲ, ಗಾಳಿಯಿಲ್ಲ, ಧಾರೆಯಿಲ್ಲದ ಪುಷ್ಪವೃಷ್ಟಿಯಂತೆ ಸುರಿಯಿತು. ಬೆಳಿಗ್ಗೆಯಿಂದ ಬಿಡುವು ನೀಡಿದ್ದ ವರುಣದೇವ, ಸಂಜೆ ಮಾತೆಯ ಮೆರವಣಿಗೆಯ ಹೊತ್ತಿಗೆ ಮಳೆ ಮಿತವಾಗಿ ಸುರಿಯಿತು. ಭಕ್ತರು ಜಪಸರ ಪ್ರಾರ್ಥನೆ ಮಾಡುತ್ತಾ ಮೆರವಣಿಗೆಯಲ್ಲಿಯೇ ತೊಂದರೆಯಿಲ್ಲದೆ ನಡೆದುಕೊಂಡು ಹೋಗಿದರು. ಆ ಕ್ಷಣದಲ್ಲಿ ಪ್ರಾರ್ಥನೆಯ ಶ್ರವಣ, ಮಳೆ ಹನಿ, ಭಕ್ತರ ಭಾವನೆ ಈ ಮೂರೂ ಪ್ರಪಂಚದ ಪ್ರಾರ್ಥನೆಯನ್ನೇ ಪ್ರತಿಧ್ವನಿಸುತ್ತಿದ್ದವು.
ಆ ಮಳೆ ಒಂದು ಮನ ಬೋಧನೆ. ಆತ್ಮದ ತೀಕ್ಷ್ಣತೆಯ ನಡುವೆ ದೇವಮಾತೆಯ ಸಾನಿಧ್ಯವಿರುವುದನ್ನು ಪ್ರಕೃತಿಯೂ ಸ್ಮರಿಸುತ್ತಿದ್ದಂತೆ. ಕಾರ್ಮೆಲ್ ಮಾತೆಯ ಪವಿತ್ರತೆಯ ಛಾಯೆಯಲ್ಲಿ ಮಳೆ ತನ್ನ ಶುದ್ಧತೆಯಿಂದ ಭಕ್ತರ ಹೃದಯವನ್ನೂ ತೊಳೆಯಿತು.
ಈ ಮಳೆ, ಉತ್ಸವಕ್ಕೆ ಸ್ವಾಭಾವಿಕ ಶುದ್ಧತೆ ಮಾತ್ರವಲ್ಲ; ಭಕ್ತರ ಆತ್ಮವನ್ನೂ ಮೃದುವಾಗಿ ಸ್ಪರ್ಶಿಸಿದ ನುಡಿಮುತ್ತಿನಂತಿತ್ತು. ಪ್ರತಿಯೊಬ್ಬ ಭಕ್ತನ ಮನಸ್ಸು ಮಣ್ಣಿನ ಸುಗಂಧದೊಂದಿಗೆ ಪ್ರಾರ್ಥನೆಯ ತುದಿಗೆ ತಲುಪಿದಂತಾಯಿತು.


ಮಾತೆಯ ಪ್ರಾರ್ಥನೆ ಮಳೆಯ ಹನಿಗಳಂತೆ ಶಾಂತ, ಸಹಜ, ಆದರೆ ಆಳವಾದ ಶಕ್ತಿಯುಳ್ಳದು.
ಅದೊಂದು ಮಳೆ ಮಾತ್ರವಲ್ಲ. ಮಾತೆಯ ಪ್ರೀತಿಯ ನೇರ ಅನಿಸಿಕೆ: ದೇವಮಾತೆಯ ತಂಪು ಸ್ಪರ್ಶ. ಅವಳ ಕರುಣೆಯ ಪಯಸ್ವಿನಿ. ಅವಳ ಸಾನಿಧ್ಯದ ಮನ ಮಧುರ ನುಡಿಗಳ ಸರಣಿ. ಮಹೋತ್ಸವದ ಅಂತ್ಯಕ್ಕೆ, ಮಾತೆಯ ಪ್ರತಿಮೆಯನ್ನು ಮಳೆಯಲ್ಲಿಯೇ ಮತ್ತೆ ಚರ್ಚಿಗೆ ವಾಪಸ್ಸು ಕರೆದೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಭಕ್ತರು ಕನ್ನಡ, ಕೊಂಕಣಿ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ದೇವತಾಯಿಗೆ ಜಪಸರ ಪ್ರಾರ್ಥನೆ, ಭಕ್ತಿಗೀತೆ, ಭಜನೆ ಮಾಡುತ್ತಾ ಹೆಜ್ಜೆಹಾಕುತ್ತಿದ್ದರು. ಹಾಡುಗಳು ಮುಗಿದರೂ ಹೃದಯದಲ್ಲಿ ಮಾತೆಯ ಮಳೆಯ ಧ್ವನಿ ಮುಂದುವರಿದಂತಿತ್ತು.
ವಿವಿಧ ಧರ್ಮೀಯ ಭಕ್ತರು ಮಾತೆಗೆ ಸುತ್ತಿ ಹಾಡುತ್ತಾ ಸಾಗಿದ ಮೆರವಣಿಗೆಯಲ್ಲಿ ಯಾವುದೇ ಕರ್ಕಷ ಮ್ಯೂಸಿಕ್ ಅಥವಾ ಡಿಜೆ ಇರಲಿಲ್ಲ. ಆಕ್ರೋಷ ಭರಿತ ಘೋಷಣೆಗಳಿರಲಿಲ್ಲ, ಯಾವುದೇ ಧರ್ಮ ಅಥವಾ ಧರ್ಮೀಯರ ಕುರಿತು ನಿಂದನಾತ್ಮಕ ಘೋಷಣೆ ಇರಲಿಲ್ಲ, ಪೊಲೀಸರು ಯಾವುದೇ ಆಂತಕವಿಲ್ಲದೆ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರೆ, ಬೀದಿಬದಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು ನಿರ್ಭಯವಾಗಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ದೇವಮಾತೆಯ ಥೇರು ಸಮೀಪಿಸುತ್ತಿದ್ದಂತೆಯೇ ದಾರಿಯಲ್ಲಿ ನಡೆದುಹೋಗುತ್ತಿದ್ದ ಜನಸಾಮಾನ್ಯರು ತಮ್ಮ ಪಾದರಕ್ಷೆಗಳನ್ನು ಬದಿಗಿಟ್ಟು ಮಾತೆಗೆ ನಮಸ್ಕರಿಸುತ್ತಿದ್ದದ್ದು ದೇವಮಾತೆ ಕುರಿತ ಪ್ರಾರ್ಥನೆ – ಭಜನೆ ಸರ್ವಧರ್ಮೀಯರ ಭಾವೈಕ್ಯತೆ ಎದ್ದು ಕಾಣುತ್ತಿತ್ತು.
ಮಾತೆಯ ಉತ್ಸವ ಹಾಗೂ ಮಳೆಯ ಸಂತಸದ ಅನುಭವ ಭಕ್ತರ ಹೃದಯದಲ್ಲಿ ದೇವಮಾತೆಯ ಪ್ರೀತಿ ಹಾಗು ಪ್ರಾರ್ಥನೆಯ ಹೊಸ ಅಧ್ಯಾಯವನ್ನೇ ಆರಂಭಿಸಿದಂತಾಯಿತು.


ಹಬ್ಬಕ್ಕೆ ದೂರದೂರುಗಳಿಂದ ಬಂದು ನೆಂಟರು… ಸ್ನೇಹಿತರು… ಮಾತೆಯ ಮಡಿಲಿಗೆ ಭಕ್ತರ ಸಾಗರ: ಕಾರ್ಮೆಲ್ ಮಾತೆಯ ಮಹೋತ್ಸವ ಎಂದರೆ ಕೇವಲ ಚರ್ಚ್ ಆವರಣದ ಹಬ್ಬವಲ್ಲ. ಅದು ಹೃದಯಗಳಿಂದ ಹೃದಯಗಳಿಗೆ ಹರಡುವ ಭಾವಪೂರ್ಣ ಸೇತುವೆ. ಈ ಹಬ್ಬದ ದಿನಗಳಲ್ಲಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಾರ್ಥನೆಯ ತೀರ್ಥಕ್ಷೇತ್ರವಾಯಿತು.
ದೂರದೂರಿಂದ ಬಂದು ನೆಂಟರು, ಸ್ನೇಹಿತರು, ಊರ ಬಿಡಿದ ಮಕ್ಕಳು, ವಿದೇಶದಲ್ಲಿ ನೆಲೆಸಿದವರು ಎಲ್ಲರೂ ತಾಯಿಯ ಆಶೀರ್ವಾದ ಪಡೆಯಲು ಶಿವಮೊಗ್ಗೆಯತ್ತ ಹೆಜ್ಜೆಹಾಕಿದ್ದರು. ಇದು ಕೇವಲ ಒಂದು ಧಾರ್ಮಿಕ ಆಚರಣೆ ಅಲ್ಲ, ಕುಟುಂಬಗಳ ಮಿಲನಕ್ಕೂ ವೇದಿಕೆಯಾಗಿತ್ತು.
ಚರ್ಚ್ ಆವರಣದಲ್ಲಿ ಹಬ್ಬದ ಗರ್ಜನೆ ಇದ್ದರೂ ಮಧ್ಯೆ ಮಧ್ಯೆ ನಗು, ಆಲಿಂಗನ, ಮಕ್ಕಳ ಓಟ, ಹಳೆಯ ನೆನೆಪಿನ ಮಾತುಗಳು ಎಲ್ಲವೂ ಭಕ್ತಿಯ ಹತ್ತಿರವೇ ಹೃದಯ ಸಂಬಂಧಗಳ ಹಬ್ಬವನ್ನೂ ಹುಟ್ಟಿಸಿದವು. ನಗರದ ಬಹುತೇಕ ಮನೆಗಳಲ್ಲಿ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.


ಭಕ್ತರು ಹೂವಿನ ಹಾರಗಳೊಂದಿಗೆ ದೇವತಾಯಿಗೆ ತಮ್ಮ ನಮನ ಸಲ್ಲಿಸಿದರು. ಗೀತಾರ್ಚನೆ, ದೀಪಾರಾಧನೆ ಹಾಗೂ ಧ್ಯಾನ ಪಠಣಗಳ ನಡುವೆ ಮೆರವಣಿಗೆಯು ಭಕ್ತರ ಮನಸ್ಸಿನಲ್ಲಿ ದೇವೀಯ ಅನುಭವದ ಹೊಳಪು ಮೂಡಿಸಿತು.
ಕಾರ್ಮೆಲ್ ಮಾತೆಯ ಮಹೋತ್ಸವವು ಭಕ್ತರಲ್ಲಿ ತೀವ್ರವಾದ ನಂಬಿಕೆ, ಶರಣಾಗತಿ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಮೂಡಿಸುತ್ತಿದೆ. ಅನೇಕರು ಸ್ಕಾಪುಲರ್ ಅನ್ನು ಧರಿಸಿ ತಾಯಿಯ ಆಶೀರ್ವಾದಕ್ಕಾಗಿ ದೇವರಿಗೆ ತಮ್ಮನ್ನೇ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಮಾತೆಯ ಪ್ರಾರ್ಥನೆಯ ಶಕ್ತಿಯಿಂದ ತಮ್ಮ ಜೀವನದ ಸಂಕಟಗಳಿಗೆ ಪರಿಹಾರ ದೊರೆತಿರುವ ಅನುಭವಗಳನ್ನು ಹಲವು ಭಕ್ತರು ಹಂಚಿಕೊಂಡರು.
ಮಾತೆಯ ಪವಿತ್ರತೆ; ಶ್ರದ್ಧೆಯ ಪಥದತ್ತ: ಈ ಮಹೋತ್ಸವವು ಶಿವಮೊಗ್ಗದ ಕ್ರೈಸ್ತ ಸಮುದಾಯಕ್ಕೆ ಭಕ್ತಿ, ಏಕತೆ, ಮತ್ತು ಆತ್ಮಚಿಂತನದ ಮಾದರಿ ಯಾಗಿದೆ. ಕಾರ್ಮೆಲ್ ಮಾತೆ ತನ್ನ ಮುzದ ಮಕ್ಕಳ ಕೈ ಹಿಡಿದು ದೇವಪಥದತ್ತ ನಡಿಸುತ್ತಾಳೆ ಎಂಬ ಭರವಸೆ ಇಲ್ಲಿಯ ಭಕ್ತರಲ್ಲಿ ಇನ್ನಷ್ಟು ಬಿಗಿದಿದೆ. ಮಾತೆಯೇ, ನಾವು ನಿಮ್ಮ ಭಕ್ತರಾಗುತ್ತೇವೆ. ನಿನ್ನ ಆಶೀರ್ವಾದದ ಹನಿಗಳು ನಮ್ಮ ಹೃದಯದಲ್ಲಿ ನಿತ್ಯವಾಗಲಿ. ಮಾತೆಯ ಪ್ರಾರ್ಥನೆ ನಮಗೆ ಆಳವಾದ ಶಾಂತಿಯ ದಾರಿ ತೋರಿಸಲಿ ಎಂಬ ಹಾರೈಕೆಗಳ ನಡುವೆ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಚರ್ಚ್ ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಭಕ್ತಿಯ ಶ್ರೇಷ್ಠ ಉದಾಹರಣೆಯಾಗಿ ರೂಪಿಸಿದೆ.
ಅಂತಿಮವಾಗಿ ದೇವಮಾತೆಯ ಥೇರು ಚರ್ಚ್‌ಗೆ ಮರಳಿದ ನಂತರ ಪವಿತ್ರ ಪರಮಪ್ರಸಾದದ ಆರಾಧನೆಯಲ್ಲಿ ಭಕ್ತಿಯಿಂದ ಪಾಲ್ಗೊಂಡ ಭಕ್ತರು ದೇವರ ಆಶೀರ್ವಾದ ಪಡೆದು ಪುನೀತರಾದರು. ಚರ್ಚ್ ಆವರಣದಲ್ಲಿ ವಿಶೇಷವಾಗಿ ಅತ್ಯಾಕರ್ಷಕ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿ ಉತ್ಸವಕ್ಕೆ ತೆರೆ ಎಳೆಯಲಾಯಿತು.