ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಿ..
ಶಿವಮೊಗ್ಗ : ರೇಣುಕಸ್ವಾಮಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಜಿಲ್ಲಾ ಬೇಡ ಜಂಗಮ ಸಮಾಜ, ಶಿವಾಲಯ ಸೇವಾ ಸಮಿತಿ, ಸೃಷ್ಠಿ ಮಹಿಳಾ ಸಮಾಜ, ಕದಳಿ ಸಮಾಜ, ಜಿಲ್ಲಾ ಮಹಿಳಾ ಜಂಗಮ ಸಮಾಜ ಹಾಗೂ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳು ಇಂದು ಬಿಳಕಿ ಶ್ರೀಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು. ನಗರದ ವೀರಶೈವ ಕಲ್ಯಾಣ ಮಂದಿರದಿಂದ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಗೋಪಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಡಿಸಿ ಕಚೇರಿ ಯವರೆಗೆ ಪ್ರತಿಭಟನೆ ನಡೆಸಿದರು.
ಪ್ರತಿಭನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ರಾಜ್ಯ ಸರ್ಕಾರ ಈ ಒಂದು ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡ ಬಾರದು, ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಕೊಲೆ ಆರೋಪಿಗಳಿಗೆ ಕಾನೂನೂ ರೀತ್ಯಾ ಕಠಿಣ ಶಿಕ್ಷೆ ವಿಧಿಸ ಬೇಕು. ಕಣ್ಣೀರಿನಲ್ಲಿ ದಿನದೂಡುತ್ತಿರುವ ರೇಣುಕಾ ಸ್ವಾಮಿ ಕುಟುಂಬದ ಸದಸ್ಯರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದರು.
ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ಅಮಾನುಷವಾಗಿ ಕೊಲೆಗೈದ ನಟ ದರ್ಶನ್ ಹಾಗೂ ಆತನ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ಷುಲ್ಲಕ ಕಾರಣಕ್ಕೆ ಚಿತ್ರಹಿಂಸೆ ನೀಡಿ, ನರಳಿ ಸಾಯುವಂತೆ ಮಾಡಿರು ವುದು ರಾಕ್ಷಸೀ ಪ್ರವೃತ್ತಿಯಾಗಿದ್ದು, ನೊಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲು ಆಗ್ರಹಿಸಿದರು.
ಚಿತ್ರನಟರು ಸಮಾಜಕ್ಕೆ ಮಾದರಿಯಾಗಬೇಕು. ಆದರೆ, ಉಗ್ರವಾದಿಗಿಂತ ಕೀಳಾಗಿ ವರ್ತಿಸಿದ್ದಾರೆ. ಚಿತ್ರರಂಗದಿಂದ ಅವರನ್ನು ಅಮಾನತ್ತು ಮಾಡ ಬೇಕು. ಯಾವುದೇ ಪ್ರಭಾವಕ್ಕೆ ಮಣಿಯದೇ ಸಂಬಂಧಿಸಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಆಯನೂರು ಮಂಜು ನಾಥ್, ಪ್ರಮುಖರಾದ ಎಸ್.ರುದ್ರೇಗೌಡ, ಎಸ್.ಎಸ್. ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ಹೆಚ್.ಎಂ. ಚಂದ್ರಶೇಖರಪ್ಪ, ಸತೀಶ್ ಹಿರೇಮಠ್, ಹೆಚ್.ಸಿ. ಯೋಗೀಶ್, ರುದ್ರೇಶ್, ಹೆಚ್. ವಿ. ಮಹೇಶ್ವರಪ್ಪ, ಮುರುಗೇಶ್, ಕೆ.ಆರ್. ಸೋಮನಾಥ್, ಸುಜಯ ಪ್ರಸಾದ್, ಶಿವರಾಜ್, ಮಲ್ಲಿಕಾರ್ಜುನ ಸ್ವಾಮಿ, ರತ್ನಮ್ಮ, ಶೀಲ ಜಗದೀಶ್, ಮಹೇಶ್ ಮೂರ್ತಿ, ವೈ.ಹೆಚ್. ನಾಗರಾಜ್, ಬಳ್ಳಕೆರೆ ಸಂತೋಷ್, ರಾಜೇಶ್ ಕಾಮಂತ್, ರೇಣುಕಾ ನಾಗರಾಜ್, ಬಿ. ಚನ್ನಬಸಪ್ಪ, ಅನಿತಾ ರವಿಶಂಕರ್ ಮತ್ತಿತರರಿದ್ದರು.