ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ
ಸೊರಬ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರಿಗೆ ಜೀವನ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರದೆ ಕನಿಷ್ಠ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಅಂಚೆ ನೌಕರರು ಮಂಗಳವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮೂರ್ತಿ ಹಾಲಗಳಲೆ ಮಾತ ನಾಡಿ, ಹತ್ತು ಹಲವು ವರ್ಷ ಗಳಿಂದ ಕನಿಷ್ಠ ಗೌರವಧನ ಪಡೆದು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರ ಹಿತ ಕಾಪಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ.
ಕಮ ಲೇಶ್‌ಚಂದ್ರ ವೇತನ ಆಯೋಗ ನೀಡಿರುವ ವರದಿಯನ್ನು ೨೦೧೬ ರಿಂದ ಅನುಷ್ಠಾನಗೊಳಿಸಬೇಕು. ನಿವೃತ್ತಿ ಹೊಂದಿದ ನೌಕರನಿಗೆ ಕನಿಷ್ಠ ರೂ.೫ ಲಕ್ಷ ವಿಮೆ ನೀಡ ಬೇಕು ಎಂದು ಒತ್ತಾಯಿಸಿದರು.
ಇಲಾಖೆಯಲ್ಲಿ ೨೦ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನೌಕರನಿಗೆ ಸಮನಾಗಿ ಹೊಸದಾಗಿ ಸೇರುವ ನೌಕರನಿಗೂ ಒಂದೇ ವೇತನ ನೀಡಲಾಗುತ್ತಿದೆ. ಸುದೀರ್ಘ ಸೇವೆ ಪರಿಗಣಿಸಿ ಹಿರಿಯ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.
ಗ್ರಾಮೀಣ ಅಂಚೆ ನೌಕರರಾದ ಸಿ.ಎನ್. ಪಾರ್ವತಿ, ಉಮಾಮಹೇಶ್ವರ ಭಟ್ ಹರೀಶಿ, ನಾಗರಾಜ ತಲ್ಲೂರು, ಅಶೋಕ ಜಡೆ, ಪ್ರಿಯಾಂಕ ತಲಗುಂದ, ಹನುಮೇಶ್, ಮರುಗೇಂದ್ರಪ್ಪ ಮಾವಲಿ, ಶಿಲ್ಪಾವತಿ, ಮುದ್ದಪ್ಪ ಜಡೆ, ಅಮಿತ್ ಜಡೆ, ಕೆ.ಪಿ. ಸವಿತಾ ಆನವಟ್ಟಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.