ಭದ್ರಾ ಅಭಯಾರಣ್ಯದಲ್ಲಿ ಆನೆ ವಿಹಾರ ಧಾಮಕ್ಕೆ ಪ್ರಸ್ತಾವನೆ…
ಶಂಕರಘಟ್ಟ: ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ ಒಂದು ಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.
ಶಂಕರಘಟ್ಟದ ಕುವೆಂಪು ವಿವಿ ಸಭಾಂಗಣದಲ್ಲಿಂದು ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಆನೆಗಳಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು ೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ವಿಹಾರ ಧಾಮ ಅಂದರೆ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ಆನೆ ವಿಹಾರ ಧಾಮದ ಸುಮಾರು ೫ ಸಾವಿರ ಎಕರೆ ಪ್ರದೇಶ ದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಲಾಗು ವುದು ಮತ್ತು ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಭದ್ರಾ ಹುಲಿ ಅಭಯಾರಣ್ಯ:
ಭದ್ರಾ ಹುಲಿ ಅಭಯಾರಣ್ಯ ಒಂದು ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯ ವಿಶಾಲವಾದ ಸುಭದ್ರ ಅರಣ್ಯವಾಗಿದೆ. ಇದು ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಕರ್ನಾಟಕ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ ೨ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು ೫೬೩ ಹುಲಿಗಳಿವೆ. ಅಳಿವಿನಂಚಿನಲ್ಲಿ ರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ೧೯೭೩ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ ೫೦ ವರ್ಷ ತುಂಬಿರು ವುದು ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ ಎಂದರು.
೧೯೮೦ರಲ್ಲಿ ದೇಶದಲ್ಲಿ ಕೇವಲ ೧,೮೨೭ರಷ್ಟಿದ್ದ ಹುಲಿಗಳ ಸಂಖ್ಯೆ ಈಗ ೩ಸಾವಿರ ದಾಟಿದೆ. ಇದು ದೇಶದ ಅರಣ್ಯ ಇಲಾಖೆಯ ಸಿಬ್ಬಂದಿಯ ಪರಿಶ್ರಮದ ಫಲ ಎಂದ ಸಚಿವರು ರಾಜ್ಯದಲ್ಲಿ ಕೂಡ ಹುಲಿಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹಿಂದೆ ಚರ್ಮಕ್ಕಾಗಿ, ಉಗುರಿಗಾಗಿ ಹುಲಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇದನ್ನು ಮನಗಂಡು ಅರಣ್ಯ ಇಲಾಖೆ ರಾಜ್ಯದ ೫ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ೨೦೦ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ಅಂದರೆ ಆಂಟಿ ಪೋಚಿಂಗ್ ಕ್ಯಾಂಪ್ ತೆರೆದಿದೆ. ಇದರಿಂದ ಕಳ್ಳಬೇಟೆ ನಿಂತಿದ್ದು, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವಿವರಿಸಿದರು.
ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೆ ೧೬ ಗ್ರಾಮಗಳ ೭೩೬ ಕುಟುಂಬ ಗಳು ವಾಸವಿದ್ದು, ಆ ಕುಟುಂಬಗಳು ಸ್ವ ಇಚ್ಛೆಯಿಂದ ಭದ್ರಾ ಪುನರ್ವಸತಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಹಾಗೂ ಮಳಲಿ ಚನ್ನೇನಹಳ್ಳಿ ಗ್ರಾಮಗಳಿಗೆ ಸ್ಥಳಾಂತರ ಗೊಂಡಿರುತ್ತಾರೆ. ಇದೊಂದು ಭಾರತದಲ್ಲಿಯೇ ಅತ್ಯಂತ ಯಶಸ್ವಿ ಪುನರ್ವಸತಿ ಯೋಜನೆಯಾಗಿದ್ದು, ಹುಲಿ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದರು.
೪೦ ಹುಲಿಗಳ ತಾಣ:
ಭದ್ರಾ ಅರಣ್ಯವಾಸಿಗಳ ಪುನರ್ವಸತಿ ಯಾದ ನಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷ ಗಣನೀಯವಾಗಿ ಕಡಿಮೆ ಯಾಗಿದ್ದು, ಆರಂಭದಲ್ಲಿ ೮ ಹುಲಿಗಳನ್ನು ಹೊಂದಿದ್ದ ಈ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ ೪೦ ಹುಲಿಗಳಿವೆ. ಇದಕ್ಕೆ ಕಾರಣ ಹುಲಿಗಳ ಆವಾಸಸ್ಥಾನದ ಸಂರಕ್ಷಣೆಯೇ ಆಗಿದೆ. ಇಲ್ಲಿ ದಟ್ಟವಾದ ಕಾನನವಿದ್ದು, ಸುಮಾರು ೪೦೦ ಕ್ಕೂ ಅಧಿಕ ಆನೆಗಳಿವೆ ಎಂದು ಎಂದರು.
ಭದ್ರಾ ರಜತ ಮಹೋತ್ಸವ ಸ್ಮರಣಾರ್ಥ ಅಂಚೆ ಚೀಟಿ, ಅಂತಜಲ ತಾಣ ಮತ್ತು ಕಿರು ಹೊತ್ತಿಗೆಗಳನ್ನು ಸಚಿವ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸಂಗಮೇಶ್, ಶಾರದಾ ಪೂರ್‍ಯನಾಯ್ಕ, ಬಲ್ಕೀಷ್ ಬಾನು, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮತ್ತಿತರರಿದ್ದರು.