ಶವ ಸಂಸ್ಕಾರಕ್ಕೂ ದರಪಟ್ಟಿ ಪ್ರಕಟ: : ಮಾರಿಕಾಂಬಾ ಸಮಿತಿ ವಿರುದ್ಧ ಸಿಡಿದೆದ್ದ ಸಿದ್ದಪ್ಪ
ಸಾಗರ: ಇಲ್ಲಿನ ಐತಿಹಾಸಿಕ ಪ್ರಸಿದ್ದ ಶ್ರೀ ಮಾರಿಕಾಂಬಾ ಜತ್ರೆ ರಾಜ್ಯದ ಪ್ರಸಿದ್ಧಿ ಪಡೆದಿದ್ದು, ದೇವಸ್ಥಾನಕ್ಕೆ ದೊಡ್ಡ ಭಕ್ತ ಸಮೂಹವೇ ಇದೆ. ಇಂಥ ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿರುವ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲು ದರಪಟ್ಟಿ ನಿಗದಿ ಮಾಡಿರುವುದು ಖಂಡನೀಯ ಎಂದು ನಗರಸಭೆ ಮಾಜಿ ಸದಸ್ಯ ಕೆ. ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಜತ್ರೆ ಇನ್ನಿತರೆ ದಿನಗಳಲ್ಲಿ ಹೇರಳ ಆದಾಯ ಬರುತ್ತಿದ್ದು, ಯಾವುದೇ ಜನಪರ ಕೆಲಸವನ್ನೂ ಕೈಗೊಳ್ಳುತ್ತಿಲ್ಲ. ಮಾರಿಕಾಂಬಾ ರುದ್ರಭೂಮಿಯಲ್ಲಿ ಶವಸಂಸ್ಕಾರವನ್ನು ಸೇವಾ ಮನೋಭಾವದಿಂದ ಮಾಡಬೇಕೇ ಹೊರತೂ ಲಾಭದ ದೃಷ್ಟಿಯಿಂದ ನೋಡ ಬಾರದು. ಇದಕ್ಕೆ ದರಪಟ್ಟಿ ನಿಗದಿ ಗೊಳಿಸಿರುವುದು ಭಕ್ತ ವೃಂದಕ್ಕೆ ಮಾಡಿದ ಅವಮಾನ ಎಂದು ಖಂಡಿಸಿದರು.
ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾಗಿ ಹಿಂದೆ ನೀಲಪ್ಪ, ಕೆ.ಎಂ.ಲಿಂಗಪ್ಪ, ಸುಭಾಶ್ಚಂದ್ರ, ಪುತ್ತೂರಾವ್ ಮುಂತಾದವರು ಉತ್ತಮವಾಗಿ ಕೆಲಸ ಮಾಡಿ ದೇವಸ್ಥಾನಕ್ಕೆ ಆಸ್ತಿ ಮಾಡಿಕೊಟ್ಟಿ zರೆ. ಆಡಳಿತದಲ್ಲಿ ಯಾವುದೇ ಚ್ಯುತಿ ಬರದ ರೀತಿಯಲ್ಲಿ ದೇವಸ್ಥಾನದ ಆಗುಹೋಗುಗಳನ್ನು ನಿರ್ವಹಿಸಿದ್ದರು. ಆದರೆ ಈಗಿನ ಸಮಿತಿಯವರು ಮೂರು ಜತ್ರೆ ಮಾಡಿದರೂ ಈವರೆಗೂ ಸರಿಯಾದ ಲೆಕ್ಕಪತ್ರ ನೀಡಿಲ್ಲ. ಈ ಬಾರಿಯ ಜತ್ರೆ ಮುಗಿದು ಮೂರು ತಿಂಗಳೊಳಗೆ ಲೆಕ್ಕಪತ್ರ ನೀಡುವುದಾಗಿ ಹೇಳಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿ ಕೊಂಡಿಲ್ಲ. ಈ ಬಾರಿಯ ಜತ್ರೆಯಲ್ಲಿ ಹೇರಳವಾಗಿ ಆದಾಯ ಬಂದಿದೆ. ಹೀಗಿದ್ದೂ ದೇವಸ್ಥಾನಕ್ಕೆ ಸಂಬಂಧಿಸಿ ಯಾವುದೇ ರಚನಾತ್ಮಕ ಅಭಿವೃದ್ಧಿ ಕೆಲಸ ಕೈಗೊಳ್ಳಲಿಲ್ಲ. ಈ ಸಮಿತಿಯು ಸಾರ್ವಜನಿಕರಿಗೆ ಕೂಡಲೇ ಲೆಕ್ಕಪತ್ರ ನೀಡಿ ಗೌರವಯುತವಾಗಿ ಕೆಳಗಿಳಿದು ಬೇರೆಯವರಿಗೆ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.
ಶವಸಂಸ್ಕಾರ ಶುಲ್ಕ ರೂ. ೨೦೦೦ ನಿರ್ವಹಣಾ ಶುಲ್ಕ ರೂ.೧೪೦೦ ವಾಹನ ಬಾಡಿಗೆ ರೂ.೬೦೦ ಕೋಲ್ಡ್ ಸ್ಟೋರೇಜ್ ರೂ.೧೫೦೦ ವಿಐಪಿ ರೂ.೨೦೦೦ ಹೀಗೆ ದರ ಪಟ್ಟಿ ಮಾಡಿರುವುದು ಬೇಸರದ ಸಂಗತಿ. ಹೋಟೆಲ್, ಲಾಡ್ಜ್‌ಗಳಲ್ಲಿ ದರಪಟ್ಟಿ ಹಾಕುವುದು ಸಹಜ. ಆದರೆ ದೇವಸ್ಥಾನಕ್ಕೆ ಸಂಬಂಧಿಸಿದ ಜನಸೇವೆಗಾಗಿ ಇರುವ ಕಾರ್ಯಕ್ಕೆ ದರಪಟ್ಟಿ ಹಾಕಿರುವುದು ಸಮಿತಿಯ ವ್ಯಾವಹಾರಿಕ ಮನೋಭಾವಕ್ಕೆ ಸಾಕ್ಷಿಯಾಗಿದೆ. ನಿರ್ವಹಣಾ ವೆಚ್ಚ ವನ್ನು ಕಟ್ಟಿಸಿಕೊಂಡು ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು. ತಕ್ಷಣ ವ್ಯವಸ್ಥಾಪಕ ಸಮಿತಿ ಈ ದರಪಟ್ಟಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜತ್ರಾ ಸಮಿತಿ ೧೦ ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ತೆರಿಗೆ ಪಾವತಿಸಿದೆ. ಆದರೆ ಜತ್ರೆ ಮುಗಿದು ೪ ತಿಂಗಳು ಕಳೆದರೂ ಲೆಕ್ಕಪತ್ರ ನೀಡಿಲ್ಲ. ಸಮಿತಿಯ ಆಡಳಿತ ನಿರ್ವಹಣೆ ಪಾರದರ್ಶಕ ವಾಗಿಲ್ಲ. ಕೆಲವರು ದೇವಸ್ಥಾನವನ್ನು ತಮ್ಮ ಮನೆ ಎಂದು ಭಾವಿಸಿ ಕೊಂಡು ವ್ಯವಹಾರಕ್ಕೆ ಬಳಸಿ ಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸಿದ್ದಪ್ಪನವರು ಆರೋಪಿಸಿದರು. ಹಾಲಿ ಸಮಿತಿ ತಕ್ಷಣ ಸರ್ವಸದಸ್ಯರ ಸಭೆ ಕರೆದು ಲೆಕ್ಕಪತ್ರ ಮಂಡಿಸಿ, ಹೊಸ ಸಮಿತಿ ನೇಮಕ ಮಾಡಬೇಕೆಂದು ಅವರು ಒತ್ತಾಯಿಸಿದರು.
ಪ್ರಮುಖರಾದ ಉಮೇಶ್, ಪಾರ್ವತಿ, ದೀಪಾ ಹಾಜರಿದ್ದರು.