ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಎಸ್‌ವೈ ಮನೆಗೆ ಕಲ್ಲೆಸೆತ:ಪೊಲೀಸ್ ವೈಫಲ್ಯವೇ ಕಾರಣ: ರಮೇಶ್ ನಾಯ್ಕ

Share Below Link

ಶಿಕಾರಿಪುರ : ಬಣಜಾರ್ ಸಮುದಾಯದ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಿ ಶ್ರಮಿಸಿದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟದ ಪ್ರಕರಣ ದುರಾದೃಷ್ಟಕರವಾಗಿದ್ದು, ಘಟನೆಗೆ ಪೊಲೀಸ್ ವೈಫಲ್ಯ ಪ್ರಮುಖ ಕಾರಣವಾಗಿದೆ ಎಂದು ರಾಜ್ಯ ಬಣಜಾರ್ ಅಭಿವೃದ್ದಿ ನಿಗಮದ ನಿರ್ದೇಶಕ ರಮೇಶ್ ನಾಯ್ಕ ನಳ್ಳಿನಕೊಪ್ಪ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ರಾಜ್ಯ ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮೂಲಕ ಒಳಮೀಸಲಾತಿಯನ್ನು ಕಲ್ಪಿಸಲು ಕೈಗೊಂಡ ಸಚಿವ ಸಂಪುಟದ ನಿರ್ಣಯವನ್ನು ಅಂಗೀಕರಿಸಲು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ ಹಿನ್ನಲೆಯಲ್ಲಿ ಮೀಸಲಾತಿಯಲ್ಲಿ ಅನ್ಯಾಯವಾಗಲಿದೆ ಎಂದು ಬಣಜಾರ್ ಸಮಾಜದ ಸ್ವಾಮೀಜಿ, ತಾಲೂಕು ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋಮವಾರ ಪಟ್ಟಣದಲ್ಲಿ ಶಾಂತಿಯುತವಾಗಿ ಪ್ರತಿಭಟಿಸಿ ಮನವಿ ಸಲ್ಲಿಸುವ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ತಿಳಿಸಿದರು.
ಬಹು ದೊಡ್ಡ ಜನಾಂಗಕ್ಕೆ ಸರ್ಕಾರದ ಒಳಮೀಸಲಾತಿಯಿಂದ ಅನ್ಯಾಯವಾಗಲಿದೆ ಎಂದು ಮಾ.೨೭ರ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಡಾ|ಅಂಬೇಡ್ಕರ್ ವೃತ್ತದ ಮೂಲಕ ಬಸ್ ನಿಲ್ದಾಣಕ್ಕೆ ಆಗಮಿಸಿ ತಾಲೂಕು ಕಚೇರಿ ಮುಂಭಾಗ ಧಾವಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಎಲ್ಲ ೩ ಗೇಟ್ ಮುಚ್ಚಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ ಅವರು, ಘಟನೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರ ಜತೆ ಕೆಲ ಕಿಡಿಗೇಡಿಗಳು ಶಾಂತಿಯುತ ಪ್ರತಿಭಟನೆಯಲ್ಲಿ ಅನಾವಶ್ಯಕ ಗಲಾಟೆ ಎಬ್ಬಿಸಿ ಕಲ್ಲು ತೂರಾಟ ನಡೆಸುವ ಜತೆಗೆ ಮೆರವಣಿಗೆಯನ್ನು ಮಾಜಿ ಸಿಎಂ ಮನೆ ಕಡೆಗೆ ಬಲವಂತವಾಗಿ ಕರೆದೊಯ್ದು ಕಲ್ಲು ತೂರಾಟ ನಡೆಸಿದ್ದು ಘಟನೆಗೆ ತೀವ್ರ ವಿಷಾಧ ವ್ಯಕ್ತಪಡಿಸಿ ಖಂಡಿಸುವುದಾಗಿ ತಿಳಿಸಿದ ಅವರು, ದುಷ್ಕೃತ್ಯಕ್ಕೆ ಪೊಲೀಸರು ಗೇಟ್ ಮುಚ್ಚಿ ಪರೋಕ್ಷವಾಗಿ ಕಾರಣಕರ್ತ ರಾಗಿದ್ದಾರೆ ಎಂದು ದೂರಿದರು.
ಬಣಜಾರ್ ಸಮಾಜದ ಬಗ್ಗೆ ಅಪಾರ ಅಭಿಮಾನ ಹೊಂದಿ ಸಮಗ್ರ ತಾಂಡಾದ ರಸ್ತೆ ಸಹಿತ ಸರ್ವತೋಮುಖ ಅಭಿವೃದ್ದಿಗೆ ಕಾರಣಕರ್ತರಾದ ಯಡಿಯೂರಪ್ಪನವರು ತಾಲೂಕಿಗೆ ನೀರಾವರಿ, ವಿದ್ಯುತ್, ಶಾಲೆ, ಹಾಸ್ಟೆಲ್ ಮೂಲಕ ಶ್ರಮಿಸಿದ್ದಾರೆ ಇಂತಹ ನಾಯಕರ ಮನೆ ಮೇಲೆ ಕಲ್ಲುತೂರಾಟವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ರಾಜ್ಯ ಕೆಪಿಟಿಸಿಎಲ್ ನಿರ್ದೇಶಕ ರಾಮಾನಾಯ್ಕ ಮಾತನಾಡಿ, ಕಳೆದ ೨೦ ವರ್ಷ ಗಳಿಂದ ಒಳಮೀಸಲಾತಿ ಬಗ್ಗೆ ಪರ ವಿರೋಧದ ಚರ್ಚೆಯಾಗುತ್ತಿದ್ದು ಎಲ್ಲ ಸರ್ಕಾರ ಒಳಮೀಸಲಾತಿ ಜಾರಿ ಬಗ್ಗೆ ಆಶ್ವಾಸನೆ ನೀಡುತ್ತಿದ್ದು ಇದೀಗ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸುಗೊಳಿಸಿದ್ದು ಇದರಿಂದ ಬಣಜಾರ್ ಸಮಾಜ ಸಹಜವಾಗಿ ಆತಂಕಗೊಂಡಿದೆ ಎಂದ ತಿಳಿಸಿದ ಅವರು ಒಳಮೀಸಲಾತಿ ವಿರೋಧಿಸಲು ಕಾನೂನು ಮೂಲಕ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಾಜದ ಮುಖಂಡರು, ಸ್ವಾಮೀಜಿಗಳು ಚರ್ಚೆ ನಡೆಸಿದ್ದು ಇಂತಹ ಸಂದರ್ಭದಲ್ಲಿ ಭಾವನಾತ್ಮಕವಾಗಿ ಆತಂಕ ಹೊಂದಿದವರಿಗೆ ಧೈರ್ಯ ತುಂಬಲು ಹಮ್ಮಿಕೊಳ್ಳಲಾದ ಶಾಂತಿಯುತ ಪ್ರತಿಭಟನೆ ಕೆಲ ಕಿಡಿಗೇಡಿಗಳ ವರ್ತನೆಯಿಂದ ಹಿಂಸಾರೂಪ ಪಡೆದಿದೆ ಎಂದ ಅವರು, ಸಮಾಜದ ಅಭಿವೃದ್ದಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿ ಖುದ್ದು ಸೇವಾಲಾಲ್, ಮರಿಯಮ್ಮನವರ ಆರಾಧಕರಾದ ಯಡಿಯೂರಪ್ಪನವರ ಮನೆಮೇಲೆ ಕಲ್ಲುತೂರಾಟವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಕಾನೂನು ಕೈಗೆತ್ತಿಕೊಂಡ ಪ್ರತಿಭಟನಾಕಾರರ ವಿರುದ್ದ ಪ್ರಕರಣ ದಾಖಲಿಸದಂತೆ ಹಾಗೂ ಬಂಧಿಸದಂತೆ ಡಿಸಿ-ಎಸ್ಪಿಗೆ ಸೂಚಿಸಿದ ಯಡಿಯೂರಪ್ಪನವರ ದೊಡ್ಡ ಗುಣ ಸಮಾಜದ ಬಗೆಗಿನ ಪ್ರೀತಿ ಕಾಳಜಿ ಪ್ರತೀಕವಾಗಿದೆ ಸಮಾಜ ಎಂದಿಗೂ ಯಡಿಯೂರಪ್ಪನವರ ಜತೆಗಿದ್ದು ಕಿಡಿಗೇಡಿಗಳ ತಪ್ಪಿಗೆ ಸಮಾಜದ ಬಗ್ಗೆ ತಪ್ಪು ಕಲ್ಪನೆ ಬೇಡ. ಪೊಲೀಸರ ವಿರುದ್ದದ ಹಲ್ಲೆಗೆ ತಪ್ಪಿತಸ್ಥರ ವಿರುದ್ದ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ಬಂಗಾರಿನಾಯ್ಕ, ಟಿಎಪಿಸಿಎಂಎಸ್ ನಿರ್ದೇಶಕ ಜಯಾನಾಯ್ಕ ಮುಖಂಡ ಜಯಾನಾಯ್ಕ ಸಾಲೂರು, ಸವಿತಾಬಾಯಿ, ಕುಮಾರನಾಯ್ಕ, ಸುರೇಶನಾಯ್ಕ ಮತಿತಿತರರು ಉಪಸ್ಥಿತರಿದ್ದರು.