ಪೋಕ್ಸೋ -ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿವೆ…
ಶಿಕಾರಿಪುರ : ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಗಳಿಗಿಂತ ಪೋಕ್ಸೋ ಮತ್ತಿತರ ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿದೆ ಎಂದು ಇಲ್ಲಿನ ನ್ಯಾಯವಾದಿ ಪಿ.ಜೆ ವಿನಯ್ ಬಾಬು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಿಕಾ ಪಪೂ ಕಾಲೇಜಿನಲ್ಲಿ ರೋಟರಿ ಕದಂಬ ಹಾಗೂ ಬಾಲಕಿಯರ ಪಪೂ ಕಾಲೇಜು ವತಿಯಿಂದ ಆಯೋಜಿಸಿದ್ದ ಬಾಲ್ಯ ವಿವಾಹ, ಪೋಕ್ಸೋ, ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ, ವಾಹನ ಚಲಾವಣೆ ಕುರಿತ ಮಾಹಿತಿ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದ ಸಮಾಜದಲ್ಲಿ ಮಹಿಳೆಗೆ ಅತ್ಯಂತ ಗೌರವ ನೀಡುವುದು ದೇಶದ ಸಂಪ್ರದಾಯ ವಾಗಿದ್ದು, ಸನಾತನ ಧರ್ಮದಲ್ಲಿ ಮಹಿಳೆಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಆದರೆ ಇತ್ತೀಚಿನ ವರ್ಷದಲ್ಲಿ ಸಮಾಜದಲ್ಲಿ ಮಹಿಳೆ ವಿರುದ್ದ ದೌರ್ಜನ್ಯ ಅತ್ಯಾಚಾರ ಮತ್ತಿತರ ಕ್ರಿಮಿನಲ್ ಸಂಬಂಧಿತ ಪ್ರಕರಣ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಅತ್ಯಾಚಾರ, ಅಪ್ರಾಪ್ತ ಮಕ್ಕಳಿಗೆ ದೌರ್ಜನ್ಯ ಸಹಿತ ಮಹಿಳೆ, ಮಕ್ಕಳ ವಿರುದ್ದದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಕಾನೂನು ಮೂಲಕ ವಿಧಿಸ ಲಾಗು ತ್ತಿದ್ದು ಪರ್ಯಾಯವಾಗಿ ಮಹಿಳೆ ಮಕ್ಕಳ ವಿರುದ್ದ ದೌರ್ಜನ್ಯ ಹೆಚ್ಚಾಗುತ್ತಿದೆ. ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣಗಳಿಗೆ ಹೋಲಿಸಿ ದಲ್ಲಿ ಮಹಿಳಾ ದೌರ್ಜನ್ಯ ಅತ್ಯಾಚಾರ ಪ್ರಕರಣ ಹೆಚ್ಚು ದಾಖಲಾಗುತ್ತಿರುವುದು ಸಮಾಜದ ಅಧಃ ಪತನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ಸಿ.ಬಿ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿನಿಯರ ದೌರ್ಜನ್ಯ ಇತ್ತೀಚಿನ ದಿನದಲ್ಲಿ ವಿಪರೀತವಾಗಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ವಾಪಾಸ್ ಮನೆಗೆ ತೆರಳುವವರೆಗೆ ನೆಮ್ಮದಿಯಾಗಿರದ ವಾತಾವರಣ ನಿರ್ಮಾಣವಾಗಿದೆ ಎಂದರು.
ರೋಟರಿ ಕದಂಬ ಅಧ್ಯಕ್ಷ ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಓಬಳ ನಾಯಕ್ , ಪುಟ್ಟಪ್ಪ, ವಿದ್ಯಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು, ರೋಟರಿ ಕಾರ್ಯದರ್ಶಿ ಡಾ.ವೀರೇಂದ್ರ ವಂದಿಸಿದರು.
