ಜನರಿಗೆ ಮೂಲ ಸೌಕರ್ಯಗಳ ಕೊರತೆ ಆಗಬಾರದು
ಸಾಗರ: ಜನರಿಗೆ ಮೂಲ ಸೌಕರ್ಯಗಳ ಕೊರತೆಯಾಗದಂತೆ ಆಡಳಿತ ಕ್ರಮ ಕೈಗೊಳ್ಳಬೇಕೆಂಬುದು ನನ್ನ ಯೋಜನೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಅಲ್ಲಿನ ನಾಗರಿಕ ವೇದಿಕೆ ಏರ್ಪಡಿಸಿದ್ದ ಬಡಾವಣೆಯ ಸಾಧಕರಿಗೆ ಸನ್ಮಾನ ಮತ್ತು ಶಾಸಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ವಾರ್ಡಿನ ಜನರಿಗೆ ಕುಡಿಯುವ ನೀರು, ರಸ್ತೆ, ಸ್ವಚ್ಛತೆಗೆ ಗಮನ ಕೊಡಬೇಕೆಂದು ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು.
ನಗರಸಭೆಯ ೩೨ ವಾರ್ಡಿಗೆ ಭೇಟಿ ನೀಡಿ ಪ್ರತಿ ಮನೆಯಿಂದಲೂ ಅಹವಾಲು ಸ್ವೀಕರಿಸುವುದು ಹಾಗೂ ಅದಕ್ಕೆ ನಮ್ಮ ಇತಿಮಿತಿ ಯಲ್ಲಿ ಪರಿಹಾರ ನೀಡುವುದು ನಮ್ಮ ಆದ್ಯತೆಯಾಗಿದೆ. ಪಟ್ಟಣದಲ್ಲಿರುವ ಬಹುತೇಕ ಎಲ್ಲ ಪಾರ್ಕುಗಳು ಹಾಳು ಬಿದ್ದಿವೆ. ಗಿಡಗಳೆಲ್ಲ ಒಣಗಿ ಹೋಗಿವೆ. ನಿರ್ವಹಣೆ ಇಲ್ಲದೆ ಪಾರ್ಕುಗಳು ತಮ್ಮ ಸೌಂದರ್ಯ ವನ್ನು ಕಳೆದುಕೊಂಡಿವೆ. ಇವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿ ಆಡಳಿತದ ಮೇಲಿದೆ. ಸ್ವಚ್ಛತೆ ಕಡೆ ಗಮನ ಹರಿಸಿದರೆ ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆದರೆ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದೆ. ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಲು ಒತ್ತಾಯಿಸುತ್ತೇನೆ ಎಂದರು.
ಪ್ರತಿ ವಾರ್ಡಿನಲ್ಲೂ ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಾಗು ವುದು. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ೨೫ ವರ್ಷ ಹಳೆಯದಾದ ಪೈಪ್‌ಲೈನ್ ಅಳವಡಿಸಿ ಪಟ್ಟಣದ ಜನರಿಗೆ ಪ್ರತಿದಿನವೂ ನೀರು ಕೊಡಬೇಕು. ಗುಬ್ಬಗೋಡಿನಿಂದ ಕಸಬಾ ಮತ್ತು ಆವಿನಹಳ್ಳಿ ಹೋಬಳಿಗೆ ನೀರು ಒದಗಿಸಲಾಗುವುದು. ಇದರ ಸರ್ವೆ ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಡಾವಣೆಯ ನಾಗರಿಕರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿಜಯಾನಂದರಾವ್, ನಿವೃತ್ತ ಉತ್ತಮ ಶಿಕ್ಷಕ ನಾಗರಾಜ್, ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಲರಾಮ ದುಬೆ, ನಿವೃತ್ತ ಶಿಕ್ಷಕಿ ವಿನೋದ, ನಿವೃತ್ತ ಹಿರಿಯ ಫಾರ್ಮಾಸಿಸ್ಟ್ ವೈ. ಮೋಹನ್ ಅವರನ್ನು ಸನ್ಮಾನಿಸಲಾ ಯಿತು. ವಾರ್ಡಿನ ಸದಸ್ಯ ಅರವಿಂದ ರಾಯ್ಕರ್ ಮತ್ತು ಪಕ್ಕದ ವಾರ್ಡಿನ ಸದಸ್ಯ ಗಣಪತಿ ಮಂಡಗಳಲೆ ಅವರನ್ನು ಅಭಿನಂದಿಸಲಾಯಿತು.