ವಿವಿಧತೆಯಲ್ಲಿ ಏಕತೆಯ ಕಂಡ ರಾಷ್ಟ್ರ ನಮ್ಮದು…
ಹರಿಹರ: ವಿಶ್ವದ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರವಾಗಿದೆ ಎಂದು ಪೌರ ಸೇವಾ ಸಮಿತಿಯ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ದೇಸೀ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ಪಠ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ವಿದ್ಯಾರ್ಥಿನಿ ಯರು ಕಾಲೇಜಿನ ಆವರಣದಲ್ಲಿ ಇಂದು ಸಾಂಪ್ರದಾಯಿಕ ಬಣ್ಣ- ಬಣ್ಣದ ಉಡುಗೆಗಳಿಂದ ಕಂಗೊ ಳಿಸುತ್ತಿರುವುದು ವಿಶೇಷವಾಗಿತ್ತು. ನಮ್ಮ ಪರಂಪರೆಯ ಉಡುಗೆ ಗಳಾದ ಸೀರೆ, ಲಂಗ-ದಾವಣಿ, ಬಿಳಿ ಪಂಚೆ, ಶರ್ಟ್ ಧರಿಸಿ ಹಬ್ಬದ ಸಂಭ್ರಮವನ್ನು ಮೂಡಿಸಿದ್ದರು. ಈ ಸಂತಸದೊಂದಿಗೆ ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತನ್ನಿರೆಂದು ಹೇಳಿದರು.
ಪೌರಸೇವಾ ಸಮಿತಿಯ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ್ ಅವರು ಮಾತನಾಡಿ, ಪರಧರ್ಮ ಸಹಿಷ್ಣತೆಯ ಭವ್ಯ ರಾಷ್ಟ್ರ ನಮ್ಮದಾಗಿದ್ದು, ಸರ್ವಧರ್ಮಿಯರನ್ನು ಗೌರವಿ ಸುತ್ತಾ ಬಂದಿದ್ದೇವೆ ಎಂದರು. ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿಯಿದ್ದು, ಎಲ್ಲರೂ ತಮ್ಮ ಪಾಲಿನ ಕಾರ್ಯನಿರ್ವಹಿಸುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿನಿಯರು ಅಧ್ಯಯನ ಕಡೆ ಹೆಚ್ಚಿನ ಒಲವು ತೋರಿಸಿ ಮಹಾವಿದ್ಯಾಲಯಕ್ಕೆ ಉತ್ತಮ ಹೆಸರು ತಂದು ಕೊಡುವಲ್ಲಿ ಶ್ರಮವಹಿಸಿರೆಂದು ಹೇಳಿದರು.
ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ಶಿವಶಕ್ತಿ ಕ್ಯಾಟರಿನ್ನಿನ ಪ್ರಭಾಕರ ಜೋಷಿ ಮತ್ತು ಶಿಕ್ಷಕಿಯಾದ ಪರಿಮಳಾ ಜೋಷಿ, ಪ್ರಾಂಶುಪಾಲ ಡಾ.ಜಿ.ಬಿ. ಗಂಗಾಧರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರ ಸೇವಾ ಸಮಿತಿಯ ನಿರ್ದೇಶಕರಾದ ಎಂ. ಆರ್. ಸತ್ಯನಾರಾಯಣ, ಕೆ.ಎಂ. ರವಿಕುಮಾರ್ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದರು.
ರಾಜಸ್ಥಾನ್, ಗುಜರಾತ್ , ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಬ್ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಅಡುಗೆ ಹಾಗೂ ವೇಷಭೂಷಣಗಳನ್ನುಳಗೊಂಡ ದೇಸೀ ಸಂಸ್ಕೃತಿ ಉತ್ಸವವಾಗಿತ್ತು.
ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಯೋಜಕಿ ಪ್ರೊ. ರೋಹಿಣಿ ಎಂ.ಶಿರಹಟ್ಟಿ ತೀರ್ಪುಗಾರರು ನೀಡಿದ ಫಲಿತಾಂಶ ಘೋಷಿಸಿ ಮಾತನಾಡಿದರು.
ಆರಂಭದಲ್ಲಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿಯರಾದ ಎಸ್.ಪಿ. ಮಂಗಳಾ, ಭಾಗ್ಯಲಕ್ಷ್ಮಿ ಪ್ರಾರ್ಥಿಸಿ, ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಶಾಂಭವಿ ವಿ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಾಂಸ್ಕೃತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಎನ್.ವಿ. ಸಹಕಾರ್ಯದರ್ಶಿ ಸ್ಟೆ ಪ್ರಿಸ್ಕಿಲಾ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ಭಾವನ ಎಂ.ಎಚ್. ವಂದಿಸಿದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ನೃತ್ಯಗಳು ಜರುಗಿದವು.