ನವರಾತ್ರಿಯ ನವ ದುರ್ಗೆಯರು….
ಅ.೧೫ರ ಭಾನುವಾರ ನಾಡಹಬ್ಬ ನವರಾತ್ರಿ ಆರಂಭ, ಅ.೧೯ರ ಗುರುವಾರ ಲಲಿತಾ ಪಂಚಮಿ. ಅ.೨೦ರ ಶುಕ್ರವಾರ ಮೂಲಾ ನಕ್ಷತ್ರ ಶಾರದಾ ಪ್ರತಿಷ್ಠಾಪನೆ. ಅ.೨೨ರ ಭಾನುವಾರ ದುರ್ಗಾಷ್ಟಮಿ. ಅ.೨೩ರ ಸೋಮವಾರ ಮಹಾನವಮಿ (ಆಯುಧ ಪೂಜ) (ಶಾರದಾ ವಿಸರ್ಜನೆ). ಅ.೨೪ರ ಮಂಗಳವಾರ ವಿಜಯದಶಮಿ.
ನವದುರ್ಗೆಯರು:
ಪ್ರಥಮಂ ಶೈಲಪುತ್ರೀ ಚ
ದ್ವಿತೀಯಂ ಬ್ರಹ್ಮಚಾರಿಣಿ
ತೃತೀಯಂ ಚಂದ್ರಘಂಟೇತಿ
ಕೂಷ್ಮಾಂಡೇತಿ ಚತುರ್ಥಕಮ್
ಪಂಚಮಂ ಸ್ಕಂದಮಾತೇತಿ ಷಷ್ಠಂ
ಕಾತ್ಯಾಯಿನೀತಿ ಚ ಸಪ್ತಮಂ
ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್
ನವಮಂ ಸಿದ್ಧಿಧಾತ್ರೀ ಚ
ನವದುರ್ಗಾಃ ಪ್ರಕೀರ್ತಿತಾಃ
ಮೊದಲ ದಿನ(ಕೆಂಪು ಬಣ್ಣ): ನವರಾತ್ರಿಯ ಮೊದಲ ದಿನಕ್ಕೆ ದುರ್ಗಮಾತೆಗೆ ಶೈಲಪುತ್ರಿ ಎಂದು ಕರೆಯುತ್ತಾರೆ (ಪರ್ವತರಾಜನ ಸುಪುತ್ರಿ). ಈ ದಿನದಂದು ದುರ್ಗೆಯನ್ನು ಶಿವನ ಪತ್ನಿಯಾಗಿ ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಉತ್ಸಾಹ ಮತ್ತು ಸಂಭ್ರಮಗಳನ್ನು ಪ್ರತಿಬಿಂಬಿಸುತ್ತದೆ, ಹಬ್ಬವನ್ನು ಪ್ರಾರಂಭಿಸಲು ಅತಿ ಸೂಕ್ತವಾದ ಬಣ್ಣ.
ಎರಡನೆಯ ದಿನ(ಕಡುನೀಲಿ ಬಣ್ಣ): ದ್ವಿತೀಯ ದಿನ ದುರ್ಗೆಯು ಬ್ರಹ್ಮಚಾರಿಣಿಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಸಂತೋಷ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಕಡುನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯನ್ನು ಪ್ರತಿಪಾದಿಸುತ್ತದೆ.
ಮೂರನೆಯ ದಿನ(ಹಳದಿ ಬಣ್ಣ): ತೃತಿಯ ದಿನದಂದು ದೇವಿಯು ಚಂದ್ರಘಂಟೆಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ರೂಪದಲ್ಲಿ ದುರ್ಗೆಯ ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡುತ್ತಾರೆ. ಇದು ಸೌಂದರ್ಯ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ‘ದೇವಿಯು ರಾಕ್ಷಸರೊಂದಿಗೆ (ದುಷ್ಟ ಶಕ್ತಿಗಳೊಂದಿಗೆ) ಹೋರಾಡಿ ಲೋಕವನ್ನು ರಕ್ಷಿಸಿದ ಶಕ್ತಿ ಇವಳು. ಲೋಕದ ಎಲ್ಲರ ಮನಸ್ಸಿನಲ್ಲಿ ಈ ಹಳದಿ ಬಣ್ಣವು ಉತ್ಸಾಹವನ್ನು ತುಂಬುತ್ತದೆ.
ನಾಲ್ಕನೆಯ ದಿನ(ಹಸಿರು ಬಣ್ಣ): ಚತುರ್ಥಿಯ ದಿನದಂದು ದೇವಿಯು ಕುಶ್ಮಾಂಡೆಯ ರೂಪ ಪಡೆಯುತ್ತಾಳೆ. ಈಕೆಯನ್ನು ಜಗತ್ತಿನ ಸೃಷ್ಟಿಕರ್ತೆ ಎನ್ನಲಾಗುತ್ತದೆ. ಈಕೆ ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾಳೆ.
ಐದನೆಯ ದಿನ(ಬೂದು ಬಣ್ಣ): ಪಂಚಮಿಯಂದು ದೇವಿಯು ಸ್ಕಂದ ಮಾತೆಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಕಾರ್ತಿಕೇಯನನ್ನು ತನ್ನ ಶಕ್ತಿಯುತವಾದ ಕೈಯಲ್ಲಿ ಹಿಡಿದಿರುತ್ತಾಳೆ. ಬೂದು ಬಣ್ಣವು ತಾಯಿ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕು ಹೋಗಲೂ ತಯಾರಿರುತ್ತಾಳೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಆರನೆಯ ದಿನ(ಕೇಸರಿ): ಆರನೆಯ ದಿನದಂದು ದೇವಿಯು ಕಾತ್ಯಾಯನಿಯ ರೂಪ ಧರಿಸುತ್ತಾಳೆ. ಕೆಲವು ದಂತಕತೆಗಳ ಪ್ರಕಾರ ಕಾತ ಎಂಬ ಋಷಿಯು ದೇವಿ ದುರ್ಗೆಯನ್ನು ಮಗಳಾಗಿ ಪಡೆಯಲು ಯe ಮಾಡಿದ. ಅವನ ಭಕ್ತಿಗೆ ಮೆಚ್ಚಿ ದುರ್ಗೆಯು ಪ್ರಸನ್ನಳಾಗಿ, ಕೇಸರಿ ಬಣ್ಣದ ದಿರಿಸು ಧರಿಸಿ ಮಗಳಾಗಿ ಜನಿಸಿ ಬರುತ್ತಾಳೆ. ಈ ಬಣ್ಣವು ಧೈರ್ಯವನ್ನು ಪ್ರತಿಬಿಂಬಿಸುತ್ತದೆ.
ಏಳನೆಯ ದಿನ(ಬಿಳಿಯ ಬಣ್ಣ): ಏಳನೆಯ ದಿನದಂದು ದೇವಿಯನ್ನು ಕಾಲರಾತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ದೇವಿಯನ್ನು ಬಿಳಿಯ ಬಣ್ಣದ ಸೀರೆಯನ್ನು ಉಡಿಸಿ, ಕ್ರೋಧಭರಿತ ಕಣ್ಣುಗಳಿಂದ ಅಲಂಕರಿಸುತ್ತಾರೆ. ಬಿಳಿಯ ಬಣ್ಣವು ಭಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ.
ಎಂಟನೆಯ ದಿನ (ಗುಲಾಬಿ ಬಣ್ಣ): ಅಷ್ಟಮಿಯಂದು ಮಹಾಗೌರಿಯ ರೂಪದಲ್ಲಿ ದೇವಿಯನ್ನು ಎಲ್ಲ ‘ಪಾಪ-ಪರಿಹಾರಕಳು’ ಎಂದು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಭರವಸೆ ಮತ್ತು ನವೀನತೆಯ ಪ್ರತೀಕವಾಗಿದೆ.
ಒಂಬತ್ತನೆಯ ದಿನ(ತಿಳಿ ನೀಲಿ): ನವಮಿಯಂದು ದೇವಿಯು ಸಿದ್ಧಿಧಾತ್ರಿಯ ರೂಪ ಧರಿಸುತ್ತಾಳೆ. ತಿಳಿನೀಲಿ ಬಣ್ಣದಿಂದ ಅಲಂಕರಿಸಲಾಗುತ್ತದೆ. ‘ಸಿದ್ಧಿಧಾತ್ರಿ’ಯು ಸಿದ್ಧಿಯನ್ನು ಪಡೆದುಕೊಳ್ಳಲು ನಿರಂತರ ಅನುಗ್ರಹ ಮಾಡುತ್ತಾಳೆ.
ಸರ್ವರಿಗೂ ಸನ್ಮಂಗಲವಾಗಲಿ.