ಭಗವಂತನ ಸಂಕಲ್ಪವನ್ನು ಪೂರ್ಣ ಮಾಡಿಸುವವರು ನಾರದರು…
ಹೊಳೆಹೊನ್ನೂರು : ನಾರದ ಮಹರ್ಷಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಅವರು ಜಗಳ ಹಚ್ಚುವವರಲ್ಲ. ಭಗವಂತನ ಸಂಕಲ್ಪವನ್ನು ಪೂರ್ಣ ಮಾಡಿಸುವ ಕೈಂಕರ್ಯ ಮಾಡುತ್ತಿರುವ ಪರಮಹಂಸರು, ಸನ್ಯಾಸಿಗಳು ಎಂದು ಉತ್ತರಾದಿ ಮಠಾಧೀಶ ರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಸಂಜೆ ತಮ್ಮ ೨೮ನೇ ಚಾತುರ್ಮಾಸ್ಯದ ಅಂಗ ವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಸಜ್ಜನರಿಗೆ ಅವರೊಳಗೆ ಸ್ವಾಭಾವಿಕವಾಗಿಯೇ ಇರುವ ದೇವರಲ್ಲಿನ ಭಕ್ತಿಯನ್ನು ಪ್ರವರ್ಧನ ಮಾಡುವವರು. ಉದ್ದೀಪನ ಮಾಡುವವರು. ಅದೇರೀತಿ ದುರ್ಜನರಿಗೆ ಅವರೊಳಗಿದ್ದ ದೋಷಗಳನ್ನು ಹೊರಹಾಕುವಂತೆ ಮಾಡುವವರೇ ಹೊರತು ನಾರದರೇ ಹೇಳಿ ದೋಷವನ್ನು ಮಾಡಿಸುವವರಲ್ಲ ಎಂದರು.
ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಹೃಷೀಕೇಶಾಚಾರ್ಯ ಮಠದ, ದೇವರು, ಶ್ರೀ ಸತ್ಯಧರ್ಮ ತೀರ್ಥರು ಮತ್ತು ಶ್ರೀ ಸತ್ಯಾತ್ಮ ತೀರ್ಥರು ಮೂವರನ್ನೂ ಕುರಿತ ಒಂದೇ ಶ್ಲೋಕವನ್ನು ಚಮತ್ಕಾರಿಕ ವಾಗಿ ರಚಿಸಿ ಸಭೆಯಲ್ಲಿ ಅರ್ಥಸಹಿತ ಮಂಡಿಸಿದರು. ಆಚಾರ್ಯರ ವಾಕ್ಯಗಳು, ದೇವರ ರೂಪಗಳು, ಟೀಕಾಚಾರ್ಯರ ಪ್ರತಿ ಶಬ್ದಕ್ಕೂ ಅನೇಕಾರ್ಥ ತಿಳಿಸುವ ಶ್ರೀ ಸತ್ಯಾತ್ಮ ತೀರ್ಥರು ಶ್ರೀ ಕೃಷ್ಣ ಮತ್ತು ಮುಖ್ಯ ಪ್ರಾಣದೇವರ ಚರ ಪ್ರತಿಮೆ ಗಳಂತೆ ಎಂದು ವರ್ಣಿಸಿದರು.
ಶ್ರೀಗಳ ಅನುಗ್ರಹದಿಂದ ನಮ್ಮೆಲ್ಲರಿಗೆ ಒಳ್ಳೆಯ ಚಾರಿತ್ರ್ಯ, ಪರಮಾತ್ಮನ ಗುಣಗಳ ಸ್ಮರಣೆ ಮಾಡುವ ಸ್ವಭಾವ, ವಿಶೇಷವಾಗಿ ಪರಮಾತ್ಮನ ಬಗ್ಗೆ ಸತ್ಯವಾದ eನ ಲಭಿಸಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಶ್ರೀಪಾದಂಗಳ ವರಿಗೆ ಶ್ರೀಮುಷ್ಣಂನಿಂದ ವರಾಹದೇವರ ಶೇಷವಸ ಮತ್ತು ಪ್ರಸಾದ ಹಾಗೂ ನಿಂಬಾದ್ರಿ ಕ್ಷೇತ್ರದ ಶ್ರೀ ನರಸಿಂಹ ದೇವರ ನಿರ್ಮಾಲ್ಯ ಮತ್ತು ಗಂಧವನ್ನು ಸಮರ್ಪಣೆ ಮಾಡಲಾಯಿತು.
ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಖಜಂಚಿ ರಾಮಧ್ಯಾನಿ ಅನಿಲ್, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.