ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ನಾಗರ ಪಂಚಮಿ ನಾಡಿಗೆ ದೊಡ್ಡದು…

Share Below Link

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಪ್ರಾಮುಖ್ಯತೆಯಿದೆ. ಪ್ರತಿ ತಿಂಗಳೂ ಒಂದಲ್ಲ ಒಂದು ರೀತಿಯ ಹಬ್ಬಗಳನ್ನು ನಮ್ಮ ಗ್ರಾಮೀಣರು ಆಚರಿಸಿಕೊಂಡು ಬಂದಿzರೆ. ಶ್ರಾವಣ ಮಾಸದ ನಾಗರ ಪಂಚಮಿಗೆ ತನ್ನದೇ ಆದ ವೈಶಿಷ್ಠತೆಯಿದೆ. ಪುರಾಣ ಕಾವ್ಯಗಳಲ್ಲಿ ನಾಗ ದೇವತೆಯನ್ನು ಪೂಜಿಸುವುದನ್ನು ಕಾಣ ಬಹುದು. ಬಾಲ್ಯದ ಹಬ್ಬಗಳಿಂದ ಹರೆಯಕ್ಕೆ ಹದ ಬರುವುದೆಂಬ ಹಿರಿಯರ ಮಾತಿದೆ.

ಶ್ರಾವಣವನ್ನು ಹಬ್ಬಗಳ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಈ ಶ್ರಾವಣ ಮಾಸದಲ್ಲಿ ಮೊದಲಿಗೆ ಬರುವ ಹಬ್ಬವೇ ನಾಗರ ಪಂಚಮಿ. ಹಳ್ಳಿಗಳಲ್ಲಿ ನಾಗರ ಪಂಚಮಿ ಹಬ್ಬ ಎಂದರೆ ವಿಧವಿಧವಾದ ಉಂಡಿ ಹಬ್ಬ. ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿ ಮಹಿಳೆಯರ ಸಂಭ್ರಮದ ಹಬ್ಬವಾಗಿದೆ. ಗಂಡನ ಮನೆಯಿಂದ ತವರಿಗೆ ಬಂದು ಅತ್ಯಂತ ಆನಂದದಿಂದ ಮನೆ ಯಲ್ಲಿ ಹಬ್ಬ ಮಾಡಿ, ಗೆಳತಿಯರೊಂದಿಗೆ ಜೋಕಾಲಿಯಂತಹ ಗ್ರಾಮೀಣ ಆಟಗಳನ್ನು ಆಡುವುದು ಸಹಜವಾಗಿದೆ.
ಶ್ರಾವಣ ಮಾಸದ ಮೊದಲ ಹಬ್ಬವೇ ರೊಟ್ಟಿ ಹಾಗೂ ಉಂಡೆ ಹಬ್ಬ. ಹತ್ತು, ಹದಿನೈದು ದಿನಗಳ ಮುಂಚಿತವಾಗಿಯೇ ವಿವಿಧ ಉಂಡಿಗಳನ್ನು ಕಟ್ಟಲು ಬೇಕಾದ ವಿವಿಧ ಧವಸ ಧಾನ್ಯಗಳನ್ನು ಉರಿದು ಕೂಡಿಸಿಟ್ಟುಕೊಂಡು ರುಚಿಯಾದ ಸಿಹಿ ತಯಾರಿಸಲು ಪ್ರಾರಂಭಿಸುತ್ತಾರೆ. ಹೊಸ ಬೆಲ್ಲ ವನ್ನು ತರಿಸಿ, ಹದವಾದ ಪಾಕವನ್ನು ಮಾಡಿ ಕೊಂಡು ಮನೆಯ ಮಹಿಳೆಯಲ್ಲರೂ ಸೇರಿ ತಂಬಿಟ್ಟು, ನವಣೆ ಉಂಡಿ, ಅಕ್ಕಿ ಉಂಡಿ, ಎಳ್ಳು ಉಂಡಿ, ಅರಳುಂಡೆ, ಶೇಂಗಾ ಉಂಡಿ, ಡಾಣಿ ಉಂಡಿ, ಹುರಕಡ್ಲಿ ಉಂಡಿ, ಅವಲಕ್ಕಿ ಉಂಡಿ, ರವೆ ಉಂಡಿ, ಬೇಸನ್ ಉಂಡಿ, ಅಂಟಿನ ಉಂಡಿ, ಚಿಗಳಿ… ಹೀಗೆ ಹಲವಾರು ರೀತಿಯ ಉಂಡಿಗಳನ್ನು ಕಟ್ಟುವರು. ಬೆಲ್ಲ ಮತ್ತು ಧಾನ್ಯವನ್ನು ಸಮ ಪ್ರಮಾಣದಲ್ಲಿ ತೆಗೆದು ಕೊಂಡು ಕಡಿಮೆ ಎಂದರೂ ಐದು ತರಹದ ಉಂಡಿಗಳನ್ನು ತಯಾರಿಸುತ್ತಾರೆ. ಉಂಡಿಗಳನ್ನು ಮಾಡಲು ಪಳಗಿದ ಕೈಗಳೇ ಬೇಕು.
ನಮ್ಮ ಹಿರಿಯರು ಕಟುಂಬದ ಸದಸ್ಯರು ಚಿಕ್ಕರಿರುವಾಗಲೇ ಅಡಿಗೆಯ ತರಬೇತಿ ಕೊಡು ತ್ತಿದ್ದರು. ಮನೆಯ ಎ ಸದಸ್ಯರು ಸೇರಿ ಉಂಡಿ ಕಟ್ಟುವರು. ಹೊಸದಾಗಿ ಮದುವೆಯಾಗಿರುವ ಮನೆಗಳಲ್ಲಂತೂ ಗಂಡನ ಮನೆಯವರು ಹೊಸ ಬೀಗರಿಗೆ ಉಂಡಿಗಳನ್ನು ತೆಗೆದುಕೊಂಡು ಹೋಗುವುದೇ ಒಂದು ರೀತಿಯ ಸಂಭ್ರಮ. ಹೆಣ್ಣು ಮಕ್ಕಳಿಗೆ ತವರಿನಿಂದ ಪಂಚಮಿ ಉಂಡಿ ಗಳು ಬರುತ್ತವೆ ಎನ್ನುವ ಉತ್ಸಾಹಕ್ಕೆ ಎಡೆಯಿಲ್ಲ.
ಪಂಚಮಿ ಹಬ್ಬ ಬಂತಾ ಸನಿಯಾಕ, ಅಣ್ಣ ಬರಲಿಲ್ಲ ಯಾಕ ಕರಿಲಾಕ ಎಂಬ ಹಾಡುಗಳನ್ನು ಹೇಳುತ್ತಿದ್ದರು.
ಪಂಚಮಿ ಹಬ್ಬ ಬಂದೈತಿ ಸನಿಯಾಕ ಅಣ್ಣ ಯಾಕೋ ಬರಲಿಲ್ಲ ಕರಿಲಾಕ
ನನ್ನ ತವರೂರು ಧಾರವಾಡ ನಗರ ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ
ಮನಿ ಎಂಥದ್ದು ರಾಜಮಂದಿರ ಹ್ಯಾಂಗ ಆದೀತು ಬಿಟ್ಟು ಇರಲಾಕ
ಮುತ್ತಿನಂತಾಕಿ ಆಕಿ ನನ್ನ ಅತ್ತೀಗಿ ಪ್ರೀತಿ ಬಹಳ ನನ್ನ ಮ್ಯಾಲ ಅವಳೀಗಿ
ಬಿಟ್ಟಳೇ ನಮ್ಮ ಬಿಟ್ಟು ಇರಲಾಕ ಅಣ್ಣ ಬರಲಿಲ್ಲ ಯಾಕ ಕರಿಲಾಕ
ನನ್ನ ತವರಲ್ಲಿ ಪಂಚಮಿ ಭಾರಿ ಮಣ ತೂಕಾದ ಬೆಲ್ಲ ಕೊಬ್ಬಾರಿ
ಎಳ್ಳು ಅವಕ್ಕಿ ತಂಬಿಟ್ಟು ಸೂರಿ ನಾನು ತಿನುವಾಕಿ ಅ ಮನಸಾರಿ. ಈ ಹಾಡು ಉತ್ತರ ಕರ್ನಾಟಕ ಜನಪದ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದೆ. ಈ ಹಬ್ಬದಲ್ಲಿ ಮಕ್ಕಳಿಗೆ ಹೊಸ ಬಟ್ಟೆ, ಜೋಕಾಲಿ ಆಟದ ಹರ್ಷ ಹೇಳತೀರದು. ತವರಿಗೆ ಬಂದ ಮಹಿಳೆಯರಿಗೆ ತಮ್ಮ ಗೆಳತಿಯ ರೊಂದಿಗೆ ಸಂಪೂರ್ಣ ಸ್ವಾತಂತ್ರ್ಯ. ಹಾಲನೆರೆದು ಒಂದೆಡೆ ಎಲ್ಲರೂ ಸೇರಿ ತಮ್ಮ ಸುಖ- ದುಃಖಗಳನ್ನು ಹಂಚಿಕೊಳ್ಳಲಿಕ್ಕೆ ಇದೊಂದು ಉತ್ತಮ ಅವಕಾಶ.
ಹಿರಿಯರು ಹಾಕಿಕೊಟ್ಟ ಶಾಸ್ತ್ರ, ಸಂಪ್ರದಾಯ ಆಚಾರ ವಿಚಾರಗಳನ್ನು ಬಿಡುವಂಗಿಲ್ಲ. ಬೀಗರು ಬಂದರೂ, ಬರದಿದ್ದರೂ ನಮ್ಮ ಮನೆಯಲ್ಲಿ ಹಬ್ಬವನ್ನು ಮಾಡುತ್ತೇವೆ.
ರೊಟ್ಟಿಹಬ್ಬ: ಮನೆಯಲ್ಲಿ ಎರಡು ಮೂರು ದಿವಸ ಮೊದಲೇ ಜೋಳದ ರೊಟ್ಟಿ, ರಾಗಿ ರೊಟ್ಟಿ, ಸಜ್ಜೆ ರೊಟ್ಟಿಯನ್ನು ಎಳ್ಳು ಹಚ್ಚಿ ಮಾಡುವರು. ಪುಟಾಣಿ ಚಟ್ನಿ, ಶೇಂಗಾ ಚಟ್ನಿ, ಗುರೆಳ್ಳು, ಅಗಸಿ ಚಟ್ನಿ ತಯಾರಿಸುತ್ತಾರೆ. ನಾನಾ ವಿಧದ ತರಕಾರಿಗಳಿಂದ ಬದನೆಕಾಯಿ ಎಣ್ಣಗಾಯಿ, ಈರೆಕಾಯಿ ಎಣ್ಣಗಾಯಿ, ಕಡಗೋಲು (ಡೊಣ್ಣೆಗಾಯಿ) ಮೆಣಸಿನಕಾಯಿ ಪ, ಕಾಳುಗಳಾದ ಹೆಸರು, ಮಡಕೆ, ಹಲಸಂದಿ ಕಾಳಿನ ಪಲ್ಯೆ, ಬೇಳೆ ಪ, ಹಸಿ ಸೊಪ್ಪುಗಳಾದ ಸಬ್ಬಸಗಿ, ಕೊತ್ತಂಬರಿ, ಮೆಂತೆ, ಅಕರಿಕಿ, ಮೂಲಂಗಿಯ ಪಚಡಿ, ಚಿತ್ರಾನ್ನ, ಮೊಸರನ್ನದ ಬುತ್ತಿ ಮಾಡುವರು. ಎಳ್ಳು ಹಚ್ಚಿದ ರೊಟ್ಟಿಯ ಹಬ್ಬದೂಟವನ್ನು ಮನೆ ಮಂದಿಯೆಲ್ಲ ಸೇರಿ ಮಾಡುವರು. ಸುತ್ತ ಮುತ್ತಲಿನ ಮನೆಗಳಿಗೆ, ಬಂಧು-ಬಾಂಧವರ ಮನೆಗೆ ತೆರಳಿ ರೊಟ್ಟಿ, ಚಟ್ನಿ ಪ ವಿತರಿಸುವರು.
ನಾಗಪ್ಪಗೆ ಹಾಲು ಎರೆಯುವುದು: ಎರಡನೆಯ ದಿನ ಆಕಳ ಹಾಲಿಗೆ ಸ್ವಲ್ಪ ಬೆಲ್ಲ ಸೇರಿಸಿ, ಕಲ್ಲು ನಾಗಪ್ಪಗೆ ಹಾಲು ಹಾಕುವುದು. ಹಾಲು ಹಾಕುವಾಗ ನನ್ನ ಪಾಲು, ಅವ್ವನ ಪಾಲು, ಅಪ್ಪನ ಪಾಲು ಎಂದು ಮನೆಯ ಎ ಸದಸ್ಯರ ಹೆಸರನ್ನು ಹೇಳುತ್ತೇವೆ. ಪೂಜೆಯ ನಂತರ ನಾಗಪ್ಪನ ದಾರವನ್ನು ಕೈಗೆ ಕಟ್ಟಿಕೊಂಡು ಉಂಡಿ, ಹಲಸಂದಿ ವಡೆ, ಚಿಗಳಿ, ಗಾರಿಗೆಯನ್ನು ನೈವೇದ್ಯ ಮಾಡುವುದು. ನಂತರ ವಿವಿಧ ಉಂಡಿಯ ಊಟ ಜರುಗುವುದು. ಸಿಹಿ ಊಟ ಮಾಡಿದ ದೇಹದ ಶ್ರಮಕ್ಕಾಗಿ ಮನೆಯಲ್ಲಿ ಕಟ್ಟಿದ, ಹಿತ್ತಲಿನಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯನ್ನು ಜೀಕುವರು. ಪುರುಷರು ಕೇವಲ ತಮ್ಮ ಖುಷಿಗಾಗಿ ಊರ ಗೆಳೆಯರೊಡನೆ ಜೂಜಡುವುದು, ಊರಿನ ಮಧ್ಯಭಾಗದಲ್ಲಿ ಧಾನ್ಯಗಳು ತುಂಬಿದ ಚೀಲ ಗಳನ್ನು, ಕಲ್ಲಿನ ಗುಂಡುಗಳನ್ನು ಎತ್ತುವ ಸಾಹಸಗಳು ಗ್ರಾಮೀಣ ಭಾಗದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿವೆ. ಚಿಕ್ಕಮಕ್ಕಳು ಜೋಕಾಲಿ, ಲಗೋರಿಯಂತಹ ಆಟಗಳನ್ನು ಆಡುವರು.
ಹೋಳಿಗೆ ಹಬ್ಬ: ಮೂರನೆಯ ದಿನ ಮನೆಯಲ್ಲಯೇ ಹುತ್ತದ ಮಣ್ಣಿನಿಂದ ತಯಾರಿಸಿದ ನಾಗಪ್ಪಗೆ ಹಾಲೂ ಎರೆದು ಹೋಳಿಗೆ ಹಬ್ಬವನ್ನು ಹಿರಿಯರ ಹಬ್ಬವನ್ನಾಗಿ ಮಾಡಿಕೊಂಡು ಬರುವುದು ರೂಢಿ. ಎ ತರಹದ ದೊಡ್ಡ (ತೆಂಗಿನಕಾಯಿ) ಗಾತ್ರದ ಒಂದೊಂದು ತಲೆ ಉಂಡಿಯನ್ನು ಮಾಡುತ್ತೇವೆ. ಇವುಗಳನ್ನು ಗಣೇಶ ಚತುರ್ಥಿಯಂದು ಉಪಯೋಗಿಸುತ್ತೇವೆ ಎಂದರು.
ನಾಗಚೌತಿ ಹಾಗೂ ನಾಗಪಂಚಮಿ ಕುರಿತು ಅನೇಕ ದಂತ ಕತೆಗಳಿವೆ. ಉತ್ತರ ಕರ್ನಾಟಕ ಹೆಸರಾಂತ ಹಬ್ಬವಾದ ಈ ನಾಗ ಪಂಚಮಿಯನ್ನು ಕುರಿತ ಜನಪದ ಕತೆಯೊಂದಿದೆ. ಒಕ್ಕಲಿಗನೊಬ್ಬ ಹೊಲದಲ್ಲಿ ರಂಟೆ ಹೊಡೆಯುವಾಗ ಅದರ ಕುಡಕ್ಕೆ ಹಾವಿನ ಮರಿಗಳೆಲ್ಲ ಸಿಕ್ಕು ಸತ್ತು ಹೋಗುತ್ತವೆ. ಆ ಮರಿಗಳ ತಾಯಿ ಹಾವು ರೊಚ್ಚಿಗೆದ್ದು ಅಂದಿನ ರಾತ್ರಿ ಆ ಒಕ್ಕಲಿಗನ ಮನೆಯ ಮಂದಿಯನ್ನೆಲ್ಲ ಕಚ್ಚಿ ಕೊಂದು ಹಾಕುವುದು. ಆದರೂ ಅದರ ರೋಷ ಶಮನವಾಗುವುದಿಲ್ಲ. ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳನ್ನು ಕೊಲ್ಲಲು ವೀರಾವೇಷದಿಂದ ಹೋಗುವುದು. ಅದೇ ಸಮಯದಲ್ಲಿ ಅತ್ತೆಯ ಮನೆಯಲ್ಲಿದ್ದ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಪೂಜಿಸಿ ಹಾಲೆರೆಯುತ್ತಿರುವುದನ್ನು ಕಂಡ ನಾಗಿಣಿಯ ರೊಚ್ಚು ತಕ್ಕ ಮಟ್ಟಿಗೆ ಶಾಂತವಾಗುವುದು. ಒಕ್ಕಲಿಗನ ಮನೆಯಲ್ಲಿ ಮಾಡಿದ ಕೇಡನ್ನು ತಿಳಿಸುವುದು. ಆಕೆ ಬೋರಾಡಿ ಅತ್ತು ತನ್ನ ತವರು ಮನೆಯವರನ್ನು ಬದುಕಿಸೆಂದು ಅಂಗಲಾಚಿ ಬೇಡಿಕೊಳ್ಳುವಳು. ಆ ನಾಗಿಣಿಗೆ ಕರುಣೆ ಹುಟ್ಟಿ ಮನೆಗೆ ಬಂದು ಎಲ್ಲರ ವಿಷವನ್ನು ಮರಳಿ ಪಡೆದು ಬದುಕಿಸುತ್ತದೆ. ಈ ಕಾರಣದಿಂದ ನಾಗಿಣಿಯನ್ನು ಪೂಜಿಸುತ್ತಾ ಬರಲಾಗಿದೆ ಎಂಬ ಕತೆಯಿದೆ. ಅಂದಿನ ನಾಗಿಣಿಯನ್ನು ಪೂಜಿಸಿದ ಆ ದಿನವೇ ನಾಗಚೌತಿ ಎಂಬ ಹೆಸರಿನಿಂದ ಕರೆಯುತ್ತಾ ಬಂದಿರುವ ವಾಡಿಕೆಯಾಗಿದೆ. ಮಗಳ ಈ ಉಪಕಾರದ ದ್ಯೋತಕವಾಗಿಯೇ ಇಂದಿಗೂ ನಾಗಪಂಚಮಿ ಹಬ್ಬಕ್ಕೆ ಮಗಳನ್ನು ತವರಿನವರು ಕರೆತರುವರೆಂದು ಜನಪದರು ಹೇಳುತ್ತಾರೆ.
ನಾವಿಂದೂ ಆಧುನಿಕತೆಯ ಬರಾಟೆಯಲ್ಲಿ ಎಷ್ಟೇ ಮುಂದುವರಿದಿದ್ದರೂ ಹಬ್ಬಗಳನ್ನು ಆಚರಿಸುವಷ್ಟೂ ಪುರಸೊತ್ತು ಇಲ್ಲದಿದ್ದರೂ, ಮಹಿಳೆಯರ ಪಾಲಿಗೆ ನಾಗರ ಪಂಚಮಿ ಸಂಭ್ರಮದ ಹಬ್ಬ. ತವರಿಗೆ ಬಂದು ಅಣ್ಣ-ತಮ್ಮ, ಗೆಳತಿಯರ ಜೊತೆ ಆಟ ಆಡುತ್ತಾ ಹರಟೆ ಹೊಡೆದು ತಂಬಿಟ್ಟು ತಿನ್ನುತ್ತಾ ಜೋಕಾಲಿ ಜೀಕುವುದೆಂದರೆ ಎಲ್ಲಿಲ್ಲದ ಸಂತೋಷ. ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಇಂದಿಗೂ ಇದೆ. ಈ ಮಜ ಬೇರಾವುದರಲ್ಲಿಯೂ ಸಿಗುವುದಿಲ್ಲ. ಸಮಸ್ತ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು.

ಹೆಚ್.ಎಂ.ಗುರುಬಸವರಾಜಯ್ಯ
ಉಪನ್ಯಾಸಕರು, ೯೯೮೬೬೨೨೮೦೧