ಶಿವಮೊಗ್ಗ ರೈಲ್ವೆ ಅಭಿವೃದ್ಧಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಬಿವೈಆರ್
ನವದೆಹಲಿ : ಕೇಂದ್ರ ಬಜೆಟ್ ೨೦೨೬-೨೭ರ ರೈಲ್ವೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲ್ವೆ ಯೋಜನೆಗಳನ್ನು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕಕ್ಕೆ ಈ ಬಾರಿ ದಾಖಲೆಯ ೭,೭೪೮ ಕೋಟಿ ರೂ. ರೈಲ್ವೆ ಅನುದಾನ ನೀಡಿರುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಯುಪಿಎ ಅವಧಿಗೆ ಹೋಲಿಸಿದರೆ ರಾಜ್ಯಕ್ಕೆ ಸಿಗುವ ಅನುದಾನದಲ್ಲಿ ೯ ಪಟ್ಟು ಹೆಚ್ಚಳ ವಾಗಿದೆ ಎಂದು ಹೇಳಿದರು.

ಶಿವಮೊಗ್ಗವನ್ನು ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಯೋಜನೆ ಶೀಘ್ರ ಪೂರ್ಣಗೊಳಿಸಿ, ಎರಡನೇ ಹಂತದ ಕಾಮಗಾರಿಗೆ ತಕ್ಷಣ ಟೆಂಡರ್ ಆಹ್ವಾನಿಸು ವಂತೆ ಅವರು ಮನವಿ ಮಾಡಿದರು. ಈ ಯೋಜನೆಗೆ ರಾಜ್ಯ ಸರ್ಕಾರದಿಂದ ೫೦:೫೦ ವೆಚ್ಚ ಹಂಚಿಕೆ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವನ್ನು ಅವರು ಸ್ಮರಿಸಿದರು.
ಇದೇ ವೇಳೆ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಿ, ಪಿಟ್ ಲೈನ್ ಹಾಗೂ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸ್ಥಾಪಿಸುವ ಅಗತ್ಯವಿದೆ ಎಂದರಲ್ಲದೇ, ಶಿವಮೊಗ್ಗದಿಂದ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಈ ಮೂಲಸೌಕರ್ಯ ಅಗತ್ಯವೆಂದು ಅವರು ಒತ್ತಿಹೇಳಿದರು. ಜೊತೆಗೆ ಬೀರೂರು-ಶಿವಮೊಗ್ಗ ಜೋಡಿ ಹಳಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ಆಗ್ರಹಿಸಿದರು.
ಮಲೆನಾಡಿನ ಭಾಗಗಳಿಗೆ ರೈಲು ಸಂಪರ್ಕ ವಿಸ್ತರಿಸುವ ನಿಟ್ಟಿನಲ್ಲಿ ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ- ಮಂಗಳೂರು ಹಾಗೂ ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ- ಚಿಕ್ಕಮಗಳೂರು ರೈಲು ಮಾರ್ಗಗಳ ಸಮೀಕ್ಷೆ ವೇಗಗೊಳಿಸುವಂತೆ ಅವರು ವಿನಂತಿಸಿದರು. ಅಲ್ಲದೆ ತಾಳಗುಪ್ಪ- ಹುಬ್ಬಳ್ಳಿ ಮಾರ್ಗವನ್ನು ಸೊರಬ ಮೂಲಕ ಹಾದುಹೋಗುವಂತೆ ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟರು.
ಇದರ ಜೊತೆಗೆ ಮೂಕಾಂಬಿಕಾ ರಸ್ತೆ ಬೈಂದೂರು ನಿಲ್ದಾಣದಲ್ಲಿ ನಾಲ್ಕು ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಸಚಿವಾಲಯವನ್ನು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕವಾಗಿ ಶಿವಮೊಗ್ಗವೂ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂಬ ವಿಶ್ವಾಸವನ್ನು ರಾಘವೇಂದ್ರ ವ್ಯಕ್ತಪಡಿಸಿದರು.
