ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಏಕಾಏಕಿ ರ್‍ಯಾಲಿಯಲ್ಲಿ ಪ್ರತ್ಯಕ್ಷಗೊಂಡು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪರಿಗೆ ಸಾಥ್ ನೀಡಿದ ಮೋದಿ…?!!!

Share Below Link

ಶಿವಮೊಗ್ಗ: ರಾಜ್ಯ ಬಿಜೆಪಿಯ ತ್ರಿಮೂರ್ತಿಗಳಲ್ಲಿ ಓರ್ವರಾದ ಕೆ.ಎಸ್. ಈಶ್ವರಪ್ಪನವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ಅಂಡ್ ಸನ್ಸ್ ವಿರುದ್ಧ ಸಿಡಿದೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ಎಸ್. ಯಡಿಯೂರಪ್ಪನವರ ಪುತ್ರ ಹಾಗೂ ಹಾಲಿ ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದಾರೆ.
ಮಾಜಿ ಡಿಸಿಎಂ ಈಶ್ವರಪ್ಪನವರು ಈ ಹಿಂದೆ ಘೋಷಿಸಿದಂತೆ ಇಂದು ನೆರೆದಿದ್ದ ಜನಸಾಗರದೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಈಶ್ವರಪ್ಪನವರು ಬಿಜೆಪಿಯಿಂದ ಬಂಡಾಯ ಸಾರಿದ ದಿನದಿಂದಲೇ ರಾಷ್ಟ್ರಭಕ್ತರ ಕೂಟ ರಚಿಸಿಕೊಂಡಿದ್ದು, ಮೋದಿ ಫೋಟೋ ಇಟ್ಟುಕೊಂಡು ಚುನಾವಣಾ ರಣರಂಗಕ್ಕೆ ಧುಮುಕಿದ್ದಾರೆ. ಈಶ್ವರಪ್ಪನವರು ನಾಮಪತ್ರ ಸಲ್ಲಿಸಲು ಇಂದು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ರ್‍ಯಾಲಿ ಹೊರಟಾಗ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಆಶ್ಚರ್ಯವೆಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿರೂಪದಂತಿದ್ದ ವ್ಯಕ್ತಿಯೋರ್ವರು ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಇಂದು ಪ್ರತ್ಯಕ್ಷವಾದ ಮೋದಿ ನಂ.೨ ಅವರನ್ನು ನೋಡಿದ ಜನರು ಸೆಲ್ಫಿ ತೆಗೆಯಲು ಮುಗಿ ಬಿದ್ದರು. ಈಶ್ವರಪ್ಪನವರು ತಮ್ಮ ರ್‍ಯಾಲಿಯಲ್ಲಿ ಬಳಸಿದ್ದ ವ್ಯಾನ್ ಮುಂಭಾಗದಲ್ಲಿ ಪ್ರಧಾನಿ ಮೋದಿ ಅವರ ದೊಡ್ಡದಾದ ಫ್ಲಕ್ಸ್ ಅಳವಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಮೋದಿ ಹೋಲಿಕೆಯ ವ್ಯಕ್ತಿಯನ್ನು ತಮ್ಮ ವಾಹನದಲ್ಲಿ ತಮ್ಮ ಪಕ್ಕದಲ್ಲೇ ನಿಲ್ಲಿಸಿಕೊಂಡು ರ್‍ಯಾಲಿಯಲ್ಲಿ ಸಾಗಿದ್ದು ಕೂಡ ವಿಶೇಷವಾಗಿತ್ತು. ಒಂದು ರೀತಿಯಲ್ಲಿ ಬಿಎಸ್‌ವೈ ಕುಟುಂಬದ ವಿರುದ್ಧ ಬಂಡಾಯ ಸಾರಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪನವರ ಬೆಂಬಲಕ್ಕೆ ಮೋದಿ ಬಂದಿದ್ದಾರೆಯೇ ಎಂಬಂತೆ ಮೆರವಣಿಗೆಯಲ್ಲಿ ಬಿಂಬಿತವಾಯಿತು. ಏನೇ ಆಗಲಿ ಇಂದು ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ ಮೋದಿ ನಂ.೨ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.