ಜಿಲ್ಲಾ ಸುದ್ದಿತಾಜಾ ಸುದ್ದಿ

ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಶಾಸಕ ಬಿವೈವಿ ಕರೆ

Share Below Link

ಶಿಕಾರಿಪುರ: ಸಂಪೂರ್ಣ ಪಟ್ಟಣದ ಸ್ವಚ್ಚತೆಗೆ ಶ್ರಮಿಸುವ ಪೌರಕಾರ್ಮಿಕರು ವೈಯುಕ್ತಿಕ ಆರೋಗ್ಯದ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಪೌರಕಾರ್ಮಿಕರನ್ನು ಹೊರತು ಪಡಿಸಿ ಪಟ್ಟಣ ಸ್ವಚ್ಚತೆ, ಸುಂದರವಾಗಿರಲು ಊಹಿಸಲು ಸಾಧ್ಯವಿಲ್ಲ. ವಾರದಲ್ಲಿ ೧-೨ ದಿನ ಸ್ವಚ್ಚತೆಗೆ ಬಾರದಿದ್ದಲ್ಲಿ ಪಟ್ಟಣದ ಆರೋಗ್ಯದ ಮೂಲಕ ನಾಗರೀಕರ ಆರೋಗ್ಯಏರುಪೇರಾಗಲಿದೆ. ಈ ದಿಸೆಯಲ್ಲಿ ಪೌರಕಾರ್ಮಿಕರ ಶ್ರಮ ಪ್ರಾಮುಖ್ಯತೆ ಪ್ರತಿಯೊಬ್ಬರಿಗೂ ಅರಿವಾಗಿದೆ ಎಂದ ಅವರು ಪಟ್ಟಣದ ಸ್ವಚ್ಚತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪೌರಕಾರ್ಮಿಕರು ವೈಯುಕ್ತಿಕ ಸ್ವಚ್ಚತೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ರಾಘವೇಂದ್ರ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸ್ವಚ್ಚತೆಗಾಗಿ ಬೀದಿ ಗಿಳಿದ ಪೌರಕಾರ್ಮಿಕರು ಊರಿನ ವೈದ್ಯರಾಗಿ ಸಲ್ಲಿಸಿದ ಸೇವೆ ಸಮುದಾಯ ಮರೆಯಲು ಸಾಧ್ಯವಿಲ್ಲ. ಜೀವದ ಹಂಗು ತೊರೆದು ಸ್ವಚ್ಚತೆಗಾಗಿ ಶ್ರಮಿಸುವ ಪೌರಕಾರ್ಮಿಕರಿಗೆ ಉತ್ತಮ ಬದುಕು ರೂಪಿಸಲು ಸರ್ಕಾರ ಸಮವಸ, ಶೂ, ಗ್ಲೌಸ್ ಸಹಿತ ಅಗತ್ಯ ಸಾಧನಗಳನ್ನು ವಿತರಿಸಿದ್ದು ನಿರ್ಲಕ್ಷಿಸದೆ ಪ್ರತಿಯೊಂದನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದ ಅವರು ಸ್ವಚ್ಚತೆ ಕಾಪಾಡುವ ದಿಸೆಯಲ್ಲಿ ಮದ್ಯದ ದಾಸರಾಗದಂತೆ ಜಾಗೃತಿ ವಹಿಸಲು ಕಿವಿಮಾತು ಹೇಳಿದರು.
ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ಪೌರಕಾರ್ಮಿಕರಿಗೆ ಸಾರ್ವಜನಿಕರು ಒಣಕಸ, ಹಸಿಕಸ ಬೇರ್ಪಡಿಸಿ ನೀಡುವ ಮೂಲಕ ಸಹಕರಿಸುವಂತೆ ತಿಳಿಸಿ ಸರ್ಕಾರ ನೀಡಿದ ರಕ್ಷಣಾ ಕವಚವನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಗಮನಹರಿಸುವಂತೆ ತಿಳಿಸಿದರು.
ಪ್ರಭಂದಕ ರಾಜಕುಮಾರ್, ಪುರಸಭೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ವೇತನ ಸಹಿತ ಎಲ್ಲ ಸೌಲಭ್ಯ ದೊರಕಿಸಿಕೊಡಲು ಶಾಸಕರು, ಸಂಸದರು ಶಾಸನಸಭೆಯಲ್ಲಿ ನೌಕರರ ಧ್ವನಿಯಾಗುವಂತೆ ಮನವಿ ಮಾಡಿದರು.
ಪುರಸಭಾ ಸದಸ್ಯ ಉಳ್ಳಿ ದರ್ಶನ್, ಪಾಲಾಕ್ಷಪ್ಪ, ರೇಣುಕ ಸ್ವಾಮಿ, ಪ್ರಶಾಂತ್ ಜೀನಳ್ಳಿ, ಟಿ.ಎಸ್ ಮೋಹನ್, ರೋಷನ್, ಶಿಲ್ಪ ಮಡ್ಡಿ, ರೂಪಕಲಾ ಹೆಗ್ಡೆ, ಜಯಶ್ರೀ, ಸುನಂದ, ಲಕ್ಷ್ಮಿ, ರೂಪ, ಉಮಾವತಿ, ಮುಖ್ಯಾಧಿಕಾರಿ ಭರತ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.