ಮಳಲಿ ಮರಳು ಮಾಫಿಯಾ: ಫೈರ್‌ಬ್ರಾಂಡ್ ರೇಣುಕಾಚಾರ್ಯ ಸೈಲೆಂಟ್ ಆಗಿದ್ದೇಕೆ?!
ವಿಶೇಷ ವರದಿ: ರಾಕೇಶ್ ಡಿಸೋಜ – 9482482182
ಹೊನ್ನಾಳಿ: ತಾಲೂಕಿನ ಮಳಲಿ ಗ್ರಾಮದ ಭಾಗದಲ್ಲಿನ ಮಳಲಿ -ನಿಂಬೆಗುಂದಿ ನಡುವಿನ ತುಂಗಭದ್ರಾ ನದಿ ತಟ ಮತ್ತೊಮ್ಮೆ ಅಕ್ರಮ ಮರಳು ಗಣಿಗಾರಿಕೆಯ ಕಣವಾಗಿದ್ದು, ಕಳೆದ ಒಂದು ತಿಂಗಳಿನಿಂದ ನದಿ ಒಡಲನ್ನೇ ಬಗೆದು ಬೃಹತ್ ಪ್ರಮಾಣದಲ್ಲಿ ಮರಳು ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರದ ಆಸ್ತಿ ನೇರವಾಗಿ ಲೂಟಿಯಾಗು ತ್ತಿದ್ದರೂ, ಜನಪ್ರತಿನಿಧಿಗಳ ಪ್ರತಿರೋಧವೂ ಇಲ್ಲ ಮತ್ತು ಅಧಿಕಾರಿಗಳಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಕಾಣದಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

ಸ್ಥಳೀಯರ ಆರೋಪದ ಪ್ರಕಾರ ಪ್ರತಿ ದಿನ ಸುಮಾರು ೮೦ ರಿಂದ ೮೫ ಲೋಡ್‌ಗಳಷ್ಟು ಮರಳು ಐದಾರು ಹಿಟ್ಯಾಚಿ, ಜೆಸಿಬಿಗಳ ಸಹಾಯದಿಂದ ತೆಗೆಯಲಾಗುತ್ತಿದೆ. ನದಿಯ ದಂಡೆಯ ಮರಳನ್ನು ಗುಡ್ಡೆಹಾಕಿ, ಬಳಿಕ ಟ್ರ್ಯಾಕ್ಟರ್ ಮತ್ತು ಟಿಪ್ಪರ್‌ಗಳಲ್ಲಿ ತುಂಬಿಸಿ ಸಾಗಿಸಲಾಗುತ್ತಿದೆ. ನದಿಯ ಮಧ್ಯದ ಅಕ್ರಮ ದಾರಿಗಳು ನಿರ್ಮಿಸಿ, ಜೀವನದಿಯ ಹೃದಯವನ್ನೇ ಚೀರಿಕೊಂಡು ಸಾಗುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿದ್ದು, ಇಷ್ಟೊಂದು ದೊಡ್ಡ ಮಟ್ಟದ ದಂಧೆ ಅಧಿಕಾರಿಗಳ ಗಮನಕ್ಕೆ ಬರದೇ ಇರಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿದೆ.
ಈ ಹಿಂದೆ ಕೆಲವು ಬಾರಿ ಹೊಸನಾವಿಕ ಪತ್ರಿಕೆಯಲ್ಲಿ ತನಿಖಾ ವರದಿ ಪ್ರಕಟವಾದಾಗ ಸದರಿ ಜಿಲ್ಲೆಗಳ ಒಂದೆರಡು ಸ್ಥಳಗಳಿಗೆ ಭೇಟಿ ನೀಡಿ ಒಂದಿಬ್ಬರು ಸಣ್ಣಪುಟ್ಟ ಮರಳ್ಗಳ್ಳರನ್ನು ತಡೆಗಟ್ಟಿ ಅವರ ಮೇಲೆ ಎಂಎಂಆರ್‌ಡಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತಾವು ಪ್ರಾಮಾಣಿಕ ಅಧಿಕಾರಿಗಳೆಂದು ಫೋಸ್ ಕೊಟ್ಟು ಕೈತೊಳೆದುಕೊಂಡಿದ್ದ ಅಧಿಕಾರಿಗಳು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ಎಸಗುತ್ತಿರುವವರನ್ನು ಎಳೆದುತಂದು ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಏಕೆ ಹಿಂದೇಟು ಹಾಕುತ್ತಿzರೆ ಎಂಬುದು ಈವರೆಗಿನ ಯಕ್ಷಪ್ರಶ್ನೆಯಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಕೇವಲ ನಿಯಮ ಉಲ್ಲಂಘನೆ ಅಲ್ಲ. ಅದು ಸಾರ್ವಜನಿಕ ಸಂಪತ್ತಿನ ಕಳ್ಳತನ, ಪರಿಸರ ಹಾನಿ ಹಾಗೂ ಸಂಘಟಿತ ಅಪರಾಧವಾಗಿದೆ. ಹೀಗಿದ್ದರೂ ಗಂಭೀರ ಕಲಂಗಳಡಿ ಕೇಸುಗಳು ಯಾಕೆ ಹಾಕುತ್ತಿಲ್ಲ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬಬೇಕಿದೆ.

ದಂದೆಕೋರರ ನಾಯಕ ಯಾರು:
ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿರುವ ಆರೋಪಗಳ ಪ್ರಕಾರ ಈ ದಂಧೆಯಲ್ಲಿ ಬಾಬು ಅಲಿಯಾಸ್ ಬಾಬಣ್ಣ, ಆರ್‌ಆರ್ ಬ್ರದರ್ಸ್ ಅಂಡ್ ಟೀಮ್ ಸೇರಿದಂತೆ ಇನ್ನಿತರ ಹೆಸರುಗಳು ಕೇಳಿಬರುತ್ತಿವೆ. ಈ ದಂದೆಕೋರರ ಟೀಮ್ ಲೀಡರ್ (ನಾಯಕ) ಯಾರು? ಯಾರ್‍ಯಾರ ನೆರಳಲ್ಲಿ ಈ ದಂದೆ ನಡೆಯುತ್ತಿದೆ? ಮರಳುಗಳ್ಳರಿಗೆ ಸೇಫ್‌ಗಾಡ್ ಆಗಿ ನಿಂತಿರುವ ವರ್‍ಯಾರು? ಮರಳು ಎತ್ತಲು ತೋಟ-ಗzಗಳ ಮೂಲಕ ಮಾರ್ಗ ಒದಗಿಸಿ ಸಹಕಾರ ನೀಡುತ್ತಿರುವ ಭೂಮಾಲೀಕರ ಮೇಲೆ ಪ್ರಕರಣಗಳು ಏಕೆ ದಾಖಲಾಗುತ್ತಿಲ್ಲ? ಲಾರಿ ಮಾಲೀಕರು, ಯಂತ್ರ ಮಾಲೀಕರು, ಮಧ್ಯವರ್ತಿಗಳು ಯಾರ ವಿರುದ್ಧವೂ ಕಾನೂನು ಕೈ ತಲುಪಷ್ಟು ಅಸಹಾಯಕ ವಾಗಿವೆಯೇ ಎಂಬ ಅನುಮಾನ ತೀವ್ರಗೊಂಡಿವೆ.
ಈ ಹಿಂದೆ ನಿಂಬೆಗುಂದಿ ಅಕ್ರಮ ಮರಳುಗಾರಿಕೆ ಕುರಿತು ಹೊಸನಾವಿಕ ಪತ್ರಿಕೆಯ ವರದಿಯನ್ನು ಆಧರಿಸಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಭೂವಿeನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಕ್ರಮದಲ್ಲಿ ತೊಡಗಿದ್ದವರ ಕೆಲ ತೆಪ್ಪಗನ್ನು ಸುಟ್ಟು, ನದಿಯಲ್ಲಿ ನಿರ್ಮಿಸಿದ್ದ ಅಕ್ರಮ ರಸ್ತೆಯನ್ನು ಧ್ವಂಸಗೊಳಿಸಿದ್ದರು.
ಆದರೆ ಸದರಿ ಪ್ರಕರಣ ಕುರಿತು ವಶಪಡಿಸಿ ಕೊಂಡ ವಸ್ತುಗಳ್ಯಾವುವು? ಯಾರ್‍ಯಾರ ಬಂಧನವಾಯಿತು? ಎಂಬಿತ್ಯಾದಿ ಅಂಶಗಳು ಬಯಲಿಗೆ ಬರಲೇ ಇಲ್ಲ. ಕೇವಲ ಒಂದಿಬ್ಬರು ಸಣ್ಣಪುಟ್ಟ ದಂದೆಕೋರರ ವಿರುದ್ಧ ಕ್ರಮ ತೆಗೆದುಕೊಂಡಂತೆ ನಾಟಕವಾಡಿದ ಬಹುತೇಕ ಅಧಿಕಾರಿಗಳು ತಮಗೆ ಕಪ್ಪಕಾಣಿಕೆ ಕೊಡುತ್ತಿದ್ದ ಮರಳ್ಗಳ್ಳರನ್ನು ಮಾತ್ರ ಸದ್ದಿಲ್ಲದೇ ರಕ್ಷಿಸಿದ್ದರು ಎಂಬ ಆರೋಪಗಳು ಕೇಳಿಬರುತ್ತಿವೆ.
ಇಂದು ಇದೇ ಅಧಿಕಾರಿಗಳ ರಕ್ಷಣೆಯಲ್ಲಿ ರುವ ಮತ್ತೊಂದು ತಂಡ ಮಳಲಿ ಗ್ರಾಮದ ಕಡೆಯಿಂದ ಮತ್ತೆ ನದಿಗಿಳಿದು ಸದರಿ ಸ್ಧಳದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿ ರುವುದು ಎರಡೂ ಜಿಗಳ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಬಂದರೂ ಅವರು ಕಣ್ಮುಚ್ಚಿ ಕುಳಿತಿರುವುದೇಕೆ? ಯಾವಾಗಲೂ ಅಧಿಕಾರಿಗಳ ಮೊಬೈಲ್ ವ್ಯಾಪ್ತಿ ಪ್ರದೇಶದಿಂದ ಹೊರಗಿರುವುದೇಕೆ? ಒಂದು ವೇಳೆ ಮೊಬೈಲ್ ರಿಂಗ್ ಆದರೂ ಯಾಕೆ ಕಾಲ್ ರಿಸೀವ್ ಮಾಡುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅಂದು ಅಬ್ಬರಿಸಿದ್ದ ರೇಣುಕಾಚಾರ್ಯ ಇಂದು ಮನಕ್ಕೆ ಶರಣಾಗಿರುವುದೇಕೆ:
ಅಂತೆಯೇ ಈ ಹಿಂದೆ ಹೊಸನಾವಿಕದಲ್ಲಿ ಪ್ರಕಟವಾದ ನಿಂಬೆಗುಂದಿಯಲ್ಲಿ ತುಂಗಭದ್ರೆಯ ನಿಧಿ ದರೋಡೆ ವರದಿಗೆ ಸ್ಪಂದಿಸಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮರಳು ದಂದೆಕೋರರ ವಿರುದ್ಧ ಗುಡುಗಿದ್ದರು.
ಸುದ್ದಿಗೋಷ್ಟಿ ನಡೆಸಿ ದಂಧೆಕೋರರ ವಿರುದ್ಧ ಸಿಡಿದೆದ್ದಿದ್ದ ರೇಣುಕಾಚಾರ್ಯ ಅವರು, ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಸಂದೇಶವನ್ನೂ ಕೂಡ ರವಾನಿಸಿದ್ದರು. ಆ ಹೋರಾಟ ಕ್ಷೇತ್ರದ ಜನರಲ್ಲಿ ಭರವಸೆ ಮೂಡಿಸಿತ್ತು ಮಾತ್ರವಲ್ಲದೇ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಆದರೆ ಇಂದು ಅದೇ ತುಂಗಭದ್ರಾ ನದಿ, ಅದೇ ಮರಳು ಅಕ್ರಮ ಗಣಿಗಾರಿಕೆ, ಅವರ ಕಾಲುಬುಡದಲ್ಲೇ ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದ ಮರಳು ಕಳ್ಳಸಾಗಣೆ ಯಾಗುತ್ತಿರುವುದು ಇದೇ ಫೈರ್‌ಬ್ರಾಂಡ್ ರೇಣುಕಾಚಾರ್ಯರ ಗಮನಕ್ಕೆ ಬಂದಿಲ್ಲವೇ? ಒಂದು ವೇಳೆ ಬಂದಿದ್ದರೂ ಮನವಹಿಸಿರು ವುದು ಏಕೆ? ಮರಳು ದಂದೆಕೋರರ ಒತ್ತಡವೇ, ರಾಜಕೀಯ ಲೆಕ್ಕಾಚಾರವೇ? ಅಥವಾ ಜನಸಾಮಾನ್ಯರ ಹಿತಕ್ಕಿಂತ ಬೇರೆ ಹಿತಾಸಕ್ತಿಗಳೇ ಮುಖ್ಯವಾಯಿತ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನಪ್ರತಿನಿಧಿಗಳ ನೈತಿಕ ಕರ್ತವ್ಯ. ಮನವೇ ಉತ್ತರವಾದರೆ, ಅದು ದಂದೆಕೋರರಿಗೆ ಸಾಥ್ ನೀಡುವ ಮುದ್ರೆ ಒತ್ತಿದಂತೆ ಅಲ್ಲೇವೇ? ಫೈರ್ ಬ್ರಾಂಡ್, ಹೊನ್ನಾಳಿ ಟಗರು ಎಂಬಿತ್ಯಾದಿ ಟ್ಯಾಗ್‌ಲೈನ್‌ಗಳೊಂದಿಗೆ ಸದಾ ಸುದ್ದಿಯಲ್ಲಿದ್ದು ಆರ್ಭಟಿಸುವ ಮಾಜಿ ಸಚಿವರು ಈಗ ಗಾಢ ನಿದ್ರೆಯಲ್ಲಿದ್ದಾರೆಯೇ ಅಥವಾ ದರೋಡೆ ಕೋರರ ಹಿಡಿತದಲ್ಲಿದ್ದಾರೆಯೇ? ಎಂಬ ಅನುಮಾನ ಮಾತ್ರವಲ್ಲದೇ, ಈವರೆಗೆ ಅವರಿಂದ ಪ್ರತಿಕ್ರಿಯೆ ಇಲ್ಲದಿರುವುದು ಕೂಡ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಕೃತಿ ಮೇಲಿನ ದೌರ್ಜನ್ಯಕ್ಕೆ ಧಾರ್ಮಿಕ ಮುಖವಾಡವೇ:
ಮತ್ತೊಂದೆಡೆ ಪ್ರತಿ ಲೋಡ್‌ಗೆ ಗ್ರಾಮದ ದೇವಸ್ಥಾನದ ಹೆಸರಲ್ಲಿ ಗ್ರಾಮದ ಕೆಲ ಮುಖಂಡರ ಕೈಗೆ ಸಾವಿರಾರು ರೂ. ಸಂದಾಯ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದು, ಈ ಅಕ್ರಮದಲ್ಲಿ ಮಳಲಿ ಗ್ರಾಮಸ್ಥರು ಮೌನತಾಳಿರುವುದನ್ನು ಕಂಡರೆ ಅಕ್ರಮ ದಂದೆಕೋರರ ಆರೋಪದಲ್ಲಿ ಸತ್ಯಾಂಶವಿದೆ ಎಂಬ ಅನುಮಾನ ಕಾಡುತ್ತಿದೆ.
ಒಂದು ವೇಳೆ ಈ ಮಾತು ಸತ್ಯವಾಗಿದ್ದರೆ ಜೀವನದಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಧಾರ್ಮಿಕ ಮುಖವಾಡ ಹಾಕಲಾಗುತ್ತಿದೆಯೇ? ಎಂಬ ನೈತಿಕ ಪ್ರಶ್ನೆ ಮೂಡಿದ್ದು, ಗ್ರಾಮದ ದೇವಸ್ಥಾನದ ಹೆಸರಲ್ಲಿ ಜೀವ ನದಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ದುಷ್ಠರಿಗೆ ಸಾಥ್ ನೀಡುವುದು ಎಷ್ಟು ಸರಿ ಎಂಬುದನ್ನು ಈ ಅಕ್ರಮಕ್ಕೆ ಕೈಜೋಡಿಸಿರುವವರೇ ಉತ್ತರಿಸಬೇಕಿದೆ. ಕನಿಷ್ಠಪಕ್ಷ ಸದರಿ ಗ್ರಾಮಸ್ಥರು ಈ ಹಿಂದೆ ಹಾಡೋನಹಳ್ಳಿಯಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಅವಘಡವನ್ನಾದರೂ ನೆನಪಿಸಿ ಕೊಂಡು ಈ ದಂದೆಗೆ ಬ್ರೇಕ್ ಹಾಕಲು ಮುಂದಾಗಬೇಕಿದೆ.
ಅಕ್ರಮ ಮರಳು ಗಣಿಗಾರಿಕೆ ನದಿಯ ಹರಿವು, ನೆಲದ ಸ್ಥಿರತೆ, ಕೃಷಿ, ಕುಡಿಯುವ ನೀರು ಎಲ್ಲವನ್ನೂ ಹಾಳುಮಾಡುತ್ತದೆ. ಇಂದು ಲಾಭದ ಲಾಲಸೆಗೆ ತುಂಗಭದ್ರೆಯ ಜೀವನಾಡಿಯನ್ನೇ ಬಲಿಯಾಗಿಸಲಾಗುತ್ತಿದೆ. ನಾಳೆ ಇದರ ಬೆಲೆ ಸದರಿ ಗ್ರಾಮಸ್ಥರೇ ತೆರಬೇಕಾಗುತ್ತದೆ. ಬಿಎನ್‌ಎಸ್ ಸೇರಿದಂತೆ ಗಂಭೀರ ಕಲಂಗಳಡಿ ಸಂಘಟಿತ ಅಪರಾಧ ಕೇಸುಗಳನ್ನು ದಾಖಲಿಸಿ, ಯಂತ್ರ, ಲಾರಿಗಳ ವಶಪಡಿಕೊಂಡು ಮಧ್ಯವರ್ತಿಗಳ ಬಂಧನ ಮತ್ತು ಭೂಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕಿದೆ.
ಇದು ಕೇವಲ ಒಂದು ಗ್ರಾಮದ ಪ್ರಶ್ನೆಯಲ್ಲ. ತುಂಗಭದ್ರೆಯ ಭವಿಷ್ಯದ ಪ್ರಶ್ನೆಯಾಗಿದ್ದು ಜಿಂತರ ಟಾಸ್ಕ್‌ಫೋರ್ಸ್‌ನ ನಿಜವಾದ ಕಾರ್ಯಾಚರಣೆ ಮೂಲಕ ಪರಿಸರ ಪುನಶ್ಚೇತನ ಯೋಜನೆ ರೂಪಿಸಬೇಕಿದೆ. ಇದಕ್ಕೆ ಪರಿಸರವಾದಿಗಳು, ಜನಪ್ರತಿನಿಧಿಗಳು, ಜಗೃತ ನಾಗರಿಕರು ಎಲ್ಲರೂ ಕೈಜೋಡಿಸಬೇಕು ಎಂಬುದು ಹೊಸನಾವಿಕ ಪತ್ರಿಕೆಯ ಕಳಕಳಿಯಾಗಿದೆ.
