ಇತರೆತಾಜಾ ಸುದ್ದಿಲೇಖನಗಳು

ಮಹಾರಾಜಯೋಗಿ ಚಿದಾನಂದಾವಧೂತರು

Share Below Link

ಕನ್ನಡಿಗರ ನಾಡಹಬ್ಬ ದಸರಾ. ವಿವಿಧೆಡೆ ವಿವಿಧ ರೀತಿಯಲ್ಲಿ ದೇವಿ ಆರಾಧನೆ ನಡೆಯುತ್ತದೆ. ಆಯಾಯ ಸಮಾಜದವರು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಒಂದೆಡಯಾದರೆ, ಬಹಳ ಕಡೆ ಪುರಾಣವನ್ನು ಪಠಿಸುವರು. ಪುರಾಣವನ್ನು ಓದುವ ಮೂಲಕ ದೇವಿಯನ್ನು ಆರಾಧಿಸುವರೇ ಹೆಚ್ಚು. ನಮ್ಮ ರಾಜ್ಯದಲ್ಲಿ ವಿಜಯನಗರದ ಅರಸರ ಕಾಲದಿಂದಲೂ ನವರಾತ್ರಿಯ ಉತ್ಸವ ನಡೆದುಕೊಂಡು ಬಂದಿದ್ದು, ನಂತರ ಮೈಸೂರಿನಲ್ಲಿ ಅರಸರ ಕಾಲದಿಂದ ದಸರಾ ದರ್ಬಾರ್ ಮುಂದುವರೆದು ವಿಶ್ವದಾದ್ಯಂತ ಅದರ ಹಿರಿಮೆ- ಗರಿಮೆಗೆ ಪಾತ್ರವಾಗಿದೆ. ವಿಶ್ವ್ವದ ನಾನಾ ಕಡೆಯಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಈ ನವರಾತ್ರಿಯ ಸಂದರ್ಭದಲ್ಲಿ ಅನೇಕ ಕಡೆ ಜಗನ್ಮಾತೆ ರಾಜರಾಜೇಶ್ವರಿಯ ಪುರಾಣ ಪ್ರವಚನ ಜರುಗುತ್ತಾ ಬಂದಿದೆ. ಪುರಾಣ ರಚಿಸಿದ ಕವಿಯ ಕುರಿತು ನೋಡುವುದಾದರೆ, ವರಕವಿ ಚಿದಾನಂದ ಅವಧೂತರು ಬಗಳಾಂಬೆಯ ಅನನ್ಯ ಉಪಾಸಕರು. ಕನ್ನಡ ನಾಡಿನ ಮಹಿಮರು. ಸುಮಾರು ೩೫೦ ವರ್ಷಗಳ ಹಿಂದೆ ಸಾಕ್ಷಾತ್ ಆದಿಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡವರು.


ಇಂತಹ ಮಹಾನ್ ವರಕವಿಯನ್ನು ಓದುಗರಿಗೆ ಪರಿಚಯಿಸಿದವರು ಅಯ್ಯಪ್ಪಕವಿ. ಅಯ್ಯಪ್ಪ ಕವಿರಚಿತ ಚಿದಾನಂದವಧೂತ ರಾಜಯೋಗಿ ಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದವರು ರೌಡಕುಂದಿ ಬೃಹನ್ಮಠೀಯ ಸಿ. ಶಿವಾಚಾರ್ಯರು.
ಬಳ್ಳಾರಿ ಜಿ ಶಿರಗುಪ್ಪ ತಾಲೂಕಿನ ಗಡಿಭಾಗವಾದ ಆದವಾನಿ ಹತ್ತಿರದ ಹಿರಿಯಹಟ್ಟಿ ಗ್ರಾಮದ ಕುಲಕರ್ಣಿ ಪೊಂಪಣ್ಣನ ಪುತ್ರ ಈ ಅಯ್ಯಪ್ಪಕವಿ. ಕಡಿಮೆ ಕಲಿತ ಅಯ್ಯಪ್ಪ ಕವಿಯು ಮಹಾಕವಿಗಳ ಸಾಲಿನಲ್ಲಿ ಸೇರಬಲ್ಲವನು. ಈತನ ಕಾಲಮಾನ ತಿಳಿಯದ ಕಾರಣ ತೆರೆಮರೆಯ ಕವಿಯಾಗಿzನೆ. ಏಳು ಸಂಧಿಗಳಲ್ಲಿ ಜೀವನ ವೃತ್ತಾಂತವನ್ನು ರಚಿಸಿ, ಕೃತಿಯ ಒಂದೆಡೆ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಚಿದಾನಂದಾವಧೂತ ಸದ್ಗುರುವರ್ಯಚರಣ ಭ್ರಮರ ಅಯ್ಯಪ್ಪ ವಿರಚಿತ…? ಎಂದು ಹೇಳಿಕೊಂಡಿರುವುದರಿಂದ ತಾನು ಚಿದಾನಂದರ ಶಿಷ್ಯನೆಂದು ತಿಳಿಸಿzನೆ.
ಚಿದಾನಂದ ಅವಧೂತರು ಶಿಷ್ಯ ಪರಂಪರೆಯಲ್ಲಿ ಬರುವ ಅಯ್ಯಪ್ಪ ಕವಿ ೧೮ನೆಯ ಶತಮಾನದ ಕೊನೆ ಅಥವಾ ೧೯ನೆಯ ಶತಮಾನದ ಆದಿಯಲ್ಲಿಈ ಕಾವ್ಯವನ್ನು ರಚಿಸಿರಬಹುದು ಎನ್ನಲಾಗಿದೆ. ಶ್ರೀದೇವಿ ಪುರಾಣವನ್ನು ಪ್ರತಿದಿನ ಶ್ರದ್ಧಾಭಕ್ತಿಯಿಂದ ಪಠಿಸುವುದರಿಂದ ಪುಣ್ಯ ಲಭಿಸುವುದು.
ಚಿದಾನಂದರು ಬ್ರಾಹ್ಮಣ ಸ್ಮಾರ್ತವಂಶಜರೆಂದು, ಕೆಲವರು ಅಕ್ಕಸಾಲಿಗ ವಂಶದವರೆಂದು ಹೇಳುತ್ತಾರೆ. ಇದಕ್ಕಿಂತ ಅವರು ಸಾಧಿಸಿದ ಸಿದ್ಧಿ, ಪ್ರತಿಪಾದಿಸಿದ ತತ್ವಗಳನ್ನು ವಿಮರ್ಶಿಸಿದಲ್ಲಿ ಇವರೊಬ್ಬ ಆಚಾರ್ಯರೆಂದು ತಿಳಿದು ಬರುವುದು. ಕಂಪಲಿ, ಗೋದಾವರಿ ನದಿಯಾಚೆಯಿರುವ ಯದುಲಾಪುರ ಹಾಗೂ ರಾಯಚೂರು ಜಿಯ ದಕ್ಷಿಣ ಭಾಗದ ಸಿದ್ಧಗಿರಿ ಚಿದಾನಂದರ ಮಠಗಳು. ಸಿದ್ಧಗಿರಿಯಲ್ಲಿ ಅಂಬಾಮಠ, ಬಗಳಾಂಬೆಯ ಗುಡಿಯನ್ನು ಕಟ್ಟಿಸಿ, ನವಕ್ಷೇತ್ರವನ್ನಾಗಿಸಿದ ವಿಷಯ ತಿಳಿದು ಬರುವುದು.
ಅವಧೂತ ಪರಂಪರೆಯಲ್ಲಿಯೇ ಅತ್ಯಂತ ಪ್ರಮುಖರು. ಇಲ್ಲಿಯೇ ಪ್ಲವಂಗನಾಮ ಸಂವತ್ಸರ ಮಾಘ ಬಹುಳ ತ್ರಯೋದಶಿಯಂದು ಸಜೀವ ಸಮಾಧಿಯಾಗಿzರೆಂದು ತಿಳಿದುಬರುತ್ತದೆ.
ಈಗಿನ ಆದವಾನಿ ಪ್ರಾಂತದ ಹಿರೇ ಹರಿವಾಣ ಗ್ರಾಮದಲ್ಲಿ ಸದಾಚಾರ ಸಂಪನ್ನರು, ನರಸಿಂಹನ ಭಕ್ತರು, ಪವಿತ್ರಾತ್ಮರಾದ ಅಣ್ಣಮ್ಮ ಹಾಗೂ ಕುಲಕರ್ಣಿ ಲಕ್ಷ್ಮೀಪತಿ ಎಂಬ ದಂಪತಿಗಳ ಪುಣ್ಯಗರ್ಭದಿ ಶುಭ ಮುಹೂರ್ತದಲ್ಲಿ ರಾಜಯೋಗಿಯಾಗಲಿರುವ ಚಿದಾನಂದರು ಜನಿಸುತ್ತಾರೆ. ಆರಂಭದಲ್ಲಿ ಈತನಿಗೆ ಝಂಕಪ್ಪ(೧೭೦೦) ಎಂದೇ ಹೆಸರಿಟ್ಟಿದ್ದರು. ನಾಲ್ಕು ವರ್ಷಗಳಲ್ಲಿ ವೇದ, ಉಪನಿಷತ್ತು, ಮಂತ್ರಗಳನ್ನು ಅಣ್ಣ ನರಸಪ್ಪನಿಂದ ಕಲಿತುಕೊಳ್ಳುತ್ತಾನೆ. ಬಾಲಕನಿರುವಾಗಲೇ ಶ್ರೀ ನರಸಿಂಹದೇವರ ಕೀರ್ತನೆಗಳು ತಾವಾಗಿಯೇ ಬಾಯಿಂದ ಬರುತ್ತಿದ್ದವಂತೆ. ಅಂದಿನಿಂದ ಈತನ ಬಾಲಲೀಲೆ ತಾಯಿಗೆ ತಿಳಿಯುತ್ತದೆ. ಝಂಕಪ್ಪನಿಗೆ ಐದು ವರ್ಷಗಳು. ಲಕ್ಷ್ಮೀಪತಿಯ ಸಹೋದರರು ಆಸ್ತಿಯನ್ನು ಹಂಚಿಕೊಂಡು ಜೀವಿಸುವ ಸಂದರ್ಭದಲ್ಲಿ ತಮ್ಮ ಉಪಜೀವನಕ್ಕಾಗಿ ಗಂಗಾವತಿಯ ಹೆಬ್ಬಾಳ ಗ್ರಾಮಕ್ಕೆ ಬರುವರು. ಈತನಿಗೆ ನರಸಿಂಹ, ಚೂಡಣ್ಣರೆಂಬ ಅಣ್ಣಂದಿರಿದ್ದರು. ತಾಯಿಗೆ ಕಂಬದಲ್ಲಿಯೇ ಆದಿಶಕ್ತಿಯನ್ನು ತೋರಿಸಿದಾತ ಈ ಝಂಕಪ್ಪ. ತನ್ನ ತಂದೆ, ತಾಯಿ ಗತಿಸಿದ ನಂತರ ಪದಕಿ ಪಾರುಪತ್ಯಗಾರ ಮನೆತನಕ್ಕೆ ಸಂಬಂಧಿಸಿದ ನಾಗಪ್ಪನ ಮಗಳಾದ ಪಂಪಕ್ಕನ ಆಶ್ರಯದಲ್ಲಿ ಬೆಳೆಯುತ್ತಾನೆ.


ಒಮ್ಮೆ ತುಂಗಾಭದ್ರ ನದಿಗೆ ಸ್ನಾನಕ್ಕೆಂದು ಹೋದಾಗ ಶ್ರೀದೇವಿಯು ಪಂಪಕ್ಕನ ರೂಪದಲ್ಲಿ ಬಂದು, ಅಯೋಧ್ಯೆಯಲ್ಲಿರುವ ಸದ್ಗುರು ಕೊಂಡಪ್ಪನಲ್ಲಿಗೆ ಹೋಗಲು ಉಪದೇಶಿಸುತ್ತಾಳೆ. ಮಹಾeನಿ ಸದ್ಗುರು ಕೊಂಡಪ್ಪನ ಸೇವೆ ಮಾಡುತ್ತಿರುವಾಗ ಇವನ ಸೇವಾ ಕೈಂಕರ್ಯವನ್ನು ಮೆಚ್ಚಿ ಝಂಕಪ್ಪನಿಗೆ ಚಿದಾನಂದನೆಂದು ಕರೆಯುವನು. ಅಂದಿನಿಂದ ಝಂಕಪ್ಪ ಚಿದಾನಂದನಾದ. ಅವರ ಆಪೇಕ್ಷೆಯಂತೆ ಪುಣ್ಯಕ್ಷೇತ್ರಗಳ ಯಾತ್ರೆ ಕೈಗೊಂಡು, ಅಯೋಧ್ಯೆಯಿಂದ ಅಲಂಪುರಿಯ ಜೋಗಳಾಂಬ, ಶ್ರೀಶೈಲದ ಮಲ್ಲಿಕಾರ್ಜುನ, ಅಹೋಬಲದ ನಾರಸಿಂಹ, ವೇಮುಲವಾಡದ ರಾಜೇಶ್ವರಿ, ರಾಚೋಟಿ ವೀರಭದ್ರೇಶ್ವರ, ತಿರುಪತಿಯ ವೆಂಕಟೇಶ್ವರ, ಕಂಚಿಯ ಕಾಮಾಕ್ಷಿ, ಮಧುರೆ ಮೀನಾಕ್ಷಿ, ತಿರುಚನಾಪಳ್ಳಿಯ ರಂಗನಾಯಕ, ಉಡುಪಿಯ ಶ್ರೀ ಕೃಷ್ಣ, ಕೋಟೇಶ್ವರ, ಗೋಕರ್ಣ, ಕೊಪುರ, ಮೈಲಾರ, ಕಾಶಿ, ಹರಿದ್ವಾರ, ಕೇದಾರ, ಶೃಂಗೇರಿ… ಹೀಗೆ ಹಲವು ಪುಣ್ಯಕ್ಷೇತ್ರಗಳ ದರ್ಶನ ಪಡೆದು ಪಂಪಾಕ್ಷೇತ್ರಕ್ಕೆ ಬರುತ್ತಾನೆ.
ನಂತರದಲ್ಲಿ eನಸಿಂಧು, ದೇವೀಪುರಾಣ, ಬಗಳಾಶತಕ, ಚಿದಾನಂದವಚನ, ಕಥಾಸಾಗರ, ಚಿದಾನಂದ ರಗಳೆ, ಅಧ್ಯಾತ್ಮ ಶತಕ, ಚಿದಾನಂದಲಹರಿ, ದೇವಿಮಹಾತ್ಮ್ಯ(೭೬೯ ಭಾಮಿನಿ ಷಟ್ಪದಿ) ಮುಂತಾದ ವೈವಿಧ್ಯಮಯ ಗ್ರಂಥಗಳನ್ನು, ತತ್ವಪದ, ಕೀರ್ತನೆಗಳನ್ನೂ ರಚಿಸಿರುವುದಾಗಿ ತಿಳಿದುಬರುವುದು.
ಇಂತಹ ಮಹಾನ್ ವರಕವಿ, ಸಂತ ನಮ್ಮ ನಾಡಿನಲ್ಲಿ ಜನಿಸಿ, ಅಮೋಘ ಸಾಧನೆಯನ್ನು ಮಾಡಿದವ ಎಂಬ ಹೆಮ್ಮೆ ಕನ್ನಡಿಗರದು. ಚಿದಾನಂದ ಅವಧೂತರನ್ನು ಕುರಿತು ಹೆಚ್ಚಿನ ಅಧ್ಯಯನವಾದಲ್ಲಿ ಬಹಳಷ್ಟು ಮಾಹಿತಿ ತಿಳಿಯಬಹುದು. ಪ್ರತಿ ವರ್ಷ ದಸರಾ ನವದಿನಗಳ ಸಂದರ್ಭದಲ್ಲಿ ನಮ್ಮ ನಾಡಿನಾದ್ಯಂತ ಆಚಾರವಂತರು ನಾಡಿನ ಪ್ರತಿಯೊಂದು ಗ್ರಾಮಗಳಲ್ಲಿ, ಮನೆ, ಮಠ, ಮಂದಿರದಲ್ಲಿ ದೇವಿ ಪುರಾಣವನ್ನು ನಡೆಸಿಕೊಂಡು ಬರುವ ಸಂಪ್ರದಾಯವಿದೆ. ಈ ಪುರಾಣವನ್ನು ರಚಿಸಿದ ಅಂಬಾದೇವಿ ಆರಾಧಕ ರಾಜಯೋಗಿ ಚಿದಾನಂದ ಅವಧೂತರನ್ನು ಇಂತಹ ಸುದಿನಗಳಲ್ಲಿ ಸ್ಮರಿಸುವುದು ಅವಶ್ಯ.

ಹೆಚ್.ಎಂ.ಗುರುಬಸವರಾಜಯ್ಯ.ಉಪನ್ಯಾಸಕರು