ನಂದಿಪುರ ಪುಣ್ಯಕ್ಷೇತ್ರದ ಮಹಾಮಹಿಮ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ
ಲೇಖನ : ಹೆಚ್. ಎಂ. ಗುರುಬಸವರಾಜಯ್ಯ, ಉಪನ್ಯಾಸಕರು, ನಂದಿಪುರ
ವಿಜಯನಗರ ಜಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಪುಣ್ಯಕ್ಷೇತ್ರವು ಭಕ್ತಿ, ಶ್ರದ್ಧೆ ಮತ್ತು ಚೈತನ್ಯದ ಸಂಗಮವಾಗಿ ನಿಂತಿರುವ ಪುಣ್ಯಭೂಮಿ. ಇಲ್ಲಿ ಮಹಾಮಹಿಮ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ೪೨ನೇ ವರ್ಷದ ಮಹಾ ರಥೋತ್ಸವ ನಾಡಿನ ಹರಗುರು ಚರ ಪರಂಪರೆಯ ಸಾರ್ಥಕ ಪ್ರತಿಬಿಂಬ ವಾಗಿ ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ಜರುಗುತ್ತಿದೆ.
ನಾಡಿನ ನಾನಾ ಮಠಾಧೀಶರು, ಧರ್ಮ ಪರಿಷತ್ತಿನ ಪೂಜ್ಯರು, ಸಾಧು-ಸಂತರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ಈ ರಥೋತ್ಸವ, ಕೇವಲ ಆಚರಣೆ ಮಾತ್ರವಲ್ಲ ಅದು ಜೀವಂತ ಧರ್ಮಸಂಸ್ಕೃತಿಯ ಉತ್ಸವ.
ಕ್ರಿ.ಶ. ೧೫ನೇ ಶತಮಾನದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ ಗ್ರಾಮದಲ್ಲಿ ಅವತರಿಸಿದ ಮಹಾಮಹಿಮ ಶ್ರೀಗುರು ದೊಡ್ಡ ಬಸವೇಶ್ವರರು, ಪಂಚ ಗಣಾಧೀಶ್ವ ರರ ಸಮಕಾಲಿನ ಮಹಾಪುರುಷರು.

ಕೊಟ್ಟೂರು ಶ್ರೀಕೊಟ್ರೇಶ್ವರ, ನಾಯಕನಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮಿ, ಕೂಲಹಳ್ಳಿ ಶ್ರೀ ಮzನೇಶ್ವರ, ಅರಸೀಕೆರೆ ಶ್ರೀ ಕೋಲಶಾಂತೇಶ್ವರ, ಹರಪನಹಳ್ಳಿ ಶ್ರೀ ಕೆಂಪೇಶ್ವರರಂತಹ ದಿವ್ಯ ಚೈತನ್ಯಗಳ ಸಾಲಿನಲ್ಲಿ ಶ್ರೀಗುರು ದೊಡ್ಡಬಸವೇಶ್ವರರು ಜನಮಾನಸ ದಲ್ಲಿ ಅಚ್ಚಳಿಯದ ಸ್ಥಾನ ಪಡೆದವರು.
ಜೀವ ಸಮಾಧಿಯ ಸಂದರ್ಭ ದಲ್ಲಿ ಭಕ್ತರು ನಮ್ಮನ್ನು ಬಿಟ್ಟು ಹೋಗಬೇಡ ಅಜ ಎಂಬ ಕರಳು ಮಿಡಿಯುವ ಬೇಡಿಕೆಗೆ, ಸಕಲ ಜೀವಿಗಳ ಉದ್ಧಾರಕ್ಕಾಗಿ ಮತ್ತೆ ಅವತರಿಸಿ ಬರುತ್ತೇನೆ ಎಂದು ಮಾತು ಕೊಟ್ಟ ಮಹಾತ್ಮರು, ಆ ಮಾತಿನಂತೆ ಪೂಜ್ಯ ಶ್ರೀ ಚರಂತಪ್ಪಯ್ಯ ಮಹಾ ಸ್ವಾಮಿಗಳ ಸ್ವರೂಪದಲ್ಲಿ ಪುನಃ ಅವತರಿಸಿದರು ಎಂಬ ನಂಬಿಕೆ ಭಕ್ತರ ಹೃದಯಗಳಲ್ಲಿ ಇಂದಿಗೂ ಜೀವಂತವಾಗಿದೆ.
ಪೂಜ್ಯ ಶ್ರೀ ಚರಂತಪ್ಪಯ್ಯ ಮಹಾ ಸ್ವಾಮಿಗಳು ೧೯೬೩ರಲ್ಲಿ ಗದ್ದಿಕೆರೆಯಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ಸ್ವಾಮಿಯ ದೇವಸ್ಥಾನ ವನ್ನು ನಿರ್ಮಿಸಿ, ೧೯೮೪ರಲ್ಲಿ ನಂದಿಪುರದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಿ ಪುಣ್ಯಕ್ಷೇತ್ರವನ್ನು ರೂಪಿಸಿದರು. ಭಕ್ತೋzರವೇ ತಮ್ಮ ಜೀವನಧರ್ಮವಾಗಿಸಿ ಕೊಂಡು ಅವರು ಬಿತ್ತಿದ ಸಂಕಲ್ಪದ ಬೀಜಗಳು ಇಂದು ವಟವೃಕ್ಷವಾಗಿ ಬೆಳೆದಿವೆ. ಆ ಮಹಾಸಂಕಲ್ಪವನ್ನು ಮುಂದು ವರೆಸುತ್ತಿರುವವರು ಅವರ ಚಿರಂಜೀವಿ ಸಾವಯವ ಕೃಷಿ ಋಷಿ ಡಾ. ಮಹೇಶ್ವರ ಮಹಾ ಸ್ವಾಮೀಜಿಯವರು. ಗೋಶಾಲೆ, ಉಚಿತ ಆದರ್ಶ ಸಾಮೂಹಿಕ ವಿವಾಹ, ಆಯುರ್ವೇದ ಹೋಮಿಯೋಪತಿ ಶಿಬಿರಗಳು, ಶೈಕ್ಷಣಿಕ ಹಾಗೂ ಕೃಷಿ ಕ್ರಾಂತಿಯಂತಹ ಅಭೂತಪೂರ್ವ ಕಾರ್ಯಗಳ ಮೂಲಕ ನಂದಿಪುರ ವನ್ನು ಸೇವೆಯ ಕೇಂದ್ರವನ್ನಾಗಿ ರೂಪಿಸಿzರೆ.
ಇಸ್ರೇಲ್ ಮಾದರಿಯ ತರಕಾರಿ ಕೃಷಿ ಹಾಗೂ ಸಾವಯವ ಕೃಷಿಗೆ ನೀಡಿದ ಒತ್ತು. ಅನೇಕ ರೈತರಿಗೆ ಬದುಕಿನ ಹೊಸ ದಾರಿ ತೋರಿಸಿದೆ. ಮಠದ ಅಭಿವೃದ್ಧಿ, ಭಕ್ತರ ಸಂಕಷ್ಟ ನಿವಾರಣೆಗಾಗಿ ತಮ್ಮ ಆರೋಗ್ಯವನ್ನೇ ಮರೆತು ಹಗಲು- ರಾತ್ರಿ ಸೇವೆಯಲ್ಲಿ ನಿರತರಾಗಿರುವ ಪೂಜ್ಯರು, ಪ್ರತಿಹುಣ್ಣಿಮೆಯಂದು ರಾಜರಾಜೇಶ್ವರಿ ಮಾತೆಗೆ ವಿಶೇಷ ಪೂಜೆ- ಹೋಮಗಳನ್ನು ನೆರವೇರಿಸುತ್ತಿzರೆ.
ಇಲ್ಲಿಯವರೆಗೆ ಐದು ಗುರು ಪಟ್ಟಾಧಿಕಾರಗಳನ್ನು ನೆರವೇರಿಸಿ, ಭಕ್ತರ ಉದ್ಧಾರಕ್ಕೆ ದಾರಿ ತೋರಿಸಿ zರೆ. ಅವರಲ್ಲಿ ಗದ್ದಿಕೆರಿ ಹಿರೇಮಠದ ಅಭಿನವ ಚರಂತೇಶ್ವರ ಮಹಾ ಸ್ವಾಮಿಗಳು ಪ್ರಮುಖರು.

ಜನವರಿ ೧೯ರಿಂದ ೨೭ರವರೆಗೆ, ಡಾ. ಎಂ. ಶಿವಮೂರ್ತಿಯವರು ರಚಿಸಿದ ಶ್ರೀಗುರು ಚರಂತೇಶ್ವರ ಲೀಲೆ ಪುರಾಣ ಪ್ರವಚನವು, ಗದಗಿನ ವೀರೇಶ್ವರ ಪುಣ್ಯಾಶ್ರಮದ ಪ್ರವಚನ ಕೇಸರಿ ರೋಣದ ಶೇಖ್ರಯ್ಯ ಶಾಸ್ತ್ರಿಗಳಿಂದ ಭಕ್ತಿಭಾವ ದಿಂದ ಜರುಗುತ್ತಾ ಇದೆ.
ಜ.೨೮ರಂದು ಬ್ರಾಹ್ಮೀ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ಕೃಷಿಮೇಳ, ರಕ್ತದಾನ ಶಿಬಿರ, ಉಚಿತ ಆರೋಗ್ಯ ಹಾಗೂ ಆಯುರ್ವೇದ ಶಿಬಿರಗಳು, ಶುಭ ಮುಹೂರ್ತದಲ್ಲಿ ೩೦ ನವಜೋಡಿಗಳ ಉಚಿತ ಆದರ್ಶ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಗುರು ಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಜೆ ೫ ಗಂಟೆಗೆ ನಡೆಯುವ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ೪೨ನೇ ವರ್ಷದ ಮಹಾ ರಥೋತ್ಸವ, ನಂದಿಪುರದ ಭಕ್ತಿಸಾಗರವನ್ನು ಉಕ್ಕಿಸುವ ಮಹೋತ್ಸವವಾಗಲಿದೆ.
ಈ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಬಹು ಭಾಷಾ ಖ್ಯಾತ ಕಲಾವಿದೆ ಭಾರತಿ ವಿಷ್ಣುವರ್ಧನ್ ಅವರ ಆಗಮನ ನಾಡಿನ ಸಾಂಸ್ಕೃತಿಕ ಹೆಮ್ಮೆಯಾಗಿದೆ.
ಜ.೨೯ರಂದು ನಂದಿಪುರ ಉತ್ಸವ ನುಡಿಹಬ್ಬ, ಸಾಹಿತ್ಯ ಸಂಸ್ಕೃತಿಯ ಸಡಗರದ ವೇದಿಕೆ ಯಾಗಲಿದೆ. ತಾಲೂಕಿನ ಕನ್ನಡಪರ ಸಂಘಟನೆಗಳು ಭಾಗವಹಿಸಲಿವೆ. ನುಡಿಹಬ್ಬದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಕೃತಿಗಳ ಲೋಕಾರ್ಪಣೆ, ಕಾವ್ಯ ತೋರಣ ಕೃತಿ ಮೂಲಕ ನಾಡುನುಡಿಯ ವೈಭವ ಮೆರೆಯಲಿದೆ.
ಪ್ರೊ. ಹೆಚ್.ಎ. ಭಿಕ್ಷಾವರ್ತಿ ಮಠ ಅವರ ಸರ್ವಾಧ್ಯಕ್ಷತೆಯಲ್ಲಿ ನಾಡಿನ ಶ್ರೇಷ್ಠ ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳುವರು.
ಜ.೩೦ರಂದು ಹಳಿಬಂಡಿ ಉತ್ಸವ ರೈತ ಸಂಸ್ಕೃತಿಯ ಸಂಭ್ರಮ ವಾಗಿ ಎತ್ತುಗಳ ಸಿಂಗಾರ, ಮೆರವಣಿಗೆಯೊಂದಿಗೆ ಜರುಗಲಿದೆ.
ಒಟ್ಟು ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಜನಪದ, ಹಾಸ್ಯ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಂದಿಪುರವನ್ನು ಉತ್ಸವಮಯವಾಗಿಸಲಿವೆ.
ಇಂತಹ ಮಹಾಮಹಿಮ ಧಾರ್ಮಿಕ ಪರಂಪರೆಯಲ್ಲಿ ಭಾಗವಹಿಸೋಣ. ಶ್ರೀಗುರು ದೊಡ್ಡಬಸವೇಶ್ವರ ಹಾಗೂ ಶ್ರೀಗುರು ಚರಂತಪ್ಪಯ್ಯ ಮಹಾ ಸ್ವಾಮಿಗಳ ಕೃಪೆಗೆ ಪಾತ್ರರಾಗೋಣ. ಸರ್ವೇಜನಃ ಸುಖಿನೋ ಭವಂತು.
