ಪ್ರೇಮ ಸಿಂಚನ : ಟಗರು ಕಾಳಗದ ಗದ್ದಲದ ಮಧ್ಯೆ ಹೃದಯಗಳ ಪಿಸುಮಾತು
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಜಾತ್ರೆ ಎಂದರೆ ಅದು ಕೇವಲ ಉತ್ಸವವಲ್ಲ, ಊರಿನ ಉಸಿರು. ಮಾರಿ ಜಾತ್ರೆಯ ಟಗರು ಕಾಳಗದ ಮೈದಾನ ಆ ದಿನ ಕೆಂಪು ಮಣ್ಣಿನ ಪರಿಮಳದಿಂದ ತುಂಬಿಕೊಂಡಿತ್ತು. ಕಾಳಗದ ಮೇಲಿತ್ತು ಸಾವಿರಾರು ಕಣ್ಣುಗಳು. ಕೂಗಾಟಗಳ ಗರ್ಜನೆ ಮುಗಿಲು ಮುಟ್ಟುತ್ತಿತ್ತು. ಜನರ ಉತ್ಸಾಹ, ಕೇಕೆ, ಹರ್ಷೋದ್ಗಾರಗಳು ಮೈದಾನವನ್ನೇ ಕಂಪಿಸುತ್ತಿದ್ದವು.
ಆದರೆ ಆ ಗದ್ದಲದ ನಡುವೆ ಹದಿಹರೆಯದ ಎರಡು ಹೃದಯಗಳು ಮಾತ್ರ ತಮ್ಮದೇ ಜಗತ್ತಿನಲ್ಲಿ ನೆಮ್ಮದಿಯಾಗಿ ಮಾತಾಡತೊಡಗಿದ್ದವು. ಅವಳು ಕಾಳಗದ ಮೈದಾನವನ್ನು ನೋಡುತ್ತಿದ್ದಂತೆ ನಟಿಸುತ್ತಿದ್ದಳು. ಆದರೆ ಅವಳ ಕಣ್ಣುಗಳು ಅವನನ್ನೇ ಹುಡುಕುತ್ತಿದವು. ಅವನು ಜನರ ಕೂಗಾಟಕ್ಕೆ ಕೈ ತಟ್ಟಿದಂತೆ ತೋರಿಸಿಕೊಂಡರೂ, ಅವನ ಮನಸ್ಸು ಅವಳ ಮನದೊಳಗೆ ತಿರುಗಾಡುತ್ತಿತ್ತು.
ಎಷ್ಟು ಗದ್ದಲ ಅಲ್ಲವಾ? ಅವಳು ಮೃದುವಾಗಿ ಕೇಳಿದಳು.
ಹೌದು.. ಆದರೆ ನಿನ್ನ ಹತ್ತಿರ ನಿಂತಾಗ ನನಗೆ ಏನೋ ಶಾಂತಿ ಸಿಗ್ತಿದೆ ಎಂದು ಅವನು ನಕ್ಕು ಹೇಳಿದ.
ಅವಳ ಕನ್ನೆಗಳಿಗೆ ಕೆಂಪು ಮಣ್ಣಿಗಿಂತಲೂ ಗಾಢವಾದ ಕೆಂಪಾಟದವು. ಜನ ನೋಡ್ತಾರೆ ಎಂದು ಅವಳು ಸುತ್ತಮುತ್ತ ನೋಡಿದಳು.
ಜನ ಕಾಳಗ ನೋಡ್ತಾರೆ, ನಾನು ಮಾತ್ರ ನಿನ್ನ ಕಣ್ಣುಗಳಲ್ಲಿನ ಕಾಳಗ ನೋಡ್ತಿzನೆ ಎಂದು ಅವನು ನಿಧಾನವಾಗಿ ಪಿಸುಗುಟ್ಟಿದ. ಮೈದಾನದಲ್ಲಿ ಟಗರುಗಳು ಮುಖಾಮುಖಿಯಾಗಿದ್ದವು. ಶಕ್ತಿ, ಸ್ಪರ್ಧೆ, ಸವಾಲು ಎಲ್ಲವೂ ಅಲ್ಲಿತ್ತು . ಆದರೆ ಈ ಎರಡು ಹೃದಯಗಳ ನಡುವೆ ಯಾವುದೇ ಕಾಳಗ ಇರಲಿಲ್ಲ. ಇದ್ದದ್ದು ಕೇವಲ ಮನದ ಒಪ್ಪಿಗೆ. ಕೈಗೆ ಕೈ ತಾಕಿದ ಕ್ಷಣ, ಮೈದಾನದ ಗರ್ಜನೆಗೂ ಮೀರಿದ ಒಬ್ಬರ ಹೃದಯದ ಬಡಿತ ಇನ್ನೊಬ್ಬರಿಗೆ ಕೇಳಿಸಿತು.
ಜಾತ್ರೆಯ ಬೆಳಕುಗಳು ಮಿನುಗುತ್ತಿದ್ದವು. ಕೆಂಪು ಮಣ್ಣಿನ ಸುಗಂಧ, ಬೆವರಿನ ವಾಸನೆ, ಪಟಾಕಿಗಳ ಸದ್ದು ಎಲ್ಲವೂ ಒಂದಾಗಿ ಅದ್ಭುತ ವಾತಾವರಣವೊಂದನ್ನು ಸೃಷ್ಟಿಸಿತ್ತು. ಆದರೆ ಅವರಿಗೋಸ್ಕರ ಆ ರಾತ್ರಿ ಒಂದೇ ಒಂದು ನೆನಪು ಗದ್ದಲದ ಮಧ್ಯೆ ಸಿಕ್ಕ ಶಾಂತಿಯ ಕ್ಷಣ.
ಜತ್ರೆ ಮುಗಿದ ಮೇಲೆ ಜನರು ಮನೆ ಕಡೆ ಹೊರಟರು. ಮೈದಾನ ಮತ್ತೆ ಮನವಾಯಿತು. ಆದರೆ ಆ ದಿನ ಆರಂಭವಾದ ಪ್ರೇಮದ ಪಿಸುಮಾತು ಮಾತ್ರ ಅವರ ಮನಗಳಲ್ಲಿ ಇನ್ನೂ ಗದ್ದಲ ಮಾಡುತ್ತಲೇ ಇತ್ತು.
ಗದ್ದಲದ ನಡುವೆ ಹುಟ್ಟಿದ ಪ್ರೀತಿ, ಅದೇ ಪ್ರೇಮ ಸಿಂಚನ…
