ಮಾರಿ ಜಾತ್ರೆಯ ಜನಸಾಗರದಲ್ಲಿ ಚಿಗುರಿದ ಪ್ರೇಮ..
ಶಿವಮೊಗ್ಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವದ ಹೊಳಪಿನಲ್ಲಿ ಕೋಟೆಶ್ರೀ ಮಾರಿಕಾಂಬ ಜತ್ರೆ ಮಿನುಗುತ್ತಿತ್ತು. ಅದು ಕೇವಲ ಧಾರ್ಮಿಕ ಮಹೋತ್ಸವವಾಗಿರಲಿಲ್ಲ. ಭಕ್ತಿಯ ಹೆಸರಿನಲ್ಲಿ ಸಾವಿರಾರು ಮನಗಳು ಒಂದೇ ಧ್ವನಿಯಲ್ಲಿ ತೂಗುವ ಅದ್ಭುತ ಕ್ಷಣ. ಗಾಂಧಿ ಬಜರ್‌ನಲ್ಲಿ ಜತ್ರೆಯ ದಿನಗಳಲ್ಲಿ ಹರಡುವ ಹೂವಿನ ಸುವಾಸನೆ, ಜಾತ್ರೆಯ ನಾದ, ಮಿನುಗುವ ದೀಪಾಲಂಕಾರ ವಿಶೇಷವಾಗಿ ಈ ಬಾರಿಯ ಪ್ರವೇಶ ದ್ವಾರದ ಅಲಂಕಾರ ಮತ್ತು ಮಾರಿಕಾಂಬಾ ದೇವಿಯ ದೇವಳದಲ್ಲಿನ ಹಣ್ಣಿನ ಅಲಂಕಾರದ ಘಮಘಮ ಸುವಾಸನೆ… ಹೀಗೆ ಹತ್ತು ಹಲವು ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ಮೊನ್ನೆ ಜತ್ರೆಯ ಆರಂಭದ ದಿನ. ಬೆಳಗಿನ ಹೊತ್ತಿನ ಸೂರ್ಯ ಕಿರಣಗಳು ಗಾಂಧಿ ಬಜರ್ ಬೀದಿಗಳ ಮೇಲೆ ಚಿನ್ನದ ಹೊಳಪಾಗಿ ಚೆಲ್ಲಿಕೊಂಡಿದ್ದವು. ಹಸಿರು ಬಣದ ರೇಷ್ಮೆ ಸೀರೆ ಉಟ್ಟು, ಕೈತುಂಬಾ ಹಸಿರು ಬಳೆ ಧರಿಸಿ, ಹಣೆಗೆ ಕಂಗೊಳಿಸುವ ಕುಂಕುಮವಿಟ್ಟು ಭಕ್ತಿಯಿಂದ ಅಮ್ಮನವರ ದರ್ಶನಕ್ಕೆ ಸಾಗುತ್ತಿದ್ದ ನಿನ್ನನ್ನು ನೋಡಿದ ಕ್ಷಣವೇ ನನ್ನ ಹೆಜ್ಜೆಗಳು ನಿಂತವು. ಜನಸಾಗರದ ಮಧ್ಯೆ ನೀನು ಮಾತ್ರ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿz. ಆ ಕ್ಷಣದಲ್ಲಿ ಭಕ್ತಿ ಮತ್ತು ಸೌಂದರ್ಯ ಒಂದೇ ರೂಪ ತಾಳಿದಂತಿತ್ತು.
ದೇವಿಯ ದರ್ಶನದ ಬಳಿಕ ನೀನು ಅಲ್ಲಿಂದ ಕ್ಷಣಮಾತ್ರದಲ್ಲಿ ಕಣ್ಮರೆಯಾದೆ. ಜತ್ರೆಯ ಗದ್ದಲದ ಮಧ್ಯೆ ನಾನು ಹುಡುಕಿದ ಜಗವೇ ಇಲ್ಲ. ಗಾಂಧಿ ಬಜರ್‌ನ ಅಂಗಡಿಗಳಿಂದ ಹಿಡಿದು ಮಾರಿ ಗದ್ದುಗೆ ಸುತ್ತಲಿನ ಪ್ರತಿಯೊಂದು ಮೂಲೆಗೂ ನಾನು ಕಣ್ಣಾಯಿಸಿ ನೋಡಿದೆ. ಆದರೆ ನೀನು ಮಾತ್ರ ಕಾಣಲಿಲ್ಲ. ಆ ದಿನದ ಸಂಜೆ ಜತ್ರೆಯ ಬೆಳಕು ನನಗೆ ಮಸುಕಾಗಿ ಕಂಡಿತು.
ಮಾರನೇ ದಿನ ಮಾರಿ ಗದ್ದುಗೆಗೆ ಮತ್ತೊಮ್ಮೆ ದರ್ಶನಕ್ಕೆ ಹೋದಾಗ, ಅಚಾನಕ್ಕಾವಾಗಿ ನನ್ನ ಕಣ್ಣಿಗೆ ನೀನು ಬಿದ್ದದ್ದು ನನಗೆ ದೇವಿ ಕೊಟ್ಟ ವರದಂತಿತ್ತು. ಈ ಬಾರಿ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ, ಕೈತುಂಬಾ ಬಳೆ, ಹಣೆಗೆ ಕುಂಕುಮ, ಗಲ್ಲಕ್ಕೆ ಹಳದಿ ಹಚ್ಚಿಕೊಂಡು ಜತ್ರೆಯ ಸಂಭ್ರಮದಲ್ಲಿ ನಡೆದುಕೊಂಡು ಬರುತ್ತಿz. ಆ ಕೆಂಪು ಬಣ್ಣದಲ್ಲಿ ನಿನ್ನ ಆತ್ಮವಿಶ್ವಾಸವೇ ಹೊಳೆಯುತ್ತಿತ್ತು.
ಅದೇ ಸಮಯದಲ್ಲಿ ಕೆಲ ಪಡ್ಡೆ ಹುಡುಗರು ನಿನ್ನನ್ನು ರೇಗಿಸಿದರು. ಕ್ಷಣ ಮಾತ್ರದಲ್ಲಿ ನೀನು ತಾಳಿದ ರೌದ್ರಾವತಾರ… ಅವರನ್ನು ಗದರಿಸಿದ ಧೈರ್ಯ… ನನ್ನ ಮನಸ್ಸಿನಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆದಿತ್ತು. ನಿನ್ನ ಸೌಮ್ಯ ಮುಖದ ಹಿಂದೆ ಅಡಗಿದ್ದ ದೃಢತೆ, ಆತ್ಮಗೌರವ, ಧೈರ್ಯ ಇವೆಲ್ಲವೂ ನನ್ನನ್ನು ಮತ್ತಷ್ಟು ಆಕರ್ಷಿಸಿತು. ಆ ಕ್ಷಣವೇ ನನ್ನ ಹೃದಯ ನುಡಿಯಿತು ಇವಳೇ ನನ್ನ ಬಾಳಿನ ಸರಿಯಾದ ಜೋಡಿ ಎಂದು…
ಜತ್ರೆಯ ಗದ್ದಲದ ನಡುವೆ, ದೇವಿಯ ಸನ್ನಿಧಿಯಲ್ಲಿ ಹುಟ್ಟಿದ ಈ ಪ್ರೀತಿ, ಭಕ್ತಿಯಂತೆ ಪವಿತ್ರವಾಗಿತ್ತು. ನಿನ್ನಲ್ಲಿ ಕಂಡ ಸೌಮ್ಯತೆ ಮತ್ತು ಶೌರ್ಯ ಎರಡೂ ಸೇರಿ ನನ್ನ ಮನಸ್ಸನ್ನು ಗೆದ್ದವು. ನನಗರಿವಿಲ್ಲದೆ ಪ್ರೀತಿ ಚಿಗುರೊಡಿದಿತ್ತು.
ಇಂದು ಜತ್ರೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಿದಾಗ ಆ ಹಸಿರು ಸೀರೆಯ ಸುಂದರ ಕ್ಷಣ ಮತ್ತು ಕೆಂಪು ಸೀರೆಯ ಧೈರ್ಯಮಯ ರೂಪ ಎರಡೂ ನನ್ನ ಕಣ್ಣ ಮುಂದೆ ನಿಂತಿವೆ. ಆ ದಿನಗಳಲ್ಲಿ ಹುಟ್ಟಿದ ಭಾವನೆಗಳು ಇನ್ನೂ ನನ್ನೊಳಗೆ ಜೀವಂತವಾಗಿವೆ. ಯಾವುದೋ ದಿನ, ಇದೇ ಜತ್ರೆಯ ಸನ್ನಿಧಿಯಲ್ಲಿ, ದೇವಿಯ ಆಶೀರ್ವಾದದೊಂದಿಗೆ ನಿನ್ನ ಮುಂದೆ ನಿಂತು ನನ್ನ ಮನದ ಮಾತು ಹೇಳುವೆನೆಂಬ ಆಶಯದಲ್ಲಿzನೆ.
ಏಕೆಂದರೆ, ಕೆಲ ಪ್ರೇಮಕಥೆಗಳು ದೇವಿಯ ಕೃಪೆಯಿಂದಲೇ ಆರಂಭವಾಗುತ್ತವೆ ಮತ್ತು ಅವುಗಳ ಅಂತ್ಯವೂ ಶುಭಮಯವಾಗುತ್ತದೆ ಎಂಬ ನಂಬಿಕೆ ನನ್ನದು…

