ತಾಜಾ ಸುದ್ದಿಲೇಖನಗಳುಶಿಕ್ಷಣ

ಸಸಿ ನೆಟ್ಟು ನೀರೆರೆದು ಬೆಳೆಸೋಣ; ಜೀವ ಸಂಕುಲ ಉಳಿಸೋಣ…

Share Below Link

ಪ್ರತಿ ವರ್ಷ ಜೂನ್ ೫ರ ಇಂದು ವಿಶ್ವದೆಲ್ಲೆಡೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಕೇವಲ ಒಂದು ದಿನಕ್ಕಾಗಿ ಮಾಡುವ ಪರಿಸರ ದಿನಾಚರಣೆಯಾಗದೆ ನಿತ್ಯವೂ ಪ್ರತಿಯೊಬ್ಬರೂ ತಮ್ಮ ಮನೆ- ಮನದಲ್ಲಿ ಪರಿಸರ ಕುರಿತ ಕಾಳಜಿ ವಹಿಸುವುದು ಇಂದಿನ ಅನಿವಾರ್ಯವಾಗಿದೆ. ಪರಿಸರದಿಂದಲೇ ಮನುಕುಲ- ಪ್ರಾಣಿ, ಪಕ್ಷಿ ಸಂಕುಲದ ರಕ್ಷಣೆ ಎಂಬ ಸತ್ಯವನ್ನು ಅರಿತು ಕೇವಲ ಜೂ.೫ರಂದು ಶೋಕಿಗಾಗಿ ಪರಿಸರ ಕುರಿತು ಕಾಳಜಿ ತೋರಿಸಿ ವಾಟ್ಸ್‌ಅಪ್ ಸ್ಟೇಟಸ್, ಫೇಸ್‌ಬುಕ್‌ನಲ್ಲಿ ಫೋಟೋ ಹಾಕುವ ಬದಲು ಪ್ರತಿಯೊಬ್ಬರೂ ನಿತ್ಯವೂ ಪರಿಸರ ಕುರಿತು ಕಾಳಜಿ ವಹಿಸುತ್ತಾ, ಇರುವ ಒಂದು ಭೂಮಿಯ ರಕ್ಷಣೆಗೆ ಮುಂದಾಗುತ್ತಾ ಪ್ರತಿ ದಿನ, ಪ್ರತಿ ಕ್ಷಣ ಪರಿಸರ ದಿನವನ್ನು ಆಚರಿಸಲು ಪಣ ತೊಡೋಣವೇ….
ಪ್ರತಿ ವರ್ಷ ಜೂನ್ ೫ರಂದು ನಾವು-ನೀವು ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಪರಿಸರದ ಸಂರಕ್ಷಣೆಗಾಗಿ, ಜಾಗೃತಿ ಮೂಡಿಸಲು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವಸಂಸ್ಥೆ ನೇತೃತ್ವದಲ್ಲಿ ಆತಿಥೇಯ ರಾಷ್ಟ್ರಗಳ ನೇರವಿನಿಂದ ಈ ಪರಿಸರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ.


ಪರಿಸರ ದಿನಾಚರಣೆಯ ಇತಿಹಾಸ:
ವಿಶ್ವ ಪರಿಸರ ದಿನವನ್ನು ೧೯೭೨ರಲ್ಲಿ ವಿಶ್ವಸಂಸ್ಥೆಯು ಸ್ಟಾಕ್-ಹೋಮ್‌ನ (ಯುನೈಟೆಡ್ ನೇಸನ್ಸ್) ಮಾನವ ಪರಿಸರದ ಸಮ್ಮೇಳನದಲ್ಲಿ ಸ್ಥಾಪಿಸಲಾಯಿತು. ಇದು ಮಾನವನ ಪರಸ್ಪರ ಕ್ರಿಯೆಗಳು ಮತ್ತು ಪರಿಸರದ ಏಕೀಕರಣದ ಚರ್ಚೆಗಳಿಂದ ಪ್ರಾರಂಭವಾಯಿತು.
೧೯೭೩ರಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ಒಂದೇ ಭೂಮಿ ಎಂಬ ವಿಷಯದೊಂದಿಗೆ ಈ ಅರ್ಥಪೂರ್ಣವಾದ ಆಚರಣೆ ಮಾಡಲಾಯಿತು. ಪ್ರತಿ ವರ್ಷ ಒಂದು ಅತಿಥ್ಯ ರಾಷ್ಟ್ರದ ನೇರವಿನಿಂದ ವಿಶ್ವ ಪರಿಸರ ದಿನಾಚರಣೆಯನ್ನು ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುತ್ತದೆ.
ಭಾರತದ ಅತಿಥ್ಯ:
ಜಾಗತಿಕ ಮಟ್ಟದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾರತದ ಪಾತ್ರವೂ ಸಹ ಅಗ್ರಗಣ್ಯವಾಗಿದೆ. ೨೦೧೧ರಲ್ಲಿ ಭಾರತದ ರಾಷ್ಟ್ರ ರಾಜಧಾನಿ ದೆಹಲಿಯ ಅತಿಥ್ಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯು ಅರಣ್ಯಗಳು-ನಿಮ್ಮ ಸೇವೆಯಲ್ಲಿ ಪ್ರಕೃತಿ ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು.
ನಂತರ ೨೦೧೮ರಲ್ಲಿ ಮತ್ತೊಮ್ಮೆ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂಬ ಥೀಮ್‌ನೊಂದಿಗೆ ಪುನಃ ದೆಹಲಿಯಲ್ಲಿಯೇ ಆಚರಿಸಲಾಯಿತು. ಹೀಗೆ ಜಾಗತಿಕ ಮಟ್ಟದಲ್ಲಿ ಇಡೀ ವಿಶ್ವವೇ ಮೆಚ್ಚಿಕೊಳ್ಳುವಂತೆ ಅತಿಥ್ಯ ವಹಿಸಿದ ನಮ್ಮ ದೇಶ, ಪ್ರತಿ ವರ್ಷ ಜೂನ್ ೫ರಂದು ದೇಶದ ಒಳಗೂ ಸಹ ಬಹಳ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಾ ವಿಶ್ವ ಮಟ್ಟದ ಗಮನ ಸೇಳೆಯುತ್ತಾ ಬಂದಿದೆ.
೨೦೨೩ರ ಥೀಮ್- ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ಲಾಸ್ಡಿಕ್ ಮಾಲಿನ್ಯಕ್ಕೆ ಪರಿಹಾರಗಳು ಎಂಬ ಥೀಮ್ ನೊಂದಿಗೆ ಕೋಟ್-ಡಿ ಐವರಿ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪ್ರಮುಖ ಥೀಮ್‌ಗಳು:
ಪ್ರತಿ ವರ್ಷ ಒಂದೊಂದು ರಾಷ್ಟ್ರಗಳು ಒಂದೊಂದು ಥೀಮ್‌ನೊಂದಿಗೆ ಈ ದಿನವನ್ನು ಆಚರಿಸಿವೆ. ಇದರಲ್ಲಿ ೧೯೭೬ರಲ್ಲಿ ನೀರು- ಜೀವನಕ್ಕೆ ಪ್ರಮುಖ ಸಂಪನ್ಮೂಲ ಎಂಬ ಥೀಮ್‌ನೊಂದಿಗೆ ಕೆನಡಾದ ಒಂಟಾರಿಯೊದಲ್ಲಿ ಆಚರಿಸಲಾಯಿತು.
೧೯೮೨ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ಪರಿಸರ ಕಾಳಜೀಯ ನವೀಕರಣ ಎಂಬ ಥೀಮ್ ನೊಂದಿಗೆ ಆಚರಿಸಲಾಯಿತು.
೧೯೮೭ರಲ್ಲಿ ಕಿನ್ಯಾದ ನೈರೋಬಿಯಲ್ಲಿ ಪರಿಸರ ಮತ್ತು ಆಶ್ರಯ: ಒಂದು ಛಾವಣಿಗಿಂತ ಹೆಚ್ಚು ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು.


೧೯೯೨ರಲ್ಲಿ ಬ್ರೆಜಿಲ್‌ನ ರಿಯೋಡಿ ಜನೈರೋದಲ್ಲಿ ಒಂದೇ ಭೂಮಿ, ಕಾಳಜಿ ಹಂಚಿಕೊಳ್ಳಿ ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು.
೧೯೯೭ರಲ್ಲಿ ಸಿರಿಯಾದ ಸಿಯೋಲ್‌ನಲ್ಲಿ ಭೂಮಿಯ ಮೇಲಿನ ಜೀವನಕ್ಕಾಗಿ ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು.
೨೦೦೨ರಲ್ಲಿ ಚೀನಾದ ಶೆನ್-ಜೆನ್‌ದಲ್ಲಿ ಭೂಮಿಗೆ ಅವಕಾಶ ನೀಡಿ ಎಂಬ ಥೀಮ್ ನೊಂದಿಗೆ ಆಚರಿಸಲಾಯಿತು.
೨೦೦೯ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಿಮ್ಮ ಗ್ರಹಕ್ಕೆ ನೀವು ಅಗತ್ಯವಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಒಂದಾಗಿ ಎಂಬ ಥೀಮ್ ನೊಂದಿಗೆ ಆಚರಿಸಲಾಯಿತು.
೨೦೧೫ರಲ್ಲಿ ಇಟಲಿಯ ರೋಮ್‌ನಲ್ಲಿ ಸೆವೆನ್ ಬಿಲಿಯನ್ ಡ್ರೀಮ್ಸ್, ಒಂದು ಗ್ರಹ, ಎಚ್ಚರಿಕೆಯಿಂದ ಸೇವಿಸಿ ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು.
೨೦೨೨ರಲ್ಲಿ ಸ್ವೀಡನ್‌ನಲ್ಲಿ ಒಂದೇ ಭೂಮಿ ಎಂಬ ಥೀಮ್ ನೊಂದಿಗೆ ಆಚರಿಸಲಾಯಿತು.


ಇಂದಿನ ಜೀವನದಲ್ಲಿ ಪರಿಸರ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ ಪರಿಸರವಿಲ್ಲದೆ ಯಾವ ಜೀವಿಗಳು ಭೂಮಿಯ ಮೇಲೆ ಬದುಕಲು ಅಸಾಧ್ಯವೆಂಬ ಭಾವನೆ ಮೂಡಿದೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿ ಹಾಗೂ ಶುಚಿಯಾಗಿ ಇಟ್ಟುಕೊಳ್ಳಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಹೊಣೆ ಮಾತ್ರವಲ್ಲ, ಅದೊಂದು ಜವಾಬ್ದಾರಿಯೂ ಹೌದು. ಈ ದಿಸೆಯಲ್ಲಿ ನಾವು-ನೀವೆಲ್ಲರು ನಮ್ಮ ಅಳಿಲು ಸೇವೆಯನ್ನು ಮಾಡಲು ಸಿದ್ದರಾಗಿರಬೇಕಾಗುತ್ತದೆ. ಇರುವುದೊಂದೇ ಭೂಮಿ, ಅದುವೆ ನಮ್ಮ ಕುಟುಂಬದಂತೆ ನಮ್ಮ ಭವಿಷ್ಯವಾಗಲಿದೆ ಆದ್ದರಿಂದ ಪರಿಸರ ರಕ್ಷಣೆಗೆ ನಮ್ಮ ಸಮಯ ಮೀಸಲಿಡೋಣ, ಸಸಿ ನೆಟ್ಟು ಬೆಳೆಸೋಣ, ಜೀವ ಸಂಕುಲ ಉಳಿಸೋಣ ಅಲ್ಲವೇ ಸ್ನೇಹಿತರೆ..

ಎನ್.ಎನ್ ಕಬ್ಬೂರ,
ಎಂ.ಎ., ಬಿ.ಎಡ್
ಶಿಕ್ಷಕರು ಮತ್ತು ಬರಹಗಾರರು
ಸವದತ್ತಿ ತಾಲೂಕು.