ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಂಸತ್‌ನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಸಂಸದರು ಧ್ವನಿ ಎತ್ತಲಿ

Share Below Link

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘ ವೇಂದ್ರ ಸೇರಿದಂತೆ ರಾಜ್ಯದ ಸಂಸದರು ಸಂಸತ್‌ನಲ್ಲಿ ಮಾತನಾಡಬೇಕೆಂದು ಕೆಪಿಸಿಸಿ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸುವುದಾಗಿ ರಾಷ್ಟ್ರೀಯ ಹಸಿರು ಪೀಠಕ್ಕೆ ೨೦೧೪ ಮತ್ತು ೨೦೧೮ರಲ್ಲಿ ಪ್ರಮಾಣ ಪತ್ರ ಸಲ್ಲಿಸಿ ನಂತರ ೨೦೧೫, ೨೦೧೭, ೨೦೧೮ ಹಾಗೂ ೨೦೨೨ರಲ್ಲಿ ನಾಲ್ಕು ಬಾರಿ ಮೇಲ್ಕಂಡ ವರದಿಯ ರೀತ್ಯಾ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ `ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸುವ ಕರಡು ಅಧಿಸೂಚನೆ ಹೊರಡಿಸಿರುವ ಕಾರಣ ಮೇಲ್ಕಂಡ ವರದಿಯ ಅನುಷ್ಠಾನ ಅಂತಿಮ ಹಂತದಲ್ಲಿದೆ ಎಂದರು.
ಈ ವಿಚಾರ ಮರೆಮಾಚಲು ಅರಣ್ಯ ಸಚಿವರ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿ ಕೊಂಡಿರುವುದು ಹಾಸ್ಯಾಸ್ಪದ. ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜಕೀಯ ನಾಟಕ ಮಾಡದೆ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಡಾ. ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಪ್ರತಿಭಟಿಸುವುದು ಸೂಕ್ತವಾಗಿದೆ ಎಂದು ಲೇವಡಿ ಮಾಡಿದರು.
ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ ಕೇಂದ್ರ ಶಾಸನವಾಗಿದ್ದು, ಸದರಿ ಶಾಸನದಡಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಮಾಡುತ್ತಿರುವ ಕಾರಣ ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.
೨೦೧೪ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಡಾ.ಕಸ್ತೂರಿ ರಂಗನ್ ವರದಿ ಕೈಬಿಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿಯವರು ಆಡಳಿತಕ್ಕೆ ಈ ವಿಚಾರದಲ್ಲಿ ಮಾತು ತಪ್ಪಿದ್ದು, ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆ ಹೊರಡಿಸಿ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
೨೦೧೭ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಡಾ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ಕ್ಯಾಬಿನೆಟ್ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಮೇಲ್ಕಂಡ ವರದಿಯನ್ನು ತಿರಸ್ಕರಿಸು ವಂತೆ ಶಿಫಾರಸು ಪತ್ರ ಬರೆದಿದ್ದರು. ಪ್ರಧಾನಿ ಮೋದಿ, ಕೇಂದ್ರ ಅರಣ್ಯ ಸಚಿವರು ಈ ವರದಿಯನ್ನು ಕೈಬಿಡುವ ಬಗ್ಗೆ ಒಮ್ಮೆಯೂ ಪ್ರಸ್ತಾಪಿಸಿಲ್ಲ ಎಂದರು.
ಸಂಸದ ಬಿವೈಆರ್ ಸಂಸತ್ತಿನಲ್ಲಿ ಒಮ್ಮೆಯೂ ಈ ಬಗ್ಗೆ ಪ್ರಸ್ತಾಪಿಸದೆ ಇರುವುದು ಜಿಲ್ಲೆಯ ಪಶ್ಚಿಮ ಘಟ್ಟದ ಜನತೆಗೆ ಎಸಗಿದ ದ್ರೋಹ ಎಂದರು. ಕಲೀಂ ಪಾಶಾ, ಜಿ.ಡಿ.ಮಂಜುನಾಥ, ಶಿವಾನಂದ ಇದ್ದರು.