ಕುಮಾರಸ್ವಾಮಿ ಅವರು ನೌಕರರ – ಕಾರ್ಮಿಕರ ಆಶಾಕಿರಣ; ಎಲ್ಲರ ವಿಶ್ವಾಸದೊಂದಿಗೆ ತಮ್ಮ ಗೆಲುವು ನಿಶ್ಚಿತ: ಆಯ್ನೂರ್-ಕೆಬಿಪಿ ವಿಶ್ವಾಸ
ಶಿವಮೊಗ್ಗ: ರಾಜ್ಯದ ಮುಂದಿನ ಮುಖ್ಯ ಮಂತ್ರಿಯಾಗಲಿರುವ ಮಣ್ಣಿನ ಮಗ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೂ ಸೇರಿದಂತೆ ರಾಜ್ಯಕ್ಕೆ ಹೊಸ ಭರವಸೆ ನೀಡಿರುವುದರಿಂದ ಈ ಬಾರಿ ನಾನು ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯುವಷ್ಟು ಸ್ಥಾನಗಳಲ್ಲಿ ಜಯಗಳಿಸುತ್ತೇವೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖವಾಗಿ ಸರ್ಕಾರಿ ನೌಕರರ ಸಮಸ್ಯೆಯಾದ ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜರಿಗೆ ತರುವುದು, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ, ಅತಿಥಿ ಉಪನ್ಯಾಸಕರಿಗೆ ಪಿಂಚಣಿ ವ್ಯವಸ್ಥೆ ಜರಿ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. ಇದರಿಂದ ಸುಮಾರು ೪ ಲಕ್ಷ ನೌಕರರಿಗೆ ಅನುಕೂಲ ಎಂದರು.
ಇದರ ಜೊತೆಗೆ ಕಟ್ಟಡ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ಅಸಂಖ್ಯಾತ ಪ್ರಮಾಣ ದಲ್ಲಿ ಕಾರ್ಮಿಕರಿದ್ದಾರೆ. ಇವರೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ. ವಿಶೇಷವಾಗಿ ಇವರೆಲ್ಲರ ಹಿತಕ್ಕಾಗಿ ಕಾರ್ಮಿಕ ಕಲ್ಯಾಣ ಮಂಡಳಿ ರಚನೆ ಮಾಡುವುದು, ಇದರ ಜೊತೆಗೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೂ ಅನುಕೂಲ ವಾಗುವಂತೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಸೆಸ್ ಸಂಗ್ರಹಿಸಿವುದು. ಈ ಸೆಸ್ ಹಣದಲ್ಲಿ ಚಾಲಕರ ಅಭಿವೃದ್ಧಿ ಮಾಡಲು ಸಾಧ್ಯ. ಇದರಿಂದ ಸುಮಾರು ೪೦ ಲಕ್ಷ ಅವಲಂಬಿತ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ ಎಂದರು.
ಹಾಗೆಯೇ ಮಧ್ಯಮ ವರ್ಗ ಮತ್ತು ರೈತ ಮಕ್ಕಳು ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದು, ಅದನ್ನು ಮನ್ನಾ ಮಾಡಲಾಗು ವುದು. ಜೊತೆಗೆ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಎಂಬ ಹೊಸ ಯೋಜನೆ ಜರಿಗೆ ತರಲಾಗುವುದು. ಇದರಿಂದ ನಿವೃತ್ತ ಸರ್ಕಾರಿ ನೌಕರರು ಒಂದಿಷ್ಟು ನೆಮ್ಮದಿಯಾಗಿ ಜೀವನ ಮಾಡಬಹುದಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಹೆದ್ದಾರಿ, ರೈಲ್ವೇ, ವಿಮಾನ ಸೇವೆ ಸೌಲಭ್ಯವಿದ್ದು, ಈ ಸೌಲಭ್ಯ ಬಳಸಿ ಕೊಂಡು ಜಿಲ್ಲೆಗೆ ಎರಡು ದೊಡ್ಡ ಕೈಗಾರಿಕೆಗಳನ್ನು ತರುವುದಾಗಿ ಹಾಗೂ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಪುನರ್ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಕಾರ್ಮಿಕರ, ರೈತರ ಮತ್ತು ನೌಕರರ ಸಮೂಹದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಲ್ಲ ಮನಸ್ಥಿತಿಯುಳ್ಳ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಿನ್ನೆ ನಡೆದ ಬಹಿರಂಗ ಸಭೆ ಯಶಸ್ವಿಯಾಗಿರುವುದರಿಂದ ನನ್ನ ಗೆಲುವಿಗೆ ಪುಷ್ಠಿ ನೀಡಿದಂತಾಗಿದೆ. ಹಾಗೂ ಕುಮಾರಸ್ವಾಮಿ ಅವರ ಭೇಟಿ ಜನಸಾಮಾನ್ಯರಿಗೆ ಲಾಭ ತಂದು ಕೊಡುವ ವಿಶ್ವಾಸವಿದೆ ಎಂದರು.
ಮತ್ತೋರ್ವ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಬೆಂಗಳೂರಿನಲ್ಲಿ ಗಾಯತ್ರಿ ಭವನ ನಿರ್ಮಿಸಲು ದೊಡ್ಡ ನಿವೇಶನ ನೀಡಿದ್ದರು. ಅದರಲ್ಲೀಗ ಭವನ ನಿರ್ಮಾಣ ವಾಗಿದೆ. ಅದೇ ಸಮಯದಲ್ಲೂ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಮಾಡಿದ್ದೆ. ಒತ್ತಾಯಕ್ಕೆ ಮಣಿದ ಅವರು ಅಂದು ನಿಗಮ ಸ್ಥಾಪನೆ ಮಾಡಿದ್ದರು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ನಿಗಮಕ್ಕೆ ೧೦೦ ಕೋಟಿ ರೂ. ಅನುದಾನ ತೆಗೆದಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರ ಮತಗಳು ಆಯನೂರು ಮಂಜುನಾಥ್ ಅವರಿಗೆ ದೊರೆ ಯುತ್ತವೆ. ಅವರು ಗೆಲ್ಲುವುದು ಖಚಿತ. ಅಷ್ಟೇ ಅಲ್ಲ, ರಾಜ್ಯದಲ್ಲಿ ಜನರ ನಾಡಿಮಿಡಿತ ಅರಿವಿಗೆ ಬಂದಿದೆ. ಹೀಗಾಗಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸವಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ತಾವು ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ವೈ.ಹೆಚ್. ನಾಗರಾಜ್, ಹಿರಣ್ಣಯ್ಯ, ದೀಪಕ್‌ಸಿಂಗ್ ಇನ್ನಿತರರಿದ್ದರು.