ಜಿಲ್ಲಾ ಸುದ್ದಿತಾಜಾ ಸುದ್ದಿ

ದಯೆ, ವಾತ್ಸಲ್ಯ, ಪ್ರೀತಿ ಸಜ್ಜನರ ಸ್ವಭಾವ…

Share Below Link

ಹೊಳೆಹೊನ್ನೂರು : ಏನೇ ಅಪರಾಧ ಎಸಗಿದ್ದರೂ ದಯೆ ತೋರುವ ಸ್ವಭಾವದವ ಇರುವವರು ಸಜ್ಜನರು ಎಂದು ತಿಳಿದು ಕೊಂಡಂತೆ ಎಂದು ಉತ್ತರಾದಿ ಮಠಾಧೀಶ ರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ ೨೮ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದಯೆ, ವಾತ್ಸಲ್ಯ, ಪ್ರೀತಿ ಇದು ಸಜ್ಜನರು, ಸಾಧುಗಳು ಮತ್ತು ಸಂತರ ಸಾಮಾನ್ಯವಾದ ಗುಣಗಳು. ವಿಹಿತ ಕರ್ಮ ಗಳನ್ನು ಮಾಡಬೇಕೇ ಹೊರತು ನಿಷಿದ್ಧವಾದ ಕರ್ಮಗಳನ್ನು ಯಾರೂ ಮಾಡಬಾರದು. ನಿಷಿದ್ಧ ಕರ್ಮಗಳಿಂದ ಪಾಪ ಸಾಧನೆಯಾಗುತ್ತದೆ ಎಂದರು.
ತಪಸ್ಸನ್ನು ಕಾಪಾಡಿಕೊಳ್ಳಿ :
ಪ್ರವಚನ ನೀಡಿದ ಕಡೂರು ಮಧುಸೂದನಾಚಾರ್ಯ, ಮನುಷ್ಯ ತನ್ನ ತಪಸ್ಸನ್ನು ಕಾಪಾಡಿಕೊಳ್ಳುವುದೇ ಬಹಳ ಕಷ್ಟ. ಹೀಗಾಗಿ ಇಂದ್ರಿಯಗಳ ಮೇಲೆ ನಿಯಂತ್ರಣ ಇರಬೇಕು. ಒಂದೇ ಒಂದು ಕೆಟ್ಟ ಕೆಲಸದಿಂದ ಇಡೀ ಜೀವನದ ತಪಸ್ಸು ನಾಶವಾಗಿಬಿಡುತ್ತದೆ ಎಂದರು.
ಸ್ತ್ರೀ ಸಂಗದಿಂದ ಉಂಟಾದಂತಹ ಪಾಪ ವನ್ನು ಕಳೆದುಕೊಳ್ಳಬೇಕಾದರೆ ಮುಮುಕ್ಷುಗಳಾದವರು ಮೊದಲು ಸ್ನೇಹ ರೂಪವಾದ ಸಂಘವನ್ನು ಮೊದಲು ಬಿಡಬೇಕು. ಒಂದು ವೇಳೆ ಸಂಘ ಮಾಡುವುದಾದರೆ ಭಗವಂತನ ಸಂಘ ಮಾಡಬೇಕು. ಒಬ್ಬನೇ ತಪಸ್ಸು ಮಾಡಬೇಕು. ವಿಷಯಗಳ ಆಸಕ್ತಿಯನ್ನು ಬಿಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮಥುರಾದಿಂದ ಶ್ರೀಪಾದಂಗಳವರಿಗೆ ಶ್ರೀ ಕೃಷ್ಣ ಪರಮಾತ್ಮನ ಶೇಷವಸ್ತ್ರ ಹಾಗೂ ಪ್ರಸಾದವನ್ನು ಸಮರ್ಪಿಸಲಾಯಿತು. ಪೂಜ ಕಾಲದಲ್ಲಿ ಪ್ರವಚನ ಮಾಡಿದ್ದ ಅನಂತಾಚಾರ್ಯ ಅಕಮಂಜಿ ಅವರನ್ನು ಗೌರವಿಸಲಾಯಿತು.
ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಲಕ್ಷ್ಮೀನರಸಿಂಹಾಚಾರ್ಯ, ಶ್ರೀಕಾಂತಾ ಚಾರ್ಯ ಮುಕ್ಕುಂದಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿ ಮಠಾಧೀಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.