ಕರ್ನಾಟಕವು ಜೈನ ಧರ್ಮದ ಆಚಾರ್ಯ-ಶಾಸ್ತ್ರಿ ಪರಂಪರೆಯ ಮಹಾ ಪೀಠಭೂಮಿ…
ಶ್ರವಣಬೆಳಗೊಳ, ಜ.೭: ಜೈನ ಧರ್ಮ ಇಂದು ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಕೇವಲ ತೀಥಂಕರರ ಉಪದೇಶ ಮಾತ್ರ ವಲ್ಲ, ಅದನ್ನು ಸಂರಕ್ಷಿಸಿ, ಸಂಹಿತೆಗೊಳಿಸಿ, ಜೀವನೋಪ ಯೋಗಿಯಾಗಿ ರೂಪಿಸಿದ ಆಚಾರ್ಯ ಶಾಸ್ತ್ರಿ ಪರಂಪರೆ. ವಿಶೇಷವಾಗಿ ಜೈನ ಸಿದ್ಧಾಂತಗಳಿಗೆ ಪೂರಕವಾದ ಶಾಶ್ವತ ಕೊಡುಗೆ ನೀಡಿದ ಆಚಾರ್ಯ ಪರಂಪರೆ ಯನ್ನು ಸ್ಮರಿಸಲು ಇಚ್ಛಿಸುತ್ತೇನೆ ಎಂದು ೫ನೇ ದಕ್ಷಿಣ ಭಾರತ ಅರ್ಚಕ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪಾದೂರು ಸುದರ್ಶನ ಕುಮಾರ್ ಇಂದ್ರ ಹೇಳಿದರು.
ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ೫ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತದ ದಿವ್ಯ ಸಂದೇಶ ವನ್ನು ಲೋಕಕ್ಕೆ ನೀಡಿದ ತೀಥಂಕರ ಪರಂಪರೆಯ ಪುಣ್ಯ ಭೂಮಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಇಂದು ನಾವು ದಕ್ಷಿಣ ಭಾರತ ಮಟ್ಟದ ಜೈನ ಅರ್ಚಕ ಸಮ್ಮೇಳನಕ್ಕೆ ಸೇರಿರುವುದು ಅತ್ಯಂತ ಧನ್ಯತೆಯ ವಿಷಯ ವಾಗಿದೆ. ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರಾನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಧರ್ಮದ ಆಚರಣಾತ್ಮಕ ರೂಪವನ್ನು ಸಮಾಜದೊಳಗೆ ಜೀವಂv ವಾಗಿರಿಸುವ ಮಹತ್ತರ ಹೊಣೆಗಾರಿಕೆ ಹಾಗೂ ಜೈನ ಧರ್ಮದ ಜೀವಂತ ಹರಿವನ್ನು ಸಮಾಜದೊಳಗೆ ನಿರಂತರವಾಗಿ ಸಾಗಿಸುವಲ್ಲಿ ಪುರೋಹಿತ, ಪಂಡಿತ, ಅರ್ಚಕ, ಉಪಾಧ್ಯಾಯ ಮತ್ತು ಇಂದ್ರ ಇವರ ಮೇಲಿದೆ ಎಂದರು.
ಕರ್ನಾಟಕವು ಜೈನ ಧರ್ಮದ ಆಚಾರ್ಯ-ಶಾಸ್ತ್ರಿ ಪರಂಪರೆಯ ಮಹಾ ಪೀಠಭೂಮಿ ಆಗಿದೆ. ಶ್ರವಣಬೆಳಗೊಳದಲ್ಲಿ ಆರಂಭ ಗೊಂಡು ದಕ್ಷಿಣ ಭಾರತಕ್ಕೆ ವಿಸ್ತರಿಸಿ ಬೆಳೆದು ನಿಂತಿದೆ. ಜೈನ ಆಚಾರ್ಯರು, ಯತಿಗಳು, ಶಾಸ್ತ್ರಿ ಗಳು ಕರ್ನಾಟಕದ ಧಾರ್ಮಿಕ- ಸಾಂಸ್ಕೃತಿಕ ಇತಿಹಾಸವನ್ನು ರೂಪಿಸಿzರೆ ಎಂದರು.
ಜೈನ ಧರ್ಮದಲ್ಲಿ ಅರ್ಚಕ ಅಥವಾ ಇಂದ್ರ ಎಂಬ ಪದವು ಕೇವಲ ವೃತ್ತಿಯಲ್ಲ, ಅದೊಂದು ಪವಿತ್ರ ಜವಾಬ್ದಾರಿ. ಸಮಾಜಕ್ಕೆ ಹಿತವನ್ನು ಬಯಸುವವನೇ ‘ಪುರೋಹಿತ’ ಎಂದರು.
ಇಂದು ಪೌರೋಹಿತ್ಯ ಎಡೆ ತಿರಸ್ಕಾರಕ್ಕೆ ಒಳಗಾಗಿದೆ. ಇವರ ಜೀವನೋಪಾಯಕ್ಕೆ ಬೇಕಾದ ಆದಾಯವಿಲ್ಲದೆ, ಜೈನ ಪುರೋಹಿತರು ತಮ್ಮ ವೃತ್ತಿಯನ್ನು ತೊರೆದು ಲೌಕಿಕ ವಿದ್ಯಾವಂತರಾಗಿ, ಸರ್ಕಾರಿ ಹಾಗೂ ಖಾಸಗಿ ಹುzಗಳಿಗೆ ಸೇರುತ್ತಿರುವುದನ್ನು ಕಾಣಬಹುದು. ಪುರೋಹಿತ ವರ್ಗ ತನ್ನ ವೃತ್ತಿಯನ್ನು ತೊರೆದರೆ, ಜಿನಾಲಯಗಳು ಇನ್ನೂ ಹೀನಸ್ಥಿತಿಗೆ ಬರುವ ಸಾಧ್ಯತೆಗಳಿವೆ ಎಂದು ವಿಷಾದಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜೈನ ಮಂದಿರಗಳಲ್ಲಿ ದಿನನಿತ್ಯ ಪೂಜೆ ಮಾಡುವ ಜತೆಗೆ ಸಮಾಜದಲ್ಲಿ ಜನರಿಗೆ ಉತ್ತಮ ಸಂಸ್ಕಾರ, ಸನ್ಮಾರ್ಗದತ್ತ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವ ಅರ್ಚಕರ ಕೊಡುಗೆ ಅಪಾರವಿದೆ. ಬೆಳೆ-ಮಳೆ ಕಡಿಮೆ ಆದಾಗಲೂ ನಾವೆ ಅರ್ಚಕರಿಂದ ಪೂಜೆ ಮಾಡಿಸು ತ್ತೇವೆ. ಲೋಕಕಲ್ಯಾಣಕ್ಕಾಗಿ ನಿತ್ಯ ಪೂಜೆ, ಸಮಾಜ ತಿದ್ದುವುದರಲ್ಲಿಯೂ ಅರ್ಚಕರ ಕಾರ್ಯ ಅನನ್ಯವಾಗಿದೆ ಎಂದರು.
ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶಿವಮೊಗ್ಗ ಜಿಯ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು.
ದಕ್ಷಿಣ ಭಾರತ ಜೈನ ಅರ್ಚಕರ ಸಂಘದ ಅಧ್ಯಕ್ಷ ಎಸ್.ಎಂ. ಸನ್ಮತಿ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಪಿ. ಮೋಹನಕುಮಾರ ಶಾಸ್ತ್ರಿ, ಕಾರ್ಯಾಧ್ಯಕ್ಷ ತವನಪ್ಪ ಪಂಡಿತ, ನಿಕಟಪೂರ್ವ ಅಧ್ಯಕ್ಷ ಶಾಂತಿನಾಥ ಪಾರ್ಶ್ವನಾಥ ಉಪಾದ್ಯೆ, ಶೀಲಾ ಅನಂತರಾಜ್, ಜಿ.ಪಿ.ಪದ್ಮಕುಮಾರ್ ಮುಂತಾದವರಿದ್ದರು.
